‘ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?’; ಸಿಜೆಪಿ ಪ್ರತಿಭಟನಾಕಾರನಿಗೆ ನೋಟಿಸ್ ನೀಡಿದ ನೊಯ್ಡಾ ಅಧಿಕಾರಿ ವಿರುದ್ಧ ಸಿಜೆಐ ಆಕ್ರೋಶ
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬನಿಗೆ ನೋಟಿಸ್ ಜಾರಿ ಮಾಡಿದ ಗ್ರೇಟರ್ ನೊಯ್ಡಾ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ನ್ಯಾಯಾಲಯದ ಆದೇಶಕ್ಕೆ ಇದು ಸಂಪೂರ್ಣ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ.

ನವದೆಹಲಿ, ಸೆಪ್ಟೆಂಬರ್ 9: ದೆಹಲಿಯ ಜಂತರ್ಮಂತರ್ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರಶ್ನೆಪತ್ರಿಕೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಎಲ್ಲ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ವಿಶೇಷ ಅಧಿಕಾರ ಬಳಸಿ ವಜಾಗೊಳಿಸುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಹೊರತುಪಡಿಸಿ ಪ್ರತಿಭಟನಾ ವಿದ್ಯಾರ್ಥಿಗಳ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೂ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬನಿಗೆ ನೋಟಿಸ್ ನೀಡಿರುವ ನೊಯ್ಡಾ ಮ್ಯಾಜಿಸ್ಟ್ರೇಟ್ ಅಧಿಕಾರಿಯ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಪೀಠವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ಗೆ ನೋಟಿಸ್ ನೀಡಿ ಲಿಖಿತ ವಿವರಣೆ ಕೋರುವುದಾಗಿ ತಿಳಿಸಿದೆ.
CJI Surya Kant expressed strong displeasure over an executive magistrate issuing a notice to a Gautam Buddha University student, Akshat Tripathi, for participating in a protest at Jantar Mantar. The Chief Justice said the Supreme Court’s order was clear that no punitive action… pic.twitter.com/pgSoq1GiIG
— IANS (@ians_india) September 9, 2026
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ:
ಜುಲೈನಲ್ಲಿ ನಡೆದ ದೆಹಲಿಯ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಯುವಕ-ಯುವತಿಯರು ಮತ್ತು ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಸ್ಪಷ್ಟ ಆದೇಶ ನೀಡಿತ್ತು. ಆದರೂ ಗ್ರೇಟರ್ ನೋಯ್ಡಾ ಆಡಳಿತವು ವಿದ್ಯಾರ್ಥಿಗೆ ನೋಟಿಸ್ ಜಾರಿ ಮಾಡಿತ್ತು. ವಕೀಲರು ಈ ವಿಷಯವನ್ನು ಪೀಠದ ಗಮನಕ್ಕೆ ತಂದ ತಕ್ಷಣ ಆಕ್ರೋಶ ವ್ಯಕ್ತಪಡಿಸಿದ ಸಿಜೆಐ ಸೂರ್ಯ ಕಾಂತ್, “ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶದ ಹೊರತಾಗಿಯೂ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ? ನಮ್ಮ ಆದೇಶವನ್ನು ಉಲ್ಲಂಘಿಸಲು ಯಾರಿಗೂ ಅಧಿಕಾರವಿಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್ ರದ್ದು; ಸುಪ್ರೀಂ ಕೋರ್ಟ್ ಆದೇಶ
ಜುಲೈನಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಸಂವಿಧಾನದ ವಿಧಿ 142ರ ಅಧಿಕಾರ ಬಳಸಿ ಯುವಜನರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನೇ ಅಪರಾಧ ಎಂದು ಪರಿಗಣಿಸಬಾರದು ಎಂದು ಸೆಪ್ಟೆಂಬರ್ 1ರಂದು ಆದೇಶ ನೀಡಿತ್ತು.
ಈ ಆದೇಶದ ಹೊರತಾಗಿಯೂ, ಗೌತಮ ಬುದ್ಧ ಯೂನಿವರ್ಸಿಟಿಯ ದ್ವಿತೀಯ ವರ್ಷದ ಕಾನೂನು ವಿದ್ಯಾರ್ಥಿ ಅಕ್ಷತ್ ತ್ರಿಪಾಠಿಗೆ ಸೆಪ್ಟೆಂಬರ್ 4ರಂದು ಮ್ಯಾಜಿಸ್ಟ್ರೇಟ್ ನೋಟಿಸ್ ಜಾರಿ ಮಾಡಿದ್ದರು. ವಿದ್ಯಾರ್ಥಿಯು ಸರ್ಕಾರ ವಿರೋಧಿ ಪ್ರಚಾರ ನಡೆಸುತ್ತಿದ್ದಾನೆ ಮತ್ತು ಪ್ರತಿಭಟನೆಗೆ ಪ್ರಚೋದಿಸುತ್ತಿದ್ದಾನೆ ಎಂದು ಆರೋಪಿಸಿ, 6 ತಿಂಗಳ ಕಾಲ ಶಾಂತಿ ಕಾಪಾಡಲು 5 ಲಕ್ಷ ಶ್ಯೂರಿಟಿ ಬಾಂಡ್ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.
ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ
ಆದರೆ, ನೋಟಿಸ್ ನೀಡಿದ ಸಮಯದಲ್ಲಿ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ ವಿಶ್ವವಿದ್ಯಾಲಯದಲ್ಲೇ ಇರಲಿಲ್ಲ, ಅವರು ತಮ್ಮ ಸ್ವಂತ ಊರಾದ ಪ್ರಯಾಗ್‌ರಾಜ್‌ನಲ್ಲಿದ್ದರು. ಪೊಲೀಸರು ನೀಡಿರುವ ಮಾಹಿತಿ ಸುಳ್ಳು ಎಂದು ತಿಳಿದುಬಂದ ನಂತರ ಈ ನೋಟಿಸ್ ಅನ್ನು ಮರುದಿನವೇ ಹಿಂಪಡೆಯಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಮ್ಯಾಜಿಸ್ಟ್ರೇಟ್ ಈ ಬಗ್ಗೆ ಲಿಖಿತ ವಿವರಣೆ ನೀಡಬೇಕೆಂದು ಆದೇಶ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




