ಎಂಟನೇ ಮತ್ತು ಕೊನೆಯ ನಿಜಾಮ್ ಮುಕರಮ್ ಜಾ ನಿಧನದೊಂದಿಗೆ ಹೈದರಾಬಾದ ನಿಜಾಮ್ ಅರಸೊತ್ತಿಗೆ ಅಂತ್ಯ ಕಂಡಿದೆ

ಅಸಾಫ್ ಜಹಿ ಕುಟುಂಬದ ಗೋರಿಗಳಿರುವ ಸ್ಥಳದಲ್ಲೇ ಮುಕರಮ್ ಅವರ ಅಂತ್ಯಸಂಸ್ಕಾರ ನಡೆಸಲಾಗುವುದು, ಎಂದು ರಾಜಕುಮಾರ ಮುಕರಮ್ ಜಾ ಅವರ ಕಚೇರಿಯಿಂದ ಹೊರಬಿದ್ದಿರುವ ಪ್ರಕಟಣೆಯೊಂದು ತಿಳಿಸಿದೆ.

ಎಂಟನೇ ಮತ್ತು ಕೊನೆಯ ನಿಜಾಮ್ ಮುಕರಮ್ ಜಾ ನಿಧನದೊಂದಿಗೆ ಹೈದರಾಬಾದ ನಿಜಾಮ್ ಅರಸೊತ್ತಿಗೆ ಅಂತ್ಯ ಕಂಡಿದೆ
ನವಾಬ ಮೀರ್ ಬರ್ಕತ್ ಅಲಿ ಖಾನ್ ವಲಾಶಾನ್ ಮುಕರಮ್ ಜಾ ಬಹಾದೂರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 17, 2023 | 1:55 PM

ಹೈದರಾಬಾದ್ ನಿಜಾಮ್ ಸಂಸ್ಥಾನದ (Nizam Dynasty) ಕೊನೆಯ ವಾರಸುದಾರ ಎಂದು ಹೇಳಲಾಗಿರುವ ವ್ಯಕ್ತಿಯ ಅಂತ್ಯ ಸಂಸ್ಕಾರ ನಾಳೆ ಅಂದರೆ ಬುಧವಾರ ನೆರವೇರುವುದರ ಜೊತೆಗೆ ಅವರ ಬದುಕು, ಅರಸೊತ್ತಿಗೆಯಿಂದ ಸಿಕ್ಕ ಆಸ್ತಿಪಾಸ್ತಿ ಮತ್ತು ಭಾರತದ ಹೊರಗೆಯೇ ಕಳೆದು ಹೋದ ಅವರ ಬದುಕಿನ ವಿವರಗಳು ಅವರೊಂದಿಗೆ ಮಣ್ಣುಗೂಡಲಿವೆ. ಅವನತಿ ಹೊಂದಿದ ಒಂದು ಭವ್ಯ ಅರಸೊತ್ತಿಗೆಯ ಕೊನೆಯ ಪ್ರತಿನಿಧಿಯ ಕತೆ ಎಂದು ಬಣ್ಣಿಸಲ್ಪಡುವ ಹೈದರಾಬಾದ್ ನಿಜಾಮ್ ಸಂಸ್ಥಾನದ 8 ನೇ ನಿಜಾಮ್ ಆಗಿದ್ದ ನವಾಬ ಮೀರ್ ಬರ್ಕತ್ ಅಲಿ ಖಾನ್ ವಲಾಶಾನ್ ಮುಕರಮ್ ಜಾ ಬಹಾದೂರ್ (Nawab Mir Barket Ali Khan Walashan Mukarram Jah Bahadur) ಅವರು ಶನಿವಾರಂದು ಟರ್ಕಿಯಲ್ಲಿ (Turkey) ನಿಧನ ಹೊಂದಿದ್ದಾರೆ. ಅವರ ಬದುಕಿನ ಬಗ್ಗೆ ಸ್ಪಷ್ಟ ಚಿತ್ರಣ ಯಾರಿಗೂ ಲಭ್ಯವಾಗದೆ ಹೋಗಿದ್ದು ನಿಜ್ಕಕೂ ದುರಂತ. ಹಿಂದಿನ ಹೈದರಾಬಾದ್ ಸಂಸ್ಥಾನದ ಏಳನೇ ನಿಜಾಮ್ ಆಗಿದ್ದ ಮೀರ್ ಒಸ್ಮಾನ್ ಅಲಿ ಖಾನ್ ಅವರು 1954 ರಲ್ಲಿ ರಾಜಕುಮಾರ ಮುಕರಮ್ ಜಾ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದರು. ಅಂದಿನಿಂದ ಅವರನ್ನು ಹೈದರಾಬಾದ್‌ನ ಎಂಟನೇ ಮತ್ತು ಕೊನೆಯ ನಿಜಾಮ್ ಎಂದು ಗುರುತಿಸಲಾಗಿದೆ.

ಲಾಂಡ್ರಿ ಬಿಲ್ ಉಳಿಸಲು ಬಟ್ಟೆ ಧರಿಸಿ ಸ್ನಾನ!

‘ಅನೇಕ ವರ್ಷಗಳಿಂದ ನಾನು ಮುಸ್ಲಿಂ ಸಂಸ್ಥಾನಗಳ ವಿಲಕ್ಷಣ ರಾಜರು ಅಥವಾ ಸುಲ್ತಾನರು ತಮ್ಮಲಿದ್ದ ವಜ್ರಗಳನ್ನು ಕಿಲೋಗ್ರಾಮ್ ಗಳಲ್ಲಿ ಅಳೆದಿದ್ದನ್ನು, ಮುತ್ತುಗಳನ್ನು ಎಕರೆಗಳ ಲೆಕ್ಕದಲ್ಲಿ ಹೊಂದಿದ್ದು ಮತ್ತು ಚಿನ್ನದ ಬಾರ್‌ಗಳನ್ನು ಟನ್‌ ಗಳ ಪ್ರಮಾಣದಲ್ಲಿ ಹೊಂದಿಸಿಟ್ಟಿದ್ದ ಕತೆಗಳನ್ನು ಓದಿದ್ದೇನೆ ಮತ್ತು ಕೇಳಿಸಿಕೊಂಡಿದ್ದೇನೆ, ಆದಾಗ್ಯೂ ನಿಜಾಮ್ ಸಂಸ್ಥಾನದ ಪ್ರತಿನಿಧಿಯಾದವರೊಬ್ಬರು ಲಾಂಡ್ರಿ ಬಿಲ್‌ ಉಳಿಸಲು ಬಟ್ಟೆಗಳನ್ನು ಧರಿಸಿಯೇ ಸ್ನಾನ ಮಾಡುತ್ತಿದ್ದಿದ್ದು ಕೇಳಿ ನನಗೆ ದಿಗ್ಭ್ರಮೆಯಾಯಿತು,’ ಎಂದು ಜಾನ್ ಝುಬ್ರಿಜ್ಕಿ ಅವರು ತಮ್ಮ ‘ದಿ ಲಾಸ್ಟ್ ನಿಜಾಮ್: ದಿ ರೈಸ್ ಅಂಡ್ ಫಾಲ್ ಆಫ್ ಇಂಡಿಯಾಸ್ ಗ್ರೇಟೆಸ್ಟ್ ಪ್ರಿನ್ಸ್ಲಿ ಸ್ಟೇಟ್,’ ಪುಸ್ತಕದಲ್ಲಿ ಮುಕರಮ್ ಜಾ ಅವರ ಬಗ್ಗೆ ಬರೆದಿದ್ದಾರೆ.

ಮುಕರಮ್ ಜಾ ಹುಟ್ಟಿದ್ದು 1933 ಫ್ರಾನ್ಸ್ನಲ್ಲಿ. ಅವರ ತಾಯಿ ರಾಜಕುಮಾರಿ ಡುರ್ರು ಶೆವರ್ ಟರ್ಕಿಯ ಕೊನೆಯ ಸುಲ್ತಾನ (ಒಟ್ಟೊಮನ್ ಚಕ್ರಾಧಿಪತ್ಯ) ಸುಲ್ತಾನ್ 2ನೇ ಅಬ್ದುಲ್ ಮೆಜಿದ್ ಅವರ ಮಗಳಾಗಿದ್ದರು.

1971 ರವೆರೆಗೆ ಪ್ರಿನ್ಸ್

ಹೈದರಾಬಾದ್ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಾ ಬಂದಿರುವ ಹಿರಿಯ ಪತ್ರಕರ್ತ ಮೀರ್ ಅಯ್ಯೂಬ್ ಅಲಿ ಖಾನ್ ಅವರು ಹೇಳುವ ಪ್ರಕಾರ ರಾಜಕುಮಾರ ಮುಕರಮ್ 1971 ರವರೆಗೆ ಅಂದರೆ ಭಾತರ ಸರ್ಕಾರವು ದೇಶದಲ್ಲಿದ್ದ ಅರಸೊತ್ತಿಗೆ ಮತ್ತು ರಾಜಮನೆತನಗಳನ್ನು ರದ್ದುಮಾಡುವವರೆಗೆ ಹೈದರಾಬಾದ್ ನ ಪ್ರಿನ್ಸ್ ಅನಿಸಿಕೊಂಡಿದ್ದರು.

ಇದನ್ನೂ ಓದಿ: Dry Lips: ತುಟಿಗಳು ಒಣಗುತ್ತಿವೆಯೇ? ಪದೇ ಪದೇ ಬಾಯಾರಿಕೆಯಾಗುತ್ತಿದೆಯೇ ಹಾಗಾದರೆ ಈ ಆರೋಗ್ಯ ಸಮಸ್ಯೆ ನಿಮಗಿರಬಹುದು

ಏಳನೇ ನಿಜಾಮ್ ತಮ್ಮ ಮೊದಲ ಮಗ ರಾಜಕುಮಾರ ಆಜಮ್ ಜಾ ಬಹಾದೂರ್ ಬದಲಿಗೆ ತಮ್ಮ ಮೊಮ್ಮಗನನ್ನು ತನ್ನ ಉತ್ತರಾಧಿಕಾರಿಯಾಗಿ ಘೋಷಿಸಿದ್ದರು ಎಂದು ಅಯ್ಯೂಬ್ ಹೇಳುತ್ತಾರೆ. ಹಾಗಾಗೇ, ಹೈದರಾಬಾದ್ ನ ಏಳನೇ ನಿಜಾಮ್ 1967ರಲ್ಲಿ ಮರಣ ಹೊಂದಿದ ನಂತರ ಮುಕರಮ್ ಜಾ ಆ ಸಲ್ತಾನತ್ ನ 8 ನೇ ನಿಜಾಮರಾದರು.

ಆಸ್ಟ್ರೇಲಿಯಗೆ ವಲಸೆ

ಆಮೇಲೆ ಆಸ್ಟ್ರೇಲಿಯಗೆ ವಲಸೆ ಹೋದ ಮುಕರಮ್ ಅವರು ತಮ್ಮ ಬದುಕಿನ ಹೆಚ್ಚಿನ ಭಾಗವನ್ನು ಅಲ್ಲೇ ಕಳೆದು ಉಳಿದ ಭಾಗವನ್ನು ಟರ್ಕಿಯಲ್ಲಿ ಕಳೆದರು. ‘ಮುಕರಮ್, ಆಸ್ಟ್ರೇಲಿಯದ ಮರಳುಗಾಡಿನಲ್ಲಿ ದರ್ಬಾರ್ ಗಳನ್ನು ನಡೆಸುತ್ತಿದ್ದಿದ್ದು, ಡೀಸೆಲ್ ಕಾರುತ್ತಿದ್ದ ಬುಲ್ಡೋಜರ್ ಗಳನ್ನು ಓಡಿಸುತ್ತಿದ್ದಿದ್ದು ಮತ್ತು ಸೆರೆಹಿಡಿದು ಪಳಗಿಸಿದ ಆನೆಗಳ ಮೇಲೆ ಹೌದಾ ಇರಿಸಿ ಅದರಲ್ಲಿ ಕುಳಿತು ಸವಾರಿಗೆ ಹೋಗುತ್ತಿದ್ದ ವಿಲಕ್ಷಣ ಕತೆಗಳನ್ನು ನಾನು ಕೇಳಿದ್ದೇನೆ. ಆಮೇಲೆ ಅದೇ ನಿಜಾಮ ಕೇವಲ ಎರಡು ಸೂಟ್ ಕೇಸ್ ಗಳನ್ನು ಹೊತ್ತು ಒಬ್ಬ ನಿರ್ಗತಿಕನ ಹಾಗೆ ಟರ್ಕಿಗೆ ಬಂದು ನೆಲೆಸಿದ್ದ ಕತೆಯನ್ನೂ ನಾನು ಕೇಳಿದ್ದೇನೆ,’ ಎಂದು ಜಾನ್ ಝುಬ್ರಿಜ್ಕಿ, ನಿಜಾಮನನ್ನು ಟರ್ಕಿಯ ಎರಡು ಬೆಡ್ರೂಮ್ ಮನೆಯಲ್ಲಿ ಭೇಟಿ ಮಾಡಿದ ಬಳಿಕ ಬರೆದಿದ್ದರು.

ಇದನ್ನೂ ಓದಿ: Team India: ಹಾಂಕಾಂಗ್ ಟು ಲಂಕಾ; ಏಕದಿನ ಮಾದರಿಯಲ್ಲಿ ಭಾರತದ ದಾಳಿಗೆ ನಲುಗಿದ ದೇಶಗಳಿವು!

ತನ್ನ ಬದುಕನ್ನು ಕೆಟ್ಟದ್ದಾಗಿ ಚಿತ್ರಿಸುವುದು ಮುಕರಮ್ ಗೆ ಸರ್ವಾಥಾ ಇಷ್ಟವಿರಲಿಲ್ಲ. ತಾತನಿಂದ ಅರಸೊತ್ತಿಗೆ ಪಡೆದ ಕೆಲವೇ ವಾರಗಳ ಬಳಿಕ ಅದರ ಅವನತಿ ಆರಂಭಗೊಂಡಿತ್ತು.

ದಿ ಟೈಮ್ಸ್ ಪತ್ರಿಕೆ ಸಂಪಾದಕನಿಗೆ ತರಾಟೆ 

ಏಳನೇ ನಿಜಾಮ್ ಮರಣ ಹೊಂದಿದ ನಂತರ ಅವರ ಬಗ್ಗೆ 1,000 ಪದಗಳ ಶ್ರದ್ಧಾಂಜಲಿ ಲೇಖನ ಪ್ರಕಟಿಸಿದ್ದ ದಿ ಟೈಮ್ಸ್ ಪತ್ರಿಕೆಯು ಅವರನ್ನು ಜಿಪುಣಾಗ್ರೇಸ ಎಂದು ಬಣ್ಣಿಸಿ ಅವರ ಖಾಸಗಿ ಬದುಕಿನ ಕೆಲ ಅಂಶಗಳನ್ನು ಉಲ್ಲೇಖಿಸಿತ್ತು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಕರಮ್ ಲೇಖನಕ್ಕಿಂತ ಹೆಚ್ಚು ಉದ್ದದ ಪತ್ರವನ್ನು ಸಂಪಾದಕನಿಗೆ ಬರೆದು ತರಾಟೆಗೆ ತೆಗೆದುಕೊಂಡಿದ್ದರು ಎಂದು ಜಾನ್ ಝುಬ್ರಿಜ್ಕಿ ಬರೆದಿದ್ದಾರೆ.

ಹೈದರಾಬಾದ್ ಜನ ಅದರಲ್ಲೂ ವಿಶೇಷವಾಗಿ ಬಡವರು ಮುಕರಮ್ ಅವರ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಒಂದು ಸಮಯದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿದ್ದ ತಮ್ಮ ತಾತನಿಂದ ಅಪಾರ ಪ್ರಮಾಣದ ಸಿರಿಯನ್ನು ಅರಸೊತ್ತಿಗೆಯ ಜೊತೆ ಬಳುವಳಿಯಾಗಿ ಪಡೆದಿದ್ದ ಮುಕರಮ್ ತಮ್ಮ ದಾರಿದ್ರ್ಯವನ್ನು ನೀಗಿಸುತ್ತಾರೆ ಎಂದು ಭಾವಿಸಿದ್ದ ಅವರಿಗೆ ತೀವ್ರ ನಿರಾಶೆಯಾಗಿತ್ತು ಎಂದು ಅಯ್ಯೂಬ್ ಅಲಿ ಹೇಳುತ್ತಾರೆ.

ಟರ್ಕಿಯ ರಾಜಕುಮಾರಿ ಎಸ್ರಾ ಮೊದಲ ಹೆಂಡತಿ

ಮುಕರಮ್ ಜಾ ಮೊದಲು ಟರ್ಕಿಯ ರಾಜಕುಮಾರಿ ಎಸ್ರಾ ಅವರನ್ನು 1959 ರಲ್ಲಿ ಮದುವೆಯಾದರು. ಹುಮಾ ಬಿಲ್ಗ್ರಾಮಿ ಹೆಸರಿನ ಪತ್ರಕರ್ತೆಯೊಬ್ಬರಿಗೆ ನೀಡಿದ ಸಂದರ್ಶನಲ್ಲಿ ಎಸ್ರಾ ಅವರು ಹೈದರಾಬಾದ್ ನಲ್ಲಿ ಕಳೆದ ತಮ್ಮ ವೈವಾಹಿಕ ಜೀವನದ ಅರಂಭಿಕ ದಿನಗಳ ಬಗ್ಗೆ ಹೇಳಿದ್ದಾರೆ. ಕಡೆಗಣಿಸಲ್ಪಟ್ಟಿದ್ದ ಆಸ್ತಿ-ಪಾಸ್ತಿ ಮತ್ತು ಅರಮನೆಗಳನ್ನು ನವೀಕರಿಸಿ ನಿಜಾಮ್ ಸಂಸ್ಥಾನಕ್ಕೆ ವಾಪಸ್ಸು ತರುವುದು ತನ್ನ ವ್ಯಾಮೋಹವಾಗಿ ಬಿಟ್ಟಿತ್ತು ಎಂದು ಅವರು ಹೇಳಿದ್ದಾರೆ.

‘ಹೈದರಾಬಾದ್ ನಗರಕ್ಕಾಗಿ ಏನನ್ನಾದರೂ ಮಾಡುವುದು ನನ್ನ ಬಯಕೆಯಾಗಿತ್ತು. ಆದರೆ ನನ್ನ ಮದುವೆಯಾದಾಗ ಪತಿಯ ತಾತ ಇನ್ನೂ ಜೀವಂತವಾಗಿದ್ದರಿಂದ ಅದು ಸಾಧ್ಯವಿರಲಿಲ್ಲ. ಆಗಿನ ನನ್ನ ಬದುಕು ಒಂದು ಸೀಮಿತ ಕಕ್ಷೆಯಲ್ಲಿ ಸುತ್ತುತಿತ್ತು. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು, ಹೇಗೆ ವರ್ತಿಸಬೇಕು-ಹೀಗೆ ನೂರೆಂಟು ನಿಂಬಂಧನೆಗಳು ನನ್ನ ಮೇಲಿದ್ದವು. ಅದರೆ ಅವರು ನಿಧನ ಹೊಂದಿದ ಬಳಿಕ ನಮಗೆ ಸ್ವಾತಂತ್ರ್ಯ ಸಿಕ್ಕಿತ್ತು. ಅದರೆ ನಮ್ಮೆದಿರು ಬೆಟ್ಟದಷ್ಟು ಸಮಸ್ಯೆಗಳಿದ್ದವು. ಶೇಕಡ 98ರಷ್ಟು ತೆರಿಗೆಯನ್ನು ನಮ್ಮಿಂದ ವಸೂಲಿ ಮಾಡಲಾಗಿತ್ತು. ನಮಗಿದ್ದ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿತ್ತು ಮತ್ತು ನಮಗಿದ್ದ ಜಮೀನು ಸರ್ಕಾರದ ಪಾಲಾಗಿತ್ತು. ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದು ದುಸ್ಸಾಧ್ಯವಾಗಿತ್ತು,’ ಎಂದು ಎಸ್ರಾ ಹೇಳಿದ್ದು ವರದಿಯಾಗಿದೆ.

ಎಸ್ರಾ ವಾಪಸ್ಸು ಬಂದರು

‘ನಂತರ ನನ್ನ ಡಿವೋರ್ಸ್ ಆಯಿತು ಮತ್ತು 20 ವರ್ಷಗಳ ಭಾರಿ ಸಂಕಷ್ಟದಲ್ಲಿ ಸಿಲುಕಿದ್ದ ಮುಕರಮ್ ವಾಪಸ್ಸು ಬರುವಂತೆ ನನಗೆ ವಿನಂತಿಸಿಕೊಂಡರು. ನಾನು ಹೈದರಾಬಾದ್ ಗೆ ವಾಪಸ್ಸು ಬಂದಾಗ ಹೈದರಾಬಾದ್ ಅರಮನೆ ನಾದೆರ್ ಶಾಹ ಲೂಟಿ ಮಾಡಿಕೊಂಡು ಹೋದ ದೆಹಲಿಯಂತೆ ಕಾಣುತಿತ್ತು. ಅಲ್ಲಿ ಏನೂ ಉಳಿದಿರಲಿಲ್ಲ ಎಲ್ಲ ಹೋಗಿಬಿಟ್ಟಿತ್ತು. ಸ್ಥಿತಿ ಬಹಳ ಗಂಭೀರ ಮತ್ತು ನಿರಾಶಾದಾಯಕವಾಗಿತ್ತು. ಆಗಲೇ ನಾನು ಹೈದರಾಬಾದ್ ಚೇತರಿಸಿಕೊಳ್ಳಲು ನನ್ನಿಂದಾಗುವ ಸಹಾಯ ಮಾಡಬೇಕೆಂದು ನಿಶ್ಚಯಿಸಿಕೊಂಡೆ.’ ಎಂದು ಎಸ್ರಾ ಹೇಳಿದ್ದಾರೆ.

ಇದನ್ನೂ ಓದಿ: Ratan Tata: ಟಾಟಾ ಇಂಡಿಕಾಗೆ 25 ವರ್ಷ; ಭಾವನಾತ್ಮಕ ಸಂದೇಶದ ಮೂಲಕ ರಜತ ಸಂಭ್ರಮ ಹಂಚಿಕೊಂಡ ರತನ್ ಟಾಟಾ

‘ಅದು ನನ್ನ ಕರ್ತವ್ಯವಾಗಿತ್ತು,’ ಎಂದು ಎಸ್ರಾ ಹೇಳಿದ್ದು ದಾಖಲಾಗಿದೆ. ಬಳಿಕ ಅವರು ಹೇಗೆ ಚೌಮಾಹಲ್ಲಾ ಅರಮನೆ ಫಲ್ಕುನಾಮಾ ಅರಮನೆಗಳನ್ನು ನವೀಕರಿಸಿದೆ ಅನ್ನೋದನ್ನು ವಿವರಿಸಿದ್ದಾರೆ.

ಚೌಮಾಹಲ್ಲಾ ಅರಮನೆಯಲ್ಲಿ ಪಾರ್ಥೀವ ಶರೀರ

ಈ ಸಂದರ್ಶನ ಪ್ರಕಟವಾದ ದಶಕಗಳ ನಂತರ ಇದೇ ಚೌಮಾಹಲ್ಲಾ ಅರಮನೆಯಲ್ಲಿ ಚಾರ್ಟರ್ಡ್ ವಿಮಾನವೊಂದರ ಮೂಲಕ ತರಲಾಗುವ ಮುಕರಮ್ ಜಾ ಅವರ ಪಾರ್ಥೀವ ಶರೀರವನ್ನು ಇರಿಸಲಾಗುವುದು.

ಮುಕರಮ್ ಅವರಿಗೆ ಹೈದರಾಬಾದ್ ಜನ ಅಂತಿಮ ನಮನ ಸಲ್ಲಿಸಲು ನೆರವಾಗುವ ಹಾಗೆ ದೇಹವನ್ನು ಜನೆವರಿ 18 ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಖಿಲಾವತ್ ಅರಮನೆಯಲ್ಲಿ ಇಡಲಾಗುವುದು.

ಅಸಾಫ್ ಜಹಿ ಕುಟುಂಬದ ಗೋರಿಗಳಿರುವ ಸ್ಥಳದಲ್ಲೇ ಮುಕರಮ್ ಅವರ ಅಂತ್ಯಸಂಸ್ಕಾರ ನಡೆಸಲಾಗುವುದು, ಎಂದು ರಾಜಕುಮಾರ ಮುಕರಮ್ ಜಾ ಅವರ ಕಚೇರಿಯಿಂದ ಹೊರಬಿದ್ದಿರುವ ಪ್ರಕಟಣೆಯೊಂದು ತಿಳಿಸಿದೆ.

ಮಕ್ಕಳು ಬರುತ್ತಿದ್ದಾರೆ

ಹೇಳಿಕೆಯ ಪ್ರಕಾರ ಭಾರತದಲ್ಲೇ ತಮ್ಮ ದೇಹದ ಅಂತ್ಯಸಂಸ್ಕಾರ ನಡೆಯುವುದು ಅವರ ಕೊನೆಯಾಸೆಯಾಗಿದ್ದರಿಂದ ಅವರ ಮಕ್ಕಳು ಅದೇ ವಿಮಾನದಲ್ಲಿ ಹೈದರಾಬಾದ್ ಗೆ ಇಂದು (ಮಂಗಳವಾರ) ಅಗಮಿಸಲಿದ್ದಾರೆ.

ರಾಜಕುಮಾರ ಮುಕರಮ್ ಜಾ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರು, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಮತ್ತು ಬಡವರ ಕಲ್ಯಾಣಕ್ಕಾಗಿ ಅವರು ಮಾಡಿದ ಸಾಮಾಜಿಕ ಸೇವೆಯನ್ನು ಗುರುತಿಸಿ ಮನ್ನಣೆ ನೀಡುವ ದೃಷ್ಟಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Tue, 17 January 23