ಸಮರಕೆ ಸಿದ್ಧ, ಚೀನಾದಂಥ ದೈತ್ಯ ಶಕ್ತಿಯನ್ನು ಎದುರಿಸಬಹುದೆಂಬ ಧೈರ್ಯ ಜಗತ್ತಿಗೆ ಬಂದಿದ್ದು ಭಾರತದಿಂದ: ಜನರಲ್ ಎಂಎಂ ನರವಣೆ

ಇದೀಗ ಅರುಣಚಲ ಪ್ರದೇಶದ ತವಾಂಗ್​ನಲ್ಲಿ ಮತ್ತೆ ಚೀನಾ-ಭಾರತೀಯ ಸೇನೆಯ ಸಂಘರ್ಷದ ಸುದ್ದಿ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಈ ಸಂದರ್ಶನ ಮತ್ತು ನರವಣೆ ಅವರು ಬಹಿರಂಗಪಡಿಸಿರುವ ಮಾಹಿತಿ ಮಹತ್ವ ಪಡೆದುಕೊಂಡಿದೆ.

ಸಮರಕೆ ಸಿದ್ಧ, ಚೀನಾದಂಥ ದೈತ್ಯ ಶಕ್ತಿಯನ್ನು ಎದುರಿಸಬಹುದೆಂಬ ಧೈರ್ಯ ಜಗತ್ತಿಗೆ ಬಂದಿದ್ದು ಭಾರತದಿಂದ: ಜನರಲ್ ಎಂಎಂ ನರವಣೆ
ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ
Follow us
|

Updated on:Dec 22, 2022 | 8:32 AM

ಬೆಂಗಳೂರು: ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ (Galwan Valley Clash) ಜೂನ್ 15, 2020ರಲ್ಲಿ ನಡೆದ ಸಂಘರ್ಷದ ಬಗ್ಗೆ ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥರು ಹಾಗೂ ಚೀನಾ ಗಡಿಯಲ್ಲಿ ಹಲವು ದಶಕಗಳು ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿರುವ ಜನರಲ್ ಮನೋಜ್ ಮುಕುಂದ್ ನರವಣೆ (MM Naravane) ಇದೇ ಮೊದಲ ಬಾರಿಗೆ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ‘ಭಾರತೀಯ ಸೇನೆಗೆ ನಮ್ಮ ಸೈನಿಕರ ವೃತ್ತಿಪರತೆ ಹಾಗೂ ದೇಶಭಕ್ತಿಯೇ ದೊಡ್ಡ ಶಕ್ತಿ. ಚೀನಾ ನಮ್ಮ ಮೊದಲ ಶತ್ರುವೆಂದು 20 ವರ್ಷಗಳ ಹಿಂದೆಯೇ ಅಂದಿನ ರಕ್ಷಣಾ ಸಚಿವರು ಹೇಳಿದ್ದರು. ನಮ್ಮ ದೇಶದ ರಕ್ಷಣೆಗೆ ಸಂಬಂಧಿಸಿದ ಯಾವುದೇ ವಿದ್ಯಮಾನವನ್ನು ನಾವು ಎಂದಿಗೂ ಹಗುರವಾಗಿ ಪರಿಗಣಿಸುವುದಿಲ್ಲ. ಒಂದು ದೇಶವಾಗಿ, ಒಂದು ಸೇನೆಯಾಗಿ ಸಮರಕೆ ಸದಾ ಸಿದ್ಧ’ ಎಂದು ಜನರಲ್ ನರವಣೆ ಹೇಳಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆಯ ಸಂಪಾದಕಿ ಸ್ಮಿತಾ ಪ್ರಕಾಶ್ ಅವರಿಗೆ ಸುದೀರ್ಘ ಸಂದರ್ಶನ ನೀಡಿರುವ ಅವರು, ಸಮಕಾಲೀನ ವಿದ್ಯಮಾನಗಳಿಗೆ ಸೇನೆಯ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಇಣುಕುನೋಟ ನೋಡಿದ್ದಾರೆ. ನರವಣೆ ಅಧಿಕಾರದಲ್ಲಿದ್ದಾಗಲೇ ಗಲ್ವಾನ್ ಕಣಿವೆ ಸಂಘರ್ಷ ನಡೆದು ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಸೇರಿ 20 ಭಾರತೀಯ ಯೋಧರು ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ, ಇದಕ್ಕೆ ಪ್ರತೀಕಾರ ಎಂಬಂತೆ ಚೀನಾ ಗಡಿಯಲ್ಲಿ ಭಾರತೀಯ ಸೇನೆಯು ತೆಗೆದುಕೊಂಡ ಹಲವು ದಿಟ್ಟ ಕ್ರಮಗಳನ್ನು ನರವಣೆ ಅವರೇ ರೂಪಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅರುಣಚಲ ಪ್ರದೇಶದ ತವಾಂಗ್​ನಲ್ಲಿ ಮತ್ತೆ ಚೀನಾ-ಭಾರತೀಯ ಸೇನೆಯ ಸಂಘರ್ಷದ ಸುದ್ದಿ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಈ ಸಂದರ್ಶನ ಮತ್ತು ನರವಣೆ ಅವರು ಬಹಿರಂಗಪಡಿಸಿರುವ ಮಾಹಿತಿ ಮಹತ್ವ ಪಡೆದುಕೊಂಡಿದೆ.

ನರವಣೆ ಅವರ ಮಾತಿನ 10 ಮುಖ್ಯ ಅಂಶಗಳಿವು…

  1. ನಮ್ಮ ಸುತ್ತಲೂ ಇರುವ ದೇಶಗಳ ಸೈನಿಕ ಶಕ್ತಿಯ ಅಂದಾಜು ನಮಗಿದೆ. ಉಪಗ್ರಹಗಳ ಬಳಕೆ ಸೇರಿದಂತೆ ಎಲ್ಲ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ನಾವು ಗುಪ್ತಚರ ಮಾಹಿತಿ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಶತ್ರುದೇಶದ ಗಡಿಯ ಒಳಗೆ ನಡೆಯುವ ಸೈನಿಕ ಚಟುವಟಿಕೆಯ ಅಂದಾಜನ್ನು ಗುಪ್ತಚರ ಸಂಸ್ಥೆ ‘ರಾ’ (Research and Analysis Wing – RAW) ಮುಂಚಿತವಾಗಿಯೇ ನೀಡುತ್ತದೆ.
  2. ಚೀನಾ ಅಥವಾ ಪಾಕಿಸ್ತಾನದ ಗಡಿಗೆ ತ್ವರಿತಗತಿಯಲ್ಲಿ ಸೇನೆಯನ್ನು ನಿಯೋಜಿಸುವ ಸಾಮರ್ಥ್ಯ ಭಾರತಕ್ಕೆ ಇದೆ. ಯಾವುದೇ ದೇಶವು ಸಂಘರ್ಷಕ್ಕೆ ಇಳಿಯುವ ಮೊದಲು ಸಿದ್ಧತೆ ಮಾಡಿಕೊಳ್ಳಲೇಬೇಕು. ಎದುರಾಳಿಗಳ ಪಾಳಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೂ ಸಿದ್ಧತೆ ಮಾಡಿಕೊಳ್ಳಲು, ಅಗತ್ಯ ಸಂಖ್ಯೆಯ ಸೇನೆ ಮತ್ತು ಯುದ್ಧೋಪಕರಣಗಳ ನಿಯೋಜನೆಗೆ ಸಮಯಾವಕಾಶ ಇರುತ್ತದೆ. ಗಲ್ವಾನ್ ಇರಬಹುದು, ತವಾಂಗ್ ಇರಬಹುದು, ಯಾವುದೇ ಸಂಘರ್ಷವು ಭಾರತೀಯ ಸೇನೆಗೆ ಅಚ್ಚರಿ ಉಂಟು ಮಾಡಿಲ್ಲ. ಉತ್ತರದ ಗಡಿಗಳಲ್ಲಿ ಆತಂಕ ಹೆಚ್ಚು ಎಂಬ ಅರಿವು ನಮಗಿದೆ.
  3. ಸೇನೆಯನ್ನು ಸದಾ ದೇಶ ಮತ್ತು ಸರ್ಕಾರದ ಭಾಗವಾಗಿಯೇ ನೋಡಬೇಕು. ಯಾವುದೇ ಸಂಘರ್ಷ ಅಥವಾ ಸವಾಲು ಎದುರಿಸುವಾಗ ಸೇನೆಯೊಂದೇ ಹೋರಾಡುವುದಿಲ್ಲ. ಒಂದು ದೇಶವಾಗಿ ನಾವು ಶತ್ರುಗಳನ್ನು ಎದುರಿಸುತ್ತೇವೆ. ಸರ್ಕಾರದ ವಿವಿಧ ಇಲಾಖೆಗಳ ಹಲವು ಹಂತಗಳ ಅಧಿಕಾರಿ ಮತ್ತು ಸಿಬ್ಬಂದಿ ಇದರಲ್ಲಿ ಭಾಗೀದಾರರಾಗುತ್ತಾರೆ. ಭಾರತೀಯ ಸೇನೆಯ ಯಶಸ್ಸು ಎಂದರೆ ಅದು ಭಾರತದ ಯಶಸ್ಸು ಆಗಿರುತ್ತದೆ.
  4. ಗಲ್ವಾನ್ ಕಣಿವೆ ಸಂಘರ್ಷವು ಕೇವಲ ಭಾರತಕ್ಕೆ ಮಾತ್ರವೇ ಅಲ್ಲ ಇಡೀ ಜಗತ್ತಿನ ಆತ್ಮವಿಶ್ವಾಸ ಹೆಚ್ಚಿಸಿದ ಬೆಳವಣಿಗೆ. ನೆರೆ ದೇಶವೊಂದು ಆರ್ಥಿಕ ಅಥವಾ ಸೈನಿಕ ಶಕ್ತಿಯಲ್ಲಿ ದೈತ್ಯನಂತೆ ಬೆಳೆದಿದೆ ಎನ್ನುವ ಮಾತ್ರಕ್ಕೆ ಮತ್ತೊಂದು ದೇಶವು ತಲೆತಗ್ಗಿಸಬೇಕಿಲ್ಲ. ನಮಗೆ ಬದ್ಧತೆಯಿದ್ದರೆ ಚೀನಾ ಸೇನೆಯನ್ನೂ ಎದುರಿಸಲು ಸಾಧ್ಯ ಎಂಬುದನ್ನು ನಮ್ಮ ಯೋಧರು ಸಾಧಿಸಿ ತೋರಿಸಿದರು. ಈ ಬೆಳವಣಿಗೆಯ ನಂತರ ಫಿಲಿಪ್ಪೀನ್ಸ್, ವಿಯೆಟ್ನಾಂ, ಜಪಾನ್​ನಂಥ ಹಲವು ದೇಶಗಳ ಚೀನಾ ಬಗೆಗಿನ ಧೋರಣೆ ಬದಲಾಯಿತು.
  5. ರಕ್ಷಣೆಗೆ ಒತ್ತುಕೊಡುವುದು ನಮ್ಮ ಮೊದಲ ತಂತ್ರ. ಆದರೆ ಅನಿವಾರ್ಯ ಸಂದರ್ಭದಲ್ಲಿ ದಾಳಿಗೂ ಹಿಂಜರಿಯುವುದಿಲ್ಲ ಎಂಬ ಸಂದೇಶ ನೆರೆ ದೇಶಗಳಿಗೆ ಈಗಾಗಲೇ ಸಿಕ್ಕಿದೆ. ಚೀನಾದ ಗಡಿಯೊಳಗೆ ನಡೆಯುವ ವಿದ್ಯಮಾನಗಳನ್ನು ಗಮನಿಸುವ ಅವಕಾಶ ಭಾರತೀಯ ಸೇನೆಗೆ ಸಿಕ್ಕಿದ್ದು ಅವರಿಗೆ ಆಘಾತ ಉಂಟು ಮಾಡಿತ್ತು. ಗಲ್ವಾನ್ ಸಂಘರ್ಷ ಸೇರಿದಂತೆ ಹಲವು ಬೆಳವಣಿಗೆಗಳಿಗೆ ಭಾರತೀಯ ಸೇನೆಯು ಅನುಕೂಲಕರ ಸ್ಥಿತಿಯಲ್ಲಿದ್ದುದು ಮತ್ತು ಅದನ್ನು ಅದರ ಸ್ಥಾನದಿಂದ ದೂಡಲು ಚೀನಾ ಪ್ರಯತ್ನಿಸಿದ್ದು ಮುಖ್ಯ ಕಾರಣ.
  6. ದಿನಕಳೆದಂತೆ ನಾವು ಸುಧಾರಿಸಬೇಕೇ ಹೋರತು ಹಿಂದಕ್ಕೆ ಹೋಗಬಾರದು. ಗುಂಡು ಹಾರಿಸುವುದಿಲ್ಲ ಎಂಬ ಭರವಸೆಯ ಮತ್ತೊಂದು ಅರ್ಥ ಶಾಂತಿ ಕಾಪಾಡಬೇಕು ಎಂಬುದಾಗಿದೆ. ಆದರೆ ಮುಳ್ಳುತಂತಿ ಸುತ್ತಿದ ಬಡಿಗೆಗಳನ್ನು ಹೊಡೆಯಲು ತರುವುದನ್ನು ಏನೆಂದು ವಿಶ್ಲೇಷಿಸಬೇಕು. ಯಾವುದೇ ಸೇನೆಗೆ ಇದು ಶೋಭೆ ತರುವುದಲ್ಲ.
  7. ಗಲ್ವಾನ್ ಕಣಿವೆಯ ಬಗ್ಗೆ ಬಾಲಿವುಡ್​ ನಟಿಯೊಬ್ಬರು ಹಗುರವಾಗಿ, ಅವಮಾನಕರವಾಗಿ ಮಾತನಾಡಿದ್ದ ಬಗ್ಗೆ ನಾನು ಏನೂ ಪ್ರತಿಕ್ರಿಯಿಸುವುದಿಲ್ಲ. ಅದನ್ನು ನಾವು ನಿರ್ಲಕ್ಷಿಸಬೇಕು. ನಾವು ಚರ್ಚಿಸಿದಷ್ಟೂ ಅದು ಹೆಚ್ಚು ಕಾಲ ಜನರ ನಡುವೆ ಇರುತ್ತದೆ.
  8. ಭಾರತಕ್ಕೆ ಹಾನಿ ಮಾಡಬಹುದು ಎಂಬ ದುಸ್ಸಾಹಸವನ್ನು ಯಾರು ಮಾಡಿದರೂ ತಕ್ಕ ಪಾಠ ಕಲಿಸುತ್ತೇವೆ ಎಂಬ ಸಂದೇಶವನ್ನು 2019ರ ಬಾಲಾಕೋಟ್​ ದಾಳಿ ನೀಡಿದೆ. ನಮ್ಮ ಪ್ರತಿರೋಧ ಮತ್ತು ಪ್ರತಿದಾಳಿಯು ತೀಕ್ಷ್ಣವಾಗಿರುತ್ತದೆ.
  9. ಭಾರತೀಯ ಸೇನೆಯು ಶತ್ರುಗಳ ಮುಖಾಮುಖಿ ಸಂಘರ್ಷವನ್ನು ಜಯಿಸುತ್ತದೆ. ಆದರೆ ಗ್ರಹಿಕೆಯ ಯುದ್ಧಗಳನ್ನು ಗೆಲ್ಲುವುದು (Perception War) ಒಂದು ದೇಶವಾಗಿ ನಮಗಿರುವ ಮುಖ್ಯ ಸವಾಲು. ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿರುವವರು ಎಚ್ಚರದಿಂದ ವರ್ತಿಸಬೇಕು. ಯುದ್ಧಭೂಮಿಯಲ್ಲಿ ಸೇನೆಯನ್ನು ಮುನ್ನಡೆಸುವ ಬೆಟಾಲಿಯನ್ ಕಮಾಂಡರ್​​ಗಳು ತುಂಬಾ ಅಳೆದು-ತೂಗಿ ಕಾರ್ಯಾಚರಣೆ ವಿವರಣೆಗಳನ್ನು ನೀಡುತ್ತಾರೆ. ರಕ್ಷಣಾ ಇಲಾಖೆ ಅಥವಾ ಸರ್ಕಾರದ ಯಾವುದೇ ಸಚಿವಾಲಯವು ಒಂದು ಭವಿಷ್ಯದಲ್ಲಿ ಉಂಟಾಗಬಹುದಾದ ಪರಿಣಾಮವನ್ನು ಅಂದಾಜಿಸಿ ಮಾಧ್ಯಮ ಸಲಹೆಗಳನ್ನು ನೀಡುತ್ತದೆ. ಇದನ್ನು ನಾವು ಗೌರವಿಸಬೇಕು.
  10. ವಾಸ್ತವ ನಿಯಂತ್ರಣ ರೇಖೆಯಲ್ಲಿರುವ (LAD) ‘ಯಥಾಸ್ಥಿತಿ’ಯನ್ನು ಬದಲಿಸಲು ಹಲವು ವರ್ಷಗಳಿಂದ ಚೀನಾ ಪ್ರಯತ್ನಿಸುತ್ತಲೇ ಇದೆ. ಶಾಂತಿ ಮಂತ್ರ ಪಠಿಸುತ್ತಲೇ ಮುಂದೊತ್ತಿ ಬರುವ ತಂತ್ರದಿಂದ ಅವರಿಗೆ ಸಾಕಷ್ಟು ಲಾಭವೂ ಆಗಿದೆ. ಆದರೆ ಇದೇ ತಂತ್ರವನ್ನು ನಾವೂ ಅನುಸರಿಸಬಲ್ಲೆವು, ಏಟಿಗೆ ಎದಿರೇಟು ಕೊಡಬಲ್ಲೆವು ಎಂಬುದನ್ನು ಒಮ್ಮೆ ಮನದಟ್ಟು ಮಾಡಿಸಿದ ನಂತರ ಅವರಿಗೆ ಅಕ್ಷರಶಃ ಆಘಾತವಾಯಿತು. ಚೀನಾದಂಥ ದೇಶವನ್ನು ಎದುರಿಸಲು ಇಂಥ ನಿಲುವು ಅನಿವಾರ್ಯವಾಗಿದೆ.

ಇದನ್ನೂ ಓದಿ: India China Border Clash: ಭಾರತ-ಚೀನಾ ಗಡಿ ಸಂಘರ್ಷದಲ್ಲಿ ನಮ್ಮ ಸೈನಿಕರಾರೂ ಸತ್ತಿಲ್ಲ; ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:09 am, Thu, 22 December 22

ತಾಜಾ ಸುದ್ದಿ
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ