AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತದಲ್ಲಿ ಹೂಡಿಕೆ ಮಾಡಿ’: ಕನ್ನಡಿಗರು ಮತ್ತು ಭಾರತೀಯರಿಗೆ ಹೆಚ್​ಡಿ ಕುಮಾರಸ್ವಾಮಿ ಕರೆ

ಅಮೆರಿಕದಲ್ಲಿ ನಡೆದ ಅಕ್ಕ ಬಿಸಿನೆಸ್ ಫೋರಂ-2026ರಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ವಿದೇಶಿ ಕನ್ನಡಿಗರು ಮತ್ತು ಭಾರತೀಯರಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದರು. ಜೊತೆಗೆ ಉದ್ಯೋಗ ಸೃಷ್ಟಿಕರ್ತರಾಗಿ ಭಾರತದ ತಂತ್ರಜ್ಞಾನ ಮತ್ತು ಅನುಭವ ಬಳಸಿಕೊಳ್ಳಿ ಎಂದು ಹೇಳಿದ್ದಾರೆ.

‘ಭಾರತದಲ್ಲಿ ಹೂಡಿಕೆ ಮಾಡಿ’: ಕನ್ನಡಿಗರು ಮತ್ತು ಭಾರತೀಯರಿಗೆ ಹೆಚ್​ಡಿ ಕುಮಾರಸ್ವಾಮಿ ಕರೆ
ಅಕ್ಕ ಬಿಸಿನೆಸ್ ಫೋರಂ-2026Image Credit source: x/hd_kumaraswamy
ಗಂಗಾಧರ​ ಬ. ಸಾಬೋಜಿ
|

Updated on: Sep 06, 2026 | 10:55 PM

Share

ಅಮೆರಿಕ, ಸೆಪ್ಟೆಂಬರ್​​ 06: ‘ಉದ್ಯೋಗ ಹುಡುಕುವವರಾಗಬೇಡಿ, ಉದ್ಯೋಗ ನೀಡುವ ಉದ್ಯಮಿಗಳಾಗಿ. ವಿದೇಶದಲ್ಲಿರುವವರು ತಮ್ಮ ತಂತ್ರಜ್ಞಾನ, ಅನುಭವವನ್ನು ಭಾರತಕ್ಕಾಗಿ ಬಳಸಿ. ಭಾರತದಲ್ಲಿ ಹೂಡಿಕೆಗೆ ಅತ್ಯುತ್ತಮ ವಾತಾವರಣವಿದೆ. ಹಾಗಾಗಿ ಭಾರತದಲ್ಲಿ ಹೂಡಿಕೆ ಮಾಡುವಂತೆ’ ಕನ್ನಡಿಗರು ಮತ್ತು ಭಾರತೀಯರಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕರೆ ನೀಡಿದರು.

‘ಅಕ್ಕ ಬಿಸಿನೆಸ್ ಫೋರಂ-2026’ ಸಮ್ಮೇಳನದಲ್ಲಿ ಹೆಚ್​ಡಿ ಕುಮಾರಸ್ವಾಮಿ ಭಾಗಿ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಆಯೋಜಿಸಲಾಗಿದ್ದ ‘ಅಕ್ಕ ಬಿಸಿನೆಸ್ ಫೋರಂ-2026’ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ನಾಗಾಲೋಟದಲ್ಲಿ ಮುನ್ನಡೆಯುತ್ತಿದ್ದು, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಯೋಜನೆಗಳ ಮೂಲಕ ವಿಕಸಿತ ಭಾರತದ ಗುರಿಯನ್ನು ತಲುಪಲು ದೇಶದಲ್ಲಿ ಹೂಡಿಕೆಗೆ ಅತ್ಯುತ್ತಮ ವಾತಾವರಣ ನಿರ್ಮಾಣವಾಗಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​

ಉತ್ಪಾದನಾ ಕ್ಷೇತ್ರ ಹಾಗೂ ಹಸಿರು ಇಂಧನಕ್ಕೆ ಕೇಂದ್ರದಿಂದ ಬೃಹತ್ ಉತ್ತೇಜನ

ದೇಶದ ಕೈಗಾರಿಕಾ ಪ್ರಗತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಗಳನ್ನು ಪ್ರಸ್ತಾಪಿಸಿದ ಸಚಿವರು, ‘10,900 ಕೋಟಿ ರೂ ವೆಚ್ಚದಲ್ಲಿ ‘ಪಿಎಂ ಇ-ಡ್ರೈವ್’ ಯೋಜನೆ ಜಾರಿಗೊಳಿಸಲಾಗಿದೆ. ಇದರೊಂದಿಗೆ ಉತ್ಪಾದನಾ ಉತ್ತೇಜನ ಯೋಜನೆಗೆ 25,938 ಕೋಟಿ ರೂ ಮೀಸಲಿಡಲಾಗಿದ್ದು, 50 GWh ಎಸಿಸಿ ಬ್ಯಾಟರಿ ಕಾರ್ಯಕ್ರಮಕ್ಕಾಗಿ 18,100 ಕೋಟಿ ರೂ ಹಾಗೂ ವಿರಳ ಖನಿಜಗಳ ಅಭಿವೃದ್ಧಿಗಾಗಿ 7,280 ಕೋಟಿ ರೂ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

2030ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಗುರಿ: ಹೆಚ್​ಡಿ ಕುಮಾರಸ್ವಾಮಿ

‘ಭಾರತವು ಇಂದು ವಿಶ್ವದಲ್ಲೇ ಅತಿ ದೊಡ್ಡ ಉಕ್ಕು ಉತ್ಪಾದಕ ಹಾಗೂ ಪ್ರಮುಖ ಗ್ರಾಹಕ ದೇಶವಾಗಿ ಹೊರಹೊಮ್ಮಿದೆ. 2030ರ ವೇಳೆಗೆ ವಾರ್ಷಿಕ 300 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಬೃಹತ್ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಉಕ್ಕು ಉತ್ಪಾದನೆಗೆ 6,322 ಕೋಟಿ ರೂ ಉತ್ಪಾದನಾ ಉತ್ತೇಜನ ಯೋಜನೆಯನ್ನು ರೂಪಿಸಲಾಗಿದ್ದು, 2070ರ ವೇಳೆಗೆ ಉಕ್ಕು ಕ್ಷೇತ್ರದಲ್ಲಿ ಸಂಪೂರ್ಣ ಶೂನ್ಯ ಕಾರ್ಬನ್ ಹೊರಸೂಸುವಿಕೆ (ನೆಟ್ ಜೀರೋ) ಸಾಧಿಸುವ ಮಹತ್ವಾಕಾಂಕ್ಷೆಯನ್ನೂ ಹೊಂದಲಾಗಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಕೇಂದ್ರ ಸಂಪುಟ ಪುನಾರಚನೆ: ಮೋದಿ ಹೊಸ ಟೀಂನಲ್ಲಿ HDK ಇರಲ್ವಾ? ಮಾನದಂಡ ಏನು ಗೊತ್ತಾ?

ಇನ್ನು ಇದೇ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಉದ್ಯಮ, ಬಂಡವಾಳ ಹೂಡಿಕೆ ಹಾಗೂ ತಂತ್ರಜ್ಞಾನ ಸಹಕಾರಗಳ ಕುರಿತು ವಿಸ್ತೃತ ಚರ್ಚೆ ಕೂಡ ನಡೆಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us