ನ್ಯಾಯ ಸಿಗದ ವಿನಃ ಹಣಕಾಸಿನ ನೆರವು ಬೇಡ, ಎಎಫ್ಎಸ್ಪಿಎ ಕಾಯ್ದೆ ಹಿಂಪಡೆಯಿರಿ; ನಾಗಾಲ್ಯಾಂಡ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಗ್ರಹ
ಡಿಸೆಂಬರ್ 4ರಂದು ನಾಗಾಲ್ಯಾಂಡ್ನಲ್ಲಿ ಒಂದು ದುರಂತ ನಡೆದಿತ್ತು. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕೆಲಸ ಮಾಡಿ, ವಾಹನವೊಂದರಲ್ಲಿ ಹಿಂದಿರುಗುತ್ತಿದ್ದ ಕಾರ್ಮಿಕರನ್ನು, ನಾಗಾಲ್ಯಾಂಡ್ ಬಂಡುಕೋರರು ಎಂದು ಭಾವಿಸಿದ ಭಾರತೀಯ ಸೇನಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು.
ಇತ್ತೀಚೆಗೆ ನಾಗಾಲ್ಯಾಂಡ್ನ ಓಟಿಂಗ್ ಗ್ರಾಮದ ಬಳಿ ಸೇನೆಯ ಗುಂಡಿನ ದಾಳಿಗೆ 14 ನಾಗರಿಕರು ಮೃತಪಟ್ಟಿದ್ದರು. ಈ ಬಗ್ಗೆ ಸೇನೆ ಪಶ್ಚಾತ್ತಾಪ ವ್ಯಕ್ತಪಡಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರಗಳು ಮುಂದಾಗಿದ್ದವು. ಆದರೆ ರಾಜ್ಯ ಸರ್ಕಾರ ನಮಗೆ ಯಾವುದೇ ಹಣಕಾಸು ನೆರವು ನೀಡುವುದು ಬೇಡ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ. ಹಾಗೇ, ಈ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಓಟಿಂಗ್ ಗ್ರಾಮದ ಕೌನ್ಸಿಲ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೂಲಿ ಕಾರ್ಮಿಕರು ಕೆಲಸ ಮುಗಿಸಿ ಬರುತ್ತಿರುವ ವೇಳೆ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ. ಮೃತರ ಸಾವಿಗೆ ಸೂಕ್ತ ನ್ಯಾಯ ಸಿಗದ ಹೊರತು ನಾವು ಯಾವುದೇ ಹಣಕಾಸಿನ ನೆರವನ್ನೂ ಸ್ವೀಕಾರ ಮಾಡುವುದಿಲ್ಲ. ಇಡೀ ಈಶಾನ್ಯ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸಚಿವ ಪೈವಾಂಗ್ ಕೊನ್ಯಾಕ್ ಮತ್ತು ಮೋನ್ ಜಿಲ್ಲಾಧಿಕಾರಿ ನಮ್ಮೆದುರು ಡಿ.5ರಂದು 18,30,000 ರೂಪಾಯಿ ತಂದು ಕೊಡಲು ಯತ್ನಿಸಿದರು. ಇದು ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೊಡಲು ತಂದ ಹಣ ಎಂದು ಗೊತ್ತಾಗುತ್ತಿದ್ದಂತೆ ಅದನ್ನು ತಿರಸ್ಕರಿಸಲಾಯಿತು. ಅಂದು ಕೂಲಿಕಾರ್ಮಿಕರ ಮೇಲೆ ಫೈರಿಂಗ್ ಮಾಡಿದ 21 ಪ್ಯಾರಾ ಕಮಾಂಡೋಗಳಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾ ನಿರತರು ಪಟ್ಟುಹಿಡಿದಿದ್ದಾರೆ.
ಡಿಸೆಂಬರ್ 4ರಂದು ನಾಗಾಲ್ಯಾಂಡ್ನಲ್ಲಿ ಒಂದು ದುರಂತ ನಡೆದಿತ್ತು. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕೆಲಸ ಮಾಡಿ, ವಾಹನವೊಂದರಲ್ಲಿ ಹಿಂದಿರುಗುತ್ತಿದ್ದ ಕಾರ್ಮಿಕರನ್ನು, ನಾಗಾಲ್ಯಾಂಡ್ ಬಂಡುಕೋರರು ಎಂದು ಭಾವಿಸಿದ ಭಾರತೀಯ ಸೇನಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. ಇದು ಕಣ್ತಪ್ಪಿನಿಂದ ಆದ ಘಟನೆಯಾದರೂ 14 ನಾಗರಿಕರ ಪ್ರಾಣ ಹೋಗಿತ್ತು. ಅದಾದ ಬಳಿಕ ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ.ನೀಡುವುದಾಗಿ ಘೋಷಿಸಿತ್ತು. ಕೇಂದ್ರ ಸರ್ಕಾರ ಮೃತರ ಕುಟುಂಬಗಳಿಗೆ 11 ಲಕ್ಷ ರೂ.ನೀಡಲಾಗುವುದು ಮತ್ತು ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಹೇಳಿತ್ತು.
Published On - 7:53 am, Mon, 13 December 21