ಕರ್ನಲ್ ಸೋಫಿಯಾ ಖುರೇಷಿ ಕುರಿತ ಹೇಳಿಕೆ; ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಸಚಿವ ವಿಜಯ್ ಶಾ
ಭಾರತೀಯ ಸೇನಾಪಡೆಯ ಕರ್ನಲ್ ಸೋಫಿಯಾ ಖುರೇಷಿ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ಜಬಲ್ಪುರ್ ಹೈಕೋರ್ಟ್ ಆದೇಶದ ವಿರುದ್ಧ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಪ್ರದೇಶದ ಹೈಕೋರ್ಟ್ ಆದೇಶದ ಮೇರೆಗೆ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶ ಸಚಿವ ವಿಜಯ್ ಶಾ ವಿರುದ್ಧ ಬುಧವಾರ ಇಂದೋರ್ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.

ಇಂದೋರ್, ಮೇ 15: ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ವಿರುದ್ಧ ಮಧ್ಯಪ್ರದೇಶ ಸಚಿವ ವಿಜಯ್ ಶಾ ಇಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅರ್ಜಿಯ ತ್ವರಿತ ವಿಚಾರಣೆಗೆ ವಿಜಯ್ ಶಾ (Vijay Shah) ಒತ್ತಾಯಿಸಿದ್ದಾರೆ. ಮಧ್ಯಪ್ರದೇಶದ ಹೈಕೋರ್ಟ್ ಆದೇಶದ ಮೇರೆಗೆ ಕರ್ನಲ್ ಸೋಫಿಯಾ ಖುರೇಷಿ (Sofiya Qureshi) ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಇಂದೋರ್ ಜಿಲ್ಲೆಯಲ್ಲಿ ಮಧ್ಯಪ್ರದೇಶ ಸಚಿವ ವಿಜಯ್ ಶಾ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಹೈಕೋರ್ಟ್ ಆದೇಶದ ಮೇರೆಗೆ ಬುಡಕಟ್ಟು ಕಲ್ಯಾಣ ಸಚಿವ ವಿಜಯ್ ಶಾ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.
ವಿಜಯ್ ಶಾ ಹೇಳಿದ್ದೇನು?:
ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ‘ಆಪರೇಷನ್ ಸಿಂಧೂರ್’ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಗಳಲ್ಲಿ ವಿವರಗಳನ್ನು ಹಂಚಿಕೊಂಡಿದ್ದರು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಕೂಡ ಈ ಪತ್ರಿಕಾಗೋಷ್ಠಿಗಳಲ್ಲಿ ಅವರೊಂದಿಗೆ ಇದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ವಿಜಯ್ ಶಾ, “ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಅವರ ಸಹೋದರಿಯನ್ನು ಮುಂದಿಟ್ಟುಕೊಂಡು ತಕ್ಕ ತಿರುಗೇಟು ನೀಡಿದ್ದೇವೆ. ಅವರು ಹಿಂದೂಗಳನ್ನು ವಿವಸ್ತ್ರಗೊಳಿಸಿ ಕೊಂದರು. ಅವರಿಗೆ ಉತ್ತರ ನೀಡಲು ಮೋದಿ ಅವರ ಸಹೋದರಿಯನ್ನೇ ಕಳುಹಿಸಿದರು. ನಾವು ಪಾಕಿಸ್ತಾನದವರನ್ನು ವಿವಸ್ತ್ರಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಅವರ ಸಮುದಾಯದ ಮಗಳನ್ನು ಅವರ ಮೇಲಿನ ದಾಳಿಗೆ ಕಳುಹಿಸಿದ್ದೇವೆ. ನಿಮ್ಮದೇ ಸಮುದಾಯದ ಸಹೋದರಿ ನಿಮ್ಮನ್ನು ವಿವಸ್ತ್ರಗೊಳಿಸುತ್ತಾಳೆ. ನಿಮ್ಮ ಜಾತಿಯ ಹೆಣ್ಣುಮಕ್ಕಳನ್ನು ಸೇಡು ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ಕಳುಹಿಸಬಹುದು ಎಂದು ಮೋದಿ ಸಾಬೀತುಪಡಿಸಿದ್ದಾರೆ” ಎಂದು ಹೇಳಿದ್ದರು.
Utterly derogatory, communal and sexist remark made by a BJP MP minister Kunwar Vijay Shah against Col Sofia Quereshi. . And it wasn’t off the cuff either (don’t miss the applause from his chamchas on stage) . Shocking beyond belief. What is the use of ‘nationalist’ flag waving… pic.twitter.com/pZ8VboyAoV
— Rajdeep Sardesai (@sardesairajdeep) May 13, 2025
ಇದನ್ನೂ ಓದಿ: ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದಿದ್ದ ವಿಜಯ್ ಶಾ ಈಗ ತನ್ನ ಸಹೋದರಿ ಎನ್ನುತ್ತಿದ್ದಾರೆ!
ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸೋಫಿಯಾ ಖುರೇಷಿಯನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಅಳೆದಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಕೂಡ ವಿಜಯ್ ಶಾ ಅವರ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ಸೇನಾಧಿಕಾರಿಯ ವಿರುದ್ಧದ ವಿವಾದಾತ್ಮಕ ಹೇಳಿಕೆಗಳಿಗೆ ವಿಜಯ್ ಶಾ ಕ್ಷಮೆ ಯಾಚಿಸಿದ್ದರು. ಆಕೆ ಭಾರತದ ಸಹೋದರಿ. ಸೋಫಿಯಾ ಮತ್ತು ಸೈನ್ಯವನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದರು. ಕನಸಿನಲ್ಲೂ ಸೋಫಿಯಾ ಖುರೇಷಿ ಬಗ್ಗೆ ತಪ್ಪಾಗಿ ಯೋಚಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಈ ಹೇಳಿಕೆಯ ಬಗ್ಗೆ ಜಬಲ್ಪುರ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿ ಅವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು ಆದೇಶಿಸಿತ್ತು. ಇದಾದ ಬಳಿಕ ವಿಜಯ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಒತ್ತಾಯ ಹೆಚ್ಚಾಯಿತು.
मैं विजय शाह, हाल ही में मेरे दिए गए बयान से, जो हर समाज की भावनाएँ आहत हुई हैं, उसके लिए मैं दिल से न केवल शर्मिंदा हूँ, दुखी हूँ, बल्कि माफ़ी चाहता हूँ।
हमारे देश की बहन सोफिया कुरैशी जी ने राष्ट्र धर्म निभाते हुए जाति और समाज से ऊपर उठकर, उन्होंने काम किया है। pic.twitter.com/0qhO895ahl
— Dr. Kunwar Vijay Shah (@KrVijayShah) May 14, 2025
ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಅವಹೇಳನಕಾರಿ, ಕೋಮು ಮತ್ತು ಲಿಂಗ ತಾರತಮ್ಯದಿಂದ ಕೂಡಿದ ಹೇಳಿಕೆ ನೀಡಿದ್ದಕ್ಕಾಗಿ ಮಧ್ಯಪ್ರದೇಶದ ಸಚಿವೆ ವಿಜಯ್ ಶಾ ಅವರ ವಿರುದ್ಧ ಹೈಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಪ್ರಕರಣ ದಾಖಲಿಸಿತ್ತು. ಖಂಡನೆಯ ಅಲೆಯನ್ನು ಹುಟ್ಟುಹಾಕಿರುವ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ನ್ಯಾಯಾಲಯವು ವಿಜಯ್ ಶಾ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು. ಸಂಜೆಯೊಳಗೆ ಇದನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಪೊಲೀಸ್ ಮುಖ್ಯಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.
ಇದನ್ನೂ ಓದಿ: ಲೆಫ್ಟಿನಂಟ್ ಕರ್ನಲ್ ಸೋಫಿಯಾ ಖುರೇಷಿ ಮಾವನ ಮನೆಗೆ ಕಿಡಿಗೇಡಿಗಳ ದಾಳಿ ವದಂತಿ ಹಿನ್ನೆಲೆ ಪೊಲೀಸ್ ಭದ್ರತೆ
ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ವಿಜಯ್ ಶಾ, “ನನ್ನ ಇತ್ತೀಚಿನ ಹೇಳಿಕೆಯಿಂದ ಪ್ರತಿಯೊಂದು ಸಮಾಜದ ಭಾವನೆಗಳಿಗೂ ನೋವಾಗಿದೆ. ಅದಕ್ಕಾಗಿ, ನಾನು ನಾಚಿಕೆಪಡುತ್ತೇನೆ, ತೀವ್ರ ದುಃಖಿತನಾಗಿದ್ದೇನೆ. ಕ್ಷಮೆ ಕೂಡ ಯಾಚಿಸುತ್ತೇನೆ. ಕರ್ನಲ್ ಸೋಫಿಯಾ ಈ ದೇಶದ ಸಹೋದರಿ. ಅವರು ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸುವಾಗ ಜಾತಿ ಮತ್ತು ಸಮಾಜವನ್ನು ಮೀರಿ ಕೆಲಸ ಮಾಡಿದ್ದಾರೆ” ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








