ಮುಂಬೈನಲ್ಲಿ ಕೊವಿಡ್ ನಿರ್ಬಂಧ: ರೈಲು ಸಂಚಾರ ಸ್ಥಗಿತಗೊಳ್ಳುವ ಭಯದಿಂದ ಊರಿನತ್ತ ಹೆಜ್ಜೆ ಹಾಕಿದ ವಲಸೆ ಕಾರ್ಮಿಕರು

Maharashtra Lockdown: ಕೊವಿಡ್ ನಿಯಂತ್ರಣಕ್ಕೆ ಕಳೆದ ವರ್ಷದಂತೆ ಲಾಕ್​ಡೌನ್ ಘೋಷಣೆಯಾದರೆ ಪಾಡೇನು? ಎಂಬ ಭಯ ಇಲ್ಲಿನ ವಲಸೆ ಕಾರ್ಮಿಕರಲ್ಲಿದೆ. ಲಾಕ್​ಡೌನ್ ಘೋಷಣೆಯಾದರೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಭಯದಿಂದಲೇ ಇಲ್ಲಿನ ಹಲವಾರು ವಲಸೆ ಕಾರ್ಮಿಕರು ತಮ್ಮ ಊರಿಗೆ ಹೊರಟಿದ್ದಾರೆ.

ಮುಂಬೈನಲ್ಲಿ ಕೊವಿಡ್ ನಿರ್ಬಂಧ: ರೈಲು ಸಂಚಾರ ಸ್ಥಗಿತಗೊಳ್ಳುವ ಭಯದಿಂದ ಊರಿನತ್ತ ಹೆಜ್ಜೆ ಹಾಕಿದ ವಲಸೆ ಕಾರ್ಮಿಕರು
ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ನಲ್ಲಿ ಸ್ವಾಬ್ ಟೆಸ್ಟ್
Rashmi Kallakatta

|

Apr 05, 2021 | 1:39 PM

ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಕೊವಿಡ್ ನಿಯಂತ್ರಣಕ್ಕೆ ಕಳೆದ ವರ್ಷದಂತೆ ಲಾಕ್​ಡೌನ್ ಘೋಷಣೆಯಾದರೆ ಪಾಡೇನು? ಎಂಬ ಭಯ ಇಲ್ಲಿನ ವಲಸೆ ಕಾರ್ಮಿಕರಲ್ಲಿದೆ. ಲಾಕ್​ಡೌನ್ ಘೋಷಣೆಯಾದರೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಭಯದಿಂದಲೇ ಇಲ್ಲಿನ ಹಲವಾರು ವಲಸೆ ಕಾರ್ಮಿಕರು ತಮ್ಮ ಊರಿಗೆ ಹೊರಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೂರದೂರಿಗೆ ಪ್ರಯಾಣ ಮಾಡುವ ವಲಸೆ ಕಾರ್ಮಿಕರ ಸಂಖ್ಯೆ ರೈಲು ನಿಲ್ದಾಣಗಳಲ್ಲಿ ಕಡಿಮೆ ಇದೆ. 2020ರಲ್ಲಿ ಲಾಕ್​ಡೌನ್ ಘೋಷಣೆಯಾದಾಗ ಬಿಹಾರ,ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಕ್ಕೆ ಹೋಗಲು ವಲಸೆ ಕಾರ್ಮಿಕರ ದಂಡು ರೈಲು ನಿಲ್ದಾಣದಲ್ಲಿ ಕಂಡು ಬಂದಿತ್ತು.

ಲೋಕಮಾನ್ಯ ತಿಲಕ್ ಟರ್ಮಿನಸ್ (LTT) , ಕುರ್ಲಾ ನಿಲ್ದಾಣದಿಂದ ಉತ್ತರಪ್ರದೇಶ ಮತ್ತು ಬಿಹಾರಕ್ಕೆ ರೈಲುಗಳು ಸಂಚರಿಸುತ್ತಿದ್ದು ಕಳೆದ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಭಾನುವಾರ ರಾತ್ರಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊವಿಡ್ ನಿಯಂತ್ರಣಕ್ಕಾಗಿ ಹೊಸ ನಿರ್ಬಂಧಗಳನ್ನು ಘೋಷಿಸಿದ ಬೆನ್ನಲ್ಲೇ ಹಲವಾರು ಪ್ರಯಾಣಿಕರು ರೈಲಿನಲ್ಲಿ ಮುಂಗಡವಾಗಿ ಸೀಟು ಕಾಯ್ದಿರಿಸಿದ್ದಾರೆ.

ಕಳೆದ ವರ್ಷ ಲಾಕ್​ಡೌನ್ ಘೋಷಣೆಯಾದಾಗ ನಾನು ಕಾಲ್ನಡಿಗೆಯಲ್ಲೇ ಜೌನ್​ಪುರ್ ನಲ್ಲಿರುವ ಮನೆಗೆ ತಲುಪಿದ್ದೆ. ಈ ಬಾರಿ ನಾನು ಅದೇ ಪರಿಸ್ಥಿತಿಯಲ್ಲಿ ಸಿಲುಕಲು ಬಯಸುವುದಿಲ್ಲ. ಸರ್ಕಾರ ಹೊಸ ನಿರ್ಬಂಧಗಳನ್ನು ಹೇರಿರುವ ಕಾರಣ ಹೆಚ್ಚಿಗೆ ಕೆಲಸವೇನೂ ಇಲ್ಲ ಎಂದು ನಮ್ಮ ಮಾಲೀಕರು ಹೇಳಿದ್ದಾರೆ. ನಮಗೆ ಈಗ ಕೆಲಸವಿಲ್ಲ. ರೈಲು ಸಂಚಾರ ಸ್ಥಗಿತವಾಗುವ ಮುನ್ನ ಮನೆಗೆ ಹೋಗುವುದು ಒಳಿತು ಎಂದು ಎಲ್​ಟಿಟಿ ರೈಲು ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದ ಸೋನು ಪಾಟಿಲ್ ಎಂಬ ಹೆಸರಿನ ಚಾಲಕ ಹೇಳಿದ್ದಾರೆ.

ನಮ್ಮ ಕೈಯಲ್ಲಿ ಹಣ ಇಲ್ಲ, ಕೆಲಸವೂ ಇಲ್ಲ. ಹಾಗಾಗಿ ನಾವು ನಗರ ತೊರೆಯಲು ನಿರ್ಧರಿಸಿದ್ದೇವೆ ಎಂದು ಉತ್ತರಪ್ರದೇಶದ ಗೊಂಡಾ ಜಿಲ್ಲೆಗೆ ಪ್ರಯಾಣಿಸಲಿರುವ ವಲಸೆ ಕಾರ್ಮಿಕ ಸೋಹನ್ ಲಾಲ್ ಹೇಳಿದ್ದಾರೆ. ಫೆಬ್ರವರಿ ತಿಂಗಳಲ್ಲಿ ನಾವು ಮರಳಿ ಬಂದಿದ್ದೆವು, ಮತ್ತೆ ಕೆಲಸ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಳೆದ ಎರಡು ತಿಂಗಳುಗಳಲ್ಲಿ ಕೊವಿಡ್ ಪ್ರಕರಣ ಏರಿಕೆಯಾಗುತ್ತಲೇ ಇದ್ದುದರಿಂದ ನಮಗೆ ಕೆಲಸವೂ ಇರಲಿಲ್ಲ. ಈಗ ನಿರ್ಬಂಧ ಹೇರಿರುವುದರಿಂದ ನಮಗೆ ಯಾವುದೇ ಕೆಲಸ ಸಿಗಲ್ಲ. ಇಲ್ಲಿ ಬದುಕಲು ನಮ್ಮಲ್ಲಿ ಹಣವಿಲ್ಲ. ಊರಿನಲ್ಲಿ ಕೃಷಿ ಮಾಡಿಯಾದರೂ ಬದುಕಬಹುದು ಅಂತಾರೆ ಸೋಹನ್ ಲಾಲ್.

ಮಲ್ವಾನಿಯಲ್ಲಿ ಪೇಂಟರ್ ಕೆಲಸ ಮಾಡುತ್ತಿರುವ ಮುಸ್ತಫಾ ಶಾ ಅವರ ಬದುಕಿನ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಎರಡು ಮನೆಗಳಿಗೆ ಬಣ್ಣ ಬಳಿಯುವ ಗುತ್ತಿಗೆ ಸಿಕ್ಕಿತ್ತು. ಭಾನುವಾರ ಮಹಾರಾಷ್ಟ್ರ ಸರ್ಕಾರ ಹೊಸ ನಿರ್ಬಂಧಗಳನ್ನು ಹೇರಿದ್ದರಿಂದ ಗ್ರಾಹಕರು ಪೇಂಟರ್​ಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಈ ನಿರ್ಬಂಧಗಳಿಂದಾಗಿ ನಮ್ಮ ದಿನಗೂಲಿಗೆ ಹೊಡೆತ ಬಿದ್ದಿದೆ. ಕಳೆದ ಜೂನ್ ತಿಂಗಳಲ್ಲಿ ಶಾ ಬಿಹಾರಕ್ಕೆ ಹೋಗಿದ್ದರು. ಅಲ್ಲಿ ಯಾವುದೇ ಕೆಲಸ ಸಿಗದೇ ಇದ್ದಾಗ ಮತ್ತೆ ಮುಂಬೈಗೆ ಬಂದರು. ಇಲ್ಲಿ ಬಂದು ಕೆಲಸ ಶುರುಮಾಡಿ ಎಲ್ಲವೂ ಸರಿಹೋಗುತ್ತದೆ ಎಂದು ಅಂದುಕೊಂಡಾಗಲೇ ಕೊವಿಡ್ ಪ್ರಕರಣ ಏರಿಕೆ ಆಯಿತು ಅಂತಾರೆ ಶಾ.

ಭಾನುವಾರದ ನಂತರ ಮುಂಗಡ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲೀ, ರೈಲು ನಿಲ್ದಾಣದಲ್ಲಿ ಜನರ ಗುಂಪಾಗಲೀ ಕಂಡು ಬಂದಿಲ್ಲ ಎಂದು ಸೆಂಟ್ರಲ್ ಮತ್ತು ಪಶ್ಚಿಮ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಸಾಂಕ್ರಾಮಿಕ ಆರಂಭವಾದ ಕೂಡಲೇ ಎರಡನೇ ದರ್ಜೆ ಸೇರಿ ಮುಂಗಡ ಸೀಟು ಕಾಯ್ದಿರಿಸುವ ವ್ಯವಸ್ಥೆ ಆರಂಭಿಸಿದ್ದೆವು. ರೈಲಿನಲ್ಲಿ ಪ್ರಯಾಣಿಸಬೇಕಾದರೆ ಜನರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು ಎಂದು ಸೆಂಟ್ರಲ್ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Coronavirus India Update: ಒಂದೇ ದಿನ 1 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಕರಣ

(Maharashtra imposes night and weekend curfew migrants began leaving the mumbai city)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada