
ಮುಂಬೈ, ನವೆಂಬರ್ 3: ಆಲ್ಕೋಹಾಲ್ ಪಾರ್ಟಿ ವೇಳೆ ನಡೆದ ಜಗಳದಲ್ಲಿ ಸ್ನೇಹಿತನನ್ನು ಹೊಡೆದು ಕೊಂದಿದ್ದ 24 ವರ್ಷದ ಯುವಕನೊಬ್ಬನಿಗೆ ಆ ಕೊಲೆ ನಡೆದ ಬಳಿಕ ಮೃತಪಟ್ಟ ಸ್ನೇಹಿತ ದಿನವೂ ಕನಸಿನಲ್ಲಿ ಬಂದು ಹೆದರಿಸುತ್ತಿದ್ದ. ಇದರಿಂದ ಭಯ ತಾಳಲಾರದೆ ಆತ ಪೊಲೀಸರ ಬಳಿ ಹೋಗಿ ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡು ಶರಣಾಗಿದ್ದಾನೆ.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಡೊಂಬಿವ್ಲಿ ವ್ಯಾಪ್ತಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಪ್ರಭು ಕರ್ಕಾಡೆ ಎಂಬಾತ ಬಂಧಿತ ಆರೋಪಿಯಾಗಿದ್ದು, ಸೋಮವಾರ ಈತ ವಿಷ್ಣುನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮಹಾರಾಷ್ಟ್ರದ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಸುಮಾರು 2 ವಾರಗಳ ಹಿಂದೆ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕಡಮ್ ಎಂಬ 43 ವರ್ಷದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ: ಪ್ರೇಮ ವಿವಾಹವಾಗಿದ್ದರೂ ಕರ್ವಾ ಚೌತ್ ದಿನವೇ ಪತ್ನಿಯ ಭೀಕರ ಕೊಲೆ; ಠಾಣೆಗೆ ತೆರಳಿ ಶರಣಾದ ಪತಿ!
ಮದ್ಯದ ಅಮಲಿನಲ್ಲಿ ಹತ್ಯೆ:
ಶರಣಾಗತಿಯ ನಂತರ ಪೊಲೀಸರು ಪ್ರಭು ಕರ್ಕಾಡೆನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿಶಾಲ್ ಮನೆಯಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಆಲ್ಕೋಹಾಲ್ ಕುಡಿಯುತ್ತಿದ್ದಾಗ ಜಗಳ ಉಂಟಾಗಿ, ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸಾಕ್ಷ್ಯ ನಾಶಕ್ಕೆ ಯತ್ನ:
ಕೊಲೆಯ ನಂತರ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ಕೋಪರ್ ಲಿಂಕ್ ರಸ್ತೆಯ ಬಳಿಯ ನಿರ್ಜನ ಪ್ರದೇಶದಲ್ಲಿದ್ದ ಹುಲ್ಲಿನ ಪೊದೆಯಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದಾಗಿ ತಿಳಿಸಿ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.
ಆಪ್ತ ಸ್ನೇಹಿತ ವಿಶಾಲ್ ಎಂಬುವವನ ಜೊತೆ ಜಗಳವಾಡಿದ ಪ್ರಭು ಕೋಪದಿಂದ ಹೊಡೆದು, ಕಾಲಿನಲ್ಲಿ ಒದ್ದು ಆತನ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಗಾಯಗೊಂಡು ಆತ ಮೃತಪಟ್ಟಿದ್ದ. ಸ್ನೇಹಿತ ಮೃತಪಟ್ಟಿರುವುದನ್ನು ಕಂಡು ಗಾಬರಿಗೊಂಡ ಪ್ರಭು, ತಕ್ಷಣ ತನ್ನ ಬಾಡಿಗೆ ಮನೆಯ ಮಾಲೀಕ ಸಂದೇಶ್ ಮ್ಹಾತ್ರೆ ಎಂಬಾತನ ಸಹಾಯ ಕೋರಿದ್ದಾನೆ. ಅವರಿಬ್ಬರೂ ಸೇರಿ ವಿಶಾಲ್ ಅವರ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ರಾತ್ರೋರಾತ್ರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದರು.
ಇದನ್ನೂ ಓದಿ: ಆಂಧ್ರದ ಶಾಲೆಯೊಳಗೇ ಕೊಲೆ ಯತ್ನ; ಪ್ರೀತಿ ನಿರಾಕರಿಸಿದ್ದಕ್ಕೆ ಗರಗಸದಿಂದ 10ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಸೀಳಿದ ಯುವಕ!
ಕೊಲೆ ಮಾಡಿ ತಾನು ಸುಲಭವಾಗಿ ಪಾರಾಗಿದ್ದೇನೆ ಎಂದು ಪ್ರಭು ಭಾವಿಸಿದ್ದ. ಆದರೆ ಘಟನೆ ನಡೆದ ಮರುದಿನದಿಂದಲೇ ಆತನಿಗೆ ಅಸಲಿ ನರಕ ಶುರುವಾಗಿತ್ತು. ಸತತ 20 ರಾತ್ರಿಗಳ ಕಾಲ ಮೃತಪಟ್ಟ ಸ್ನೇಹಿತ ವಿಶಾಲ್ ಕನಸಿನಲ್ಲಿ ಬಂದು ಆತನನ್ನು ಭಯಬೀಳಿಸಲು ಪ್ರಾರಂಭಿಸಿದ್ದನು. ಇದರಿಂದಾಗಿ ಪ್ರಭುಗೆ ಅರ್ಧ ಗಂಟೆಯೂ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕನಸಿನ ಕಾಟ ಮತ್ತು ಪಶ್ಚಾತ್ತಾಪದಿಂದ ತೀವ್ರವಾಗಿ ನೊಂದ ಪ್ರಭು, ಭಯ ತಾಳಲಾರದೆ ಕೊನೆಗೆ ಠಾಣೆ ಪೊಲೀಸರ ಬಳಿ ತೆರಳಿ ತನ್ನ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಆರೋಪಿ ಪ್ರಭು ಹಾಗೂ ಸಾಕ್ಷ್ಯ ನಾಶಪಡಿಸಲು ಸಹಾಯ ಮಾಡಿದ ಮನೆ ಮಾಲೀಕ ಸಂದೇಶ್ ಮ್ಹಾತ್ರೆಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಕಲ್ಯಾಣ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಹತ್ಯೆಯ ಹಿಂದಿನ ನಿಖರವಾದ ಕಾರಣ ಮತ್ತು ಮನೆ ಮಾಲೀಕನ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ