ಡಿಸ್ಚಾರ್ಜ್ ಆದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗೆ ಶರದ್ ಪವಾರ್ ದಾಖಲು
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕ ಶರದ್ ಪವಾರ್ ಅವರನ್ನು ಪುಣೆಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಕೆಲವೇ ಗಂಟೆಗಳಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸ್ವಾಸಕೋಶದ ಸಮಸ್ಯೆ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ 83 ವರ್ಷದ ಶರದ್ ಪವಾರ್ ಅವರನ್ನು ನವೆಂಬರ್ 2ರಂದು ಪುಣೆಯ 'ರೂಬಿ ಹಾಲ್ ಕ್ಲಿನಿಕ್'ಗೆ ದಾಖಲಿಸಲಾಗಿತ್ತು. ಅಲ್ಲಿ 2 ದಿನಗಳ ಚಿಕಿತ್ಸೆ ಮತ್ತು ವಿವಿಧ ವೈದ್ಯಕೀಯ ತಪಾಸಣೆಗಳ ನಂತರ, ಅವರ ಆರೋಗ್ಯ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ವೈದ್ಯರು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರು. ಆದರೆ, ಇಂದು ಸಂಜೆ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈ, ನವೆಂಬರ್ 4: ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಅವರನ್ನು ಪುಣೆಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಕೆಲವೇ ಗಂಟೆಗಳಲ್ಲಿ, ಇಂದು (ನವೆಂಬರ್ 4) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರ ಪುತ್ರಿ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಶರದ್ ಪವಾರ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಶ್ವಾಸಕೋಶದ ಸಮಸ್ಯೆ ಹಾಗೂ ಪ್ಲುರಿಟಿಕ್ ಎದೆ ನೋವಿನ ಹಿನ್ನೆಲೆಯಲ್ಲಿ 85 ವರ್ಷದ ಶರದ್ ಪವಾರ್ ಅವರನ್ನು ನವೆಂಬರ್ 2ರಂದು ಪುಣೆಯ ‘ರೂಬಿ ಹಾಲ್ ಕ್ಲಿನಿಕ್’ಗೆ ದಾಖಲಿಸಲಾಗಿತ್ತು. ಅಲ್ಲಿ ಜನರಲ್ ಚೆಕಪ್ ಹಾಗೂ ವೈದ್ಯಕೀಯ ತಪಾಸಣೆಗಳ ನಂತರ ಇಂದು ಬಿಡುಗಡೆ ಮಾಡಲಾಗಿತ್ತು. ಆದರೆ, ಮುನ್ನೆಚ್ಚರಿಕೆ ಹಾಗೂ ಹೆಚ್ಚಿನ ಪರೀಕ್ಷೆಗಳಿಗಾಗಿ ಮುಂಬೈಗೆ ತಲುಪಿದ ಬೆನ್ನಲ್ಲೇ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ- ಶರದ್ ಪವಾರ್ ಭೇಟಿ; ಎನ್‌ಡಿಎ ಸೇರಲು ಒಪ್ಪಿತಾ ಎನ್‌ಸಿಪಿ?
ಪ್ರಧಾನಿ ನರೇಂದ್ರ ಮೋದಿ ಫೋನ್:
ಶರದ್ ಪವಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಅವರಿಗೆ ಕರೆ ಮಾಡಿ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದಾರೆ. “ದೇಶದ ಜವಾಬ್ದಾರಿ ನೋಡಿಕೊಳ್ಳಲು ಸುಪ್ರಿಯಾ ಸುಳೆ ಹಾಗೂ ಇತರರು ಸಿದ್ಧರಿದ್ದಾರೆ, ನೀವು ವಿಶ್ರಾಂತಿಗೆ ಆದ್ಯತೆ ನೀಡಿ” ಎಂದು ಮೋದಿ ತಮಾಷೆಯಾಗಿ ಸಲಹೆ ನೀಡಿದರೆಂದು ಶರದ್ ಪವಾರ್ ಅವರ ಸಹಾಯಕ ವಿಠಲ ಮಣಿಯಾರ್ ತಿಳಿಸಿದ್ದಾರೆ.
ಪ್ರಧಾನಿಗಳ ಕಾಳಜಿಗೆ ಧನ್ಯವಾದ ತಿಳಿಸಿದ ಶರದ್ ಪವಾರ್, ತಾವು ವಿಶ್ರಾಂತಿ ಪಡೆಯುತ್ತಿದ್ದು, ದೇಶವನ್ನು ಮುನ್ನಡೆಸಲು ನೀವೆಲ್ಲರೂ ಇರುವುದರಿಂದ ತಮಗೆ ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಟಲಿನ ಸೋಂಕಿನಿಂದ ಎನ್‌ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಶರದ್ ಪವಾರ್ ಅವರಿಗೆ ‘ಪ್ಲುರಿಟಿಕ್ ಪೇನ್’ ಕಾಣಿಸಿಕೊಂಡಿತ್ತು. ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ಎದೆಯ ಭಾಗದಲ್ಲಿ ತೀವ್ರ ನಿರಂತರ ನೋವು ಕಾಣಿಸಿಕೊಳ್ಳುವುದನ್ನು ಪ್ಲುರಿಟಿಕ್ ನೋವು ಎಂದು ಕರೆಯಲಾಗುತ್ತದೆ. ಇದೀಗ ಶರದ್ ಪವಾರ್ ಅವರ ದೇಹದ ಪ್ರಮುಖ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ಸುಪರ್ದಿಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




