Nirav Modi | ಭಾರತ ನ್ಯಾಯಾಂಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಕಾಟ್ಜು, ಸಮರ್ಥಿಸಿದ ಲಂಡನ್ ಕೋರ್ಟ್

Nirav Modi Extradition Case: ನೀರವ್ ಮೋದಿ ಪ್ರಕರಣದ ವಿಚಾರಣೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ನ್ಯಾಯಾಂಗ ವ್ಯವಸ್ಥೆಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ್ದರು. ಕಾಟ್ಜು ವಾದ ಮತ್ತು ಅದಕ್ಕೆ ಬ್ರಿಟನ್ ಕೋರ್ಟ್​ ವ್ಯಕ್ತಪಡಿಸಿದ ಕಟು ಆಕ್ಷೇಪದ ಸಂಪೂರ್ಣ ವಿವರ ಇಲ್ಲಿದೆ.

Nirav Modi | ಭಾರತ ನ್ಯಾಯಾಂಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಕಾಟ್ಜು, ಸಮರ್ಥಿಸಿದ ಲಂಡನ್ ಕೋರ್ಟ್
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 27, 2021 | 1:10 PM

‘ಭಾರತದ ನ್ಯಾಯಾಂಗದ ವಿಶ್ವಾಸಾರ್ಹತೆ ಬಗ್ಗೆ ಬ್ರಿಟನ್​ ಕೋರ್ಟ್​ಗೆ ಇರುವಷ್ಟು ವಿಶ್ವಾಸ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರಿಗಿಲ್ಲ’ ಎಂಬ ಮಾತು ಈಗ ಭಾರತದ ವಕೀಲರ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ಕಾಟ್ಜು ಈ ಬಾರಿ ಭಾರತ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯದಾನ ಪ್ರಕ್ರಿಯೆ ಬಗ್ಗೆ ಬ್ರಿಟನ್ ಕೋರ್ಟ್​ನಲ್ಲಿ ಮಂಡಿಸಿರುವ ವಾದದಿಂದ ಸುದ್ದಿಯಾಗಿದ್ದಾರೆ. ಕಾಟ್ಜು ವಾದ ಮತ್ತು ಅದಕ್ಕೆ ಬ್ರಿಟನ್ ಕೋರ್ಟ್​ ವ್ಯಕ್ತಪಡಿಸಿದ ಕಟು ಆಕ್ಷೇಪದ ಸಂಪೂರ್ಣ ವಿವರ ಇಲ್ಲಿದೆ.

ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ ₹ 14,000 ಕೋಟಿ ವಂಚಿಸಿರುವ ಪ್ರಕರಣದ ಬಗ್ಗೆ ಈಚೆಗೆ (ಫೆ.25) ಬ್ರಿಟನ್​ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಬಗ್ಗೆ ನಿಮಗೆ ಈಗಾಗಲೇ ಗೊತ್ತಿರುತ್ತೆ. ಲಂಡನ್​ ಜೈಲಿಗಿಂತಲೂ ಮುಂಬೈನ ಅರ್ಥರ್​ ರೋಡ್ ಜೈಲೇ ಚೆನ್ನಾಗಿದೆ. ನೀರವ್ ಮೋದಿ ಇಲ್ಲಿರುವುದಕ್ಕಿಂತ, ಅಲ್ಲಿಯೇ ಇರುವುದು ಒಳ್ಳೆಯದು ಎನ್ನುವ ಅರ್ಥದಲ್ಲಿ ಬ್ರಿಟನ್​ನ ನ್ಯಾಯಾಧೀಶರು ಕೆಲವು ಮಾತುಗಳನ್ನು ಹೇಳಿದ್ದರು. ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗೆ ಭಾರೀ ಮೊತ್ತದ ಹಣ ವಂಚಿಸಿ, ಬ್ರಿಟನ್​ಗೆ ಓಡಿ ಬಂದಿರುವ ನೀರವ್ ಮೋದಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಭಾರತ ಸರ್ಕಾರ ಮಂಡಿಸಿದ್ದ ವಾದಕ್ಕೆ ಬ್ರಿಟನ್ ಕೋರ್ಟ್​ ಮನ್ನಣೆ ನೀಡಿತ್ತು.

ಈ ಪ್ರಕರಣದಲ್ಲಿ ನೀರವ್ ಮೋದಿ ಪರವಾಗಿ ‘ತಜ್ಞ ಸಾಕ್ಷಿ’ (ಎಕ್ಸ್​ಪರ್ಟ್​ ವಿಟ್​ನೆಸ್) ಆಗಿ ಮಾತನಾಡಿದ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಭಾರತದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಆಡಿರುವ ಕೆಲ ಮಾತುಗಳು ದೊಡ್ಡ ವಿವಾದವಾಗಿದೆ. ಕಾಟ್ಜು ಅವರ ಹೇಳಿಕೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದ ಬ್ರಿಟನ್ ನ್ಯಾಯಾಲಯ, ‘ಭಾರತದ ನ್ಯಾಯ ಪ್ರದಾನ ವ್ಯವಸ್ಥೆಯ ಅತ್ಯುನ್ನತ ಹಂತದಲ್ಲಿರುವ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಹೀಗೆ ಮಾತನಾಡಬಾರದಿತ್ತು. ಅವರ ಹೇಳಿಕೆಗಳು ಪೂರ್ವಗ್ರಹದಿಂದ ಕೂಡಿವೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ’ ಎಂದಿದ್ದಾರೆ.

‘ಭಾರತದಲ್ಲಿ ಸಂವಿಧಾನ ಲಿಖಿತ ರೂಪದಲ್ಲಿದೆ. ಸಂವಿಧಾನದ ದೃಢ ಬೆಂಬಲವಿರುವ ಅಲ್ಲಿನ ನ್ಯಾಯಾಂಗವು ಸರ್ಕಾರದ, ರಾಜಕಾರಿಣಿಗಳ ಹಸ್ತಕ್ಷೇಪದಿಂದ ಮುಕ್ತವಾಗಿದೆ’ ಎಂದು ಬ್ರಿಟನ್ ನ್ಯಾಯಾಧೀಶರು ಹೇಳಿದ್ದರು. ವಿದೇಶಿ ಪ್ರಜೆಯಾಗಿರುವ ನ್ಯಾಯಾಧೀಶರು ಭಾರತದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಈ ಪರಿ ಸಮರ್ಥಿಸಿಕೊಂಡಿರುವುದು ಮತ್ತು ಭಾರತದ ಪ್ರಜೆ, ಭಾರತದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯೂ ಅಗಿದ್ದ ವ್ಯಕ್ತಿ ಭಾರತದ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಈ ಪರಿ ಟೀಕಿಸಿರುವುದು- ಹೀಗೆ ಎರಡೂ ಕಾರಣಕ್ಕೆ ಈ ವಿಚಾರ ಭಾರತೀಯರ ಗಮನ ಸೆಳೆದಿದೆ.

ಇದನ್ನೂ ಓದಿ: ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದ ಲಂಡನ್ ನ್ಯಾಯಾಲಯ

Judgement copy, Tushar Mehta

ನೀರವ್ ಮೋದಿ ಪ್ರಕರಣದಲ್ಲಿ ಲಂಡನ್ ಜಿಲ್ಲಾ ನ್ಯಾಯಾಲಯದ ತೀರ್ಪು ಮತ್ತು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಅಸಲಿಗೆ ಆಗಿದ್ದೇನು: ವಾದ-ಪ್ರತಿವಾದ, ಕೋರ್ಟ್ ವಿಚಾರಣೆ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎನ್ನುವ ಭಾರತ ಸರ್ಕಾರದ ವಿನಂತಿಗೆ ಮನ್ನಣೆ ನೀಡಬಾರದು ಎಂದು ನೀರವ್ ಮೋದಿ ಬ್ರಿಟನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನೀರವ್ ಪರವಾಗಿ ‘ತಜ್ಞ ಸಾಕ್ಷಿ’ ಆಗಿದ್ದ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ಭಾರತದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿವೆ. ಹೀಗಾಗಿ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕಾಟ್ಜು ಹೇಳಿಕೆಯನ್ನು ಬ್ರಿಟನ್ ನ್ಯಾಯಾಲಯ ಸಾರಾಸಗಟಾಗಿ ತಳ್ಳಿಹಾಕಿತ್ತು.

ಮೋದಿ ಹಸ್ತಾಂತರ ಕೋರಿ ಭಾರತ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ನೀರವ್ ಮೋದಿ ಪರವಾಗಿ ವಾದಿಸಿದ ನ್ಯಾಯಮೂರ್ತಿ ಕಾಟ್ಜು, ಭಾರತದಲ್ಲಿ ನೀರವ್ ಮೋದಿಯ ವಿಚಾರಣೆ ‘ಮುಕ್ತ ಮತ್ತು ನ್ಯಾಯ ಸಮ್ಮತ’ ರೀತಿಯಲ್ಲಿ ನಡೆಯುವುದು ಅನುಮಾನ ಎಂದರು. ನೀರವ್ ಮೋದಿ ಪ್ರಕರಣದ ಬಗ್ಗೆ ಮಾಧ್ಯಮಗಳು ಈಗಾಗಲೇ ವಿಚಾರಣೆ ನಡೆಸುತ್ತಿವೆ. ಇಲ್ಲಿನ ಉಸಿರುಗಟ್ಟಿಸುವಂಥ ವಾತಾವರಣದಲ್ಲಿ ನ್ಯಾಯ ಸಮ್ಮತ ವಿಚಾರಣೆ ನಡೆಯುವುದು ಅನುಮಾನ ಎಂದಿದ್ದರು. ಭಾರತದ ನ್ಯಾಯಾಂಗ ವ್ಯವಸ್ಥೆ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದು, ಭ್ರಷ್ಟವಾಗಿದೆ ಎಂದು ಹೇಳಿದ್ದರು.

ಕಾಟ್ಜು ಹೇಳಿಕೆಯನ್ನು ಲಂಡನ್​ ಮಹಾನಗರದ ವೆಸ್ಟ್​ಮಿನಿಸ್ಟರ್​ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಸ್ಯಾಮ್ ಗೂಸ್ ತಳ್ಳಿಹಾಕಿದರು. ಮಾತ್ರವಲ್ಲ, ಕಾಟ್ಜು ಹೇಳಿಕೆಯ ಕುರಿತು ತಮ್ಮ ಅಭಿಪ್ರಾಯಗಳನ್ನೂ ನಿರ್ದಾಕ್ಷಿಣ್ಯವಾಗಿ ದಾಖಲಿಸಿದರು. ‘ನ್ಯಾಯಮೂರ್ತಿ ಕಾಟ್ಜು ಅಭಿಪ್ರಾಯಕ್ಕೆ ನಾನು ಅಂಥ ಮನ್ನಣೆ ಕೊಡುವುದಿಲ್ಲ. ಅದು ಪಕ್ಷಪಾತ ಧೋರಣೆ ಮತ್ತು ವಿಶ್ವಾಸಾರ್ಹತೆಯ ಕೊರತೆ ಎದ್ದು ಕಾಣುತ್ತಿದೆ’ ಎಂದಿದ್ದರು.

‘2011ರಲ್ಲಿ ನಿವೃತ್ತರಾಗುವವರೆಗೂ ಭಾರತದ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಧೀಶರಾಗಿದ್ದ ಕಾಟ್ಜು ಅವರು ತಮ್ಮ ವಾದಕ್ಕೆ ಪೂರಕವಾಗಿ ಒದಗಿಸಿರುವ ಸಾಕ್ಷ್ಯಗಳನ್ನು ನಂಬಲು ಆಗುತ್ತಿಲ್ಲ. ತಮ್ಮ ಜೊತೆಗೆ ಕೆಲಸ ಮಾಡಿದ್ದ ಇತರ ಹಿರಿಯ ನ್ಯಾಯಾಧೀಶರ ಬಗ್ಗೆ ಕಾಟ್ಜು ಗೌರವವಿಲ್ಲದೆ ಮಾತನಾಡಿದ್ದಾರೆ. ವಿಪರೀತ ಮಾತನಾಡುವ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಮಾಡಿರುವ ವಾದದಂತಿದೆ ಕಾಟ್ಜು ಅವರ ಮಾತುಗಳು’ ಎಂದು ಪರೋಕ್ಷವಾಗಿ ಬ್ರಿಟನ್ ನ್ಯಾಯಾಧೀಶರು ಅಸಮಾಧಾನ ಹೊರಹಾಕಿದ್ದರು.

ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸುವ ಮೊದಲೇ ಕಾಟ್ಜು ಮಾಧ್ಯಮಗಳ ಎದುರು ಮಾತನಾಡಿದ ಬಗ್ಗೆಯೂ ಬ್ರಿಟನ್ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು. ‘ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಷ್ಟು ದೊಡ್ಡ ಸ್ಥಾನ ನಿರ್ವಹಿಸಿದ್ದ ವ್ಯಕ್ತಿಯೊಬ್ಬರು ಹೀಗೆ ನಡೆದುಕೊಂಡ ರೀತಿ ಪ್ರಶ್ನಾರ್ಹ’ ಎಂದು ಹೇಳಿತು. ಭಾರತದ ನ್ಯಾಯದಾನ ವ್ಯವಸ್ಥೆ ಮುಕ್ತವಾಗಿಲ್ಲ ಎಂದು ಹೇಳಿರುವ ಕಾಟ್ಜು, (ನೀರವ್ ಮೋದಿ ವಿರುದ್ಧದ) ಸಾಕ್ಷ್ಯಗಳನ್ನು ನಾನು ಪರಿಗಣಿಸುವುದಿಲ್ಲ ಎಂದು ಈ ಹಿಂದೆ ಹಲವು ಬಾರಿ ನುಡಿದಿದ್ದಾರೆ. ಭಾರತ ಸರ್ಕಾರದ ಮನವಿಗಳನ್ನು ಇವರು ಅರ್ಥ ಮಾಡಿಕೊಂಡಂತೆ ಇಲ್ಲ ಎಂದು ನ್ಯಾಯಾಲಯ ಹೇಳಿತು.

ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿದ್ದ ಬಗ್ಗೆ ಕಾಟ್ಜು ಆಕ್ಷೇಪಿಸುತ್ತಾರೆ. ಆದರೆ ಸ್ವತಃ ಕಾಟ್ಜು ಅವರೇ ನಿವೃತ್ತರಾದ ನಂತರ ಭಾರತ ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದರು. ಇದು ಕಾಟ್ಜು ಅವರ ಧೋರಣೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವುದಿಲ್ಲವೇ ಎಂದು ಬ್ರಿಟನ್ ಕೋರ್ಟ್ ಪ್ರಶ್ನಿಸಿತು.

ಇದನ್ನೂ ಓದಿ: ನೀರವ್​ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಆತನ ಸಹೋದರಿಯೇ ಪ್ರಮುಖ ಸಾಕ್ಷಿ

Markandeya-Katju

ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು

ಇಂಥ ಹೇಳಿಕೆ ನೀಡುವ ಅರ್ಹತೆ ಕಾಟ್ಚು ಅವರಿಗಿದೆಯೇ? ‘ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಅಲ್ಲಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಕಾಟ್ಜು ಹಲವು ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ. ಅಧಿಕಾರದಲ್ಲಿರುವವರಿಗೆ ಭಾರತದ ಸುಪ್ರೀಂಕೋರ್ಟ್​ ಶರಣಾಗಿದೆ ಎಂದು ಹೇಳಿದ್ದಾರೆ. ನಿವೃತ್ತಿಯ ನಂತರ ರಾಜ್ಯಸಭೆಯಲ್ಲಿ ಸ್ಥಾನ ಪಡೆಯುವ ಉದ್ದೇಶದೊಂದಿಗೆ, ಅಂದರೆ ರಾಜಕೀಯ ಲಾಭಕ್ಕಾಗಿ ನಿವೃತ್ತ ನ್ಯಾಯಮೂರ್ತಿಯೊಬ್ಬರು ಪ್ರಕರಣವೊಂದರಲ್ಲಿ ಆದೇಶ ಹೊರಡಿಸಿದ ಬಗ್ಗೆಯೂ ಹೇಳಿದ್ದಾರೆ. ಆದರೆ ಸ್ವತಃ ಕಾಟ್ಚು ಅವರ ವರ್ತನೆಯೂ ಇದೇ ರೀತಿ ಇದೆಯಲ್ಲವೇ? ಕಾಟ್ಚು ಅವರು ನಿವೃತ್ತರಾದ ನಂತರ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷರಾಗಿ ಸರ್ಕಾರವೇ ಅವರನ್ನೇ ನೇಮಿಸಿತ್ತಲ್ಲವೇ’ ಎಂದು ಬ್ರಿಟನ್ ಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಶ್ನಿಸಿತು.

ಬ್ರಿಟನ್ ನ್ಯಾಯಾಧೀಶರ ಕಟು ಮಾತುಗಳು ಇಷ್ಟಕ್ಕೇ ನಿಲ್ಲಲಿಲ್ಲ. ‘ನೀರವ್ ಮೋದಿ ಪ್ರಕರಣದಲ್ಲಿ ಮಾಧ್ಯಮ ವಿಚಾರಣೆ ಬಗ್ಗೆ ಕಾಟ್ಜು ಅವರಿಗೆ ಆಕ್ಷೇಪಗಳಿವೆ. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಮಂಡಿಸಲಿರುವ ವಾದದ ಬಗ್ಗೆ ಕಾಟ್ಜು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. ಮಾಧ್ಯಮಗಳಲ್ಲಿ ತಾವು ಎದ್ದು ಕಾಣಲು ಏನೆಲ್ಲಾ ಮಾಡಬೇಕು ಅದೆಲ್ಲವನ್ನೂ ಮಾಡಿಕೊಂಡಿದ್ದರು’ ಎಂದು ಕಾಟ್ಜು ನಡೆಯನ್ನು ಬ್ರಿಟನ್ ಕೋರ್ಟ್ ವಿಮರ್ಶಿಸಿತು.

‘ಭಾರತದ ನ್ಯಾಯಾಂಗ ಸ್ವಾತಂತ್ರ್ಯ ಕಳೆದುಕೊಂಡಿದೆ, ಮಾಧ್ಯಮಗಳು ಅತ್ಯಾಸಕ್ತಿ ತೋರುವ ಉನ್ನತ ಪ್ರಭಾವಿ ವ್ಯಕ್ತಿಗಳ ಪ್ರಕರಣಗಳನ್ನು ವಿಚಾರಣೆ ನಡೆಸುವ ಸಾಮರ್ಥ್ಯ ಭಾರತದ ನ್ಯಾಯಾಲಯಗಳಿಗೆ ಇಲ್ಲ’ ಎಂದು ಹೇಳಲು ಯಾವುದೇ ಆಧಾರಗಳಿಲ್ಲ ಎಂದು ಲಂಡನ್ ಕೋರ್ಟ್ ಅಭಿಪ್ರಾಯಪಟ್ಟಿತು.

‘ಭಾರತದ ಸಾಲಿಸಿಟರ್ ಜನರಲ್ ಅವರ ಹೇಳಿಕೆಗಳನ್ನು ವಕೀಲರಾದ ಮಾಲ್ಕೊಮ್ ಮತ್ತು ಹೇರನ್ ನನ್ನ ಗಮನಕ್ಕೆ ತಂದಿದ್ದಾರೆ. ಭಾರತವು ಲಿಖಿತ ಸಂವಿಧಾನದಿಂಧ ರೂಪುಗೊಂಡಿರುವ ವ್ಯವಸ್ಥೆಯನ್ನು ಶಾಸನಬದ್ಧವಾಗಿ ನಿರ್ವಹಿಸುತ್ತಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಅಧಿಕಾರದ ಗಡಿಯನ್ನು ಅಲ್ಲಿನ ಸಂವಿಧಾನವೇ ಸ್ಪಷ್ಟಪಡಿಸಿದೆ. ಭಾರತದ ನ್ಯಾಯಾಂಗಕ್ಕೆ ಇಂಥ ಪ್ರಕರಣ ನಿರ್ವಹಿಸುವ ಸಾಮರ್ಥ್ಯವಿಲ್ಲ ಎಂದು ನಂಬಲು ಆಗದು’ ಎಂದು ಬ್ರಿಟನ್ ಕೋರ್ಟ್ ಕಾಟ್ಜು ಅವರ ವಾದವನ್ನು ನಿರಾಕರಿಸಿತು.

ಇದನ್ನೂ ಓದಿ: ನೀರವ್​ ಮೋದಿಗೆ ಸತತ 6ನೇ ಬಾರಿ ಹಿನ್ನಡೆ: ಲಂಡನ್​ ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರ

Nirav-Modi

ವಂಚನೆಯ ಆರೋಪ ಹೊತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ

ಸಂವೇದನೆಯಿಲ್ಲದ ಹೇಳಿಕೆಗಳು ಕಾಟ್ಜು ಅವರ ‘ಗಮನಾರ್ಹ’ ಹೇಳಿಕೆಗಳನ್ನು ಭಾರತ ಸರ್ಕಾರದ ವಕೀಲರು ವಿಚಾರಣೆ ವೇಳೆ ಪ್ರಧಾನವಾಗಿ ಪ್ರಸ್ತಾಪಿಸಿದರು. ‘ಶೇ 90ರಷ್ಟು ಭಾರತೀಯರು ಮೂರ್ಖರು, ಸಲಿಂಗಕಾಮ ತಪ್ಪು, ಏಕಾಂಗಿಯಾಗಿ ಉಳಿಯುವ ಮಹಿಳೆಯರು ಹುಚ್ಚಿಯರಾಗುತ್ತಾರೆ, ಅರ್ಧದಷ್ಟು ನ್ಯಾಯಾಧೀಶರು ಭ್ರಷ್ಟರು’ ಎಂಬುವೂ ಸೇರಿದಂತೆ ಕಾಟ್ಜು ಅವರ ಹಲವು ಹೇಳಿಕೆಗಳನ್ನು ಬ್ರಿಟನ್ ನ್ಯಾಯಾಧೀಶರು ಆಸಕ್ತಿಯಿಂದ ಗಮನಿಸಿದರು.

ಕಾಟ್ಚು ನೀಡಿರುವ ಹಲವು ಹೇಳಿಕೆ ಮತ್ತು ಹೋಲಿಕೆಗಳನ್ನು ಬ್ರಿಟನ್ ನ್ಯಾಯಾಲಯವು ‘ಗಾಬರಿ ಹುಟ್ಟಿಸುವಂಥದ್ದು, ಅಸಮರ್ಪಕವಾಗಿರುವುದು ಮತ್ತು ಸಂವೇದನೆ ಕಳೆದುಕೊಂಡಿರುವಂಥದ್ದು’ ಎಂದು ಹೇಳಿದರು. ‘ಆರ್ಥಿಕ ಸಮಸ್ಯೆಗಳನ್ನಿ ನಿವಾರಿಸಲು ವಿಫಲವಾಗಿರುವ ಬಿಜೆಪಿ ಎಲ್ಲ ಸಮಸ್ಯೆಗಳಿಗೂ ನೀರವ್ ಮೋದಿಯನ್ನೇ ಹೊಣೆಯಾಗಿಸುವ ಸಾಧ್ಯತೆಯಿದೆ. ಯಹೂದಿಗಳೊಂದಿಗೆ ಹಿಟ್ಲರ್​ ವರ್ತಿಸಿದ ರೀತಿಯಲ್ಲಿಯೇ ಬಿಜೆಪಿಯು ನೀರವ್ ಮೋದಿಯೊಂದಿಗೆ ವರ್ತಿಸುತ್ತದೆ. ಅಂದು ಹಿಟ್ಲರ್ ಜರ್ಮನಿಯ ಎಲ್ಲ ಸಮಸ್ಯೆಗಳಿಯೂ ಯಹೂದಿಗಳೇ ಕಾರಣ ಎಂದಿದ್ದ. ಅದೇ ರೀತಿ, ಇಂದು ಬಿಜೆಪಿ ದೇಶದ ಎಲ್ಲ ಸಮಸ್ಯೆಗಳಿಗೂ ನೀರವ್ ಮೋದಿ ಕಾರಣ ಎನ್ನುತ್ತದೆ. ನೀರವ್ ಮೋದಿ ಮಾಡಿರುವ ತಪ್ಪುಗಳ ಬಗ್ಗೆ ವಿಚಾರಣೆ ನಡೆಸಲು ನನ್ನ ವಿರೋಧವಿಲ್ಲ. ಆದರೆ ಭಾರತದಲ್ಲಿ ಮುಕ್ತ ವಿಚಾರಣೆ ನಡೆಯುತ್ತದೆ ಎಂಬ ಬಗ್ಗೆ ಅನುಮಾನಗಳಿವೆ’ ಎಂದು ಕಾಟ್ಜು ಹೇಳಿದ್ದರು.

ನ್ಯಾಯಮೂರ್ತಿ ತಿಪ್ಸೆ ಅಭಿಪ್ರಾಯಕ್ಕೂ ಸಿಗಲಿಲ್ಲ ಮನ್ನಣೆ ಬಾಂಬೆ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅಭಯ್ ತಿಪ್ಸೆ ನೀಡಿದ ಹೇಳಿಕೆಯನ್ನೂ ಲಂಡನ್ ನ್ಯಾಯಾಲಯ ತಿರಸ್ಕರಿಸಿತು. ‘ನೀರವ್ ಮೋದಿ ವಿರುದ್ಧ ಮೋಸದ ಪ್ರಕರಣ ಅನ್ವಯಿಸಲು ಸಾಧ್ಯವಾಗುವುದಿಲ್ಲ’ ಎಂದು ನ್ಯಾಯಮೂರ್ತಿ ತಿಪ್ಸೆ ಹೇಳಿದ್ದರು. ‘ಅವರು ನೀಡಿದ ಅಭಿಪ್ರಾಯ, ವರದಿಗಳು ಮತ್ತು ಮೌಖಿಕ ಹೇಳಿಕೆಗಳಿಗೆ ನಾನು ಯಾವುದೇ ಬೆಲೆ ಕೊಡುವುದಿಲ್ಲ’ ಎಂದು ಬ್ರಿಟನ್ ನ್ಯಾಯಾಧೀಶರು ಹೇಳಿದರು.

ನೀರವ್​ ಮೋದಿ ಪ್ರಕರಣದಲ್ಲಿ ನ್ಯಾಯಮೂರ್ತಿ ತಿಪ್ಸೆ ಮಧ್ಯಪ್ರವೇಶಿದ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಕ್ಷೇಪಿಸಿದ್ದರು. ಈ ಬೆಳವಣಿಗೆಯ ನಂತರ ತಿಪ್ಸೆ ಈ ಪ್ರಕರಣದಿಂದ ಹಿಂದೆ ಸರಿದಿದ್ದರು. ತಮ್ಮ ಹೇಳಿಕೆಗೆ ಪೂರಕವಾಗಿ ಸಾಕ್ಷ್ಯ ಒದಗಿಸಲು ನಿರಾಕರಿಸಿದರು. ಹೀಗಾಗಿ ಬ್ರಿಟನ್ ನ್ಯಾಯಾಲಯ ತಿಪ್ಸೆ ಹೇಳಿಕೆಯನ್ನು ತಿರಸ್ಕರಿಸಿತು.

ನೀರವ್ ಮೋದಿ ಪ್ರಕರಣ ವಿಚಾರಣೆ ಯೋಗ್ಯ ಎಂದ ನ್ಯಾಯಾಲಯ ನೀರವ್ ಮೋದಿ ಮಾಡಿಕೊಂಡಿದ್ದ ಎಲ್ಲ ಮನವಿಗಳನ್ನೂ ತಿರಸ್ಕರಿಸಿದ ಬ್ರಿಟನ್ ನ್ಯಾಯಾಲಯವು ಗಡಿಪಾರು ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿರ್ಧರಿಸಬೇಕು ಎಂದು ಹೇಳಿತು. ಮೇಲ್ಮನವಿ ಸಲ್ಲಿಸಲು ನೀರವ್ ಮೋದಿಗೆ 14 ದಿನಗಳ ಕಾಲಾವಕಾಶವಿದೆ. ಮೇಲ್ಮನವಿ ಅರ್ಜಿ ವಿಚಾರಣೆ ಮುಗಿಯುವ ಮೊದಲೇ ಗಡಿಪಾರು ನಿರ್ಧಾರವನ್ನು ಅಂತಿಮಗೊಳಿಸುವಂತಿಲ್ಲ ಎಂದು ತೀರ್ಪಿನಲ್ಲಿ ಸೂಚಿಸಿದೆ. ನೀರವ್ ಮೋದಿ ಪ್ರಕರಣ ವಿಚಾರಣೆಗೆ ಅಂಗೀಕರಿಸಲು ಯೋಗ್ಯವಾದುದು ಎಂದು ನ್ಯಾಯಾಲಯ ಸ್ಪಷ್ಟವಾಗಿ ದಾಖಲಿಸಿದೆ. ಲಂಡನ್​ ನ್ಯಾಯಾಧೀಶರ ಈ ಅಭಿಪ್ರಾಯದಲ್ಲಿ ಮೋದಿ ಆರೋಪಿ ಎಂಬ ಭಾರತ ಸರ್ಕಾರದ ವಾದಕ್ಕೆ ಪುಷ್ಟಿ ಸಿಕ್ಕಿರುವುದನ್ನು ಗಮನಿಸಬಹುದು. ಈ ಮಟ್ಟಿಗೆ ಇದು ಭಾರತ ಸರ್ಕಾರಕ್ಕೆ ಸಿಕ್ಕ ಜಯ.

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ₹ 14,000 ಕೋಟಿ ವಂಚಿಸಿರುವ ಆರೋಪ ಹೊತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ವಿರುದ್ಧ ಭಾರತೀಯ ದಂಡಸಂಹಿತೆಯ (ಐಪಿಸಿ) ಹಲವು ಪರಿಚ್ಛೇದಗಳಡಿ ಪ್ರಕರಣಗಳು ದಾಖಲಾಗಿವೆ. ಭ್ರಷ್ಟಾಚಾರ ತಡೆ ಕಾಯ್ದೆ, ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಗಳಡಿಯಲ್ಲಿಯೂ ವಿಚಾರಣೆಗಳು ಬಾಕಿಯಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ ಹಗರಣವು ಫೆಬ್ರುವರಿ 2018ರಲ್ಲಿ ಬೆಳಕಿಗೆ ಬಂದಿತ್ತು. ನೀರವ್ ಮೋದಿ ಮೇ 2018ರಲ್ಲಿ ತನ್ನ ಸಂಬಂಧಿ ಮೆಕುಲ್ ಚೋಕ್ಸಿ ಅವರೊಂದಿಗೆ ದೇಶಬಿಟ್ಟು ಓಡಿಹೋಗಿದ್ದರು. ಭಾರತ ಸರ್ಕಾರದ ವಿನಂತಿ ಮೇರೆಗೆ ಮಾರ್ಚ್ 2019ರಲ್ಲಿ ನೀರವ್ ಮೋದಿಯನ್ನು ಬ್ರಿಟನ್ ಪೊಲೀಸರು ಬಂಧಿಸಿದ್ದರು.

Published On - 1:07 pm, Sat, 27 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ