ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ 17ನೇ ಬಾರಿ ಪೆರೋಲ್ ಮೂಲಕ ಬಿಡುಗಡೆ
ರಾಮ್ ರಹೀಮ್ ಸಿಂಗ್, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಇದೀಗ 17ನೇ ಬಾರಿಗೆ 21 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಹರಿಯಾಣದ ಸುನಾರಿಯಾ ಜೈಲಿನಿಂದ ಹೊರಬಂದಿರುವ ಇವರು ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯ ಕಚೇರಿಯಲ್ಲಿ ಉಳಿದುಕೊಳ್ಳಲಿದ್ದಾರೆ. ಚುನಾವಣೆಗಳ ಸಮೀಪ ಬಿಡುಗಡೆಯಾಗುವುದು ರಾಜಕೀಯ ಲಾಭಕ್ಕಾಗಿ ಎಂಬ ಆರೋಪಗಳು ಕೇಳಿಬಂದಿವೆ.

ಚಂಡೀಗಢ, ಆಗಸ್ಟ್ 25: ಇಬ್ಬರು ಮಹಿಳಾ ಶಿಷ್ಯೆಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ(Haryana) ಸರ್ಕಾರ ಮತ್ತೆ 21ದಿನಗಳ ಪೆರೋಲ್ ಮಂಜೂರು ಮಾಡಿದೆ.
ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಹೊರಬಂದಿರುವ ರಾಮ್ ರಹೀಮ್, ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯ ಕಚೇರಿಯಲ್ಲಿ ಉಳಿದುಕೊಳ್ಳಲು ಅನುಮತಿ ಪಡೆದಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ರಾಮ್ ರಹೀಮ್, ಈವರೆಗೆ ಬರೋಬ್ಬರಿ ೧೭ ಬಾರಿ ವಿವಿಧ ಕಾರಣಗಳಿಗಾಗಿ ಪೆರೋಲ್ ಮತ್ತು ಫರ್ಲೋ ಪಡೆದು ಜೈಲಿನಿಂದ ಹೊರಬಂದಿದ್ದಾರೆ.
ಈ ಹಿಂದೆ ಬಿಡುಗಡೆಯಾದಾಗ ಉತ್ತರ ಪ್ರದೇಶದ ಬಾಗ್‌ಪತ್‌ನ ಬರ್ನಾವಾ ಆಶ್ರಮದಲ್ಲಿ ಉಳಿಯಲು ಷರತ್ತು ವಿಧಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಸತತ ಮೂರನೇ ಬಾರಿಗೆ ಸಿರ್ಸಾದ ಪ್ರಮುಖ ಹೆಡ್‌ಕ್ವಾರ್ಟರ್ಸ್‌ನಲ್ಲಿ ಉಳಿಯಲು ಅವಕಾಶ ನೀಡಲಾಗಿದೆ.
2017 ರಲ್ಲಿ ಸಿರ್ಸಾದ ಡೇರಾ ಆಶ್ರಮದಲ್ಲಿ ಇಬ್ಬರು ಮಹಿಳಾ ಸಾಧ್ವಿಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ತಲಾ ೧10 ವರ್ಷಗಳಂತೆ ಒಟ್ಟು 20 ವರ್ಷಗಳ ಸತತ ಜೈಲು ಶಿಕ್ಷೆ ವಿಧಿಸಿತ್ತು. ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹಾಗೂ ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣಗಳಲ್ಲೂ ರಾಮ್ ರಹೀಮ್ ದೋಷಿಯಾಗಿದ್ದಾರೆ.
ಮತ್ತಷ್ಟು ಓದಿ: Farmer’s Protest: ಹಿಸಾರ್‌ನಲ್ಲಿ ರೈತ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ; ಹಲವರ ಬಂಧನ
ಚುನಾವಣೆಗಳ ವೇಳೆಯೇ ಬಿಡುಗಡೆ: ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಡೇರಾ ಸಚ್ಚಾ ಸೌದಾ ಅಪಾರ ಸಂಖ್ಯೆಯ ಮತದಾರ-ಅನುಯಾಯಿಗಳನ್ನು ಹೊಂದಿದೆ. ಹೀಗಾಗಿ ಪ್ರಮುಖ ಚುನಾವಣೆಗಳು ಎದುರಾದಾಗಲೆಲ್ಲಾ ಆಡಳಿತಾರೂಢ ಸರ್ಕಾರಗಳು ರಾಮ್ ರಹೀಮ್‌ಗೆ ರಾಜಕೀಯ ಲಾಭಕ್ಕಾಗಿ ಪೆರೋಲ್ ನೀಡುತ್ತಿವೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ಮತ್ತು ವಿಪಕ್ಷ ವಲಯದಲ್ಲಿ ಕೇಳಿಬರುತ್ತಿವೆ.
ಕಠಿಣ ಷರತ್ತುಗಳ ಅನ್ವಯ: ರಜೆ ಅವಧಿಯಲ್ಲಿ ಯಾವುದೇ ಪ್ರಚೋದನಕಾರಿ ಸಾರ್ವಜನಿಕ ಭಾಷಣ, ರಾಜಕೀಯ ಸಮಾವೇಶಗಳನ್ನು ನಡೆಸುವಂತಿಲ್ಲ ಹಾಗೂ ಸದಾ ಸ್ಥಳೀಯ ಪೊಲೀಸರ ಕಣ್ಗಾವಲಿನಲ್ಲಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




