ನಮಗೂ ವಿಶ್ರಾಂತಿ ಬೇಕಿದೆ: ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷ ಮೀರುವುದು ಬೇಡ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ
ಇದನ್ನು 65 ವರ್ಷಗಳಿಗೆ ಏರಿಸಬಹುದು. ಆದರೆ ಅದಕ್ಕಿಂತ ಹೆಚ್ಚು ಮಾಡುವುದು ಬೇಡ. ನ್ಯಾಯಾಧೀಶರಿಗೆ ಸ್ವಲ್ಪ ವಿಶ್ರಾಂತಿ ಬೇಕಿದೆ ಎಂದು ಹೇಳಿದರು.
ದೆಹಲಿ: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿಯ ವಯಸ್ಸು 65 ವರ್ಷಕ್ಕಿಂತ ಹೆಚ್ಚಾಗಬಾರದು ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ರವೀಂದ್ರ ಭಟ್ ಶುಕ್ರವಾರ ಅಭಿಪ್ರಾಯಪಟ್ಟರು. ಪ್ರಸ್ತುತ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸು 62 ವರ್ಷಕ್ಕೆ ನಿಗದಿಯಾಗಿದೆ. ಇದನ್ನು 65 ವರ್ಷಗಳಿಗೆ ಏರಿಸಬಹುದು. ಆದರೆ ಅದಕ್ಕಿಂತ ಹೆಚ್ಚು ಮಾಡುವುದು ಬೇಡ. ನ್ಯಾಯಾಧೀಶರಿಗೆ ಸ್ವಲ್ಪ ವಿಶ್ರಾಂತಿ ಬೇಕಿದೆ ಎಂದು ಹೇಳಿದರು.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಪೀಠಗಳಲ್ಲಿ ಯುವಜನರಿಗೆ ಅವಕಾಶಗಳು ಬೇಕು. ಯುವಜನರೊಂದಿಗೆ ಹೊಸ ವಿಚಾರಗಳೂ ನ್ಯಾಯಾಲಯವನ್ನು ಪ್ರವೇಶಿಸುತ್ತವೆ. ನ್ಯಾಯಾಲಯಗಳ ವಿಚಾರಣೆ ಪ್ರಕ್ರಿಯೆಯಲ್ಲಿ ಹೊಸತನ ಕಾಣಿಸಿಕೊಳ್ಳುತ್ತದೆ. ಸಮಕಾಲೀನ ವಿದ್ಯಮಾನಗಳ ಬಗ್ಗೆ ಅವರು ಹೊಸ ರೀತಿಯ ದೃಷ್ಟಿಕೋನ ಬೆಳೆಸಿಕೊಂಡಿರುತ್ತಾರೆ. ನಾವು ವಯಸ್ಸಾದವರು ಇಂಥವನ್ನು ಹೊಸದಾಗಿ ತಿಳಿದುಕೊಳ್ಳಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಇಂಥವಕ್ಕೆ ಪ್ರತಿರೋಧ ತೋರುತ್ತಿರುತ್ತೇವೆ ಎಂದು ಅವರು ನುಡಿದರು.
ಅಸೀಮ್ ಚಾವ್ಲಾ ಅವರ ಹೊಸ ಪುಸ್ತಕ ‘ಫೈಂಡಿಂಗ್ ಎ ಸ್ಟ್ರೇಟ್ ಲೈನ್ ಬಿಟ್ವೀನ್ ಟ್ವಿಸ್ಟ್ಸ್ ಅಂಡ್ ಟರ್ನ್ಸ್’ ಬಿಡುಗಡೆ ಸಮಾರಂಭದಲ್ಲಿ ನ್ಯಾಯಮೂರ್ತಿ ರವೀಂದ್ರ ಭಟ್ ಮಾತನಾಡಿದರು. ಅಸೀಮ್ ಚಾವ್ಲಾ ಅವರ ಈ ಪುಸ್ತಕವು ಭಾರತದಲ್ಲಿ ತೆರಿಗೆ ಪದ್ಧತಿ ಬೆಳೆದುಬಂದ ಬಗೆಯನ್ನು ವಿವರಿಸುತ್ತದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘ್ವಿ ಮತ್ತು ವಿಭು ಭಕ್ರು ಹಾಗೂ ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ನ ಅಧ್ಯಕ್ಷ ಡಾ.ಲಲಿತ್ ಭಾಸಿನ್ ಪಾಲ್ಗೊಂಡಿದ್ದರು.
ಸಾಮಾಜಿಕ ನ್ಯಾಯ ಮತ್ತು ಹಣಕಾಸು ನೀತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರವೀಂದ್ರ ಭಟ್ ವಿದ್ವತ್ಪೂರ್ಣ ಉಪನ್ಯಾಸ ನೀಡಿದರು. ತೆರಿಗೆ ಪದ್ಧತಿಗಳು ಹೇಗೆ ರಾಜಕೀಯ ಚರ್ಚೆಗಳಲ್ಲಿ ಕೇಂದ್ರ ಸ್ಥಾನ ಪಡೆಯುತ್ತವೆ ಎಂದು ವಿವರಿಸಿದ ಅವರು, ಅಮೆರಿಕದ ಸ್ವಾತಂತ್ರ್ಯ ಹೋರಾಟವು ಹೇಗೆ ತೆರಿಗೆ ಪದ್ಧತಿಯೊಂದಿಗೆ ತಳಕು ಹಾಕಿಕೊಂಡಿತ್ತು ಎಂಬ ಬಗ್ಗೆ ಇಣುಕುನೋಟ ನೀಡಿದರು. ಈ ತೆರಿಗೆ ಪದ್ಧತಿಯ ಆಧಾರದ ಮೇಲೆಯೇ ಅಮೆರಿಕ ರಚನೆಯಾಗಿದೆ. ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ‘ಪ್ರಾತಿನಿಧ್ಯವಿಲ್ಲದೆ ತೆರಿಗೆ ಇಲ್ಲ’ ಎಂದು ಘೋಷಣೆ ಮೊಳಗಿಸಿದ್ದರು. ರಾಜಕೀಯ ಪ್ರಾತಿನಿಧ್ಯದ ಬೇಡಿಕೆಯು ತೆರಿಗೆಯಿಂದ ಆಚೆಗೆ ಹೋಗಿತ್ತು ಎಂದು ಹೇಳಿದರು.
ಫ್ರಾನ್ಸ್ ಕ್ರಾಂತಿಯ ಮುಖ್ಯ ಕಾರಣಗಳಲ್ಲಿ ವಿಪರೀತ ತೆರಿಗೆಯೂ ಒಂದು. ತೆರಿಗೆ ಹೊರೆ ಹೆಚ್ಚಾಗುತ್ತಿದೆ ಎಂಬ ಭಾವ ಮೊಳೆತಾಗಲೆಲ್ಲಾ ಸಮಾಜಗಳು ಅದರ ವಿರುದ್ಧ ಎದ್ದು ನಿಂತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Asghar Afghan: ಯುವ ಆಟಗಾರರಿಗೆ ಚಾನ್ಸ್ ಸಿಗಲು ಕಣ್ಣೀರಿನೊಂದಿಗೆ ನಿವೃತ್ತಿ ಘೋಷಿಸಿದ ಅಫ್ಘಾನ್ ಆಟಗಾರ ಇದನ್ನೂ ಓದಿ: ದಂಡ ವಿಧಿಸಿ ಸೆಂಟ್ರಲ್ ವಿಸ್ಟಾ ವಿರುದ್ಧದ ಮನವಿಯನ್ನು ವಜಾಗೊಳಿಸಿ: ಸುಪ್ರೀಂಕೋರ್ಟ್‌ಗೆ ಕೇಂದ್ರ ಒತ್ತಾಯ