AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಟಾಗಿ ಮದುವೆಯಾಗಿದ್ದಳಾ ಸಿಯಾ? ಕೇತನ್ ಕೊಲೆ ಪ್ರಕರಣದಲ್ಲಿ ಹೊಸ ರಹಸ್ಯ ಬಯಲು

Ketan Agarwal Death Case: ಪುಣೆಯ ಉದ್ಯಮಿ ಕೇತನ್ ಅಗರ್​ವಾಲ್ ಕೊಲೆಯಾಗಿ 2 ವಾರಗಳೇ ಕಳೆದಿವೆ. ಈ ಪ್ರಕರಣದ ತನಿಖೆ ವೇಳೆ ಇನ್ನೂ ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಪುಣೆಯ ರಾಯಗಢ ಕೋಟೆಗೆ ತಾನು ಮದುವೆಯಾಗಬೇಕಿದ್ದ ಹುಡುಗ ಕೇತನ್​ನನ್ನು ಕರೆದುಕೊಂಡು ಹೋಗಿದ್ದ ಸಿಯಾ ಗೋಯಲ್ ತನ್ನ ಪ್ರೇಮಿಯ ಜೊತೆ ಸೇರಿ ಆತನನ್ನು ತಳ್ಳಿ ಕೊಲೆ ಮಾಡಿದ್ದಳು. ಆದರೆ, ಈ ಕೊಲೆಗೆ ಕಾರಣವೇನೆಂಬುದರ ಕುರಿತು ಆಕೆಯ ಪೂರ್ತಿ ಇತಿಹಾಸವನ್ನೇ ಜಾಲಾಡುತ್ತಿರುವ ಪೊಲೀಸರಿಗೆ ಸಿಕ್ಕಿರುವ ಹೊಸದೊಂದು ಸುಳಿವು ಈ ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಾಯಿಸಿದೆ. ವಾಟ್ಸಾಪ್ ಚಾಟ್ ಮೂಲಕ ಬಯಲಾದ ಹೊಸ ರಹಸ್ಯವೇನು?

ಗುಟ್ಟಾಗಿ ಮದುವೆಯಾಗಿದ್ದಳಾ ಸಿಯಾ? ಕೇತನ್ ಕೊಲೆ ಪ್ರಕರಣದಲ್ಲಿ ಹೊಸ ರಹಸ್ಯ ಬಯಲು
Siya And Chetan Image Credit source: x
ಸುಷ್ಮಾ ಚಕ್ರೆ
|

Updated on:Jul 07, 2026 | 5:19 PM

Share

ಮುಖ್ಯಾಂಶಗಳು

  • ಕೇತನ್ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು
  • ಪ್ರಿಯಕರ ಚೇತನ್ ಜೊತೆ ಸಿಯಾ ಗೋಯಲ್ ಗುಟ್ಟಾಗಿ ಮದುವೆ?
  • ವಾಟ್ಸಾಪ್ ಚಾಟ್​​ನಲ್ಲಿ ಬಯಲಾಯ್ತು ರಹಸ್ಯ ಸಂಗತಿ

ಪುಣೆ, ಜುಲೈ 7: ಆಕೆಯ ಹೆಸರು ಸಿಯಾ ಗೋಯಲ್ (Siya Goyal). ಆಗಷ್ಟೇ ಟೀನೇಜ್ ದಾಟಿ 20ನೇ ವಯಸ್ಸಿಗೆ ಕಾಲಿಟ್ಟಿದ್ದಳು. ಹೇಳಿಕೇಳಿ ಬಹಳ ಶ್ರೀಮಂತರ ಮನೆಯ ಮಗಳು. ಮೋಜು, ಮಸ್ತಿ, ಪಬ್, ಡೇಟಿಂಗ್ ಎಲ್ಲ ಆಕೆಗೆ ಮಾಮೂಲಾಗಿತ್ತು. ಆದರೆ, ಆಕೆಯ ಅಪ್ಪ ಆಕೆಗೆ ಬೇಗ ಮದುವೆ ಮಾಡುವ ತವಕದಲ್ಲಿದ್ದರು. ಹೀಗಾಗಿ, ಪುಣೆಯ 26 ವರ್ಷದ ಉದ್ಯಮಿ ಕೇತನ್ ಅಗರ್​ವಾಲ್ (Ketan Agarwal) ಜೊತೆ ಆಕೆಯ ಮದುವೆ ನಿಶ್ಚಯ ಮಾಡಿದ್ದರು. ಎರಡೂ ಜೋಡಿಹಕ್ಕಿಗಳು ಕೈ ಹಿಡಿದು ಸುತ್ತಾಡುತ್ತಾ, ಈ ವರ್ಷಾಂತ್ಯದಲ್ಲಿ ಜೋಧ್​ಪುರದ ಅರಮನೆಯಲ್ಲಿ ನಡೆಯಲಿದ್ದ ತಮ್ಮ ಮದುವೆಗೆ ಶಾಪಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಆದರೆ, ಸಿಯಾಳ ಹುಟ್ಟುಹಬ್ಬದ ದಿನ ರಾಯಗಢ ಕೋಟೆಗೆ ಟ್ರೆಕಿಂಗ್ ಹೋಗಿದ್ದ ಆತನನ್ನು ಆಕೆಯೇ ಮೇಲಿಂದ ತಳ್ಳಿ ಕೊಲೆ ಮಾಡಿದ್ದಳು! ಈ ಪ್ರಕರಣದಲ್ಲಿ ಇದೀಗ ಪೊಲೀಸರು ಇನ್ನೊಂದು ರಹಸ್ಯ ಸಂಗತಿಯನ್ನು ಪತ್ತೆಹಚ್ಚಿದ್ದು, ಆ ಸಿಯಾ ಕೇತನ್ ಅಗರ್​ವಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ತನ್ನ ಲವರ್ ಚೇತನ್ ಚೌಧರಿ ಜೊತೆ ಗುಟ್ಟಾಗಿ ಮದುವೆಯಾಗಿದ್ದಳು ಎಂಬ ಸತ್ಯ ತನಿಖೆ ವೇಳೆ ಬಯಲಾಗಿದೆ.

ಇಷ್ಟು ದಿನವೂ ಚೇತನ್ ಮತ್ತು ಸಿಯಾ ಇಬ್ಬರೂ ಪ್ರೇಮಿಗಳಾಗಿದ್ದರು, ಇದೇ ಪ್ರೀತಿಯ ಅಮಲಿನಲ್ಲಿ ಅವರಿಬ್ಬರೂ ಕೇತನ್ ಚೌಧರಿಯನ್ನು ಕೊಲೆ ಮಾಡಿದ್ದರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಸಲಿ ಸಂಗತಿ ಬೇರೆಯೇ ಇದೆ. ಕೇತನ್ ಅಗರ್​​ವಾಲ್​ನನ್ನು ಕೊಲೆ ಮಾಡುವ 4 ತಿಂಗಳ ಮೊದಲೇ ಆಕೆ ತನ್ನ ಪ್ರೇಮಿ ಚೇತನ್ ಚೌಧರಿಯನ್ನು ರಹಸ್ಯವಾಗಿ ಮದುವೆಯಾಗಿದ್ದಳು ಎಂಬುದರ ಕುರಿತು ಪೊಲೀಸರಿಗೆ ಮಹತ್ವದ ದಾಖಲೆ ಸಿಕ್ಕಿದೆ. ಸಿಯಾ ಗೋಯಲ್​ ಮೊಬೈಲನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವಾಟ್ಸಾಪ್ ಚಾಟ್ ಪರಿಶೀಲನೆ ಮಾಡಿದಾಗ ಆಕೆ 4 ತಿಂಗಳ ಹಿಂದೆಯೇ ಚೇತನ್ ಜೊತೆ ರಹಸ್ಯವಾಗಿ ಮದುವೆಯಾಗಿದ್ದಳು, ಮನೆಯಲ್ಲಿ ಈ ವಿಚಾರ ಗೊತ್ತಾದರೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಮುಚ್ಚಿಟ್ಟಿದ್ದಳು ಎಂಬ ವಿಷಯ ಗೊತ್ತಾಗಿದೆ. ಅವರಿಬ್ಬರೂ ಸ್ಥಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ಫೆಬ್ರವರಿ 19ರಂದು ಸಿಯಾ ಮತ್ತು ಕೇತನ್ ಅವರ ನಿಶ್ಚಿತಾರ್ಥವು ಬಹಳ ಸಂಭ್ರಮದಿಂದ ನಡೆಯಿತು. ಅದಾದ ಸ್ವಲ್ಪ ಸಮಯದ ನಂತರ ಈ ರಹಸ್ಯವಾದ ಮದುವೆ ನಡೆದಿದೆ ಎಂಬ ಮಾಹಿತಿ ಹೊರಬರುತ್ತಿದೆ. ಪೊಲೀಸರು ಇನ್ನೂ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಮನೆಯವರಿಗೆ ಗೊತ್ತಿಲ್ಲದೆ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ, ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಕುಟುಂಬದ ಸದಸ್ಯರಿಗೆ ಇದರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿತ್ತಾ? ಎಂಬ ಅನುಮಾನವೂ ಪೊಲೀಸರನ್ನು ಕಾಡುತ್ತಿದೆ.

ವಿಶೇಷ ವಿವಾಹ ಕಾಯ್ದೆಯಡಿ (Special Marriage Act) ಮದುವೆ ಪ್ರಮಾಣಪತ್ರ ಇದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದು ದೃಢಪಟ್ಟರೆ, ಫೆಬ್ರವರಿಯಲ್ಲಿ ಕೇತನ್ ಜೊತೆ ನಡೆದಿದ್ದ ಆಕೆಯ ನಿಶ್ಚಿತಾರ್ಥವು ಕಾನೂನುಬಾಹಿರವಾಗುತ್ತದೆ. ಈ ಮದುವೆಗೆ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಸಿಯಾಳ ಇಬ್ಬರು ಕಾಲೇಜು ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಯಾ ಮತ್ತು ಚೇತನ್​ನ ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಲಾದ ಫೋಟೋಗಳನ್ನು ಮರುಪಡೆಯಲು (ರಿಕವರ್ ಮಾಡಲು) ಪೊಲೀಸರ ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ. ಈ ಫೋಟೋಗಳಲ್ಲಿ ಆರೋಪಿಗಳಿಬ್ಬರು ಮದುವೆಯ ಹಾರ ಧರಿಸಿರುವುದು ಕಂಡುಬಂದಿತ್ತು ಎಂದು ವರದಿಯಾಗಿದೆ.

ಸಿಯಾ-ಚೇತನ್ ಪ್ರೇಮಕತೆ:

ಸಿಯಾ- ಕೇತನ್ ಕತೆ ಎಲ್ಲರಿಗೂ ಗೊತ್ತು. ಆದರೆ, ಸಿಯಾ ಮತ್ತು ಚೇತನ್ ಕುರಿತು ಹೆಚ್ಚು ಜನರಿಗೆ ತಿಳಿದಿಲ್ಲ. ಇವರಿಬ್ಬರೂ ಮೊದಲು ಸ್ನೇಹಿತರಾದರು, ನಂತರ ಪ್ರೀತಿಯಲ್ಲಿ ಸಿಲುಕಿದರು. ಇಬ್ಬರೂ ಪ್ರವಾಸಕ್ಕಾಗಿ ರಾಜಸ್ಥಾನಕ್ಕೂ ಹೋಗಿದ್ದರು. ಇಬ್ಬರೂ ಉದಯಪುರ ಮತ್ತು ಜೋಧಪುರಕ್ಕೆ ಪ್ರವಾಸಕ್ಕಾಗಿ ಹೋಗಿದ್ದರು. ಅಲ್ಲಿ ಅವರ ಸ್ನೇಹಿತರು ಅವರಿಬ್ಬರನ್ನೂ ಒಟ್ಟಿಗೆ ನೋಡಿದ್ದರು. ಇಬ್ಬರೂ ತಮ್ಮ ಸ್ನೇಹಿತರಿಗೆ ತಾವು ಮದುವೆಯಾಗಿ ರಾಜಸ್ಥಾನದಲ್ಲಿ ನೆಲೆಸುವ ಕನಸಿದೆ ಎಂಬ ಬಗ್ಗೆಯೂ ಹೇಳಿದ್ದರು. ಚೇತನ್ ಸಿಯಾಗೆ ಮಾರ್ವಾಡಿ ಮಹಿಳೆಯರ ಉಡುಗೆ ತೊಡುಗೆ ಮತ್ತು ರಾಜಸ್ಥಾನಿ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುತ್ತಿದ್ದ. ಕೇತನ್ ಜೊತೆ ಎಂಗೇಜ್​ಮೆಂಟ್ ಆಗಿದ್ದರಿಂದ ತಮ್ಮಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪುವುದಿಲ್ಲ ಎಂದು ಅವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಮದುವೆಯ ನಂತರ, ಇಬ್ಬರೂ ಪುಣೆಯನ್ನು ತೊರೆದು ಉದಯಪುರ ಅಥವಾ ಜೋಧಪುರದಲ್ಲಿ ನೆಲೆಸಲು ಬಯಸಿದ್ದರು. ಆದರೆ, ವಿಧಿಯಾಟ ನೋಡಿ… ಈಗ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ‘ಕೊಲೆ ಸ್ಕೆಚ್’ ಕಲಿತಿದ್ದ ಸಿಯಾ ಗೋಯಲ್

ಕೇತನ್ ಕೊಲೆ:

ಅತ್ತ ಚೇತನ್ ಜೊತೆ ಸಂಸಾರ ನಡೆಸುವ ಕನಸು ಕಂಡಿದ್ದ ಸಿಯಾ ಅದಕ್ಕೆ ಅಡ್ಡಿಯಾಗಿದ್ದ ಕೇತನ್​ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಳು. ಇತ್ತ ಪ್ರತಿ ದಿನವೂ ಸಿಯಾಳ ಜೊತೆ ಮಾತನಾಡುತ್ತಾ, ಶಾಪಿಂಗ್ ಮಾಡುತ್ತಾ ಆಕೆಯ ಕುಟುಂಬದಲ್ಲಿ ಒಬ್ಬನಾಗಿ ಬೆರೆತುಹೋಗಿದ್ದ ಕೇತನ್ ಆಕೆಯ ಜೊತೆ ಮದುವೆಯಾಗುವ ಸಂಭ್ರಮದಲ್ಲಿದ್ದ. ಚೇತನ್ ಚೌಧರಿ ಕೂಡ ಯಾರಿಗೂ ಅನುಮಾನ ಬಾರದಂತೆ ಕೇತನ್​ನನ್ನು ಕೊಂದು, ಆಕಸ್ಮಿಕ ಸಾವೆಂದು ನಂಬಿಸಿ, ತಾನೇ ಸಿಯಾಳ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮತ್ತೊಮ್ಮೆ ಮದುವೆಯಾಗುವ ಕನಸು ಕಂಡಿದ್ದ. ಆದರೆ, ಈ ಮೂವರ ಕನಸೂ ಕನಸಾಗಿಯೇ ಉಳಿಯಿತು. ಸಿಯಾ- ಚೇತನ್​ನ ಕುತಂತ್ರಕ್ಕೆ ಅಮಾಯಕ ಕೇತನ್ ಪ್ರಾಣವನ್ನೇ ಕಳೆದುಕೊಂಡ.

20 ವರ್ಷದ ಸಿಯಾ ಗೋಯಲ್ ಮತ್ತು 26 ವರ್ಷದ ಕೇತನ್ ಅಗರ್ವಾಲ್ ವಿವಾಹವು ಮುಂಬರುವ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಆದರೆ ಜೂನ್ 18ರಂದು ಕುಟುಂಬದ ಯಾರೂ ಊಹಿಸದ ರೀತಿಯಲ್ಲಿ ಪುಣೆಯ ಲೋಹಗಢ ಕೋಟೆಯಿಂದ ಬಿದ್ದು ಕೇತನ್ ಸಾವನ್ನಪ್ಪಿದ್ದ. ಫೋಟೋಗೆ ಪೋಸ್ ಕೊಡುವಾಗ ಕಾಲು ಜಾರಿ ಬಿದ್ದ ಎಂದು ಸಿಯಾ ಎಲ್ಲರನ್ನೂ ನಂಬಿಸಿದ್ದಳು. ಆದರೆ, ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಆಕೆಯೇ ಹಂತಕಿ ಎಂಬುದು ಗೊತ್ತಾಗಿತ್ತು. ಆತನನ್ನು ಮದುವೆಯಾಗಲು ಇಷ್ಟವಿಲ್ಲದ ಕಾರಣದಿಂದ ಸಿಯಾ ಗೋಯಲ್ ಈ ಕೊಲೆಯ ಸಂಪೂರ್ಣ ಸಂಚು ರೂಪಿಸಿದ್ದಾಳೆ ಎಂಬುದು ನಂತರ ಬಯಲಾಗಿತ್ತು.

ರಹಸ್ಯ ಮಾತುಕತೆ:

ಅಷ್ಟೇ ಅಲ್ಲದೆ, ಡಿಲೀಟ್ ಮಾಡಲಾಗಿದ್ದ ಮೊಬೈಲ್ ಡೇಟಾವನ್ನು ಮರುಪಡೆದಾಗ ಮತ್ತೊಂದು ವಿಷಯ ತಿಳಿದುಬಂದಿದೆ. ಕೊಲೆ ಸಂಚು ರೂಪಿಸಿದ ಬಳಿಕ ಪೊಲೀಸರ ತನಿಖೆಯಿಂದ ಬಚಾವಾಗಲು ಸಿಯಾ ಮತ್ತು ಚೇತನ್ ರಹಸ್ಯವಾದ ಸಂಕೇತ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇಬ್ಬರೂ ಕೇತನ್ ಕುರಿತಾದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಅಡ್ಡಹೆಸರುಗಳನ್ನು ಬಳಸುತ್ತಿದ್ದರು. ಪೊಲೀಸರ ಪ್ರಕಾರ, ಪುಣೆಯ ಉದ್ಯಮಿಯನ್ನು ಕೊಲ್ಲುವ ಈ ಭೀಕರ ಯೋಜನೆ ಬಹಳ ದಿನಗಳಿಂದ ನಡೆಯುತ್ತಿತ್ತು. ಜೂನ್ 14ರಂದೇ ಆತನನ್ನು ಕೊಲ್ಲಲು ಮೊದಲ ಪ್ರಯತ್ನ ನಡೆದಿತ್ತು. ಆದರೆ, ಕೇತನ್ ಬಚಾವಾಗಿದ್ದ. ಆಗ ಆಕೆ ಚೇತನ್‌ನಿಗೆ ಮೆಸೇಜ್ ಕಳುಹಿಸಿ, ‘ನನಗೆ ಈ ಕೆಲಸ ಮಾಡಲು ಧೈರ್ಯ ಸಾಲುತ್ತಿಲ್ಲ, ನೀನೂ ಬಾ. ಇಬ್ಬರೂ ಸೇರಿ ಆತನನ್ನು ಪ್ರಪಾತಕ್ಕೆ ತಳ್ಳೋಣ’ ಎಂದು ಹೇಳಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆ ಪ್ರಕಾರ ಜೂನ್ 18ರಂದು ಇಬ್ಬರೂ ಸೇರಿ ಕೊಲೆ ಮಾಡಲು ಸಂಚು ಹೂಡಿದ್ದರು. ಕೊಲೆಯ ನಂತರ ಸಿಯಾ ಇದು ಅಪಘಾತ ಎಂದು ಕಟ್ಟುಕಥೆ ಹೆಣೆದಿದ್ದಳು. ಆದರೆ ಆಕೆಯ ವರ್ತನೆಯು ಕೇತನ್‌ನ ಸಹೋದರಿ ಮತ್ತು ಕುಟುಂಬದವರಿಗೆ ಅನುಮಾನ ತರಿಸಿತು. ತಕ್ಷಣ ಅವರು ತನಿಖೆಗೆ ಒತ್ತಾಯಿಸಿದರು. ಇದರಿಂದ ಸಿಯಾ ಸಿಕ್ಕಿಹಾಕಿಕೊಂಡಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Tue, 7 July 26

Follow Us
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಪ್ರಜ್ವಲ್ ದೇವರಾಜ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗುರುದತ್
ಪ್ರಜ್ವಲ್ ದೇವರಾಜ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗುರುದತ್
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ
ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ