ಸಾಮಾಜಿಕ ಜಾಲತಾಣಗಳಲ್ಲಿ ಕೋರ್ಟ್ ನೇರಪ್ರಸಾರದ ವಿಡಿಯೋ ಶೇರ್ ಮಾಡುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ
ಅಧಿಕೃತ ಕೋರ್ಟ್ ಲೈವ್ ಸ್ಟ್ರೀಮ್‌ನಿಂದ ವೀಡಿಯೊ ತುಣುಕುಗಳನ್ನು ತೆಗೆದುಕೊಂಡು ಅನುಮತಿಯಿಲ್ಲದೆ ಸ್ವತಂತ್ರವಾಗಿ ಪೋಸ್ಟ್ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ಯೂಟ್ಯೂಬ್ ಶಾರ್ಟ್ಸ್ ಆಗಿ ಪೋಸ್ಟ್ ಮಾಡಲಾದ ಎಡಿಟ್ ಮಾಡಿದ ಕೋರ್ಟ್ ವಿಡಿಯೋಗಳು, ಆಡಿಯೋ, ಕ್ಯಾಪ್ಷನ್ ಅಥವಾ ಕಮೆಂಟ್ ಬದಲಾಯಿಸಿ ಹಂಚಿಕೊಳ್ಳುವ ವಿಡಿಯೋಗಳನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ. ಹಾಗೇ, ಅನುಮತಿಯಿಲ್ಲದ ಕೋರ್ಟ್ ವೀಡಿಯೊಗಳ ಮರುಪೋಸ್ಟ್ ಕೂಡ ಮಾಡುವಂತಿಲ್ಲ. ಆದರೆ, ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ನಡೆದ ಘಟನೆಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ಈ ಆದೇಶ ತಡೆಯುವುದಿಲ್ಲ.

ನವದೆಹಲಿ, ಜುಲೈ 24: ನ್ಯಾಯಾಲಯದ ವಿಚಾರಣೆಗಳ ನೇರಪ್ರಸಾರದ ಆಡಿಯೋಗಳನ್ನು ಅನುಮತಿಯಿಲ್ಲದೆ ಕಟ್ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಮರುಪೋಸ್ಟ್ ಮಾಡುವುದು ಮತ್ತು ಅವುಗಳಿಂದ ಹಣ ಗಳಿಸುವುದನ್ನು ಸುಪ್ರೀಂ ಕೋರ್ಟ್ (Supreme Court) ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಕೋರ್ಟ್ ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳುವಂತಿಲ್ಲ.
ಮಾಧ್ಯಮಗಳಿಗೆ ಸಂಬಂಧಿಸಿಲ್ಲ:
ಈ ಆದೇಶವು ಪತ್ರಕರ್ತರ ಹಾಗೂ ಮಾಧ್ಯಮಗಳ ದಿನನಿತ್ಯದ ನ್ಯಾಯಾಂಗ ಸುದ್ದಿ ವರದಿಗಾರಿಕೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ವಿಡಿಯೋಗಳನ್ನು ಎಡಿಟ್ ಮಾಡಿ ಯೂಟ್ಯೂಬ್ ಶಾರ್ಟ್ಸ್, ಇನ್‌ಸ್ಟಾಗ್ರಾಮ್ ರೀಲ್ಸ್, ಮೀಮ್ಸ್ ರೂಪದಲ್ಲಿ ಹಂಚಿಕೊಳ್ಳುವುದು ಮತ್ತು ವ್ಯೂಸ್ಗಾಗಿ ಅದನ್ನು ವಿಜೃಂಭಿಸಿ ಪ್ರಸಾರ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ
ಕೇಂದ್ರ ಹಾಗೂ ರಾಜ್ಯಗಳಿಗೆ ನೋಟಿಸ್:
ಲೈವ್ ಸ್ಟ್ರೀಮ್ ವಿಡಿಯೋಗಳ ದುರ್ಬಳಕೆ ತಡೆಯಲು ಸೂಕ್ತ ನಿಯಮಾವಳಿ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಪೀಠವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ನೇರಪ್ರಸಾರದ ವಿಡಿಯೋಗಳನ್ನು ಪೂರ್ವಾಪರ ಅನುಮತಿಯಿಲ್ಲದೆ ಕಾಪಿ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ಆದೇಶವು ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ಎಲ್ಲ ಹೈಕೋರ್ಟ್‌ಗಳ ನೇರಪ್ರಸಾರದ ವಿಡಿಯೋಗಳಿಗೆ ಅನ್ವಯಿಸುತ್ತದೆ.
ಇದನ್ನೂ ಓದಿ: 9ನೇ ತರಗತಿಯಿಂದಲೇ ಏಕೆ?; ಸಿಬಿಎಸ್ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
ನ್ಯಾಯಾಲಯದ ವಿಡಿಯೋಗಳಿಂದ ತುಣುಕುಗಳನ್ನು ತೆಗೆಯುವುದು, ಎಡಿಟ್ ಮಾಡುವುದು, ಪೋಸ್ಟ್ ಮಾಡುವುದು, ಮರುಪೋಸ್ಟ್ ಮಾಡುವುದು ಹಾಗೂ ಅಪ್‌ಲೋಡ್ ಮಾಡುವುದಕ್ಕೆ ಈ ನಿರ್ಬಂಧ ಅನ್ವಯಿಸಲಿದೆ. ವಿಡಿಯೋಗಳನ್ನು ಬಳಸಲು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಸಂಬಂಧಪಟ್ಟ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ಈ ನಿರ್ದೇಶನವು ಮಾಧ್ಯಮಗಳ ದಿನನಿತ್ಯದ ನ್ಯಾಯಾಂಗ ಸುದ್ದಿ ವರದಿಗಾರಿಕೆಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸದ್ಯ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಕೆಲವು ನಿರ್ದಿಷ್ಟ ವಿಚಾರಣೆಗಳ ನೇರಪ್ರಸಾರ ಮತ್ತು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ ನ್ಯಾಯಾಂಗ ಪ್ರಕ್ರಿಯೆಯ ಸುಲಭ ಲಭ್ಯತೆ ಮತ್ತು ಮುಕ್ತ ನ್ಯಾಯದ ಭಾಗವಾಗಿ ಲೈವ್ ಸ್ಟ್ರೀಮಿಂಗ್ ನೀಡಲಾಗುತ್ತಿದ್ದರೂ, ಅದರ ದುರ್ಬಳಕೆಗೆ ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




