Breaking News ಇದು 21 ನೇ ಶತಮಾನ, ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ?: ಸುಪ್ರೀಂಕೋರ್ಟ್
ದ್ವೇಷದ ಭಾಷಣದ ಮೇಲಿನ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಧರ್ಮ ನಿರಪೇಕ್ಷ ಆಗಬೇಕಿದ್ದ ದೇಶದಲ್ಲಿ ಇದು ಆಘಾತಕಾರಿ ಸಂಗತಿ ಎಂದು ಹೇಳಿದೆ.
ದೆಹಲಿ: ದ್ವೇಷ ಭಾಷಣಗಳ (Hate Speech) ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court), ಇದು 21 ನೇ ಶತಮಾನ, ನಾವು ಧರ್ಮದ ಹೆಸರಿನಲ್ಲಿ ಎಲ್ಲಿಗೆ ತಲುಪಿದ್ದೇವೆ? ಎಂದು ಕೇಳಿದೆ. ದ್ವೇಷದ ಭಾಷಣದ ಬಗ್ಗೆ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಧರ್ಮ ನಿರಪೇಕ್ಷ ಆಗಬೇಕಿದ್ದ ದೇಶದಲ್ಲಿ ಇದು ಆಘಾತಕಾರಿ ಸಂಗತಿ ಎಂದು ಹೇಳಿದೆ. ಗುರುವಾರ, ನ್ಯಾಯಾಲಯವು “ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಮತ್ತು ಭಯಭೀತಗೊಳಿಸುವ ಬೆದರಿಕೆಯನ್ನು” ತಡೆಯಲು ತುರ್ತು ಮಧ್ಯಸ್ಥಿಕೆಯನ್ನು ಕೋರುವ ಮನವಿಗೆ ಕೇಂದ್ರ ಮತ್ತು ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ಕೋರಿತ್ತು.ದೇಶಾದ್ಯಂತ ದ್ವೇಷದ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಘಟನೆಗಳ ಬಗ್ಗೆ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನವನ್ನು ಕೋರಿ ಅರ್ಜಿದಾರರಾದ ಶಾಹೀನ್ ಅಬ್ದುಲ್ಲಾ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಮಸ್ಯೆಯನ್ನು ನಿಭಾಯಿಸಲು ಏನಾದರೂ ಮಾಡಬೇಕಾಗಿದೆ. ದ್ವೇಷ ಭಾಷಣಗಳನ್ನು ಮಾಡುವ ಅಥವಾ ದ್ವೇಷದ ಅಪರಾಧಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ತಮ್ಮ ಅರ್ಜಿಯಲ್ಲಿ ಶಾಹೀನ್ ಅಬ್ದುಲ್ಲಾ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಮತ್ತು ದ್ವೇಷದ ಅಪರಾಧಗಳು ಮತ್ತು ದ್ವೇಷ ಭಾಷಣಗಳನ್ನು ತಡೆಯಲು ಇತರ ಕಠಿಣ ನಿಬಂಧನೆಗಳನ್ನು ಸಹ ಕೋರಿದ್ದಾರೆ.
ದ್ವೇಷದ ಭಾಷಣಗಳಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ಸದಸ್ಯರು ಭಾಗವಹಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದಾರೆ ಮತ್ತು ಭಯ ಹುಟ್ಟಿಸಿದ್ದಾರೆ. “ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಕಡೆಗೆ ದ್ವೇಷದ ಹರಡುವಿಕೆ ಹೆಚ್ಚಾಗುತ್ತಿದೆ. ದ್ವೇಷದ ಅಪರಾಧಗಳು, ದೈಹಿಕ ಹಿಂಸಾಚಾರ ಮತ್ತು ಕೋಮು ಆರೋಪದ ಭಾಷಣಗಳಲ್ಲಿ ತೊಡಗಿರುವ ತೀವ್ರಗಾಮಿ ದುಷ್ಕರ್ಮಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲದ ಪರಿಣಾಮವಾಗಿ ಅದು ಮತ್ತಷ್ಟು ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
Published On - 4:24 pm, Fri, 21 October 22