ಸಾರ್ವಭೌಮತ್ವದ ಉಲ್ಲಂಘನೆ; ಕತಾರ್ ಅಮೀರ್‌ಗೆ ಕರೆ ಮಾಡಿ ದೋಹಾ ಮೇಲಿನ ಇಸ್ರೇಲಿ ದಾಳಿ ಖಂಡಿಸಿದ ಮೋದಿ
ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ಗುರಿಯನ್ನು ಹೊಂದಿರುವ ಮಧ್ಯಸ್ಥಿಕೆ ಪ್ರಯತ್ನಗಳು ಸೇರಿದಂತೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಕತಾರ್ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಕತಾರ್ ಜೊತೆಗಿನ ಭಾರತದ ಒಗ್ಗಟ್ಟಿಗೆ ಶೇಖ್ ತಮೀಮ್ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತ-ಕತಾರ್ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದು, ಪರಸ್ಪರ ಆಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 10: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ದೋಹಾದಲ್ಲಿ ನಡೆದ ದಾಳಿಗಳನ್ನು ಖಂಡಿಸಿದ್ದಾರೆ. ಹಾಗೇ, ಕತಾರ್‌ಗೆ ಭಾರತದ ಬೆಂಬಲವನ್ನು ದೃಢಪಡಿಸಿದ್ದಾರೆ. ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ಗುರಿಯನ್ನು ಹೊಂದಿರುವ ಮಧ್ಯಸ್ಥಿಕೆ ಪ್ರಯತ್ನಗಳು ಸೇರಿದಂತೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಕತಾರ್ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಕತಾರ್ ಜೊತೆಗಿನ ಭಾರತದ ಒಗ್ಗಟ್ಟಿಗೆ ಶೇಖ್ ತಮೀಮ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೇ, ಭಾರತ-ಕತಾರ್ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಪರಸ್ಪರ ಆಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ದೋಹಾದಲ್ಲಿ ಹಮಾಸ್‌ನ ಉನ್ನತ ಅಧಿಕಾರಿಗಳ ಮೇಲೆ ಹತ್ಯೆಗೆ ಯತ್ನಿಸಿದ ಇಸ್ರೇಲಿ ಪಡೆಗಳು ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಆ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರು ಕತಾರ್ ಅಮೀರ್ ಜೊತೆ ಮಾತನಾಡಿ, ಕತಾರ್‌ನ ಸಾರ್ವಭೌಮತ್ವದ “ಉಲ್ಲಂಘನೆ”ಯನ್ನು ಖಂಡಿಸಿದ್ದಾರೆ ಮತ್ತು ವಿವಾದಗಳನ್ನು ಪರಿಹರಿಸಲು ಮಾತುಕತೆಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: India US Relations: ಭಾರತದ ಬಗ್ಗೆ ಅಮೆರಿಕ ಮೃದು ಧೋರಣೆ, ಟ್ರಂಪ್ ಜತೆ ಮಾತನಾಡಲು ಉತ್ಸುಕನಾಗಿದ್ದೇನೆ: ಮೋದಿ
“ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ಮಾತನಾಡಿ ದೋಹಾದಲ್ಲಿ ನಡೆದ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಸಹೋದರ ರಾಷ್ಟ್ರವಾದ ಕತಾರ್‌ನ ಸಾರ್ವಭೌಮತ್ವದ ಉಲ್ಲಂಘನೆಯನ್ನು ಭಾರತ ಖಂಡಿಸುತ್ತದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Spoke with Amir of Qatar Sheikh Tamim Bin Hamad Al-Thani and expressed deep concern at the attacks in Doha. India condemns the violation of the sovereignty of the brotherly State of Qatar. We support resolution of issues through dialogue and diplomacy, and avoiding escalation.…
— Narendra Modi (@narendramodi) September 10, 2025
ಭಾರತದ ಸ್ಥಿರ ನಿಲುವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ವಿವಾದಗಳನ್ನು ಪರಿಹರಿಸುವ ಮಹತ್ವವನ್ನು ಒತ್ತಿ ಹೇಳಿದರು. ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಅಗತ್ಯವನ್ನು ಒತ್ತಿ ಹೇಳಿದರು. “ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದನ್ನು ನಾವು ಬೆಂಬಲಿಸುತ್ತೇವೆ. ಭಾರತವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಭಯೋತ್ಪಾದನೆಯ ವಿರುದ್ಧ ದೃಢವಾಗಿ ಬೆಂಬಲ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ
ಹಮಾಸ್ ಪ್ರಕಾರ, ದಾಳಿಯಲ್ಲಿ ಹಮಾಸ್ ನಾಯಕರ ಮೂವರು ಅಂಗರಕ್ಷಕರು ಸೇರಿದಂತೆ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ. ಖಲೀಲ್ ಅಲ್-ಹಯ್ಯ ಅವರ ಮಗ ಹಮ್ಮಮ್ ಅಲ್-ಹಯ್ಯ ಮತ್ತು ಅವರ ಕಚೇರಿಯ ವ್ಯವಸ್ಥಾಪಕ ಜಿಹಾದ್ ಲಬಾದ್ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ದೋಹಾದ ಪ್ರಯತ್ನಗಳನ್ನು ಶ್ಲಾಘಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




