ನೀವು ಜೈಲಿನಲ್ಲಿರುವುದೇ ಉತ್ತಮ: ಆಮ್ರಪಾಲಿ ಮಾಜಿ ಮುಖ್ಯಸ್ಥರ ಜಾಮೀನು ತಿರಸ್ಕರಿಸಿದ ಸುಪ್ರೀಂಕೋರ್ಟ್
ಅಪರಾಧ ಅತಿ ಗಂಭೀರವಾದುದು. ನ್ಯಾಯಾಲಯವು ಸಮಸ್ಯೆಯನ್ನು ನಿಭಾಯಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ. ನಿಮ್ಮದು ಸರಳ ವಂಚನೆಯ ಪ್ರಕರಣವಲ್ಲ. ಸಾವಿರಾರು ಮನೆ ಖರೀದಿದಾರರ ವ್ಯಥೆ ನೋಡಿ. ನಿಮಗೆ ನಮ್ಮ ಸಹಾನುಭೂತಿ ಇರುವುದಿಲ್ಲ. ನೀವು ಜೈಲಿನಲ್ಲೇ ಇರಿ ಎಂದ ಸುಪ್ರೀಂಕೋರ್ಟ್
ದೆಹಲಿ: ನೀವು ಸಾವಿರಾರು ಮನೆ ಖರೀದಿದಾರರಿಗೆ ಮೋಸ ಮಾಡಿದ್ದು, ಯಾವುದೇ ಸಹಾನುಭೂತಿಗೆ ಅರ್ಹರಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್ (Supreme Court) ಆಮ್ರಪಾಲಿ ಸಮೂಹ ಸಂಸ್ಥೆಗಳ (Amrapali Group of Companies)ಮಾಜಿ ಸಿಎಂಡಿ ಅನಿಲ್ ಕುಮಾರ್ ಶರ್ಮಾ (Anil Kumar Sharma) ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಮಾ ಅವರ ಜಾಮೀನು ಅರ್ಜಿಯ ಕುರಿತು ಪ್ರಾಸಿಕ್ಯೂಟಿಂಗ್ ಏಜೆನ್ಸಿಗೆ ನೋಟಿಸ್ ನೀಡಲು ನಿರಾಕರಿಸಿತು. ನೀವು ಸಾವಿರಾರು ಮನೆ ಖರೀದಿದಾರರಿಗೆ ಮೋಸ ಮಾಡಿದ್ದೀರಿ. ನೀವು ಅವರ ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಅವರ ಜೀವನದ ಉಳಿತಾಯವನ್ನು ಕಸಿದುಕೊಂಡಿದ್ದೀರಿ. ನೀವು ಯಾವುದೇ ಸಹಾನುಭೂತಿಗೆ ಅರ್ಹರಲ್ಲ ಎಂದು ಪೀಠ ಗುರುವಾರ ಹೇಳಿದೆ.
ದೊಡ್ಡ ಪ್ರಮಾಣದ ಮನೆ ಖರೀದಿದಾರರ ಹಣವನ್ನು ಆಡಳಿತ ಮಂಡಳಿಯು ಪೋಲು ಮಾಡಿದೆ ಎಂದು ಫೊರೆನ್ಸಿಕ್ ಆಡಿಟ್ ವರದಿಯಿಂದ ಬಹಿರಂಗವಾದ ನಂತರ ರಿಯಲ್ ಎಸ್ಟೇಟ್ ಗ್ರೂಪ್‌ನ ಮಾಜಿ ಸಿಎಂಡಿ ಮತ್ತು ಸಂಸ್ಥೆಯ ಇತರ ನಿರ್ದೇಶಕರನ್ನು ಉನ್ನತ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಂಧಿಸಲಾಗಿತ್ತು
ಅಪರಾಧ ಅತಿ ಗಂಭೀರವಾದುದು. ನ್ಯಾಯಾಲಯವು ಸಮಸ್ಯೆಯನ್ನು ನಿಭಾಯಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ ನಿಮ್ಮದು ಸರಳ ವಂಚನೆಯ ಪ್ರಕರಣವಲ್ಲ. ಸಾವಿರಾರು ಮನೆ ಖರೀದಿದಾರರ ವ್ಯಥೆ ನೋಡಿ. ನಿಮಗೆ ನಮ್ಮ ಸಹಾನುಭೂತಿ ಇರುವುದಿಲ್ಲ. ನೀವು ಜೈಲಿನಲ್ಲೇ ಇರಿ. ನೀವು ಏನು ಮಾಡಿದ್ದೀರಿ ಎಂದು ಈ ನ್ಯಾಯಾಲಯಕ್ಕೆ ತಿಳಿದಿದೆ. ನೀವು ಅವ್ಯವಸ್ಥೆಯನ್ನು ಸೃಷ್ಟಿಸಿದ್ದೀರಿ. ನಾವು ಇದರಿಂದ ಹೊರಬರಲು ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಂಖ್ಯೆಯ ಮನೆ ಖರೀದಿದಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪೀಠ ಹೇಳಿದೆ.
ಈ ಹಿಂದೆ, ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂಕೋರ್ಟ್ ಅನಿಲ್ ಶರ್ಮಾಗೆ ಕೆಲವು ವಾರಗಳ ಮಧ್ಯಂತರ ಜಾಮೀನು ನೀಡಿತ್ತು.
ಅನಿಲ್ ಶರ್ಮಾ ಮತ್ತು ಇತರರು 2018 ರಲ್ಲಿ ಬಂಧನದ ನಂತರ ವಂಚನೆ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ ಮತ್ತು ಮನಿ ಲಾಂಡರಿಂಗ್ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಜೈಲು ಪಾಲಾಗಿದ್ದು ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಮನೆ ಖರೀದಿದಾರರ ಹಣವನ್ನು ಪೋಲು ಮಾಡಿದ ಆರೋಪ ಅವರ ಮೇಲಿದೆ.
ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ಶರದ್ ಪವಾರ್
ಸುಪ್ರೀಂಕೋರ್ಟ್, ತನ್ನ ಜುಲೈ 23, 2019 ರ ತೀರ್ಪಿನಲ್ಲಿ, ಮನೆ ಖರೀದಿದಾರರ ನಂಬಿಕೆ ಮುರಿದಿದ್ದಕ್ಕಾಗಿ ಬಿಲ್ಡರ್ಗಳ ಮೇಲೆ ಕ್ರಮ ಕೈಗೊಂಡಿತು. ರಿಯಲ್ ಎಸ್ಟೇಟ್ ಕಾನೂನು RERA ಅಡಿಯಲ್ಲಿ ಆಮ್ರಪಾಲಿ ಗ್ರೂಪ್‌ನ ನೋಂದಣಿಯನ್ನು ರದ್ದುಗೊಳಿಸುವಂತೆ ಆದೇಶಿಸಿತು ಆಮ್ರಪಾಲಿ ಗ್ರೂಪ್‌ನ 42,000 ಕ್ಕೂ ಹೆಚ್ಚು ಮನೆ ಖರೀದಿದಾರರಿಗೆ ಪರಿಹಾರವನ್ನು ಒದಗಿಸುವ ಮೂಲಕ ಇವರ ಅಕ್ರಮ ಹಣ ವರ್ಗಾವಣೆಯ ಕುರಿತು ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇಡಿ ಜೊತೆಗೆ, ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಮತ್ತು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಸಹ ರಿಯಲ್ ಎಸ್ಟೇಟ್ ಗುಂಪಿನ ಮಾಜಿ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳ ತನಿಖೆ ನಡೆಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Fri, 5 May 23