Corporate Criminals: ಶಿಕ್ಷಿತ, ಶ್ರೀಮಂತ ಕಾರ್ಪೊರೇಟ್ ಕಾರ್ಯನಿರ್ವಾಹಕರು ಕ್ರಿಮಿನಲ್ ಕೃತ್ಯಗಳನ್ನೆಸಗುವುದೇಕೆ?
White-Collar criminals; ಶ್ರೀಮಂತ ಕಾರ್ಪೊರೇಟ್ ಕಾರ್ಯನಿರ್ವಾಹಕರು ಅಪಾಯಕರ ಕೃತ್ಯಗಳ ಮೂಲಕ ತಮ್ಮ ಜೀವನವನ್ನೇ ಪಣಕ್ಕಿಡುವ ಜೂಜಿನಲ್ಲಿ ತೊಡಗುವುದು ಯಾಕೆ? ಆಗಾಗ್ಗೆ ಅಪರಾಧ ಕೃತ್ಯಗಳನ್ನು ಮಾಡುವಂತೆ ಅವರನ್ನು ಉತ್ತೇಜಿಸುವುದು ಯಾವುದು?
ಸಿಬಿಐ (CBI) ವಶದಲ್ಲಿರುವ ಐಸಿಐಸಿಐ ಬ್ಯಾಂಕ್ (ICICI Bank) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಚಂದಾ ಕೊಚ್ಚರ್ (Chanda Kochhar) ಅವರ ಮನದಲ್ಲಿ ಈಗ ಏನೆಲ್ಲ ಯೋಚನೆಗಳು ಓಡಾಡುತ್ತಿರಬಹುದು? ಅವರೀಗ ತಮ್ಮ ಜೀವನದ ಹಿಂದಿನ ದಿನಗಳನ್ನು ಸ್ಲೋಮೋಷನ್ನಲ್ಲಿ ಅವಲೋಕಿಸುತ್ತಿರಬಹುದು. ವಿಭಿನ್ನವಾಗಿ ತಾನು ಹೇಗಿರಬಹುದಿತ್ತು ಎಂಬ ಬಗ್ಗೆ ಚಿಂತನೆ ನಡೆಸುತ್ತಿರಬಹುದು. ಆದರೆ, ಹಾಗಾಗಿಲ್ಲ. ಸಂಪತ್ತಿನ ಬಗ್ಗೆ ಹಿಂತಿರುಗಿ ಪರಾಮರ್ಶಿಸುವ ಅವರು ಭವಿಷ್ಯವನ್ನು ಭಿನ್ನವಾಗಿ ನಿರ್ಮಿಸಲು ಮುಂದಾಗಲಿದ್ದಾರೆಯೇ? ಇದ್ದರೂ ಇರಬಹುದು. ನನ್ನ ಊಹೆ ತಪ್ಪಾಗಲೂ ಬಹುದು. ಅಪರಾಧ ಕೃತ್ಯಗಳನ್ನೆಸಗಲು ಶ್ರೀಮಂತ ಕಾರ್ಪೊರೇಟ್ ಕಾರ್ಯನಿರ್ವಾಹಕರನ್ನು ಪ್ರಚೋದಿಸುವ ಅಂಶ ಯಾವುದು ಎಂಬುದೇ ಉತ್ತರಿಸಲು ಬಹು ಕಠಿಣವಾದ ಪ್ರಶ್ನೆ. ಮೆಕಿನ್ಸೆಯ ಮುಖ್ಯಸ್ಥರಾಗಿದ್ದ ರಜತ್ ಗುಪ್ತಾ ಅವರದ್ದು ಮತ್ತೊಂದು ಕಥೆ. ಅವರು 130 ದಶಲಕ್ಷ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದು, ಮಾಹಿತಿ ಹಂಚಿಕೊಳ್ಳುವಲ್ಲಿ ತಪ್ಪೆಸಗಿರುವ ಬಗ್ಗೆ ನ್ಯಾಯಾಲಯದ ದಾಖಲೆಗಳಿಂದ ತಿಳಿದುಬಂದಿದೆ. 2009ರಿಂದ 2018ರ ಅವಧಿಯಲ್ಲಿ ಚಂದಾ ಕೊಚ್ಚರ್ ಅವರಿಗೆ ಬ್ಯಾಂಕ್ನ ಸ್ಟಾಕ್ ಆಪ್ಷನ್ ಯೋಜನೆಯಡಿ 94 ಲಕ್ಷ ಷೇರುಗಳನ್ನು ಹಂಚಿಕೆ ಮಾಡಲಾಗಿತ್ತು. ಈಗಲೂ ಕೊಚ್ಚರ್ ಅವರು ಅಷ್ಟೂ ಷೇರುಗಳನ್ನು ಹೊಂದಿದ್ದಾರೆ ಎಂದು ಊಹಿಸಿ, ಅದರ ಮೌಲ್ಯ ಈಗ (900 ರೂ. ಪಿಒಪಿಯಂತೆ) 846 ಕೋಟಿ ರೂ. ಆಗುತ್ತದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಮಾಜಿ ಸಿಇಒ ಚೈತ್ರಾ ರಾಮಕೃಷ್ಣ ಅವರಿಗೆ ಮೂರು ವರ್ಷಗಳ ಅವಧಿಯಲ್ಲಿ ವೇತನವಾಗಿ 44 ಕೋಟಿ ರೂ. ನೀಡಲಾಗಿತ್ತು. ಆಕೆ ಆಯ್ದ ಮಧ್ಯವರ್ತಿಗಳಿಗೆ ಎಕ್ಸ್ಚೇಂಜ್ನ ಟ್ರೇಡಿಂಗ್ ಸಾಫ್ಟ್ವೇರ್ಗೆ ಮುಕ್ತ ಪ್ರವೇಶ ನೀಡಿದರು. ನಿಗೂಢ ಯೋಗಿಯ ತಾಳಕ್ಕೆ ತಕ್ಕಂತೆ ಕುಣಿದರು.
ಐಎಲ್&ಎಫ್ಎಸ್ನ ಮಾಜಿ ಅಧ್ಯಕ್ಷ ರವಿ ಪಾರ್ಥಸಾರಥಿ ಈ ವರ್ಷ ಏಪ್ರಿಲ್ನಲ್ಲಿ ಮೃತಪಟ್ಟರು. ಆ ಸಂದರ್ಭ ಅವರ ಸಂಪತ್ತಿನ ಮೌಲ್ಯ 11,500 ಕೋಟಿ ರೂ. ಎನ್ನಲಾಗಿತ್ತು. ಐಎಲ್&ಎಫ್ಎಸ್ ಪಡೆದಿರುವ 1 ಲಕ್ಷ ಕೋಟಿ ಸಂಶಯಾಸ್ಪದ ಸಾಲದಿಂದ ಈ ಸಂಪತ್ತು ಗಳಿಸಲಾಗಿದೆ ಎಂಬ ಅನುಮಾನ ಅವರ ಮೇಲಿದೆ. ಇವರೆಲ್ಲರಿಗಿಂತ ಹೊರತಾಗಿ, ತುಂಬಾ ಶಕ್ತಿಯುತ ಪ್ರವರ್ತಕರು ಅಪಾಯಕರ ಕಾರ್ಪೊರೇಟ್ ಕೃತ್ಯಗಳ ಮೂಲಕ ತಮ್ಮ ಜೀವನವನ್ನು ಅಪಾಯಕ್ಕೊಡ್ಡಿದರು.
ಇದನ್ನೂ ಓದಿ: eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ
ಯಾಕೆ? ನಾನು ಹೀಗೆ ಯೋಚಿಸುತ್ತೇನೆ. ಸಿಇಒದಂಥ ಅಧಿಕಾರ ನಿಮ್ಮ ಬಳಿ ಇದ್ದಾಗ ಅನೇಕ ವಿಚಾರಗಳು ಆಗಿಹೋಗುತ್ತವೆ. ಒಮ್ಮೆ ನಿಮ್ಮಲ್ಲಿ ದಾರ್ಷ್ಟ್ಯ ಭಾವ ಬೆಳೆದರೆ, ನಿಮ್ಮ ನಿರ್ಧಾರಗಳನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ನೀವು ಭಾವಿಸಿದರೆ, ಆತಂಕಕಾರಿ ಎನಿಸುವಂಥ ಮತ್ತು ದೂರಗಾಮಿ ಪರಿಣಾಮಗಳೊಂದಿಗೆ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಒಲವು ತೋರುತ್ತೀರಿ. ಕಾನೂನು ನಿಮ್ಮ ಅಧೀನದಲ್ಲಿದೆ ಎಂದು ನೀವು ಭಾವಿಸುತ್ತೀರಿ.
ಎರಡನೇಯದಾಗಿ, ನೀವೊಬ್ಬ ಶ್ರೀಮಂತ ಬ್ಯಾಂಕರ್ ಆಗಿ, ಜಾಗತಿಕ ಕನ್ಸಲ್ಟಿಂಗ್ ಸಂಸ್ಥೆಯೊಂದರ ಬಾಸ್ ಆಗಿದ್ದಾಗ ನಿಮ್ಮ ಮೌಲ್ಯವನ್ನು ನಿಮ್ಮ ಕೋಟ್ಯಧಿಪತಿ ಸ್ನೇಹಿತರ ಮತ್ತು ಗ್ರಾಹಕರೊಂದಿಗೆ ಹೋಲಿಕೆ ಒಳಪಡುತ್ತದೆ. ಕೊಚ್ಚರ್ ಪ್ರಕರಣದಲ್ಲಿ, ಹಣಕ್ಕಾಗಿ ಸರದಿಯಲ್ಲಿ ನಿಲ್ಲುವ ಸಾಮಾನ್ಯ ಜನರೂ ಅವರಿಗಿಂತ ಶ್ರೀಮಂತರಾಗಿದ್ದರು. ರಜತ್ ಗುಪ್ತಾ ಅವರು ತಮ್ಮದೇ ಆದ ಹಲವು ಉದ್ಯಮಗಳನ್ನು ಹೊಂದಿರುವ ಸುಮಾರು 500 ಸಿಇಒಗಳು/ಸ್ಥಾಪಕರಿಗೆ ಸಲಹೆಗಾರರಾಗಿದ್ದರು. ಇಲ್ಲಿ ಹೋಲಿಕೆ ಬಂದಾಗ ಗುಪ್ತಾ ಬಡವ ಮತ್ತು ಸಮಾನರಲ್ಲ ಎಂದು ಭಾವಿಸಿರಬಹುದು ಎಂಬುದು ಸಹಜವಾಗಿ ತಿಳಿಯುವಂಥ ವಿಚಾರವಾಗಿದೆ (ಐಐಟಿ ದೆಹಲಿ-ಹಾರ್ವರ್ಡ್ ವಿದ್ಯಾವಂತರಾದ ಗುಪ್ತಾ, ತಮ್ಮ ಬುದ್ಧಿವಂತಿಕೆಯ ಹೊರತಾಗಿಯೂ ಬಿಲಿಯನೇರ್ ಸ್ನೇಹಿತರಿಗಿಂತ ಕಡಿಮೆ ಮೌಲ್ಯದವ ಎಂಬ ಅವಮಾನಕ್ಕೊಳಗಾಗಿರಬಹುದು).
ಆರು ವರ್ಷಗಳ ಹಿಂದೆ, ಹಾರ್ವರ್ಡ್ ಪ್ರಾಧ್ಯಾಪಕ ಯುಜೀನ್ ಸೋಲ್ಟೆಸ್ ‘ವೈ ದೇ ಡೂ ಇಟ್: ಇನ್ಸೈಡ್ ದಿ ಮೈಂಡ್ ಆಫ್ ದಿ ವೈಟ್ ಕಾಲರ್ ಕ್ರಿಮಿನಲ್’ ಎಂಬ ಪುಸ್ತಕ ಬರೆದಿದ್ದರು. ಈ ಮೂಲಕ, ವೈಟ್ ಕಾಕಲರ್ ಉದ್ಯೋಗಿಗಳ ಅಪರಾಧ ಕೃತ್ಯಗಳ ವಿಷಯಕ್ಕೆ ಸಂಬಂಧಿಸಿ ಅಕಾಡೆಮಿಕ್ ರೂಪ ನೀಡಲು ಮುಂದಾಗಿದ್ದರು. ಅದರಲ್ಲಿ 50 ವೈಟ್ ಕಾಲರ್ ಕ್ರಮಿನಲ್ಗಳ ಜತೆ ನಡೆಸಿದ ಸಂವಾದದ ವಿವರಗಳನ್ನೂ ಉಲ್ಲೇಖಿಸಿದ್ದರು. ಎನ್ರಾನ್ಸ್ ಸಿಎಫ್ಒ ಆ್ಯಂಡ್ರ್ಯೂ ಫಾಸ್ಟೋ ಹಾಗೂ ಅತಿದೊಡ್ಡ ಪೊಂಜಿ ಆಪರೇಟರ್ ಬರ್ನಿ ಮ್ಯಾಡಾಫ್ ಅವರ ಜತೆಗಿನ ಸಂವಾದದ ವಿವರಗಳೂ ಇದ್ದವು. ‘ನನಗೆ ಏನು ಮಾಡಬೇಕೆಂಬ ಪ್ರೇರಣೆಯಾಗುತ್ತದೆಯೋ ಅದನ್ನು ನಾನು ಮಾಡುತ್ತಿದ್ದೆ. ಸುಮ್ಮನೆ ಮೋಸ ಮಾಡಬೇಕೆಂದುಕೊಂಡಿದ್ದರೆ ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿರಲಿಲ್ಲ. ನಾವು ನಿಯಮಗಳನ್ನು ಅನುಸರಿಸಲು ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಆದರೆ ಸಂಕೀರ್ಣ ಪ್ರಕ್ರಿಯೆಗಳನ್ನು ಅನುಸರಿಸುವಾಗ ಲೋಪದೋಷಗಳು ಕಾಣಿಸಿ ಅದರ ಮೂಲಕ ಮುನ್ನಡೆಯುವಂತೆ ಆಗುತ್ತಿತ್ತು’ ಎಂದು ಫಾಸ್ಟೋ ಉತ್ತರಿಸಿದ್ದರು. ಅಂದರೆ, ತಮ್ಮ ಅಪರಾಧ ಕೃತ್ಯಗಳ ಸಮರ್ಥನೆಗೆ ಅವರು ಕಾರ್ಪೊರೇಟ್ ಸಂಸ್ಕೃತಿಯನ್ನೇ ದೂರಿದ್ದರು.
ಇದನ್ನೂ ಓದಿ: Videocon CEO Arrested: ಚಂದಾ ಕೊಚ್ಚರ್ ಬೆನ್ನಲ್ಲೇ ವಿಡಿಯೊಕಾನ್ ಸಿಇಒ ವೇಣುಗೋಪಾಲ್ ಧೂತ್ ಬಂಧಿಸಿದ ಸಿಬಿಐ
ಬರ್ನಿ ಮ್ಯಾಡಾಫ್ ತನ್ನ ವ್ಯವಹಾರ ಮತ್ತು ಉದ್ಯಮದ ಮೇಲೆ ಸಾಕಷ್ಟು ಆಳವಾದ ಅರಿವು ಇಲ್ಲದ ಕಾರಣ ಹಾಗೆ ಮಾಡಿದೆ ಎಂದಿದ್ದಾರೆ! ಮತ್ತೊಮ್ಮೆ ವೈಟ್ ಕಾಲರ್ ಕ್ರಿಮಿನಲ್ಗಳು ತಮ್ಮ ಕೃತ್ಯಗಳ ಜವಾಬ್ದಾರಿಗಳಿಂದ ನುಣುಚಿಕೊಂಡಿದ್ದಾರೆ. ಪ್ರೊಫೆಸರ್ ಆಗಿರುವುದರಿಂದ, ಸೋಲ್ಟೆಸ್ ತನ್ನ ಸಂಶೋಧನೆಗಳನ್ನು ಬಹು-ಶಿಸ್ತಿನ ಚೌಕಟ್ಟಿನಲ್ಲಿ ಮತ್ತು ಅಂತಿಮವಾಗಿ, ಶೈಕ್ಷಣಿಕ ಶಿಷ್ಟಾಚಾರದಲ್ಲಿ ರೂಪಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ನಾನು ಪತ್ರಕರ್ತನಾಗಿ ನೇರವಾಗಿ ಹೇಳಲು ಯಾವುದೇ ಹಿಂಜರಿಕೆ ಇಲ್ಲ.
ನನ್ನ ಅಂತಿಮ ವಿಶ್ಲೇಷಣೆಯ ಪ್ರಕಾರ, ಆಪಾದನೆಯು ಕಾರ್ಯನಿರ್ವಾಹಕರ ದುರಹಂಕಾರದ ಮೇಲೆ ನಿಂತಿದೆ. ಹಾಗಿದ್ದರೆ ಅದಕ್ಕೆ ಕಾರಣವೇನು: ಅಸಮರ್ಪಕ ದೃಷ್ಟಿಕೋನ. ದೊಡ್ಡ ದೊಡ್ಡ ಕಾರ್ಪೊರೇಟ್ ಹಗರಣಗಳ ಬೆನ್ನಲ್ಲೇ ಕಾರ್ಪೊರೇಟ್ ಹೊಣೆಗಾರಿಕೆಗೆ ಸಂಬಂಧಿಸಿ 90ರ ದಶಕದ ಕೊನೆಯಲ್ಲಿ ಮತ್ತು 2000ನೇ ದಶಕದ ಆರಂಭದಲ್ಲಿ ಅಮೆರಿಕ ಸರ್ಕಾರ ಸರ್ಬೇನ್ಸ್-ಆಕ್ಸ್ಲಿ ನಿಯಮವನ್ನು ರೂಪಿಸಿತ್ತು. ಭಾರತದಲ್ಲಿ 2913ರಲ್ಲಿ ಕಂಪನಿ ಕಾಯ್ದೆ ರೂಪಿಸಲಾಗಿತ್ತು. ಇದು ನಿರ್ವಹಣೆ, ಮಂಡಳಿ, ಲೆಕ್ಕಪರಿಶೋಧನಾ ಸಮಿತಿ ಮತ್ತು ಲೆಕ್ಕಪರಿಶೋಧಕರು ಸೇರಿದಂತೆ ಎಲ್ಲಾ ಪ್ರಮುಖರ ಮೇಲೆ ಜವಾಬ್ದಾರಿಗಳನ್ನು ವಿಧಿಸಿದೆ. ಆದರೂ, ಮಂಡಳಿಯ ಸದಸ್ಯರು ಮತ್ತು ಸಮಿತಿಯ ಅಧ್ಯಕ್ಷರು ಕೆಲವೊಮ್ಮೆ ಮೃದು ನೀತಿ ತಳೆಯುತ್ತಾರೆ. ಅವರಲ್ಲಿ ಅನೇಕರು, ಕಂಪನಿಯ ಪ್ರವರ್ತಕರ ಕಡೆಯಿಂದ ನೇಮಕಗೊಂಡರು. ಇವರು ತಮ್ಮ ಕರ್ತವ್ಯಕ್ಕೆ ಬದ್ಧರಾಗಿರುವುದಕ್ಕಿಂತಲೂ ತಮ್ಮ ಕಾರ್ಪೊರೇಟ್ ಮಾಸ್ಟರ್‌ಗಳಿಗೆ ನಿಷ್ಠರಾಗಿರಲು ಬಯಸುತ್ತಾರೆ.
ಆದ್ದರಿಂದ, ಮಂಡಳಿಗಳು ದೃಢವಾಗಿ ಮತ್ತು ಅಪಾಯಕಾರಿ ಕಾರ್ಪೊರೇಟ್ ಕೃತ್ಯಗಳನ್ನು ನಿಗ್ರಹಿಸಲು ಪೂರ್ವಭಾವಿಯಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸದ ಹೊರತು ಇಂಥ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ತಾವೇನು ಬಯಸುತ್ತೇವೆಯೋ ಅದನ್ನೆಲ್ಲ ವೈಟ್ ಕಾಲರ್ ಕ್ರಿಮಿನಲ್ಗಳು ಮಾಡುತ್ತಲೇ ಇರುತ್ತಾರೆ.
ಆರ್. ಶ್ರೀಧರನ್ (ವ್ಯವಸ್ಥಾಪಕ ಸಂಪಾದಕರು, ಟಿವಿ9 ಕರ್ನಾಟಕ)