ಹುಬ್ಬಳ್ಳಿ ನೇಹಾ ಕೊಲೆ ಕೇಸ್​: ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ

ಲೈಂಗಿಕ ದೌರ್ಜನ್ಯ ಇರಲಿ ಅಥವಾ ಇತರ ಘೋರ ಅಪರಾಧ ಕೃತ್ಯವೇ ಇರಲಿ, ಕೊಲೆಯೇ ನಡೆದಿರಲಿ. ಹುಡುಗಿಯ ನಡತೆ ಬಗ್ಗೆ ಸಾರ್ವಜನಿಕವಾಗಿ ಒಂದಿಷ್ಟು ಸಾಕ್ಷ್ಯಾಧಾರ ಹರಿಬಿಟ್ಟು ಸಾರ್ವಜನಿಕರ ಸಿಟ್ಟನ್ನು ಮಟ್ಟ ಹಾಕುವ ಪ್ರಯತ್ನ ನಿಲ್ಲಲೇಬೇಕು. ಆದರೆ, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಆಗಿದ್ದೇನು? ಆಡಳಿತ ಯಂತ್ರದಲ್ಲಿರುವವರು ಗಮನಿಸಬೇಕಾದ ಅಂಶವೇನು? ಈ ಕುರಿತು ‘ಟಿವಿ9 ಕನ್ನಡ ಡಿಜಿಟಲ್’ ಸಂಪಾದಕ ಭಾಸ್ಕರ ಹೆಗಡೆ ಅವರ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

ಹುಬ್ಬಳ್ಳಿ ನೇಹಾ ಕೊಲೆ ಕೇಸ್​: ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್ ಸರ್ಕಾರ
ನೇಹಾ ಕೊಲೆ ಕೇಸ್​
Follow us
ಡಾ. ಭಾಸ್ಕರ ಹೆಗಡೆ
| Updated By: ಗಂಗಾಧರ​ ಬ. ಸಾಬೋಜಿ

Updated on:Apr 21, 2024 | 10:01 PM

‘‘ಈ ಹುಡುಗರು ಅರಿತುಕೊಳ್ಳಬೇಕು, ನೋ ಅಂದರೆ ಅದರ ಅರ್ಥ ಇಷ್ಟ ಇಲ್ಲ, ಬೇಡ ಎಂದೇ ಅರ್ಥ. ಇದನ್ನು ಹೇಳುವವರು ಯಾರೇ ಇರಲಿ- ಗರ್ಲ್ ಫ್ರೆಂಡ್ ಇರಲಿ, ಅಥವಾ ವೇಶ್ಯೇಯೇ ಇರಲಿ ಅಥವಾ ಹೆಂಡತಿಯೇ ಇರಲಿ ಇಲ್ಲ ಎಂದರೆ ಇಲ್ಲ. ಆಗ ನೀವು ಮುಂದುವರಿಯಬಾರದು’’ (These boys must realise, na ka matlab na hota hai. Use bolne wali koi parichit ho, girlfriend ho, koi sex worker ho ya aapki apni biwi hi kyu na ho. No means no, and when someone says no, you stop).

ಇದು ‘ಪಿಂಕ್’ ಸಿನಿಮಾದಲ್ಲಿನ ಒಂದು ದೃಶ್ಯದಲ್ಲಿ ವಕೀಲ ದೀಪಕ್ ಸೆಹಗಲ್ ಹೇಳುವ ಮಾತು. ಮಿನಲ್ ಎನ್ನುವ ಹುಡುಗಿ ತನ್ನ ಸ್ನೇಹಿತರ ಜೊತೆ ಸೇರಿ ತನಗಾದ ಲೈಂಗಿಕ ಕಿರುಕುಳ ನೀಡಿದ ರಾಜಕಾರಣಿಯ ಸೋದರಳಿಯನ ವಿರುದ್ಧ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸುತ್ತಾಳೆ. ನಂತರ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಶುರುವಾದಾಗ, ನಿವೃತ್ತ ವಕೀಲ ದೀಪಕ್ ಸೆಹಗಲ್ ಮಿನಲ್ ಪರವಾಗಿ ಈ ರೀತಿ ವಾದಿಸುತ್ತಾನೆ. ಅಮಿತಾಭ್ ಬಚ್ಚನ್ ವಕೀಲ ದೀಪಕ್ ಸೆಹಗಲ್ ಪಾತ್ರ ಮಾಡಿದ್ದಾರೆ. ಹುಬ್ಬಳ್ಳಿಯ ನೇಹಾಳ ಬರ್ಬರ ಹತ್ಯೆ ಮತ್ತು ಅದರ ನಂತರ ನಡೆದ ಬೆಳವಣಿಗೆ ನೋಡಿದಾಗ, ತಾವು ನಿರ್ವಹಿಸಿದ ವಕೀಲನ ಪಾತ್ರದಲ್ಲಿ, ಅಮಿತಾಭ್ ಆಡಿದ ಮಾತು ನೆನಪಾಯಿತು.

ಪಿಂಕ್ ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಿನಾಲ್  ಕೋರ್ಟ್​ ಮೆಟ್ಟಿಲೇರುವಂತಹ ಸಾಮಾಜಿಕ ಪರಿಸ್ಥಿತಿ ಆ ಸಿನಿಮಾದಲ್ಲಿತ್ತು ಆದರೆ ನಿಜ ಜೀವನದಲ್ಲಿ ಪೊರಿಸ್ಥಿತಿಯೇ ಬೇರೆ, ಉಡುಪಿಯ ಐನಾಜ್, ಹುಬ್ಬಳ್ಳಿಯ ನೇಹಾ ಲವ್ ಪ್ರೊಪೋಸಲ್​ಗೆ ‘‘ನೋ’’ ಎಂದರು ಅದಕ್ಕೆ ಬೆಲೆಯಾಗಿ ತಮ್ಮ ಜೀವವನ್ನೇ ತೆತ್ತರು. ಹಾಗಾಗಿ ನಿಜ ಜೀವನ ಮತ್ತೂ ಸಂಕೀರ್ಣ ಎಂಬುದಕ್ಕೆ ಇದು ನಿದರ್ಶನ.

ಹುಬ್ಬಳ್ಳಿಯದು ಹೇಯ ಬರ್ಬರ ಕೃತ್ಯ ಎಂದು ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ. ಅಲ್ಲಿ ಲವ್ ಜಿಹಾದ್ ಇತ್ತು ಎಂಬ ಬಿಜೆಪಿ ಆರೋಪಕ್ಕೆ ಇನ್ನೂ ಸಾಕ್ಷ್ಯ ಸಿಕ್ಕಿಲ್ಲ. ಸಮಾಜದಲ್ಲಿ ನಡೆಯುವ ಅಂತರ್ ಧರ್ಮಿಯ ಕೊಲೆಗಳನ್ನೆಲ್ಲಾ ಲವ್ ಜಿಹಾದ್ ಕೃತ್ಯ ಎಂದು ಹೇಳಿ ಅತಿರಂಜಿತ ಸಂಕಥನ ಹುಟ್ಟು ಹಾಕುವ ಬಿಜೆಪಿಯ ಪ್ರಯತ್ನ ಇಲ್ಲಿ ಸಫಲವಾಗುತ್ತೆ ಎಂದು ಹೇಳಲಾಗದು. ಬಿಜೆಪಿಯ ಆ ಸಂಕಥನಕ್ಕೆ ಒಂದೊಮ್ಮೆ ಸಾಕ್ಷ್ಯಾಧಾರ ಸಿಗದಿದ್ದರೆ ತಾವು ನಗೆಪಾಟಲಿಗೀಡಾಗುತ್ತೇವೆ ಎಂಬ ವ್ಯವಧಾನ ಕೂಡ ಬಿಜೆಪಿ ನಾಯಕರುಗಳಿಗೆ ಇದ್ದಂತೆ ಕಾಣುತ್ತಿಲ್ಲ.

ಹುಬ್ಬಳ್ಳಿಯ ಪ್ರಕರಣದ ಬಗ್ಗೆ ಮತ್ತೆ ಬರೋಣ. ಅದಕ್ಕೂ ಮೊದಲು ನಾವೆಲ್ಲ ಮರೆತ ಉಡುಪಿ ಪ್ರಕರಣವನ್ನು ಒಮ್ಮೆ ಮೆಲುಕು ಹಾಕಿದರೆ ತಪ್ಪಿಲ್ಲ. ಕಳೆದ ವರ್ಷ ನವೆಂಬರಿನಲ್ಲಿ ಉಡುಪಿಯಲ್ಲಿ ಏನು ನಡೀತು? ಒಂದು ರವಿವಾರ ಮುಂಜಾನೆ ಉಡುಪಿ ತಾಲೂಕಿನ ತೃಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆಯಿತು. ಹಸೀನಾ (46) ಮತ್ತು ಆಕೆಯ ಮೂವರು ಮಕ್ಕಳಾದ ಅಫ್ನಾನ್ (23), ಐನಾಜ್ (21), ಮತ್ತು ಅಸೀಮ್ (12) ಚಾಕುವಿನಿಂದ ಇರಿದು ಸಾವನ್ನಪ್ಪಿದರು. ಮತ್ತೋರ್ವ ಕುಟುಂಬದ ಸದಸ್ಯ ಹಾಜಿರಾ (70) ಚೂರಿ ಇರಿತಕ್ಕೆ ಒಳಗಾಗಿದ್ದರು. ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಸಂತೆಕಟ್ಟೆಯಿಂದ ತೃಪ್ತಿನಗರಕ್ಕೆ ಆಟೋ ಬಾಡಿಗೆಗೆ ಪಡೆದ ದುಷ್ಕರ್ಮಿ ಹಸೀನಾ ಅವರ ಮನೆಗೆ ಏಕಾಏಕಿ ನುಗ್ಗಿ ನಾಲ್ವರಿಗೆ ಚಾಕುವಿನಿಂದ ಇರಿದ. ಕೇವಲ ಹದಿನೈದು ನಿಮಿಷಗಳಲ್ಲಿ ಐವರಿಗೆ ಇರಿದ ದಾಳಿಕೋರ ಪರಾರಿಯಾದ. ಆರೋಪಿ ಯಾರು? ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವನಾದ ಪ್ರವೀಣ್ ಚೌಗುಲೆ, ಮಂಗಳೂರಿನಲ್ಲಿ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ. ಮದುವೆ ಆಗಿದ್ದರೂ ಆತ ಅಫ್ನಾಜ್ ಹಿಂದೆ ಬಿದ್ದಿದ್ದ. ಅದು ರಿವರ್ಸ್ ಲವ್ ಜಿಹಾದ್ ಅಂತ ಯಾರೋ ಹೇಳಬಹುದಿತ್ತು. ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ ಮತ್ತು ಕೇಸು ನಡೆಯುತ್ತಿದೆ.

ಉಡುಪಿಯಲ್ಲಿ ಸತ್ತವರು ಕೂಡ ಮಗ್ಧರೇ ಅಲ್ಲವೇ? ಅವರ ಜೀವಕ್ಕೆ ಬೆಲೆ ಇಲ್ಲವೇ? ಆ ಘಟನೆಯಲ್ಲಿ ಯಾಕೆ ಹುಬ್ಬಳ್ಳಿಯ ತರಹದ ಪ್ರತಿಕ್ರಿಯೆ ಬರಲಿಲ್ಲ? ಅವನು ಹಿಂದೂ. ಆಕೆ ಮುಸ್ಲಿಂ. ಹಾಗಾಗಿ ಈ ರೀತಿಯ ಪ್ರತಿಕ್ರಿಯೆ ಬರಲಿಲ್ಲ ಎಂಬುದು ಹಳಸಲು ವಾದ. ಉಡುಪಿ ಕೇಸಿನಲ್ಲಿ ಬಲಪಂಥೀಯರಿಗೆ ಆ ಹೆಣ್ಣುಮಗಳು ಅವನ ಜೊತೆ ನಿಂತ ಫೋಟೋ ಸಿಕ್ಕಿದ್ದರೆ ಏನು ಆಗುತ್ತಿತ್ತೋ ಗೊತ್ತಿಲ್ಲ. ಆಗ, ಖಂಡಿತವಾಗಿ, ಐನಾಜ್​ಳ ನಡತೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡುತ್ತಿದ್ದರು. ಹುಬ್ಬಳ್ಳಿ ಕೇಸಿನಂತೆ ಅಲ್ಲಿ ಕೂಡ ಪೋಲಿಸರು ಬಹಳ ಮುತುವರ್ಜಿವಹಿಸಿ ಕೇಸನ್ನು ಭೇದಿಸಿದ್ದಾರೆ. ಹುಬ್ಬಳ್ಳಿಯದು ಕೂಡ ಒಂದು ಕೊಲೆ. ಅದು ಕಾನೂನು ಸುವ್ಯವಸ್ಥೆಯ ವಿಚಾರ, ಹಾಗಾಗಿ ಪೋಲಿಸರಿಗೆ ಬಿಡೋಣ ಎಂದು ಸುಮ್ಮನಾಗಿದ್ದರೆ ಪ್ರಾಯಶಃ ಇದು ಈ ರೀತಿ ತಿರುವು ಪಡೆಯುತ್ತಿರಲಿಲ್ಲ.

ಉಡುಪಿ ಕೇಸಿನಲ್ಲಿ ಆರೋಪಿ ಪರ ಮಾತಾಡಲು ಯಾವ ಬಿಜೆಪಿ, ಪ್ರಗತಿ-ವಿರೋಧಿಗಳು ಬಂದಿಲ್ಲ. ಆತ ಹಿಂದೂ ಆಗಿದ್ದರಿಂದ ಬಂದಿಲ್ಲ ಎಂಬ ಕಾರಣ ಖಂಡಿತವಾಗಿ ಇರಬಹುದು. ಇದು ನಿರ್ಣಾಯಕ ವಿಚಾರ.

ಹುಬ್ಭಳ್ಳಿಯ ಕೇಸಿನ ಬೆಳವಣಿಗೆಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಮೊದಲು ಬಿಜೆಪಿ ನಾಯಕರು ಇದನ್ನು ಲವ್ ಜಿಹಾದ್ ಕೇಸ್ ಎಂದು ಕರೆದರು. ಅದು ಅಲ್ಲಿಗೆ ನಿಲ್ಲುತ್ತಿತ್ತೇನೋ? ಅದು ನಿಲ್ಲದೇ ಇರಲು ಪೋಲಿಸರು ಮಾಡಿದ ಒಂದು ಎಡವಟ್ಟು ಎಲ್ಲದಕ್ಕೂ ಕಾರಣವಾಯ್ತು. ಅದರ ಜೊತೆಗೆ ಕಾಂಗ್ರೆಸ್ ನಾಯಕರು, ಗೃಹ ಮಂತ್ರಿ, ಮುಖ್ಯಮಂತ್ರಿ ಮತ್ತು ಆ ಫಯಾಜನ ತಂದೆ ತಾಯಿ ನೀಡಿದ ಹೇಳಿಕೆಗಳು ಈ ಘಟನೆ ಕೈ ಮೀರಲು ಕಾರಣವಾಗಿದೆ.

ಬೇರೆ ಬೇರೆ ಲವ್ ಕೇಸ್​ನಲ್ಲಿ ಮಾಡುವಂತೆ ಶುಕ್ರವಾರ ಬೆಳಿಗ್ಗೆ ಯಾರೋ (ಪ್ರಾಯಶಃ ಪೋಲಿಸರೇ ಇರಬಹುದು) ನೇಹಾ ಮತ್ತು ಫಯಾಜ್ ಒಟ್ಟಿಗೆ ಇದ್ದ ಫೋಟೋ ಬಿಟ್ಟರು. ಉಡುಪಿ ಕೇಸಲ್ಲಿ ಹೀಗಾಗಲ್ಲ. ಆ ಮೇಲೆ ಗ್ರಹ ಮಂತ್ರಿ ಡಾ ಜಿ. ಪರಮೇಶ್ವರ್ ಇದು ಲವ್ ಕೇಸ್ ಎಂದು ಹೇಳಿದರು. ಆಮೇಲೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈ ಸಾವು ವೈಯಕ್ತಿಕ ಕಾರಣಕ್ಕೆ ಆಗಿದ್ದು ಎಂದು ಬಣ್ಣಿಸಿದರು. ಅದು ನೇಹಾಳ ತಂದೆಯನ್ನು ಇನ್ನಷ್ಟು ಕಂಗಾಲು ಮಾಡಿದ್ದರಿಂದ ಅವರು ತಮ್ಮ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧವೇ ಪ್ರತಿಕ್ರಿಯಿಸಿದರುಆಗ, ಈ ಬೆಳವಣಿಗೆ ಕೈ ಮೀರಿ ಹೋಗಲು ಕಾರಣವಾಯಿತು ಎಂಬುದನ್ನು ಗಮನಿಸಬೇಕು.

ಪರಮೇಶ್ವರ್ ಶನಿವಾರ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಶುಕ್ರವಾರದ ಅವರ ಹೇಳಿಕೆ ಅಪಾರ್ಥಕ್ಕೀಡು ಮಾಡಿದೆ. ಲವ್ ಕೇಸ್ ಫೇಲ್ ಆದರೆ ಹುಡುಗ ಹುಡುಗಿಯನ್ನು ಕೊಲ್ಲಬಹುದು ಎಂಬ ಅರ್ಥವೇ? ಅಥವಾ ‘ವೈಯಕ್ತಿಕ ಕಾರಣ’ಕ್ಕೆ ಆದ ಸಾವು ಎಂದು ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಎರಡು ಪ್ರಮುಖ ಅಂಶ ಮರೆತರೇ? ಒಂದು: ವೈಯಕ್ತಿಕ ಕಾರಣಕ್ಕಾಗಿ ಆದ ಕೊಲೆ. ಅದನ್ನು ಸರಕಾರ ಹೇಗೆ ತಡೆಯೋಕೆ ಆಗುತ್ತಿತ್ತು ಎಂಬತ್ತಿತ್ತು ಅವರ ಧ್ವನಿ. ಎಲ್ಲಕ್ಕಿಂತ ಮುಖ್ಯವಾಗಿ ‘ವಕೀಲ ಸಿದ್ಧರಾಮಯ್ಯನವರಿಗೆ ಗೊತ್ತಿರಬೇಕಾಗಿತ್ತು: ಇದು ಕೊಲೆ ಆದ್ದರಿಂದ ಇದೊಂದು ಕ್ರಿಮಿನಲ್ ಕೇಸ್. ​ ಕರ್ನಾಟಕ ಸರ್ಕಾರ vs ಫಯಾಜ್ ಎಂಬ ರೀತಿಯಲ್ಲಿ ಕೋರ್ಟಿನಲ್ಲಿ ಕೇಸು ನಡೆಯುತ್ತದೆ. ಅಂದರೆ ಸರಕಾರವೇ ಒಂದು ಪಕ್ಷ ಅಲ್ಲ. ಅಲ್ಲಿ ಇಬ್ಬರ ನಡುವಿನ ವೈಯಕ್ತಿಕ ಕೇಸ್ ಅಲ್ಲ. ಆದ್ದರಿಂದ ಕಾನೂನಿನ ದೃಷ್ಟಿಯಿಂದ ಮತ್ತು ತಾಂತ್ರಿಕವಾಗಿ ಕೂಡ ಮುಖ್ಯಮಂತ್ರಿ ಹೇಳಿಕ್ಕೆ ತಪ್ಪಾಗಿದೆ. ಇದು ಕೂಡ ಈ ರೀತಿಯ ಪ್ರತಿಕ್ರಿಯೆಗೆ ಕಾರಣ ಆಗಿರಬಹುದು.

ಪೋಲಿಸರು ಮಾಡುವುದು ಹೀಗೇಕೆ?

ಘಟನೆ ನಡೆದ ಸುಮಾರು ಹನ್ನೆರಡು ತಾಸಿನ ನಂತರ, ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಆರೋಪಿ ಜೊತೆ ನೇಹಾ ಇರುವ ಫೋಟೊ ಹರಿಬಿಡಲಾಯಿತು. ಅದು ಯಾಕೆಂದರೆ, ಪೋಲಿಸರು ಮಾಡೋದೆ ಹಾಗೆ. ಹುಡುಗಿ ಅಥವಾ ಹೆಣ್ಣಿನ ನೈತಿಕತೆ ಬಗ್ಗೆ ಒಂದಿಷ್ಟು ಸಾಕ್ಷ್ಯಾಧಾರವನ್ನು ಸಾರ್ವಜನಿಕವಾಗಿ ಹರಿಬಿಟ್ಟರೆ ಈ ಸಿಟ್ಟು ಮತ್ತು ಸಾರ್ವಜನಿಕರ ಗಲಾಟೆ ನಿಯಂತ್ರಣಕ್ಕೆ ಬರುತ್ತೆ ಎಂಬುದು ಪೋಲಿಸರ ಲೆಕ್ಕಾಚಾರ ಇರಬಹುದು. ಇದು ಇಂದು ನಿನ್ನೆಯದಲ್ಲ. ಅನೂಚಾನವಾಗಿ ನಡೆದುಕೊಂಡು ಬಂದಿರುವ ತಂತ್ರಗಾರಿಕೆ. ಯಾವುದೇ ಸರ್ಕಾರ ಇದ್ದರೂ ಪೋಲಿಸರು ಮಾಡುವುದು ಹೀಗೆ. ಉಡುಪಿ ಕೇಸಲ್ಲಿ ಹೀಗಾಗಲಿಲ್ಲ. ಯಾಕೆಂದರೆ, ಅಲ್ಲಿ ಸಾರ್ವನಿಕರ ಸಿಟ್ಟು ಇದ್ದರೂ ಪೋಲಿಸರು ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಯಾವಾಗ ಹುಬ್ಬಳ್ಳಿ ಕೇಸ್ ಉಗ್ರ ರೂಪ ತಳೆಯುತ್ತೆ ಅಂತ ಗೊತ್ತಾಯ್ತೋ, ಆಗ ಒಂದೆಡೆ ಹುಡುಗನ ತಂದೆ ತಾಯಿ ಕ್ಯಾಮೆರಾ ಮುಂದೆ ಬಂದು ನಮ್ಮ ಮಗ ಮತ್ತು ಹುಡುಗಿ ಪ್ರೇಮದಲ್ಲಿದ್ದರು ಎಂದು ಹೇಳುತ್ತ (ಅದೇ ಪೋಲಿಸರು ತೋರಿಸಿದ ನೈತಿಕ ಅಧಃಪತನದ ಗುರುತು ಎನ್ನೋ ತರದಲ್ಲಿ. ಅಂದರೆ ಈ ಪ್ರೀತಿಗೆ ಅವಳ ಒಪ್ಪಿಗೆ ಇತ್ತು ಎನ್ನುವ ಅರ್ಥ ಬರುವ ತರ) ಹೇಳುತ್ತಲೇ ತಮ್ಮ ಮಗ ಮಾಡಿದ್ದು ಸರಿ ಅಲ್ಲ, ಅವನಿಗೆ ಶಿಕ್ಷೆ ಆಗಬೇಕು ಎಂದು ಹೇಳಿ ತಿಪ್ಪೆ ಸಾರಿಸಿದರು. ಉಡುಪಿ ಕೇಸಿನಲ್ಲಿ ಯಾರು ಆ ಚೌಗುಲೆಯ ಸಂಬಂಧಿಕರು ಕ್ಯಾಮರಾ ಮುಂದೆ ಬಂದು ಏನು ಹೇಳಲಿಲ್ಲ. ಅದೊಂದು ಅತ್ಯಂತ ಘೋರ ಕೊಲೆ ಆಗಿತ್ತು. ಮಾಡಿದವನ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಅವನಿಗೆ ಶಿಕ್ಷೆ ಆಗಬೇಕು ಎಂಬುದು ಎಲ್ಲರ ಅಭಿಪ್ರಾಯ ಇತ್ತು.

ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ: 3 ತಿಂಗಳ ಹಿಂದೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದ ಆರೋಪಿ ಫಯಾಜ್

ಈಗ ಮತ್ತೆ ಅದೇ ಪಿಂಕ್ ಸಿನಿಮಾದ ಆ ದೃಶ್ಯಕ್ಕೆ ಬರೋಣ. ಪೋಲಿಸರು, ಗೃಹ ಮಂತ್ರಿ ಮತ್ತು ಮುಖ್ಯಮಂತ್ರಿ ಈ ಸಂಭಾಷಣೆಯ ತುಣುಕನ್ನು ಗಂಭೀರವಾಗಿ ಕೇಳಲಿ ಮತ್ತು ಸಾಧ್ಯ ಆದರೆ ನೋಡಲಿ. ಲೈಂಗಿಕ ದೌರ್ಜನ್ಯ ಇರಲಿ, ಅಥವಾ ಇಂತಹ ಘೋರ ಕೃತ್ಯ, ಕೊಲೆ ನಡೆದಿರಲಿ. ಹುಡುಗಿಯ ನಡತೆ ಬಗ್ಗೆ ಸಾರ್ವಜನಿಕವಾಗಿ ಒಂದಿಷ್ಟು ಸಾಕ್ಷ್ಯಾಧಾರ ಹರಿಬಿಟ್ಟು ಸಾರ್ವಜನಿಕರ ಸಿಟ್ಟನ್ನು ಮಟ್ಟ ಹಾಕುವ ಪ್ರಯತ್ನ ಬಿಡಿ. ಆಗ ಈ ರೀತಿಯ ಹೇಳಿಕೆ ಕೊಡುವ ಚಾಳಿ ನಿಲ್ಲಬಹುದು. ವೈಯಕ್ತಿಕ ಲವ್ ಫೇಲ್ಯೂರ್ ಆಗಿದ್ದಕ್ಕೆ ನಡೆಯಿತು ಈ ಕೊಲೆ, ಇದಕ್ಕೆ ರಾಜ್ಯ ಸರ್ಕಾರ (State) ಜವಾಬ್ದಾರಿ ಆಗುವುದಿಲ್ಲ ಎಂದು ಜಾರಿಕೊಳ್ಳುವ ಜಾಣತನಕ್ಕೆ ಈ ಬಾರಿ ಕೊನೆ ಹಾಡಲೇಬೇಕು.

ಹುಡುಗಿ ನಡತೆ ಇಟ್ಟುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಬೇರೆ ಬೇರೆ ಹುದ್ದೆಯಲ್ಲಿರುವವರು ಈ ರೀತಿಯ ಪ್ರಕರಣಗಳು ಬಂದಾಗ ತಾವು ನೀಡುವ ಪ್ರತಿಕ್ರಿಯೆ ಬಗ್ಗೆ ಎಚ್ಚರವಿರಬೇಕು. ಹುಡುಗಿಯ ನಡತೆಯನ್ನಿಟ್ಟುಕೊಂಡು ಗಾಳಿ ಸುದ್ದಿ ಹಬ್ಬಿಸಿ ಇಡೀ ಪ್ರಕರಣವನ್ನು ದಾರಿ ತಪ್ಪಿಸುವ ಹುನ್ನಾರ ಯಾವತ್ತೂ ನಡೆಯುವುದಿಲ್ಲ.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Sat, 20 April 24

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!