ಭಾವೈಕ್ಯತೆಗೆ ಸಾಕ್ಷಿಯಾದ ಬಾಗಲಕೋಟೆ: ಮೊಹರಂಗೆ ಮೆರಗು ನೀಡಿದ ಹುಲಿಕುಣಿತ, ಡೊಳ್ಳು ಕುಣಿತ
ಬಾಗಲಕೋಟೆಯಲ್ಲಿ ಮೊಹರಂ ಹಬ್ಬವು ಧರ್ಮ-ಜಾತಿ ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಅಣ್ಣ-ತಮ್ಮಂದಿರಂತೆ ಸಂಭ್ರಮದಿಂದ ಆಚರಿಸಿದರು. ವಲ್ಲಭಬಾಯಿ ವೃತ್ತದಲ್ಲಿ 25-30 ಅಡಿ ತಾಝಿಯಾಗಳು, ಹುಲಿವೇಷ, ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಯಿತು. ಅಲಾವಿ ದೇವರುಗಳ ಸಮಾಗಮವು ಈ ಹಬ್ಬದ ವಿಶೇಷ. ಇದು ಸಹೋದರತ್ವ ಮತ್ತು ಸಾಂಸ್ಕೃತಿಕ ಸೌಹಾರ್ದಕ್ಕೆ ಮಾದರಿಯಾಗಿದೆ.
Updated on: Jun 26, 2026 | 10:54 PM

ನಾಡಿನಲ್ಲಿ ಹಲವು ಹಬ್ಬಗಳು ಬರುತ್ತವೆ. ಆದರೆ ಮೊಹರಂ ಎರಡು ಧರ್ಮಗಳ ಬಾಂಧವ್ಯ ಬೆಸೆಯುವ ಅಪರೂಪದ ಹಬ್ಬ. ಬಾಗಲಕೋಟೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಸೇರಿ ಈ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ.

ನಗರದ ವಲ್ಲಭಬಾಯಿ ವೃತ್ತದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಹಬ್ಬ ಜರುಗಿತು. ಅಲಾವಿ ಪಂಜಾ ದೇವರುಗಳ ಭವ್ಯ ಮೆರವಣಿಗೆಯಲ್ಲಿ 25-30 ಅಡಿ ಎತ್ತರದ ಬಣ್ಣಬಣ್ಣದ ತಾಝಿಯಾಗಳನ್ನು ಯುವಕರು ತೂಗಿಸುತ್ತಾ ಸಾಗಿದರು. ತಮಟೆ ಹಾಗೂ ಡೊಳ್ಳು ವಾದ್ಯಗಳ ನಾದ ಮೆರವಣಿಗೆಗೆ ಕಳೆಕಟ್ಟಿತು.

ಹರಕೆ ತೀರಿಸಲು ಭಕ್ತರು ಹುಲಿವೇಷಧಾರಿ ನೃತ್ಯ ಸೇವೆ ನಡೆಸಿದರು. ದೇಹಕ್ಕೆ ಹಳದಿ-ಕಪ್ಪು ಬಣ್ಣ ಬಳಿದುಕೊಂಡು ವೇಷಧಾರಿಗಳು ಕುಣಿದು ಎಲ್ಲರ ಗಮನ ಸೆಳೆದರು. ಎರಡು ಸಮುದಾಯದ ಜನರು ಅಲಾವಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾದರು.

ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾವಿ ದೇವರುಗಳು ವಲ್ಲಭಬಾಯಿ ವೃತ್ತದಲ್ಲಿ ಒಂದಾಗಿ ಸಮಾಗಮಗೊಂಡವು. ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರು ತಮ್ಮ ಮನೆಗಳ ಬಾಲ್ಕನಿ ಹಾಗೂ ಟೆರೇಸ್ ಮೇಲೆ ನಿಂತು ವೀಕ್ಷಿಸಿದರು. ಇತ್ತ ಗ್ರಾಮೀಣ ಭಾಗದಲ್ಲೂ ಮೊಹರಂ ಅದ್ದೂರಿಯಾಗಿ ನೆರವೇರಿತು.

ಬಾಗಲಕೋಟೆ ತಾಲೂಕಿನ ಕರಡಿ ಗ್ರಾಮದಲ್ಲಿ ಅಲಾವಿ ದೇವರನ್ನು ಊರ ತುಂಬಾ ಮೆರವಣಿಗೆ ಮಾಡಲಾಯಿತು. ಮೊಹರಂ ಹಬ್ಬ ಹಿನ್ನೆಲೆ ವಿಶೇಷ ಹಾಡುಗಳಿಗೆ ಯುವಕರು ಒಟ್ಟಾಗಿ ಹೆಜ್ಜೆ ಹಾಕಿದರು. ಇಲ್ಲಿ ಯಾವುದೇ ಭೇದವಿಲ್ಲದೆ, ಎಲ್ಲರೂ ಅಣ್ಣ-ತಮ್ಮಂದಿರಂತೆ ಹಬ್ಬ ಆಚರಿಸುತ್ತೇವೆ ಎಂದು ಹಿಂದೂ ಬಾಂಧವರು ಹೆಮ್ಮೆಯಿಂದ ಹೇಳಿದರು.

ಹೀಗೆ ಬಾಗಲಕೋಟೆಯಲ್ಲಿ ಜರುಗಿದ ಮೊಹರಂ ಹಬ್ಬವು ಧರ್ಮ ಮತ್ತು ಜಾತಿಯ ಗಡಿಗಳನ್ನು ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಯಿತು. ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಕ್ಕರೆಯಂತೆ ಪರಸ್ಪರ ಬೆರೆತು ಆಚರಿಸಿದ ಈ ಸೌಹಾರ್ದತೆಯ ಹಬ್ಬ ಇಡೀ ನಾಡಿಗೆ ಮಾದರಿಯಾಗಿದೆ.




