- Kannada News Photo gallery Bengaluru Rain Chaos: KR Circle Underpass Blocked, Hundreds of Houses Flooded in Nagawara as Stormwater Drain Overflows
Bangalore rains: ಅರ್ಧ ಗಂಟೆಯ ಭಾರಿ ಮಳೆಗೇ ನಲುಗಿದ ಬೆಂಗಳೂರು, ಅವಾಂತರಗಳ ಸರಮಾಲೆ
ಬೆಂಗಳೂರು, ಮೇ 19: ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಅಧಿಕೃತವಾಗಿ ಆರಂಭವಾಗುವ ಮುನ್ನವೇ ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ. ಸೋಮವಾರ ಸಂಜೆ ಹಾಗೂ ರಾತ್ರಿ ಸುರಿದ ಕೇವಲ ಅರ್ಧ ಗಂಟೆಯ ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ.
Updated on: May 19, 2026 | 7:12 AM

ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ತೀವ್ರ ಪರದಾಟ ನಡೆಸುವಂತಾಯಿತು. ನಗರದ ಹೃದಯಭಾಗದಲ್ಲಿರುವ ಕೆ.ಆರ್. ಸರ್ಕಲ್ ಅಂಡರ್ಪಾಸ್ ಸಾಧಾರಣ ಮಳೆಗೆ ಕೆರೆಯಂತಾಗಿದ್ದು, ನಾಲ್ಕರಿಂದ ಐದು ಅಡಿಯಷ್ಟು ನೀರು ನಿಂತಿತು.

ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ಕೆ.ಆರ್. ಸರ್ಕಲ್ ಅಂಡರ್ಪಾಸ್ಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಿದರು. ಇದರ ಬಿಸಿ ಸುತ್ತಮುತ್ತಲಿನ ರಸ್ತೆಗಳಿಗೆ ತಟ್ಟಿದ್ದು, ಆಸ್ಪತ್ರೆಗೆ ತೆರಳಬೇಕಿದ್ದ ರೋಗಿಗಳು ಹಾಗೂ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು.

ಪ್ರತಿ ವರ್ಷ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಎದುರಾಗುತ್ತಿದ್ದರೂ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಮಳೆಯ ಅವಾಂತರ ನಾಗವಾರದ ಎಂ.ಎಸ್. ರಾಮಯ್ಯ ನಾರ್ತ್ ಸಿಟಿ ಲೇಔಟ್ನಲ್ಲಿ ಭೀಕರ ರೂಪ ಪಡೆದಿದೆ. ರಾಜಕಾಲುವೆಯ ಕೊಳಚೆ ನೀರು ಲೇಔಟ್ ಒಳಗೆ ನುಗ್ಗಿದ ಪರಿಣಾಮ ನೂರಾರು ಮನೆಗಳು ಜಲಾವೃತಗೊಂಡವು. ಲೇಔಟ್ನ ಒಟ್ಟು ಹತ್ತು ಕ್ರಾಸ್ಗಳ ಪೈಕಿ ಏಳಕ್ಕೂ ಹೆಚ್ಚು ಕ್ರಾಸ್ಗಳು ಸಂಪೂರ್ಣ ಮುಳುಗಡೆಯಾಗಿವೆ.

ರಾಜಕಾಲುವೆ ಅಗಲೀಕರಣದ ಕಾಮಗಾರಿಯನ್ನು ಮಳೆಗಾಲದ ಮುನ್ನ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿರುವುದು ಹಾಗೂ ಹಳೆಯ ಕಾಲುವೆಯನ್ನು ಒಡೆದಿರುವುದೇ ಈ ಭಾರಿ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿವಾಸಿಗಳು ತಮ್ಮ ಮನೆಗಳಿಗೆ ನುಗ್ಗಿರುವ ಕೊಳಚೆ ನೀರನ್ನು ಹೊರಹಾಕಲು ರಾತ್ರಿಯಿಡೀ ಪರದಾಡಿದ್ದಾರೆ. ಇಷ್ಟೇ ಅಲ್ಲದೆ, ಎಚ್ಬಿಆರ್ ಲೇಔಟ್ ರಸ್ತೆಗಳು ಜಲಾವೃತಗೊಂಡಿದ್ದು, ಹೊರಮಾವು ಬಳಿಯ ಎಸ್ಎಲ್ವಿ ವಜ್ರ ಅಪಾರ್ಟ್ಮೆಂಟ್ ಆವರಣಕ್ಕೂ ನೀರು ನುಗ್ಗಿ ಬೆಲೆಬಾಳುವ ಕಾರುಗಳು ಮುಳುಗಡೆಯಾಗಿವೆ. ಮುಂಗಾರು ಆರಂಭಕ್ಕೂ ಮುನ್ನವೇ ಬಿಬಿಎಂಪಿ ಅಧಿಕಾರಿಗಳ ಉದಾಸೀನತೆಯಿಂದಾಗಿ ಬೆಂಗಳೂರಿಗರಿಗೆ ಮಳೆಯ ಗಂಡಾಂತರ ಎದುರಾಗಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.
Read More
