AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಸ್ವರೂಪ ಪಡೆದ ಬಿಡದಿ ಟೌನ್​​ಶಿಪ್ ವಿವಾದ: ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ

ಬಿಡದಿ ಟೌನ್ ಶಿಪ್ ಯೋಜನೆ ಪರ ವಿರೋಧದ ರಾಜಕೀಯ ಹೋರಾಟ ಮತ್ತೊಂದು ಹಂತ ತಲುಪಿದ್ದು, ಇದೀಗ ರಾಜಕೀಯ ನಾಯಕರು ಪರಸ್ಪರ ವೈಯಕ್ತಿಯಕವಾಗಿ ಆರೋಪ ಪ್ರತ್ಯಾರೋಪಕ್ಕಿಳಿದಿದ್ದಾರೆ. ಹೌದು...ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಭಷ್ಟ್ರಾಚಾರದ ಆರೋಪ ಮಾಡಿದ್ದ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ಹೆಚ್​​​​ಸಿ ಬಾಲಕೃಷ್ಣ, ಡಿಎಲ್ಎಫ್ ಗೆ ಟೆಂಡರ್ ಡೀಲ್ ಬಗ್ಗೆ ಪ್ರಸ್ತಾಪಿಸಿ ಕೌಂಟರ್ ಕೊಟ್ಟಿದ್ದಾರೆ.

ಮತ್ತೊಂದು ಸ್ವರೂಪ ಪಡೆದ ಬಿಡದಿ ಟೌನ್​​ಶಿಪ್ ವಿವಾದ: ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ
Balakrishna And Hd Kumaraswamy
ರಮೇಶ್ ಬಿ. ಜವಳಗೇರಾ
|

Updated on: Jul 18, 2026 | 4:13 PM

Share

ಮುಖ್ಯಾಂಶಗಳು

  • ಬಿಡದಿ ಟೌನ್​​​ಶಿಪ್ ವಿಚಾರಕ್ಕೆ ವೈಯಕ್ತಿ ಆರೋಪ ಪ್ರತ್ಯಾರೋಪಕ್ಕಿಳಿದ ರಾಜಕೀಯ ನಾಯಕರು
  • ಡಿಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಕುಮಾರಸ್ವಾಮಿಗೆ ಶಾಸಕ ಬಾಲಕೃಷ್ಣ ಕೌಂಟರ್
  • ಡಿಎಲ್ಎಫ್ ಗೆ ಟೆಂಡರ್ ಕೊಟ್ಟ ಕುಮಾರಸ್ವಾಮಿ ಪಡೆದ ಕಿಕ್ ಬ್ಯಾಕ್ ಎಷ್ಟು? ಎಂದು ಪ್ರಶ್ನಿಸಿದ ಬಾಲಕೃಷ್ಣ

ಬೆಂಗಳೂರು, (ಜುಲೈ 18): ಬಿಡದಿ ಟೌನ್ ಶಿಪ್ (bidadi township) ವಿಚಾರಕ್ಕೆ ಸಂಬಂಧ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವಿನ ಟೀಕೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ವೈಯಕ್ತಿವಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಹೌದು….ಸಿಎಂ ಡಿಕೆ ಶಿವಕುಮಾರ್ (DK Shivakumar) ಮೇಲೆ ಭಷ್ಟ್ರಾಚಾರ ಆರೋಪ ಮಾಡಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಡಿಎಲ್ಎಫ್ ಗೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿದೆ. “ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದು ಕಾಂಗ್ರೆಸ್ ಶಾಸಕ ಹೆಚ್​​​​ಸಿ ಬಾಲಕೃಷ್ಣ  (HC Balakrishna) ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಡದಿ ಟೌನ್ ಶಿಪ್ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ,“ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಕುಮಾರಸ್ವಾಮಿ ಅವರೇ ಹೇಳಬೇಕು. ಕುಮಾರಸ್ವಾಮಿ ಅವರು ಈ ಯೋಜನೆ ಮಾಡುವಾಗ ಡಿಸಿಎಂ ಆಗಿದ್ದು ಯಡಿಯೂರಪ್ಪನವರು. ಕನಿಷ್ಠ ಸೌಜನ್ಯಕ್ಕಾದರೂ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಭೆ ಮಾಡಲಿಲ್ಲ. ಶಿವಕುಮಾರ್ ಅವರು ಕಿಕ್ ಬ್ಯಾಕ್ ಪಡೆದು ಕೇಂದ್ರದ ನಾಯಕರಿಗೆ ಕಳುಹಿಸುತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನೇಕ ಬಾರಿ ಆರೋಪಿಸಿದ್ದಾರೆ. ಡಿಎಲ್ಎಫ್ ಗೆ ಜಾಗತಿಕ ಟೆಂಡರ್ ನೀಡುವಾಗ ಕುಮಾರಸ್ವಾಮಿ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು? ಡಿಎಲ್ಎಫ್ ಅವರು ಕೊಟ್ಟ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ ಜಾಗತಿಕ ಮುಗ್ಗಟ್ಟಿನಲ್ಲಿ ಈ ಯೋಜನೆ ಮಾಡುವುದು ಅಸಾಧ್ಯ ಎಂದು ಡಿಎಲ್ಎಫ್ ಹಿಂದಕ್ಕೆ ಸರಿದಾಗ ಇವರು 400 ಕೋಟಿ ಹಣ ವಾಪಸ್ ನೀಡಿದಾಗ ಯಡಿಯೂರಪ್ಪನವರು ಎಷ್ಟು ಕಿಕ್ ಬ್ಯಾಕ್ ಪಡೆದರು? ಅದರಲ್ಲಿ ಅವರ ಕೇಂದ್ರದ ನಾಯಕರಿಗೆ ಎಷ್ಟು ಪಾಲು ನೀಡಿದರು?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ದೋಸ್ತಿಯಲ್ಲಿ ಕುಸ್ತಿ: ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಪ್ರತ್ಯೇಕ ಪಾದಯಾತ್ರೆ ಘೋಷಿಸಿದ ಜೆಡಿಎಸ್

“2019ರಲ್ಲಿ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಐಎಡಿಬಿಗೆ 1 ಸಾವಿರ ಎಕರೆ ಟೌನ್ ಶಿಪ್ ಭೂಮಿಯನ್ನು ಹಸ್ತಾಂತರ ಮಾಡಿದರು. ಆಗ ಕೈಗಾರಿಕಾ ಸಚಿವರಾಗಿದ್ದವರು ಜಗದೀಶ್ ಶೆಟ್ಟರ್ ಅವರು. ಈ ಸಂದರ್ಭದಲ್ಲಿ ಕಿಕ್ ಬ್ಯಾಕ್ ಪಡೆದು ಈ ಭೂಮಿಯನ್ನು ಕೆಐಎಡಿಬಿಗೆ ನೀಡಿದ್ದಾರೆ ಎಂದು ಇದೇ ಕುಮಾರಸ್ವಾಮಿ ಅವರು ಆರೋಪಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಅವರೇ ಹೇಳಬೇಕು. ನಾಲ್ಕೈದು ವರ್ಷಗಳ ಹಿಂದೆ ಕೇವಲ 80 ಲಕ್ಷದಿಂದ 1 ಕೋಟಿವರೆಗೆ ಭೂಮಿ ಪಡೆದಿದ್ದರು. ಈಗ ನಮ್ಮ ಸರ್ಕಾರ 2.50 ಕೋಟಿವರೆಗೂ ಪರಿಹಾರ ನೀಡುತ್ತಿದೆ. ಆ ಸಂದರ್ಭದಲ್ಲಿ ನಾನು ಮಾಜಿ ಶಾಸಕನಾಗಿ ಸ್ಥಳಕ್ಕೆ ಹೋಗಿ ಹೋರಾಟ ಮಾಡಿದೆ. ಈ ಭಾಗವನ್ನು ಕೆಂಪು ವಲಯದಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದೆ ಎಂದು ಯಡಿಯೂರಪ್ಪನವರ ಬಳಿ ನಿಯೋಗ ತೆಗೆದುಕೊಂಡು ಹೋಗಿ ಮನವಿ ನೀಡಿದ್ದೆ” ಎಂದು ತಿಳಿಸಿದರು.

ಯಡಿಯೂರಪ್ಪ ಸರ್ಕಾರದಲ್ಲಿ ಯೋಜನೆ ಮಾಡಲು ಸಮಿತಿ ಶಿಫಾರಸ್ಸು

“ಈಗ ಹಸಿರು ಶಾಲು ಹಾಕಿಕೊಂಡು ಹೋರಾಟ ಮಾಡುತ್ತಿರುವ ಯಡಿಯೂರಪ್ಪನವರು ನಂತರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಮಾಡಿ ರೈತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ನಂತರ 18-05-2021ರಂದು ಯಡಿಯೂರಪ್ಪನವರು ಅಧಿಸೂಚನೆ ಹೊರಡಿಸಿ, ಬೆಂಗಳೂರಿನ ಸಮೀಪ ಹೂಡಿಕೆ ಸಾಧ್ಯತೆ ಇರುವುದರಿಂದ ಟೌನ್ ಶಿಪ್ ಗಳ ಅಗತ್ಯವಿರುತ್ತದೆ. ಅದಕ್ಕೆ ಈ 9 ಸಾವಿರ ಎಕರೆ ಭೂಮಿ ಟೌನ್ ಶಿಪ್ ಯೋಜನೆಗೆ ಸೂಕ್ತವಾಗಿರುತ್ತದೆ ಎಂದು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮುಖ್ಯ ಕಾರ್ಯದರ್ಶಿಗಳು ತೀರ್ಮಾನ ಮಾಡಿದರು. 35% ಕೈಗಾರಿಕೆ, 35% ವಸತಿಗಾಗಿ ಹಾಗೂ ಉಳಿದ ಪ್ರದೇಶವನ್ನು ಇತರೆ ಕಾಮಗಾರಿಗಳಿಗೆ ಬಳಿಸಿ ಟೌನ್ ಶಿಪ್ ಯೋಜನೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಂತರ ಬಂದ ಬೊಮ್ಮಾಯಿ ಅವರು ಇದನ್ನು ನವನಗರ ಇಂಟಿಗ್ರೇಡೆಟ್ ಟೌನ್ ಶಿಪ್ ಮಾಡಲು ಬಜೆಟ್ ನಲ್ಲಿ ಮಂಡಿಸಿದರು” ಎಂದು ತಿಳಿಸಿದರು.

“ವಿಜಯೇಂದ್ರಣ್ಣ ನೀವು ಪಶ್ಚಾತಾಪ ಯಾತ್ರೆ ಮಾಡುವ ಮುನ್ನ ನಿಮ್ಮ ತಂದೆಯವರು ಸಿಎಂ ಆಗಿದ್ದಾಗ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಿಮ್ಮನ್ನು ಭೇಟಿ ಮಾಡಿದಾಗ ನೀವು ಏರೋನಾಟಿಕ್ ಕಂಪನಿ ಬಂಡವಾಳ ಹೂಡಿಕೆ ಮಾಡಲು ಬರುತ್ತಿದೆ. ದಯಮಾಡಿ ಗಲಾಟೆ ಮಾಡಬೇಡಿ ನಿಮಗೆ ಉತ್ತಮ ಪರಿಹಾರ ಕೊಡಿಸುತ್ತೇವೆ ಎಂದು ಹೇಳಿದ್ದನ್ನು ಮರೆತುಬಿಟ್ಟಿದ್ದೀರಾ? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಸಿ.ಟಿ ರವಿ ಅವರು ರಾಜ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದು ಹೇಳಿದ್ದಾರೆ. ರವಿ ಅವರು ಈ ಮಾತನ್ನು ಯಡಿಯೂರಪ್ಪನವರಿಗೆ ಹೇಳಿದರಾ? ರವಿ ಅಣ್ಣಾ ನಿನಗೆ ಜನ ಇಟ್ಟಿರುವ ಹೆಸರೇ ಲೂಟಿ ರವಿ ಅಂತಾ. ನೀನು ವ್ಯಾಪಾರಿ ಆಗಿದ್ದಕ್ಕೆ ಚಿಕ್ಕಮಗಳೂರಿನವರು ಭಿಕಾರಿಯಾದರು. ನೀವೆಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದು, ಮಾತನಾಡುವ ಮುನ್ನ ಎಚ್ಚರವಾಗಿರಬೇಕು. ನಮ್ಮಕ್ಕ ಶೋಭಕ್ಕ ಅವರು ಬಹಳ ಚೆನ್ನಾಗಿ ಹೇಳಿದ್ದಾರೆ. ಇದು ನಿಮ್ಮ ಸಾಹೇಬರು, ಯಜಮಾನರ ಪಾಪದ ಕೂಸು” ಎಂದು ತಿರುಗೇಟು ನೀಡಿದರು.

ವಿರೋಧ ಪಕ್ಷದ ನಾಯಕರಿಗೆ ಸಾಮಾನ್ಯ ಪ್ರಜ್ಞೆ ಇಲ್ಲ

“ವಿರಾವೇಶದಲ್ಲಿ ಮಾತನಾಡಿರು ಅಶೋಕಣ್ಣ, ಮಾತನಾಡುವ ಮುನ್ನ ಸಾಮಾನ್ಯ ಪ್ರಜ್ಞೆ ಇರಬೇಕು. ಈ ಯೋಜನೆ ಹಣವನ್ನು ಮೂರು ರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ ಎಂದು ಹೇಳಿದ್ದೀರಾ. ಈ ಯೋಜನೆ ಇವತ್ತೇ ಜಾರಿಯಾಗುತ್ತದೆಯೇ? ಈ ಟೌನ್ ಶಿಪ್ ಆಗಲು ಇನ್ನು 10 ವರ್ಷ ಬೇಕಾಗುತ್ತದೆ. ಬಿಜೆಪಿ ಜೆಡಿಎಸ್ ನವರು ಈ ಯೋಜನೆಯನ್ನು ಸರ್ಕಾರಿ ಜಾಗ ಸೇರಿಸಿ ಖಾಸಗಿಯವರಿಗೆ ನೀಡಿದ್ದರು. ಆದರೆ ನಾವು ಸರ್ಕಾರದಿಂದಲೇ ಈ ಯೋಜನೆ ಮಾಡುತ್ತಿದ್ದೇವೆ. ಯಡಿಯೂರಪ್ಪನವರ ಕಾಲದಲ್ಲಿನ ವರದಿ ಪ್ರಕಾರ ಈ ಟೌನ್ ಶಿಪ್ ನಲ್ಲಿ ಸರ್ಕಾರಕ್ಕೆ ವಾರ್ಷಿಕ 3,146 ಕೋಟಿ ಆದಾಯ ಬರುತ್ತದೆ ಎಂದು ತಿಳಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. 2020ರಲ್ಲಿ ಕಂದಾಯ ಮಂತ್ರಿಯಾಗಿದ್ದು ನೀವೇ ಅಲ್ಲವೇ?” ಎಂದು ತಿರುಗೇಟು ನೀಡಿದರು.

ಪುತ್ರ ವ್ಯಾಮೋಹಕ್ಕಾಗಿ ವಿರೋಧ ಪಕ್ಷದ ನಾಯಕರಿಂದ ಹೋರಾಟ

“ರೈತರನ್ನು ರಕ್ಷಣೆ ಮಾಡುವ ವಿಚಾರವನ್ನು ನಾವು ಬಿಜೆಪಿಯಿಂದ ಕಲಿಯಬೇಕೆ? ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ಅವರನ್ನು ಎಷ್ಟು ದಿನಗಳ ಕಾಲ ಕಾಡಿದರು ಎಂಬುದು ಜಗತ್ತಿಗೆ ಗೊತ್ತಿದೆ. ಹಸಿರು ಟವಲ್ ಹಾಕಿಕೊಂಡ ತಕ್ಷಣ ಇವರು ರೈತ ಪರ. ನಮ್ಮ ರಾಜ್ಯದಲ್ಲಿ ಎಲ್ಲರಿಗೂ ಪುತ್ರ ವ್ಯಾಮೋಹ ಹೆಚ್ಚಾಗಿದೆ. ತಮ್ಮ ಮಕ್ಕಳನ್ನು ಸಿಎಂ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಗೆಲ್ಲಿಸಬೇಕು ಎಂದು ಹೋರಾಡುತ್ತಿದ್ದರೆ, ಯಡಿಯೂರಪ್ಪನವರು ವಿಜಯೇಂದ್ರ ಅವರನ್ನು ಪ್ರಮೋಟ್ ಮಾಡಲು ಹೋರಾಟ ಮಾಡುತ್ತಿದ್ದಾರೆ. ಮಕ್ಕಳ ಉದ್ಧಾರಕ್ಕೆ ಇವರು ಹಠಕ್ಕೆ ಬಿದ್ದಿದ್ದಾರೆ. ವಿರೋಧ ಪಕ್ಷದ ನಾಯಕರುಗಳು ಗೋಸುಂಬೆ ರಾಜಕಾರಣ ಬಿಡಬೇಕು” ಎಂದು ತಿಳಿಸಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು 2023ರಲ್ಲಿ ನಮ್ಮ ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಈ ಭಾಗದ ರೈತರು ಬಂದು ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು ಯೋಜನೆ ಮಾಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರು ಸರ್ವೇ ಮಾಡಿಸಿ ಬಹುತೇಕ ರೈತರು ಯೋಜನೆ ಪರವಾಗಿದ್ದಾರೆ ಎಂದು ತಿಳಿದ ಬಳಿಕವಷ್ಟೇ 2025ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಅಂತಿಮ ಅಧಿಸೂಚನೆ ಹೊರಡಿಸಿದ್ದು 2026ರಲ್ಲಿ. ಈ ಒಂದು ವರ್ಷ ಅವಧಿಯಲ್ಲಿ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪನವರು, ವಿಜಯೇಂದ್ರ, ಅಶೋಕ್ ಅವರಾಗಲಿ ಪ್ರಶ್ನೆ ಮಾಡಿದ್ದರ? ವಿರೋಧ ಪಕ್ಷದ ನಾಯಕರಾದ ಅಶೋಕ್ ಅಧಿವೇಶನದಲ್ಲಿ ಈ ವಿಚಾರ ಪ್ರಶ್ನೆ ಮಾಡಿದ್ದೀರಾ? ಅಂತಿಮ ಅಧಿಸೂಚನೆ ವೇಳೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದರು ಎಂಬ ಕಾರಣಕ್ಕೆ ಹೊಟ್ಟೆಯುರಿ ಆರಂಭವಾದರೆ ನಿಮಗೆ ಮದ್ದು ನೀಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ನಾಯಕರಿಂದ ಪ್ರಾಯಶ್ಚಿತ ಯಾತ್ರೆ

“ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಅನೇಕ ಬಾರಿ ಪ್ರೀತಿ ತೋರಿದ್ದಾರೆ. ಆದರೆ ಇದೇ ಡಿಎಲ್ಎಫ್ ಯೋಜನೆಯಿಂದ ಹಿಂದೆ ಸರಿದಾಗ, ಯಡಿಯೂರಪ್ಪನವರು ಮತ್ತೆ ಜಾಗತಿಕ ಟೆಂಡರ್ ಕರೆದಿದ್ದು ಯಾಕೆ? ನಿಮ್ಮ ಪಶ್ಚಾತಾಪ ಯಾತ್ರೆ ಆರಂಭಕ್ಕೂ ಮುನ್ನ ಈ ಪ್ರಶ್ನೆಗೆ ಉತ್ತರಿಸಬೇಕು. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ವೈದರು ತೂಕ ಇಳಿಸಬೇಕು ಎಂಬ ಸಲಹೆ ನೀಡಿದ್ದು, ಅದಕ್ಕಾಗಿ ಅವರು ಪಶ್ಚಾತಾಪಯಾತ್ರೆ ಮಾಡಲು ಮುಂದಾಗಿದ್ದಾರೆ. ಇದು ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯ ಪರಿಣಾಮ. ಎಲ್ಲರೂ ಪ್ರತಿವ್ರತೆಯ ಸ್ಪರ್ಧೆಗೆ ಬಿದ್ದವರಂತೆ ತಾವು ರೈತರ ಪರ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ ಎಂಬ ಆತಂಕದಲ್ಲಿ ಈ ಪಶ್ಚಾತಾಪಯಾತ್ರೆ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

“ಬಿಜೆಪಿಯವರ ಪಶ್ಚಾತಾಪ ಯಾತ್ರೆಗೆ ನಮ್ಮ ಅಭ್ಯಂಥರವಿಲ್ಲ. ಆದರೆ ಈ ಯಾತ್ರೆಗೂ ಮುನ್ನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿ ಮುಂದುವರಿಸಲಿ. ಇತ್ತೀಚೆಗೆ ನಂಜುಂಡಸ್ವಾಮಿ ಅವರ ಪುತ್ರಿ ಬಿಡದಿಯಲ್ಲಿ ರಾಜಕಾರಣಿಗಳಿಗೆ ಹಸಿರು ಶಾಲು ಹಾಕಿಕೊಳ್ಳುವ ಅರ್ಹತೆ ಇಲ್ಲ ಎಂದು ಹೇಳಿದ್ದರು. ಈ ಮಾತನ್ನು ಅವರು ಹೇಳಿದ್ದು, ರೈತರ ಜೊತೆ ಪ್ರತಿಭಟನೆಗೆ ಕೂತು ನಾಟಕ ಮಾಡಿದವರಿಗೆ ಹಾಗೂ ರೈತರ ಶಾಲು ಹಾಕಿಕೊಂಡು ಯಾತ್ರೆ ಮಾಡಲು ಮುಂದಾಗಿರುವವರಿಗೆ” ಎಂದರು.

2018 ರಲ್ಲಿ ದೇವೇಗೌಡರು ಕಣ್ಣುಮುಚ್ಚಿ ಕುಳಿತರು

“ಯಡಿಯೂರಪ್ಪನವರ ನಂತರ ಸದಾನಂದ ಗೌಡರು ಬಂದು ಐದು ಟೌನ್ ಶಿಪ್ ಸಾಧ್ಯವಿಲ್ಲ, ಕೇವಲ ಬಿಡದಿಯಲ್ಲಿ ಪ್ರಾಯೋಗಿಕ ಯೋಜನೆ ಮಾಡುತ್ತೇವೆ ಎಂದರು. ನಂತರ ಜಗದೀಶ್ ಶೆಟ್ಟರ್ ಅವರು ಬಂದು ಈ ಯೋಜನೆ ಮುಂದುವರಿಸಿ ಸಭೆ ಮಾಡಿದರು. ನಂತರ 2013ರಲ್ಲಿ ಕಾಂಗ್ರೆಸ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ನಂತರ 2018ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಈ ಭಾಗದ ರೈತರು ಹೋಗಿ ಈ ಯೋಜನೆ ಕೈಬಿಡಿ ಎಂದು ಕೇಳಿಕೊಂಡಾಗ. ಇದು ನನ್ನ ಕನಸಿನ ಯೋಜನೆ ಯಾವುದೇ ಕಾರಣಕ್ಕೂ ಈ ಯೋಜನೆ ಬಿಡಲು ಸಾಧ್ಯವಿಲ್ಲ. ಈ ಯೋಜನೆ ಮಾಡೇ ತೀರುತ್ತೇವೆ ಎಂದು ಹೇಳಿದ್ದನ್ನು ಕುಮಾರಸ್ವಾಮಿ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಂತರ ಅಲ್ಲಿನ ರೈತರು ದೇವೇಗೌಡರ ಬಳಿ ಈ ಯೋಜನೆಯನ್ನು ಕೈಬಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಾರೆ. ಆಗ ದೇವೇಗೌಡರು ಕಣ್ಣುಮುಚ್ಚಿ ಕುಳಿತರು. ನಾನು ಈ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಮಗ ಏನು ಹೇಳುತ್ತಾನೇ ಆ ರೀತಿ ಕೇಳಿಕೊಂಡು ಹೋಗಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ” ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್