ಸೌತ್ ಆಫ್ರಿಕಾ ವೇಗಿಯ 2 ಕೋಟಿ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಹಾರ್ದಿಕ್ ಪಾಂಡ್ಯ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಈ ಹರಾಜಿನಲ್ಲಿ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯ ಕೂಡ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ಅನ್ರಿಕ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಆಕ್ಷನ್ ಪಟ್ಟಿಯಲ್ಲಿದ್ದಾರೆ.
Updated on: Dec 11, 2025 | 8:05 AM

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯು ಐಪಿಎಲ್ ಮಿನಿ ಹರಾಜಿಗಾಗಿ ಹೆಸರು ನೀಡಿರುವ ಆಟಗಾರರ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಮುಂದಾಗಲಿದೆ.

ಆದರೆ ಇದೇ ಸರಣಿಯು ಅನ್ರಿಕ್ ನೋಕಿಯ ಪಾಲಿಗೆ ಮುಳುವಾದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಈ ಸರಣಿಯ ಮೊದಲ ಪಂದ್ಯದಲ್ಲೇ ಅನ್ರಿಕ್ ಅವರನ್ನು ಹಾರ್ದಿಕ್ ಪಾಂಡ್ಯ ಬೆಂಡೆತ್ತಿದ್ದಾರೆ. ಅದು ಕೂಡ ಕೇವಲ 10 ಎಸೆತಗಳಲ್ಲಿ 22 ರನ್ ಚಚ್ಚುವ ಮೂಲಕ.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಅನ್ರಿಕ್ ನೋಕಿಯ 4 ಓವರ್ಗಳಲ್ಲಿ ನೀಡಿರುವುದು ಬರೋಬ್ಬರಿ 41 ರನ್ಗಳು. ಅಂದರೆ ಪ್ರತಿ ಓವರ್ಗೆ 10.20 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಈ ದುಬಾರಿ ಓವರ್ಗಳೇ ಅನ್ರಿಕ್ ನೋಕಿಯ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ.

ಏಕೆಂದರೆ ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅನ್ರಿಕ್ ನೋಕಿಯ ಫಿಟ್ನೆಸ್ ಕಾರಣದಿಂದಾಗಿ ಆಡಿದ್ದು ಕೇವಲ 2 ಮ್ಯಾಚ್ಗಳು ಮಾತ್ರ. ಈ ವೇಳೆ ಅವರು 42 ಎಸೆತಗಳಲ್ಲಿ 83 ರನ್ ನೀಡಿದ್ದರು. ಅಂದರೆ ಪ್ರತಿ ಓವರ್ಗೆ 11.86 ಸರಾಸರಿಯನ್ನು ರನ್ ಬಿಟ್ಟು ಕೊಟ್ಟಿದ್ದರು.

ಐಪಿಎಲ್ನಲ್ಲಿ ಅನ್ರಿಕ್ ನೋಕಿಯ ಹೀಗೆ ದುಬಾರಿಯಾಗಲು ಫಿಟ್ನೆಸ್ ಸಮಸ್ಯೆ ಕಾರಣ ಎನ್ನಲಾಗಿತ್ತು. ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಅನ್ರಿಕ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಆದರೆ ಕಂಬ್ಯಾಕ್ ಪಂದ್ಯದಲ್ಲೇ ಅನ್ರಿಕ್ ನೋಕಿಯ ಅವರನ್ನು ಹಾರ್ದಿಕ್ ಪಾಂಡ್ಯ ಬೆಂಡೆತ್ತಿದ್ದಾರೆ.

ಈ ಬೆಂಡೆತ್ತುವಿಕೆಯ ಪರಿಣಾಮ ಐಪಿಎಲ್ 2026 ರಲ್ಲಿ ಅನ್ರಿಕ್ ನೋಕಿಯ ಹರಾಜಾಗಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಅನ್ರಿಕ್ ತನ್ನ ಮೂಲ ಬೆಲೆ 2 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಪಿಚ್ನಲ್ಲಿ ದುಬಾರಿಯಾಗಿ ಪರಿಣಮಿಸಿದ್ದಾರೆ. ಇದು ಅನ್ರಿಕ್ ನೋಕಿಯ ಅವರ ಬಿಡ್ಡಿಂಗ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಏಕೆಂದರೆ ಕಳೆದ ಸೀಸನ್ನಲ್ಲಿ ದುಬಾರಿ ಬೌಲರ್ಗಳಲ್ಲಿ ಗುರುತಿಸಿಕೊಂಡಿದ್ದ ನೋಕಿಯ ಒಂದು ವರ್ಷದ ಬಳಿಕ ಕೂಡ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅದರಲ್ಲೂ ಭಾರತೀಯ ಪಿಚ್ನಲ್ಲಿ ದುಬಾರಿಯಾಗಿರುವುದರಿಂದ ಅವರ ಖರೀದಿಯಿಂದ ಐಪಿಎಲ್ ಫ್ರಾಂಚೈಸಿಗಳು ವಿಮುಖರಾಗಬಹುದು.

ಇತ್ತ ಐಪಿಎಲ್ ಹರಾಜು ನಡೆಯಲಿರುವುದು ಡಿಸೆಂಬರ್ 16 ರಂದು. ಇದರ ನಡುವೆ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2ನೇ ಮತ್ತು 3ನೇ ಟಿ20 ಪಂದ್ಯಗಳು ಸಹ ನಡೆಯಲಿದೆ. ಈ ಮ್ಯಾಚ್ಗಳಲ್ಲೂ ಕರಾರುವಾಕ್ ದಾಳಿ ಸಂಘಟಿಸಲು ವಿಫಲರಾದರೆ ಅನ್ರಿಕ್ ನೋಕಿಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೇ ಉಳಿಯಬಹುದು. ಹೀಗಾಗಿ ನೋಕಿಯ ಪಾಲಿಗೆ ಮುಂದಿನ ಎರಡು ಮ್ಯಾಚ್ಗಳು ತುಂಬಾ ಮಹತ್ವದ್ದಾಗಿ ಮಾರ್ಪಟ್ಟಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




