IND vs ENG: ಮೊದಲ ಮ್ಯಾಚ್ನಲ್ಲೇ 5 ಭರ್ಜರಿ ದಾಖಲೆಗಳು ನಿರ್ಮಾಣ!
India vs England: ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯವು ಮೊದಲ ಇನಿಂಗ್ಸ್ಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 189 ರನ್ ಕಲೆಹಾಕಿತು. ಆದರೆ ದ್ವಿತೀಯ ಇನಿಂಗ್ಸ್ ಆರಂಭಕ್ಕೂ ಮುನ್ನ ಸುರಿದ ಭಾರೀ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
Updated on: Jul 02, 2026 | 7:53 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ರದ್ದಾಗುವಿಕೆ ನಡುವೆ ಹಲವು ದಾಖಲೆಗಳು ನಿರ್ಮಾಣವಾಗಿದೆ. ಅಂದರೆ ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡಿದ ಭಾರತೀಯ ಬ್ಯಾಟರ್ಗಳು ಕೆಲ ಭರ್ಜರಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಪಟ್ಟಿ ಇಲ್ಲಿದೆ... (PC: BCCI)

ಮೊದಲ ನಾಯಕ: ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ 47 ಎಸೆತಗಳಲ್ಲಿ 68 ರನ್ ಬಾರಿಸಿದ್ದರು. ಈ ಮೂಲಕ ಇಂಗ್ಲೆಂಡ್ನಲ್ಲಿ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: BCCI)

ಸ್ಫೋಟಕ ಫಿಫ್ಟಿ: ಈ ಮ್ಯಾಚ್ನಲ್ಲಿ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲಿ 5 ಬಾರಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಪೂರ್ಣ ಪ್ರಮಾಣದ ಐಸಿಸಿ ಸದಸ್ಯ ರಾಷ್ಟ್ರದ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: BCCI)

ನೂರು ಸಿಕ್ಸರ್: ಈ ಪಂದ್ಯದಲ್ಲಿ ಬಾರಿಸಿದ 4 ಸಿಕ್ಸರ್ಗಳೊಂದಿಗೆ ಅಭಿಷೇಕ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ಸಿಕ್ಸರ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 100 ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ಎವಿನ್ ಲೂಯಿಸ್ (789 ಎಸೆತಗಳು) ಹೆಸರಿನಲ್ಲಿತ್ತು. ಇದೀಗ 785 ಎಸೆತಗಳಲ್ಲಿ 100 ಸಿಕ್ಸ್ ಬಾರಿಸಿ ಅಭಿಷೇಕ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. (PC: BCCI)

ಸ್ಟ್ರೈಕಿಂಗ್ ಸರದಾರ: ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 245.83ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಈ ಮೂಲಕ 200+ ಸ್ಟ್ರೈಕ್ ರೇಟ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 13 ಅರ್ಧಶತಕಗಳೊಂದಿಗೆ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದರೆ, ಇದೀಗ 9 ಸ್ಫೋಟಕ ಹಾಫ್ ಸೆಂಚುರಿಯೊಂದಿಗೆ ಅಭಿಷೇಕ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. (PC: BCCI)

ಕೀಪರ್ ವಿಶ್ವ ದಾಖಲೆ: ಈ ಪಂದ್ಯದಲ್ಲಿ ಜೋಸ್ ಬಟ್ಲರ್ 1 ಸ್ಟಂಪಿಂಗ್ ಮತ್ತು 2 ರನ್ ಔಟ್ಗಳಲ್ಲಿ ಭಾಗಿಯಾಗಿದ್ದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಡಿಸ್ಮಿಸಲ್ಗಳನ್ನು (Dismissals) ಪೂರೈಸಿದ ವಿಶ್ವದ ಕೇವಲ 2ನೇ ವಿಕೆಟ್ಕೀಪರ್ ಎಂಬ ಐತಿಹಾಸಿಕ ದಾಖಲೆ ಬರೆದರು. ಈ ಪಟ್ಟಿಯಲ್ಲಿ 117 ಡಿಸ್ಮಿಸಲ್ಗಳನ್ನು ಹೊಂದಿರುವ ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ ಅಗ್ರಸ್ಥಾನದಲ್ಲಿದ್ದಾರೆ. (PC: Gary Day/AP)




