- Kannada News Photo gallery Cricket photos IPL 2026: PBKS Smashes Record 254! Arya (93), Connolly (87) Power Historic Innings
PBKS vs LSG: ಪ್ರಿಯಾಂಶ್-ಕನೋಲಿ ರೌದ್ರಾವತಾರಕ್ಕೆ ಆರ್ಸಿಬಿಯ ದಾಖಲೆಗಳೆಲ್ಲ ಧ್ವಂಸ
IPL 2026 Punjab Kings: ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ದಾಖಲೆಯ 254 ರನ್ ಕಲೆಹಾಕಿತು. ಪ್ರಿಯಾಂಶ್ ಆರ್ಯ (93) ಹಾಗೂ ಕೂಪರ್ ಕನಾಲಿ (87) ಅಬ್ಬರದ ಬ್ಯಾಟಿಂಗ್ ನಡೆಸಿ, 181 ರನ್‌ಗಳ ಜೊತೆಯಾಟವಾಡಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಆರ್ಯ, 32 ರನ್ ಓವರ್ ಹಾಗೂ 21 ಸಿಕ್ಸರ್‌ಗಳ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದರು. ಈ ಮೂಲಕ ಪಂಜಾಬ್ ಈ ಆವೃತ್ತಿಯ ಅತ್ಯಧಿಕ ತಂಡದ ಮೊತ್ತ ದಾಖಲಿಸಿತು.
Updated on: Apr 19, 2026 | 10:06 PM

ಐಪಿಎಲ್ 2026 ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದಾಖಲೆಯ 254 ರನ್ ಕಲೆಹಾಕಿತು. ತಂಡದ ಪರ ಪ್ರಿಯಾಂಶ್ ಆರ್ಯ ಹಾಗೂ ಕೂಪರ್ ಕನೋಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಎರಡನೇ ವಿಕೆಟ್ಗೆ ಕೇವಲ 81 ಎಸೆತಗಳಲ್ಲಿ ದಾಖಲೆಯ 181 ರನ್‌ಗಳ ಜೊತೆಯಾಟವನ್ನಾಡಿದರು.

ಈ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪ್ರಿಯಾಂಶ್ 37 ಎಸೆತಗಳಲ್ಲಿ 93 ರನ್‌ಗಳ ಇನ್ನಿಂಗ್ಸ್ ಆಡಿದರು. ಪ್ರಿಯಾಂಶ್ ಅವರ ಈ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳು ಸೇರಿದ್ದವು. ಆದಾಗ್ಯೂ ಪ್ರಿಯಾಂಶ್ ಕೇವಲ 7 ರನ್ಗಳಿಂದ ಶತಕ ವಂಚಿತರಾದರು.

ಇತ್ತ ಕೂಪರ್ ಕನೋಲಿ ಕೂಡ 46 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಹಿತ 87 ರನ್‌ಗಳ ಇನ್ನಿಂಗ್ಸ್ ಅಡಿದರು. ಅದರಲ್ಲೂ ಇವರಿಬ್ಬರು ಸೇರಿ ಇನ್ನಿಂಗ್ಸ್ನ 13ನೇ ಓವರ್ನಲ್ಲಿ ಬರೋಬ್ಬರಿ 32 ರನ್ ಕಲೆಹಾಕಿದರು. ಮಾರ್ಕ್ರಾಮ್ ಬೌಲ್ ಮಾಡಿದ ಈ ಓವರ್ನಲ್ಲಿ ಬರೋಬ್ಬರಿ 5 ಸಿಕ್ಸರ್‌ಗಳು ಸಿಡಿದವು.

ಈ ಮೂಲಕ ಈ ಆವೃತ್ತಿಯಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ದಾಖಲಿಸಿದ ದಾಖಲೆ ಇವರಿಬ್ಬರ ಪಾಲಾಯಿತು. ಇದಕ್ಕೂ ಮುನ್ನ ಸಿಎಸ್ಕೆ ವಿರುದ್ಧ ಆರ್ಸಿಬಿ ಬ್ಯಾಟರ್ಗಳು ಒಂದು ಓವರ್ನಲ್ಲಿ 30 ರನ್ ಕಲೆಹಾಕಿದ್ದರು. ಇದೀಗ ಆ ದಾಖಲೆ ಪಂಜಾಬ್ ಪಾಲಾಗಿದೆ.

ಹಾಗೆಯೇ ಈ ಪಂದ್ಯದಲ್ಲಿ ಪಂಜಾಬ್ ತಂಡ ಬರೋಬ್ಬರಿ 21 ಸಿಕ್ಸರ್ಗಳನ್ನು ಬಾರಿಸಿತು. ಇದರಲ್ಲಿ ಪ್ರಿಯಾಂಶ್ ಹಾಗೂ ಕನೋಲಿ ಇಬ್ಬರಿಂದ 16 ಸಿಕ್ಸರ್‌ಗಳು ಸಿಡಿದವು. ಈ 21 ಸಿಕ್ಸರ್‌ಗಳ ಮೂಲಕ ಈ ಆವೃತ್ತಿಯಲ್ಲಿ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಪಂಜಾಬ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಸಿಎಸ್ಕೆ ವಿರುದ್ಧ 19 ಸಿಕ್ಸರ್ ಬಾರಿಸಿದ್ದ ಆರ್ಸಿಬಿ ಹೆಸರಿನಲ್ಲಿತ್ತು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡವೆಂಬ ದಾಖಲೆ ಬರೆಯಿತು. ಈ ಹಿಂದೆ ಸಿಎಸ್ಕೆ ವಿರುದ್ಧ ಆರ್ಸಿಬಿ ಬಾರಿಸಿದ್ದ 250 ರನ್ಗಳು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆ ಪಂಜಾಬ್ ಪಾಲಾಗಿದೆ.




