- Kannada News Photo gallery Cricket photos RCB IPL Opening Match History: Performance and Win Loss Record
IPL 2026: 6 ಉದ್ಘಾಟನಾ ಪಂದ್ಯಗಳನ್ನಾಡಿರುವ ಆರ್ಸಿಬಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?
RCB IPL Opening Match History: 19ನೇ ಐಪಿಎಲ್ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ, ಆರ್ಸಿಬಿ ತಂಡದ ಐಪಿಎಲ್ ಉದ್ಘಾಟನಾ ಪಂದ್ಯಗಳ ಇತಿಹಾಸವನ್ನು ಲೇಖನವು ವಿಶ್ಲೇಷಿಸುತ್ತದೆ. ಇದುವರೆಗೆ 6 ಉದ್ಘಾಟನಾ ಪಂದ್ಯಗಳನ್ನು ಆಡಿರುವ ಆರ್ಸಿಬಿ, ಕೇವಲ 2ರಲ್ಲಿ ಗೆದ್ದು 4ರಲ್ಲಿ ಸೋಲನುಭವಿಸಿದೆ. ತಂಡದ ಹಿಂದಿನ ಪ್ರದರ್ಶನ ಮತ್ತು ಪ್ರಮುಖ ಅಂಕಿಅಂಶಗಳ ವಿವರ ಇಲ್ಲಿದೆ.
Updated on: Mar 12, 2026 | 5:58 PM

19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಸಿಸಿಐ ನಿನ್ನೆಯಷ್ಟೆ ಈ ಮಿಲಿಯನ್ ಡಾಲರ್ ಟೂರ್ನಿಯ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. 15 ದಿನಗಳ ಕಾಲ ನಡೆಯಲಿರುವ ಈ 20 ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ 4 ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಉದ್ಘಾಟನಾ ಪಂದ್ಯವೂ ಸೇರಿದೆ. ಹಾಗಿದ್ದರೆ, ಆರ್ಸಿಬಿ ಇದುವರೆಗೆ ಎಷ್ಟು ಉದ್ಘಾಟನಾ ಪಂದ್ಯಗಳನ್ನಾಡಿದೆ? ಅದರಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ..

ಆರ್ಸಿಬಿ ಹಾಲಿ ಚಾಂಪಿಯನ್ ಆಗಿರುವ ಕಾರಣ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಚಾಂಪಿಯನ್ ಆಗದ ಹೊರತಾಗಿಯೂ ಆರ್ಸಿಬಿ ಈ ಹಿಂದೆ ಉದ್ಘಾಟನಾ ಪಂದ್ಯಗಳನ್ನು ಆಡಿದೆ. ಮುಗಿದಿರುವ 18 ಆವೃತ್ತಿಗಳಲ್ಲಿ ಆರ್ಸಿಬಿ ಇದುವರೆಗೆ 6 ಬಾರಿ ಉದ್ಘಾಟನಾ ಪಂದ್ಯವನ್ನು ಆಡಿದೆ. ಆದರೆ ಈ ಉದ್ಘಾಟನಾ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು. ಕೇವಲ 2 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ, ಉಳಿದ 4 ಪಂದ್ಯಗಳಲ್ಲಿ ಸೋತಿದೆ.

ಆರ್ಸಿಬಿ ಮೊಟ್ಟ ಮೊದಲ ಬಾರಿಗೆ ಮೊದಲ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲೇ ಕಣಕ್ಕಿಳಿದಿತ್ತು. ಕೆಕೆಆರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಆರ್ಸಿಬಿ 140 ರನ್ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 222 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಆರ್ಸಿಬಿ ಕೇವಲ 82 ರನ್ಗಳಿಗೆ ಆಲೌಟ್ ಆಗಿತ್ತು.

ಆ ಬಳಿಕ 2017 ರ ಆವೃತ್ತಿಯಲ್ಲಿ ಆರ್ಸಿಬಿ ಉದ್ಘಾಟನಾ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿದ್ದ ಆರ್ಸಿಬಿ 35 ರನ್ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ 207 ರನ್ ಬಾರಿಸಿದರೆ, ಆರ್ಸಿಬಿ 172 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು.

2019 ರಲ್ಲಿ ಮೂರನೇ ಬಾರಿಗೆ ಉದ್ಘಾಟನಾ ಪಂದ್ಯವನ್ನಾಡಿದ್ದ ಆರ್ಸಿಬಿ, ಸಿಎಸ್ಕೆ ವಿರುದ್ಧ 7 ವಿಕೆಟ್ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಕೇವಲ 70 ರನ್ಗಳಿಗೆ ಆಲೌಟ್ ಆದರೆ, ಈ ಗುರಿ ಬೆನ್ನಟ್ಟಿದ ಸಿಎಸ್ಕೆ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತ್ತು.

2021 ರ ಆವೃತ್ತಿಯಲ್ಲಿ ಉದ್ಘಾಟನಾ ಪಂದ್ಯವನ್ನಾಡಿದ್ದ ಆರ್ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 159 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತ್ತು.

2024 ರ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಉದ್ಘಾಟನಾ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 173 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ 6 ವಿಕೆಟ್ಗಳ ಜಯ ಸಾಧಿಸಿತ್ತು.

ಇನ್ನು 2025 ರ ಆವೃತ್ತಿಯಲ್ಲೂ ಆರ್ಸಿಬಿ, ಕೆಕೆಆರ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 174 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಆರ್ಸಿಬಿ 16.2 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತ್ತು.
