Shubman Gill: ಶುಭ್ಮನ್ ಗಿಲ್… ಅಹಮದಾಬಾದ್ನ ಪ್ರಿನ್ಸ್ ವಿದೇಶದಲ್ಲಿ ಠುಸ್
Shubman Gill: ಟೀಮ್ ಇಂಡಿಯಾದ ಭರವಸೆಯ ಯುವ ದಾಂಡಿಗ ಶುಭ್ಮನ್ ಗಿಲ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಅದರಲ್ಲೂ ವಿದೇಶಿ ಪಂದ್ಯಗಳಲ್ಲಿ ರನ್ಗಳಿಸಲು ತಡಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೂರು ಇನಿಂಗ್ಸ್ ಆಡಿರುವ ಶುಭ್ಮನ್ ಗಿಲ್ ಕಲೆಹಾಕಿರುವುದು ಕೇವಲ 60 ರನ್ಗಳು ಮಾತ್ರ.
Updated on: Dec 21, 2024 | 9:08 AM

ಶುಭ್ಮನ್ ಗಿಲ್... ಹದಿ ಹರೆಯದಲ್ಲೇ ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ ಗಿಲ್ ಇದೀಗ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಏಷ್ಯಾದ ಹೊರಗೆ ರನ್ಗಳಿಸಲು ಟೀಮ್ ಇಂಡಿಯಾ ಬ್ಯಾಟರ್ ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

2021ರ ಬಳಿಕ ಏಷ್ಯಾದ ಹೊರಗೆ ಆಡಿದ 16 ಇನಿಂಗ್ಸ್ಗಳಲ್ಲಿ ಶುಭ್ಮನ್ ಗಿಲ್ ಕಲೆಹಾಕಿರುವುದು ಕೇವಲ 267 ರನ್ಗಳು ಮಾತ್ರ. ಈ ವೇಳೆ ಒಂದೇ ಒಂದು ಅರ್ಧಶತಕವನ್ನು ಸಹ ಬಾರಿಸಲು ಸಾಧ್ಯವಾಗಿಲ್ಲ. ಅಂದರೆ ಕೇವಲ 17.80ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.

ಅದರಲ್ಲೂ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಗಿಲ್, ಕಳೆದ 3 ಇನಿಂಗ್ಸ್ಗಳಲ್ಲಿ ಕಲೆಹಾಕಿರುವುದು ಕೇವಲ 60 ರನ್ಗಳು ಮಾತ್ರ. ಅಂದರೆ ಎರಡು ಪಂದ್ಯಗಳಲ್ಲಿ ಕೇವಲ 20 ರ ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದಾರೆ.

ಹೀಗಾಗಿಯೇ ಇದೀಗ ವಿದೇಶಿ ಪಿಚ್ನಲ್ಲೂ ಅದ್ಭುತವಾಗಿ ಬ್ಯಾಟ್ ಮಾಡಬಲ್ಲೆ ಎಂಬುದನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಶುಭ್ಮನ್ ಗಿಲ್ಗೆ ಎದುರಾಗಿದೆ. ಏಕೆಂದರೆ ಈ ಮೊದಲಿನಿಂದಲೂ ಗಿಲ್ ಅಹಮದಾಬಾದ್ ಪಿಚ್ನಲ್ಲಿ ಮಾತ್ರ ಅಬ್ಬರಿಸುತ್ತಾರೆಂಬ ಆರೋಪಗಳಿದ್ದವು.

ಇದನ್ನು ಪುಷ್ಠೀಕರಿಸುವಂತೆ ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗಿಲ್ ಅವರ ಬ್ಯಾಟಿಂಗ್ ಸರಾಸರಿ ಅದ್ಭುತವಾಗಿದೆ. ಅಂದರೆ 2021 ರಿಂದ 2024 ರವರೆಗೆ ಗಿಲ್ ಅಹಮದಾಬಾದ್ನಲ್ಲಿ 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 1079 ರನ್ಗಳು. ಅಲ್ಲದೆ 4 ಶತಕಗಳನ್ನು ಸಹ ಬಾರಿಸಿದ್ದಾರೆ.

ಅಂದರೆ ಅಹದಾಬಾದ್ನಲ್ಲಿ ಆಡಿದ ಕಳೆದ 19 ಪಂದ್ಯಗಳಲ್ಲಿ 71.93 ಸರಾಸರಿಯಲ್ಲಿ ರನ್ ಕಲೆಹಾಕಿರುವ ಶುಭ್ಮನ್ ಗಿಲ್, ಏಷ್ಯಾದ ಹೊರಗೆ 16 ಇನಿಂಗ್ಸ್ಗಳಿಂದ ಗಳಿಸಿದ್ದು 267 ರನ್ಗಳು ಮಾತ್ರ. ಅದು ಸಹ ಕೇವಲ 17.80 ರ ಸರಾಸರಿಯಲ್ಲಿ... ಹೀಗಾಗಿಯೇ ಅಹದಾಬಾದ್ನ ಪ್ರಿನ್ಸ್ ವಿದೇಶದಲ್ಲಿ ಠುಸ್ ಎಂಬ ಟೀಕೆಗಳು ಕೇಳಿ ಬರಲಾರಂಭಿಸಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




