ಟಾಟಾ ಕಡೆಯಿಂದ ವೈಭವ್ ಸೂರ್ಯವಂಶಿಗೆ ಸಿಕ್ತು ಭರ್ಜರಿ ಗಿಫ್ಟ್
Vaibhav Suryavanshi: ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ವೈಭವ್ ಸೂರ್ಯವಂಶಿ ಒಂದು ಶತಕದೊಂದಿಗೆ ಒಟ್ಟು 252 ರನ್ ಕಲೆಹಾಕಿದ್ದರು. ಅದು ಕೂಡ 206.55 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಐಪಿಎಲ್ 2025ರ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದರು.
Updated on: Feb 26, 2026 | 9:24 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ವೈಭವ್ ಸೂರ್ಯವಂಶಿಗೆ (Vaibhav Suryavanshi) ಟಾಟಾ ಕಾರ್ ಲಭಿಸಿದೆ. ಐಪಿಎಲ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕರ್ವ್ ಕಾರು ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾಲಾಗಿತ್ತು.

ರಾಜಸ್ಥಾನ್ ರಾಯಲ್ಸ್ ಪರ ಕಳೆದ ಬಾರಿ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ವೈಭವ್ ಸೂರ್ಯವಂಶಿ ಒಂದು ಶತಕದೊಂದಿಗೆ ಒಟ್ಟು 252 ರನ್ ಕಲೆಹಾಕಿದ್ದರು. ಅದು ಕೂಡ 206.55 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಐಪಿಎಲ್ 2025ರ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದರು.

ಅದರಂತೆ ಸೂಪರ್ ಸ್ಟ್ರೈಕರ್ಗೆ ನೀಡಲಾಗುವ ಟಾಟಾ ಕರ್ವ್ ಕಾರು 14 ವರ್ಷದ ವೈಭವ್ ಸೂರ್ಯವಂಶಿ ಪಾಲಾಗಿತ್ತು. ಇದೀಗ ಈ ಕಾರನ್ನು ವೈಭವ್ ಸೂರ್ಯವಂಶಿಗೆ ಹಸ್ತಾಂತರಿಸಲಾಗಿದೆ. ಐಪಿಎಲ್ ಬಳಿಕ ಭಾರತ ಎ ಪರ ಸರಣಿಗೆ ತೆರಳಿದ್ದ ವೈಭವ್ ಇದೀಗ ಐಪಿಎಲ್ 2026 ಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಇದರ ನಡುವೆ ಪಾಟ್ನಾದ ಅನನ್ಯ ಆಟೋ ಶೋ ರೂಮ್ನಲ್ಲಿ ನಡೆದ ಸಮಾರಂಭದಲ್ಲಿ ಕಾಣಿಸಿಕೊಂಡ ವೈಭವ್ ಸೂರ್ಯವಂಶಿ ಹೊಸ ಶೋ ರೂಮ್ ಅನ್ನು ಉದ್ಘಾಟಿಸಿ ಟಾಟಾ ಕರ್ವ್ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಮುಂಬರುವ ಐಪಿಎಲ್ನಲ್ಲೂ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಹೀಗಾಗಿ ಈ ಬಾರಿ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೈಭವ್ ಆರ್ಭಟವನ್ನು ನಿರೀಕ್ಷಿಸಬಹುದು.
