AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಉಪಚುನಾವಣೆ: ಎಷ್ಟು ಮತದಾನ? ಬಿಜೆಪಿ-ಕಾಂಗ್ರೆಸ್​​ ನಾಯಕರ ಗೆಲುವಿನ ಲೆಕ್ಕಾಚಾರ ಏನು?

ಅಬ್ಬರ ಪ್ರಚಾರ. ಆಡಳಿತ ಮತ್ತು ಪ್ರತಿಪಕ್ಷಗಳ ಜಿದ್ದಾ-ಜಿದ್ದಿ. ಇನ್ನೊಂದು ಬಡವ ಶ್ರೀಮಂತರ ನಡುವಿನ ಸಂಘರ್ಷದ ಚರ್ಚೆ, ಜೊತೆಗೆ ಟಿಕೆಟ್ ಸಿಗದೇ ಸಿಟ್ಟಾದ ಮುಸ್ಲಿಂ ಸಮಾಜ. ಹೀಗೆ ಹತ್ತು ಹಲವಾರು ಕಾರಣಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾಣೆ ರಾಜ್ಯದ ಗಮನ ಸೆಳೆದಿತ್ತು. ಈಗ ಮತದಾನ ಮುಗಿದು ಅಭ್ಯರ್ಥಿಗಳ ಭವಿಷ್ಟ ಮತಯಂತ್ರ ಬಂಧಿಯಾಗಿದೆ. ಆದ್ರೆ ಸೋಲು ಗೆಲುವಿನ ಲೆಕ್ಕಾಚಾರ ಮಾತ್ರ ಜೋರಾಗಿದೆ.

ದಾವಣಗೆರೆ ಉಪಚುನಾವಣೆ:  ಎಷ್ಟು ಮತದಾನ? ಬಿಜೆಪಿ-ಕಾಂಗ್ರೆಸ್​​ ನಾಯಕರ ಗೆಲುವಿನ ಲೆಕ್ಕಾಚಾರ ಏನು?
Davanagere South By Poll
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Apr 10, 2026 | 10:49 PM

Share

ದಾವಣಗೆರೆ, (ಏಪ್ರಿಲ್ 10): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ (Davanagere By Election) ಅಂತ್ಯವಾಗಿದೆ. ಕಳೆದ ಹದಿನೈದು ಇಪ್ಪತ್ತು ದಿನಗಳ ಅಬ್ಬರದ ಪ್ರಚಾರ ಒಂದು ರೀತಿಯಲ್ಲಿ ಭರ್ಜರಿ ಮಳೆ ಸುರಿದು ನಿಂತ ಅನುಭವ. ಬಿರು ಬಿಸಿಲು, ಸೀಮೆಂಟ್ ರಸ್ತೆ ಉಲ್ಟಾ ಝಳ. ನಿರಂತರ ಹುರಿಯುತ್ತಿರುವ ಮಂಡಕ್ಕಿ ಭಟ್ಟಿಗಳ ಕಾವಿಗಿಂತ ಇದು ಸ್ವಲ್ಪ ಹೆಚ್ಚಾಗಿತ್ತು. ನಾವು ಹೇಳುತ್ತಿರುವುದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಬಗ್ಗೆ. ಹಿರಿಯ ರಾಜಕಾರಣಿ ಆರು ಸಲ ಶಾಸಕ. ಒಮ್ಮೆ ಸಚಿವ, ಒಮ್ಮೆ ಸಂಸದ ಜೊತೆಗೆ ವೀರಶೈವ ಮಹಾಸಭೆಯ ರಾಷ್ಟೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಕ್ಷೇತ್ರ ದಾವಣಗೆರ ದಕ್ಷಿಣ ಕ್ಷೇತ್ರದ ಉಪಚುನಾವಣೆ ಮುಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಮತದಾನದ ಅಂಕಿ ಸಂಖ್ಯೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಮತದಾನದ ಅಂಕಿ ಸಂಖ್ಯೆ ನೋಡುವುದಾದರೆ, ಒಟ್ಟು 158131 ಜನರಿಂದ ಮತದಾನ ಮಾಡಿದ್ದಾರೆ. ಅಂದ್ರೆ ಶೇ 68.43 ರಷ್ಟು ಮತದಾನ ದಾಖಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 50 ಮತಗಟ್ಟೆಗಳಲ್ಲಿ ಅತಿ ಹೆಚ್ಚು ಶೇ 70 ರಿಂದ 80 ರಷ್ಟು ಮತದಾನ ಆಗಿದೆ. ಕಳೆದ 2023 ಚುನಾವಣೆಯಲ್ಲಿ ಶೇ 69.48 ರಷ್ಟು ಮತದಾನವಾಗಿತ್ತು. ಆದ್ರೆ ಈ ಸಲ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಹೊಸದಾಗಿ 20397 ಮತದಾರ ಸೇರ್ಪಡೆ ಆಗಿದ್ದಾರೆ. ಈ ಉಪ ಚುನಾವಣೆಯಲ್ಲಿ ಮತದಾನದಿಂದ 72141 ಜನರು ದೂರ ಉಳಿದಿದ್ದಾರೆ. 117690 ಮಹಿಳೆಯಲ್ಲಿ 79823ಮಹಿಳೆಯರು ಮತದಾನ ಮಾಡಿದ್ದಾರೆ. ಇನ್ನು 11339 ಪುರುಷರಲ್ಲಿ 78290 ಪುರುಷರು ತಮ್ಮ ಹಕ್ಕು ಚಲಾಯಿಸಿದ್ದಾರೆ. 43 ಇತರೇ ಮತದಾರರಲ್ಲಿ 18 ಜನ ಓಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕಿಚ್ಚು ಹೊತ್ತಿಸಿದ ದಾವಣಗೆರೆ ದಂಗಲ್, ಪಕ್ಷದ ವಿರುದ್ಧ ಜಮೀರ್ ಷಡ್ಯಂತ್ರ ರೂಪಿಸಿದ್ರಾ?

ಮುಸ್ಲಿಮರು ಹೆಚ್ಚಿರುವ ಮತಗಟ್ಟೆಯಲ್ಲಿ 56 ಸಾವಿರ ಮತದಾನ

ಈಗ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಅವರು ತಮಗೆ ಟಿಕೆಟ್ ಕೇಳಿದ್ರು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಮೊಮ್ಮಗ ಸಮರ್ಥ ಶಾಮನೂರ್ ಗೆ ಟಿಕೆಟ್ ನೀಡಿತ್ತು. ಸಿಎಂ ಮತ್ತು ಡಿಸಿಎಂ ತಲಾ ಮೂರು ದಿನ ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ಮಾಡಿದ್ದರು. ಮುಸ್ಲಿಂ ಮುಖಂಡರ ಮನವೊಲಿಸಿ ಕಣದಿಂದ ಹಿಂದೆ ಸರಿಸಿದ್ದು, ಕೆಲ ಗೊಂದಲಗಳ ನಡುವೆ ಮತದಾನ ಮುಗಿದೆ. ಇನ್ನು ಅಂಕಿ-ಸಂಖ್ಯೆಗಳ ಲೆಕ್ಕಾಚಾರಕ್ಕೆ ಹೋದ್ರೆ ಮುಸ್ಲಿಂ ಮತದಾರರು ಹೆಚ್ಚಿರುವ ಮತಗಟ್ಟೆಯಲ್ಲಿ ಬರೋಬರಿ 56 ಸಾವಿರ ಮತದಾನವಾಗಿದೆ. ಈ ಮತ ಬುಟ್ಟಿಗೆ ಎಸ್ ಪಿಐ ಮತ್ತು ಮುಸ್ಲಿಂ ಪಕ್ಷೇತರರು ಕೈ ಹಾಕಿದ್ದಾರೆ ಎಂಬ ಚರ್ಚೆ ನಡೆದಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಮುಸ್ಲಿಮರ ಮತಗಳನ್ನ ಸೆಳೆಯಲು ಬಿಜೆಪಿ ಸಹ ಪ್ರಯತ್ನಿಸಿದೆ. ಕೇಸರಿ ಪಡೆ ಇದೇ ಮೊದಲು ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸಿದ್ದು. ಜೊತೆಗೆ ಬಹುತೇಕ ಸಭೆಗಳಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡು ಪ್ರಚಾರ ನಡೆಸಿದೆ. ಹೀಗಾಗಿ ಮುಸ್ಲಿಮರ ಮತಗಳ ವಿಭಜನೆಯಾಗಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಅಲ್ಪಸಂಖ್ಯಾತರ ಮತಕ್ಕೆ ಇನ್ನೊಬ್ಬರು ಕೈ ಹಾಕಿದ್ದಾರೆ ಎಂದು ಚುನಾವಣೆ ಬಳಿಕ ಕಾಂಗ್ರೆಸ್ ಮುಖಂಡರು ನೀಡುತ್ತಿರುವ ಹೇಳಿಕೆ ಸಂಶಯಕ್ಕೆ ಕಾರಣವಾಗಿದೆ.

ಗೆಲುವಿನ ಉತ್ಸಾಹದಲ್ಲಿ ಬಿಜೆಪಿ

ಕಳೆದ 2023 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿಜಿ ಅಜಯಕುಮಾರ 56416 ಅಂದ್ರೆ ಶೇ. 38.50 ರಷ್ಟು ಮತಪಡೆದಿದ್ದು. ಗೆಲುವು ಕಂಡಿದ್ದ ಶಾಮನೂರು ಶಿವಶಂಕರಪ್ಪ 84298 ಮತ ಅಂದ್ರೆ 57.60 ರಷ್ಟು ಓಟ್ ಪಡೆದು 27888 ಮತಗಳಿಂದ ಗೆದಿದ್ದರು. ಆದ್ರೆ, ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮಾಜದ ಮತಗಳು ವಿಭಜನೆಯಾಗಿದ್ದು, ಇದು ಬಿಜೆಪಿಗೆ ಪ್ಲಸ್ ಆಗಿ ಆಗಲಿದೆ. ಇನ್ನೊಂದು ಕುಟುಂಬ ರಾಜಕಾರಣಕ್ಕೆ ಬೇಸತ್ತು ಕೆಲ ಕಾಂಗ್ರೆಸ್ ಮುಖಂಡರುಗಳೇ ಗೌಪ್ಯವಾಗಿ ಬಿಜೆಪಿ ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಇನ್ನು ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸಹ ಹಿಂದೂಳಿದ ವರ್ಗದ ಸಮುದಾಯಕ್ಕೆ ಸೇರಿದ್ದರಿಂದ ಅಹಿಂದ ಮತಗಳು ಸಹ ಬಿಜೆಪಿಗೆ ಬಂದಿವೆ. ಹೀಗಾಗಿ ಬಿಜೆಪಿ ಗೆಲ್ಲಲಿದೆ ಎನ್ನುವ ಲೆಕ್ಕಾಚಾರ ಕೇಸರಿ ಪಡೆ ನಾಯುಕರದ್ದು.

ಕಾಂಗ್ರೆಸ್​ ಲೆಕ್ಕಾಚಾರವೇನು?

ಇನ್ನೊಂದೆಡೆ ಕಾಂಗ್ರೆಸ್​​ ನಾಯಕರ ಲೆಕ್ಕಾಚಾರವೇ ಬೇರೆ ಇದೆ. ಕಳೆದ ಚುನಾವಣೆಗಳನ್ನ ನೋಡಿದಾಗ ಮೇಲ್ಜಾತಿಯ ಜನ ಇರುವ ಮತಗಟ್ಟೆಯಲ್ಲಿ ಸಹ ಕಾಂಗ್ರೆಸ್ ಮತಗಳಿಸಿತ್ತು. ಇದು ಈ ಸಲ ಸಹ ಮುಂದುವರೆಯುವ ಸಾಧ್ಯತೆ ಇದೆ. ಮೇಲಾಗಿ ಶಾಮನೂರು ಶಿವಶಂಕರಪ್ಪ ವೀರಶೈವ ಸಮಾಜದ ಅಧ್ಯಕ್ಷ. ಹೀಗಾಗಿ ವೀರಶೈವದ ಮತಗಳ ಸಾಲಿಡ್ ಆಗಿ ಕಾಂಗ್ರೆಸ್ ಬಿದ್ದಿವೆ. ಇನ್ನು ಅಹಿಂದ ವರ್ಗದ ಮತಗಳು ಸಹ ತಮ್ಮ ಪರವಾಗಿ ಬಿದ್ದಿವೆ. ಹಾಗೇ ಅಲ್ಪಸಂಖ್ಯಾತರ ಮತಗಳು ಹೆಚ್ಚಾಗಿ ವಿಭಜನೆಯಾಗಿಲ್ಲ. ಅಲ್ಪ ಸ್ವಲ್ಪವಾಗಿರಬಹುದು. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರದ ಬದಲಿಗೆ ಗೆಲುವಿನ ಲೀಡ್ ಕಡಿಮೆಯಾಗಹುದು ಎನ್ನುವು ಕಾಂಗ್ರೆಸ್ಸಿಗರ ಲೆಕ್ಕಾಚಾರ.​​

ನೆಕ್-ಟು-ನೆಕ್ ಫೈಟ್

ತಮ್ಮದೇ ಸರ್ಕಾರ ಇರುವುದರಿಂದ ಮತ್ತು ತಾವೇ 2023ರ ಚುನಾವಣೆಯಲ್ಲಿ ಗೆದ್ದ ಕ್ಷೇತ್ರವಾಗಿರುವ ಹಿನ್ನಲೆಯಲ್ಲಿ, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಗೆಲುವು ಅನಿವಾರ್ಯ. ಆದರೆ, ಕೆಲ ಮತದಾರರು ಮಾತನಾಡುವಂತೆ ಬಿಜೆಪಿ ತೀವ್ರ ಪೈಪೋಟಿ ಇದೆ. ನೆಕ್-ಟು-ನೆಕ್ ಫೈಟ್ ಇರುವುದರಿಂದ ಯಾರೇ ಗೆದ್ದರೂ ಅಲ್ಪ ಮತಗಳಿಂದ ಎಂಬ ಮಾತು ಕೇಳಿಬಂದಿವೆ.

ಏನೇ ಆಗಲಿ ಹಿಂದೆಂದು ಕಂಡರಿಯದ ಸ್ಪರ್ಧೆ ಈ ಸಲ ಆಗಿದೆ. ಜಿದ್ದಾಜಿದ್ದಿ ಸ್ವಲ್ಪ ಜಾಸ್ತಿಯೇ ಇತ್ತು. ಅವರು ಮತ ಕಿತ್ತರೇ, ಆ ಪ್ರದೇಶದಲ್ಲಿ ಇವರು ಸ್ವಲ್ಪ ಜಾಸ್ತಿ ತೆಗೆದುಕೊಂಡರೇ ನಮಗೆ ಅನುಕೂಲ ಎಂಬ ಮಾತುಗಳೇ ಕೇಳಿ ಬರುತ್ತಿವೆ. ಹೀಗಾಗಿ ಎರಡು ಪಕ್ಷಗಳ ಮುಖಂಡರಲ್ಲಿ ಗೆಲುವಿನ ವಿಶ್ವಾಸ ಅಂತು ಇದೆ.

Published On - 10:32 pm, Fri, 10 April 26

Follow Us