ಅಸ್ಸಾಂನ ಆಂತರಿಕ ಸಂಘರ್ಷ ಗೊತ್ತಿದ್ದರೂ ರಾಹುಲ್ ಗಾಂಧಿ ಅಲ್ಲಿಗೆ ಹೋಗಿದ್ದೇಕೆ: ಹೆಚ್ಡಿ ದೇವೇಗೌಡ ಪ್ರಶ್ನೆ
ಎಷ್ಟೇ ದೇವಾಲಯ ಕಟ್ಟಿದರೂ ರಾಮ ಒಬ್ಬನೇ. ಪ್ರಧಾನಿ ನರೇಂದ್ರ ಮೋದಿಯವರ ವ್ರತ, ಉಪವಾಸದ ಬಗ್ಗೆ ಮಾತು ಅನವಶ್ಯಕ ಎಂದು ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ, ಜನವರಿ 25: ಅಸ್ಸಾಂನಲ್ಲಿ ಕೆಲವು ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಇದೆ, ಸಂಘರ್ಷದ ಪರಿಸ್ಥಿತಿ ಇದೆ. ಇದು ಗೊತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಲ್ಲಿಗೆ ಹೋಗಿದ್ದೇಕೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡರು (HD Deve Gowda) ಪ್ರಶ್ನಿಸಿದರು. ಹಾಸನದಲ್ಲಿ ತಾಲೂಕುವಾರು ಸಭೆ ನಡೆಸಿ ಪಕ್ಷದ ಎಲ್ಲಾ ಹಂತದ ಚುನಾಯಿತ ಹಾಲಿ ಹಾಗೂ ಮಾಜಿ ಸದಸ್ಯರ ಭೇಟಿಯಾಗುತ್ತಿರುವ ಸಂದರ್ಭ ದೇವೇಗೌಡರು ಮಾತನಾಡಿದರು. ರಾಹುಲ್ ಗಾಂಧಿಯ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಪೊಲೀಸರು ಅಡ್ಡಿಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿನ ವಿಚಾರ ಗೊತ್ತಿದ್ದೂ ಗೊತ್ತಿದ್ದೂ ಅವರು ಹೋಗಿದ್ದೇಕೆ ಎಂದು ಪ್ರಶ್ನಿಸಿದರು.
ಐಎನ್ಡಿಐಎ ಮೈತ್ರಿಕೂಟದಿಂದ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ್ದಲ್ಲ. ಸಾಕಷ್ಟು ನಾಯಕರ ಅಭಿಪ್ರಾಯ ಬೇರೆ ರೀತಿ ಇದೆ. ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗಿ ಸ್ಥಿರ ಸರ್ಕಾರ ಕೊಡುವುದಾಗಿ ಹೇಳುವ ಮನೋಭಾವ ಇಲ್ಲ. ಮುಂದಿನ ದಿನಗಳಲ್ಲಿ ಆಶ್ಚರ್ಯಕರ ಬೆಳವಣಿಗೆ ಆದರೆ ನೋಡೋಣ ಎಂದರು.
ಅಯೋದ್ಯೆ ರಾಮ ಮಂದಿರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಚಿವ ರಾಜಣ್ಣ ಒಂದು ಅಭಿಪ್ರಾಯ ಹೇಳ್ತಾರೆ. ನ್ನೊಬ್ಬರು ನಾನೆ ಶಿವ, ಸಿದ್ದರಾಮಯ್ಯ ಅವರೇ ರಾಮ ಎನ್ನುತ್ತಾರೆ. ಆದರೆ, ಇರುವುದು ಒಬ್ಬನೇ ರಾಮ ಅಲ್ಲವೇ? ಎಷ್ಟೇ ದೇವಾಲಯ ಕಟ್ಟಿದರೂ ರಾಮ ಒಬ್ಬನೇ. ನಮ್ಮವರೇ ಆದ ಶಿಲ್ಪಿ ಅದ್ಭುತವಾಗಿ ರಾಮನ ಮೂತ್ರಿ ಕೆತ್ತಿದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ವ್ರತ, ಉಪವಾಸದ ಬಗ್ಗೆ ಮಾತು ಅನವಶ್ಯಕ ಎಂದು ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಪ್ರಧಾನಿ ಆಗಿದ್ದಾಗ ನನ್ನ ಸರ್ಕಾರ ಪತನಗೊಳಿಸಿದರು. ನಾನು ಏನು ತಪ್ಪು ಮಾಡಿದ್ದೆ? ನಾನು ದಿನಕ್ಕೆ 18 ಗಂಟೆ ಕೆಲಸ ಮಾಡಿದ್ದೆ. ಲಡಾಖ್, ಅಂಡಮಾನ್ ಬಿಟ್ಟು ಎಲ್ಲಾ ಕಡೆ ಹೋಗಿದ್ದೆ. ದೇಶದ ಎಲ್ಲಾ ಸಮಸ್ಯೆ ಬಗೆ ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಯಾಕೆ ಪತನಗೊಳಿಸಿದಿರಿ? ಗುಲಾಮ್ ನಬಿ ಅಜಾದ್ ಬಂದಿದ್ದರು. ನಾನು ಸಿದ್ದರಾಮಯ್ಯ ಅವರ ಹೆಸರು ಹೇಳಲಿಲ್ಲ, ಖರ್ಗೆ ಹಾಗೂ ಮುನಿಯಪ್ಪ ಅವರ ಹೆಸರು ಹೇಳಿದ್ದೆ. ನಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ಸಾಕಷ್ಟು ವಿಚಾರಗಳು ನಡೆದಿವೆ. ಸಿದ್ದರಾಮಯ್ಯ ಈ ಹಿಂದೆಯೂ ಮುಖ್ಯಮಂತ್ರಿ ಆಗಿದ್ದವರು. ಅವರು ಏನೆಲ್ಲಾ ಮಾಡಿದರೂ ಸಿಕ್ಕಿದ್ದು ಕೇವಲ 78 ಸ್ಥಾನ ಎಂದು ಅವರು ಹೇಳಿದರು.
ಇದನ್ನೂ ಓದಿ: ಮೈತ್ರಿಯಿಂದ ಆನೆಬಲ: ಹಾಸನದಲ್ಲಿ ಹೆಚ್ಡಿ ದೇವೇಗೌಡ ತಾಲೂಕುವಾರು ಸಭೆ
ಯಾವ ಪತ್ರಿಕೆ ನೋಡಿದರೂ ಸರ್ಕಾರದ ಜಾಹಿರಾತು ಎಂದು ತೋರಿಸಿದ ದೇವೇಗೌಡರು, ನಾನು ಕೂಡ ಒಂದೂವರೆ ವರ್ಷ ಸಿಎಂ ಆಗಿದ್ದೆ. ಒಂದೇ ಒಂದು ಜಾಹಿರಾತು ಕೊಡಲಿಲ್ಲ. ಹತ್ತೂವರೆ ತಿಂಗಳು ಪ್ರದಾನಿಯಾಗಿದ್ದಾಗಲೂ ಒಂದೇ ಒಂದು ಜಾಹಿರಾತು ಕೊಡಲಿಲ್ಲ. ಸಾರ್ವಜನಿಕಕರ ಹಣವನ್ನು ಮಾದ್ಯಮಗಳ ಮೂಲಕ ಪ್ರಚಾರ ಮಾಡಿ ಅಧಿಕಾರಕ್ಕೆ ಬರೊದು ಸಾಧ್ಯವಿಲ್ಲ. ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬೆಂಗಳೂರಿನಲ್ಲಿ ಎಷ್ಟೆಲ್ಲ ಜಾಹಿರಾತು ಹಾಕಿಸಿದ್ದರೂ ಎಚ್ಟು ಸ್ಥಾನ ಬಂದಿತ್ತು? ಇವುಗಳಿಂದ ಜನ ಮಾರು ಹೋಗಲ್ಲ. ಜನರಿಗೆ ರಾಜಕೀಯ ಪ್ರಜ್ಞೆ ಇದೆ ಎಂದರು. ಈ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಜಾಹಿರಾತು ಸರ್ಕಾರ ಎಂದು ಪರೋಕ್ಷವಾಗಿ ಟೀಕಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ರಾಜಕೀಯ ಅಲ್ಲ, ಪರಿಸ್ಥಿತಿ ಎಂದು ದೇವೇಗೌಡರು ಮಾರ್ಮಿಕವಾಗಿ ನುಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ