ಬಡಿಗೇರರ ‘ರಥ’ ಚಮತ್ಕಾರ; ಮನಮೋಹಕ ಕಲಾ ಕೆತ್ತನೆಗಾಗಿ ‘ಕಟ್ಟಿಗೆ ಮನೆ’ ಹುಡುಕಿ ಬರುತ್ತಿರುವ ಜನ
ಇವರೊಬ್ಬರು ಅದ್ಭುತ ಕಲಾವಿದ. ರಥಗಳ ನಿರ್ಮಾಣವನ್ನೇ ವೃತ್ತಿ ಹಾಗೂ ಆಸಕ್ತಿಯನ್ನಾಗಿಸಿಕೊಂಡವರು. ಇವರ ಬಳಿಯೇ ರಥ ಸಿದ್ಧಪಡಿಸಬೇಕು ಎಂದು ರಾಜ್ಯದ ವಿವಿಧ ಕಡೆಯಿಂದ ಅಷ್ಟೇ ಅಲ್ಲ, ಹೊರರಾಜ್ಯಗಳಿಂದ ಹುಡುಕಿಕೊಂಡು ಬರುತ್ತಾರೆ ಜನರು!
ಬಳ್ಳಾರಿ: ಇವರೊಬ್ಬರು ಅದ್ಭುತ ಕಲಾವಿದ. ರಥಗಳ ನಿರ್ಮಾಣವನ್ನೇ ವೃತ್ತಿ ಹಾಗೂ ಆಸಕ್ತಿಯನ್ನಾಗಿಸಿಕೊಂಡವರು. ಇವರ ಬಳಿಯೇ ರಥ ಸಿದ್ಧಪಡಿಸಬೇಕು ಎಂದು ರಾಜ್ಯದ ವಿವಿಧ ಕಡೆಯಿಂದ ಅಷ್ಟೇ ಅಲ್ಲ, ಹೊರರಾಜ್ಯಗಳಿಂದ ಹುಡುಕಿಕೊಂಡು ಬರುತ್ತಾರೆ ಜನರು!
ಇಲ್ಲಿ ನಾವು ಹೇಳುತ್ತಿರುವುದು ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಚನ್ನೇಶ್ ಬಡಿಗೇರ ಎಂಬುವವರ ಬಗ್ಗೆ. ಒಂದು ಪುಟ್ಟ ಕಟ್ಟಿಗೆ ಮನೆಯಲ್ಲಿ ವಾಸ. ಕಳೆದ 6 ವರ್ಷಗಳಿಂದ ಒಟ್ಟು 20 ವಿಭಿನ್ನ ರಥಗಳನ್ನು ತಯಾರಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಹ ಕೊಟ್ಟಿದ್ದಾರೆ. ಚನ್ನೇಶ್ ಕೈಯಲ್ಲಿ ಸಿದ್ಧವಾಗುವ ರಥ, ಅದರ ಮೇಲೆ ಅರಳುವ ಚಿತ್ತಾರ ನಿಜಕ್ಕೂ ಮನಮೋಹಕ. ಅದೊಂದು ಚಮತ್ಕಾರ ಎಂದು ಹೇಳುತ್ತಾರೆ ಸ್ಥಳೀಯರು.
ರಥ ತಯಾರಿಕೆ ಪ್ರಾರಂಭಿಸುವ ಹಿಂದಿದೆ ಒಂದು ರೋಚಕ ಕಥೆ ಅಂದ ಹಾಗೆ, ಚನ್ನೇಶ್ ಓದಿರುವುದು ಕೇವಲ 10ನೇ ತರಗತಿಯವರೆಗೆ. ಇವರ ಕುಲಕಸುಬು ಬಡಿಗತನ ಆಗಿತ್ತು. ತಂದೆ ಮಾಡುತ್ತಿದ್ದ ಕೆಲಸವನ್ನೇ ಚನ್ನೇಶ್ ಕೂಡ ಮುಂದುವರಿಸಿದರು. ಮೊದಮೊದಲು ಮನೆ ಬಾಗಿಲು, ಕಿಟಕಿ, ಸಣ್ಣಪುಟ್ಟ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದರೆ, ಇವರಲ್ಲಿ ರಥ ತಯಾರಿಸುವ ಆಸಕ್ತಿ ಶುರುವಾಗಿದ್ದೇ ಬಲು ರೋಚಕ.
ಹೀಗೆ ಒಂದು ಬಾರಿ ಹರಪನಹಳ್ಳಿ ಪಟ್ಟಣದ ತೆಗ್ಗಿನ ಮಠಕ್ಕೆ ಪುಟ್ಟದೊಂದು ರಥ ಬೇಕಾಗಿತ್ತು. ಮಠದವರು ಹಲವು ಕಡೆ ಕೇಳಿಬಂದರೂ ಸಕಾಲಕ್ಕೆ ರಥ ನಿರ್ಮಾಣ ಮಾಡಿಕೊಡುವವರು ಸಿಗಲಿಲ್ಲ. ಹೀಗಾಗಿ, ಇಲ್ಲಿಯೇ ಇರುವ ಚನ್ನೇಶ್ನ ಬಳಿ ಬಂದು, ಒಂದು ರಥ ಮಾಡಿಕೊಡುವಂತೆ ಕೇಳಿಕೊಂಡರು.
ಒಮ್ಮೆಲೇ ಒಪ್ಪದ ಚನ್ನೇಶ್, ನಾವು ಕಿಟಕಿ, ಬಾಗಿಲು ಮಾಡುವವರು ಎಂದು ನಿರಾಕರಿಸಿದರು. ಆದರೆ ಮಠದವರು ಬಿಡಲಿಲ್ಲ. ಇವರ ಕೈಯಿಂದಲೇ ಒಂದು ರಥ ಮಾಡಿಸಿಯೇ ಬಿಟ್ಟರು. ಅಲ್ಲಿಂದ ಶುರುವಾಯ್ತು ನೋಡಿ ಇವರ ರಥ ತಯಾರಿಕೆಯ ಪಯಣ.
ರಥ ನಿರ್ಮಾಣದ ಕಲೆ ಕೈಗಾರಿಕೆಯಾಗಿ ಮಾರ್ಪಾಡು ಒಂದರ ಬೆನ್ನಿಗೆ ಮತ್ತೊಂದು ರಥಗಳ ಆರ್ಡರ್ ಬರುತ್ತಲೇ ಹೋಯಿತು. ಹೀಗೆ, ನಿರಂತರವಾಗಿ ರಥಗಳ ನಿರ್ಮಾಣಕ್ಕೆ ಆರ್ಡರ್ ಬರಲು ಶುರುವಾಗುತ್ತಿದ್ದಂತೆ, ಚನ್ನೇಶ್ ಒಂದು ಗಟ್ಟಿ ನಿರ್ಧಾರ ಮಾಡಿದರು. ಇದು ಕೇವಲ ಕಲೆಯಾಗಿ ಉಳಿದರೆ ಸಾಕಾಗಲ್ಲವೆಂದು ಇದನ್ನು ಕೈಗಾರಿಕೆಯಾಗಿ ಪರಿವರ್ತಿಸಿದರು.
ಅದರಂತೆ 20 ಜನರಿಗೆ ಉದ್ಯೋಗಾವಕಾಶ ಸಹ ಕೊಟ್ಟಿದ್ದಾರೆ. ಇವರಲ್ಲಿ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರು 8-10 ಮಂದಿ. ಉಳಿದವರು ಕಟ್ಟಿಗೆ ತರುವುದರಿಂದ ಸೇರಿ ಸಣ್ಣಪುಟ್ಟ ಸಹಾಯಕ್ಕೆ ಇದ್ದಾರೆ. ಚನ್ನೇಶ್ ಸಹೋದರ ವೀರೇಶ ಬಡಿಗೇರ ಸಹ ತಮ್ಮ ಅಣ್ಣನ ಕೆಲಸಕ್ಕೆ ಕೈಜೋಡಿಸಿದ್ದಾರೆ.
ರಥಗಳ ವಿನ್ಯಾಸದಲ್ಲಿ ಕಾಣಸಿಗುತ್ತೆ ಬಾಲ್ಯದ ಹವ್ಯಾಸ ಚನ್ನೇಶ್ಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ. ಅಂದಿನಿಂದಲೂ ಚಿತ್ರ ಬಿಡಿಸುವ ಅಭ್ಯಾಸ ಇದ್ದರಿಂದ ಇದೀಗ ಯಾವುದೇ ಮಾದರಿಯ ರಥ ಅಥವಾ ಕೆತ್ತನೆ ಬೇಕು ಎಂದು ಕೇಳಿದರೂ ಅದರಂತೆ ಸುಂದರವಾಗಿ ನಿರ್ಮಿಸಿಕೊಡುತ್ತಾರೆ. ಒಂದು ಚಿತ್ರವನ್ನು ಪೇಪರ್ ಮೇಲೆ ಬಿಡಿಸಿ, ಅದನ್ನು ಕಟ್ಟಿಗೆಗೆ ಲಗತ್ತಿಸಿ ನಂತರ ಕೆತ್ತುತ್ತಾರೆ.
ಶ್ರೀಗಂಧ, ಸಾಗವಾನಿಯಂಥ ಹೆಚ್ಚು ಕಾಲ ಬಾಳಿಕೆ ಬರುವ ಮರದ ಕಟ್ಟಿಗೆಯನ್ನು ಬಳಸಿ ರಥ ಸಿದ್ಧಪಡಿಸುತ್ತಾರೆ. ಚಕ್ರ, ಮಂಟಪ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಆನೆ, ಕುದುರೆ, ದ್ವಾರಪಾಲಕ, ವಿಘ್ನೇಶ್ವರ ಸೇರಿ ವಿವಿಧ ರೀತಿಯ ಕೆತ್ತನೆಗಳುಳ್ಳ ರಥಗಳನ್ನು ಇವರು ನಿರ್ಮಿಸಿದ್ದಾರೆ.
ರಥ ನಿರ್ಮಾಣ ಕಾರ್ಯ ಈಗ ಆಯ್ತು ಸುಲಭ ಚನ್ನೇಶ್ಗೆ ಈ ಹಿಂದೆ ವರ್ಷಕ್ಕೊಂದು ರಥ ಮಾಡಲು ಸಾಧ್ಯವಾಗುತ್ತಿತ್ತು. ಇದೀಗ, ಕಟ್ಟಿಗೆ ಕೊರೆಯುವ ಯಂತ್ರ, ಪಾಲಿಶ್ ಮೆಷಿನ್ಗಳನ್ನು ತಂದಿಟ್ಟುಕೊಂಡಿದ್ದಾರೆ. ಜೊತೆಗೆ, 20 ಯುವಕರು ಕೆಲಸಕ್ಕಿರುವುದರಿಂದ ರಥ ನಿರ್ಮಾಣ ಕಾರ್ಯ ಸುಲಭವಾಗಿದೆ. ವರ್ಷಕ್ಕೆ 10 ರಥಗಳು ಸಿದ್ಧವಾಗುತ್ತಿವೆ.
ನಿರೀಕ್ಷೆಗೂ ಮೀರಿ ಆದಾಯ ಬರುತ್ತಿದೆ. 2012ರಿಂದ ಶುರುವಾದ ರಥ ನಿರ್ಮಾಣದ ಕಾಯಕ ಮುಂದುವರಿಯುತ್ತಿದೆ. ಸದ್ಯ ಹರಪನಹಳ್ಳಿ ದೇವಸ್ಥಾನಕ್ಕಾಗಿ ದೊಡ್ಡದೊಂದು ರಥ ನಿರ್ಮಾಣವಾಗುತ್ತಿದ್ದು, ನಂತರ ಮತ್ತೊಂದು ರಥಕ್ಕೆ ಆರ್ಡರ್ ಬಂದಿದೆ ಎಂದು ಚನ್ನೇಶ್ ಹಂಚಿಕೊಂಡಿದ್ದಾರೆ. -ಬಸವರಾಜ್ ದೊಡ್ಮನಿ