New Book: ಶೆಲ್ಫಿಗೇರುವ ಮುನ್ನ; ‘ಅವಳೆಂಬ ಸುಗಂಧ’ ಶೋಭಾ ಹೆಗಡೆ ಪುಸ್ತಕ ನಾಳೆ ಬಿಡುಗಡೆ
Influence : ಸಿನೆಮಾವನ್ನೇ ನಿಜವೆಂದು ಭಾವಿಸಿ, ಬಯಸಿಬಿಟ್ಟಳು. ನಾಯಕಿಯ ದಾಂಪತ್ಯದಂತೆ ತನ್ನದಿರಬೇಕೆಂಬ ಅವಳ ಹೆಬ್ಬಯಕೆ ಮೈಮನದಲ್ಲಿ ಬೇರೂರಿಬಿಟ್ಟಿತ್ತು. ಚಿಕ್ಕಪ್ಪನಲ್ಲಿ, ತನಗೆ ಪೇಟೆಯಲ್ಲಿದ್ದ ನೌಕರಿ ಮಾಡುವ ಹುಡುಗನೇ ಬೇಕು ಎಂದಳು.
ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com
ಕೃತಿ: ಅವಳೆಂಬ ಸುಗಂಧ ಲೇಖಕಿ: ಶೋಭಾ ಹೆಗಡೆ ಪುಟ: 172 ಬೆಲೆ: ರೂ. 160 ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್, ಕೋಡೂರು
ಕೂಡುಕುಟುಂಬಗಳಲ್ಲಿ ಬಾಲ್ಯ ಕಳೆಯುವ ಪುಣ್ಯ 60-70 ರ ದಶಕದ ಮಲೆನಾಡ ಮಕ್ಕಳದಾಗಿತ್ತು. ದೊಡ್ಡಮ್ಮ ದೊಡ್ಡಪ್ಪ ಅಜ್ಜ, ಅತ್ತೆ ಮಾವ ಚಿಕ್ಕಪ್ಪಂದಿರು ಮನೆತುಂಬ ಮಕ್ಕಳು ಆಳು ಕಾಳುಗಳು, ತೋಟ ಕೊಟ್ಟಿಗೆಗಳಲ್ಲಿ ದುಡಿತದ ನಡುವೆ ಮುದ ನೀಡುವ ಮನುಷ್ಯ ಸಂಬಂಧಗಳು.. ಎಲ್ಲವನ್ನು ಲೇಖಕಿ ಬಾಲ್ಯದ ಬೆರಗಿನಿಂದ ನೋಡುತ್ತ ಬೆಳೆದವರು. ಸುಖವಾಗಿ ದಿನ ಕಳೆಯುತ್ತಿರುವ ಮಹಿಳೆಯರಿಗೆ ದೈಹಿಕ ಶ್ರಮವೊಂದು ಬಿಟ್ಟರೆ ನಾಗರಿಕ ಪ್ರಪಂಚದ ಸಂಕೀರ್ಣ ಸಮಸ್ಯೆಗಳು ಕಡಿಮೆ. ಆದರೂ “ಹೆಣ್ಣುಮಗಳೊಬ್ಬಳು ಜಗುಲಿಯ ಮೇಲೆ ಕುಳಿತಿದ್ದಾಳೆಂದರೆ ಒಂದೋ ಅವಳಿಗೆ ಧೈರ್ಯವಿರಬೇಕು ಅಥವಾ ಅವಳ ಸಮಸ್ಯೆ ಅಷ್ಟು ಗಂಭೀರವಾಗಿದ್ದಾಗಿರಬೇಕು” (ಆಧುನಿಕ ಕೈಕೇಯಿ) ಎನ್ನುವ ಲೇಖಕಿ ಕೂಡು ಕುಟುಂಬವೊಂದು ಹಿತಚಿಂತಕರೆನಿಸಿಕೊಂಡವರ ಚಿತಾವಣೆಯಿಂದಾಗಿ ಛಿದ್ರಗೊಂಡು ಹಿಸೆ ತೆಗೆದುಕೊಂಡ ತಾಯಿಯನ್ನು ಮಗ ಒಪ್ಪಿಕೊಳ್ಳದೆ ಪುನಃ ಒಂದುಗೂಡಿ ಇಡಿ ಕುಟುಂಬ ಮೊದಲಿನಂತೆ ಕೂಡು ಕುಟುಂಬವಾಗಿ ನಲಿಯುವ ಅಪರೂಪದ ಚಿತ್ರಣವನ್ನು ಲೇಖಕಿ ನೀಡಿದ್ದಾರೆ. ಭುವನೇಶ್ವರಿ ಹೆಗಡೆ, ಲೇಖಕಿ
ಕಾದು ಕುಳಿತಿತ್ತೆ ವಿಧಿ ಆಸೆಯಾಗಿ ಅವಳ ಮುಖದಲ್ಲಿ ನಾಚಿಕೆಯಿತ್ತು. ಕಣ್ಣಲ್ಲಿ ಕನಸಿತ್ತು. ತಲೆ ಅರೆ ತಗ್ಗಿತ್ತು. ಮಡಚಿದ ಮೊಳಕಾಲ ಮೇಲೆ ಗದ್ದವೂರಿ ಅವಳು ನಸುನಗುತ್ತಿದ್ದಳು. ಆರತಿಯ ದೀಪದ ಬೆಳಕು ಅವಳ ಮುಖದ ಕಾಂತಿಯೊಡನೆ ಪೈಪೋಟಿಗಿಳಿದಂತಿತ್ತು. ಆಗಾಗ ಅವಳ ಕಣ್ಣು ಪಕ್ಕದಲ್ಲಿ ಕೂತವನ ಆರಾಧನೆಯನ್ನು ಬೇಡುವಂತೆ ಆ ಕಡೆ ಹೊರಳುತ್ತಿತ್ತು. ಆಗಷ್ಟೇ ಹರೆಯಕ್ಕೆ ಕಾಲಿಡಲು ಹವಣಿಸುತ್ತಿದ್ದ ನಮಗೆ ನವದಂಪತಿಗಳ ಈ ನೋಟ ಅಪ್ಯಾಯಮಾನವಾಗಿತ್ತು. ಅವರಿಗೆ ಆರತಿ ಮಾಡಿರೆಂದು ನನ್ನನ್ನು ಮತ್ತು ಸುಮಕ್ಕನನ್ನು ಕರೆದರೆ ನಮ್ಮೊಳಗೆ ಪುಳಕ. ನಾನು ಮತ್ತು ಸುಮಕ್ಕ ಆರತಿ ಮಾಡಿ, ಅಮ್ಮ ಹಾಡುತ್ತಿದ್ದ ಹಾಡಿಗೆ ಅಲ್ಪ ಸ್ವಲ್ಪ ದನಿಗೂಡಿಸುತ್ತ ನವವಿವಾಹಿತರನ್ನೆ ಕದ್ದು ಕದ್ದು ನೋಡಿದೆವು. ಅಮ್ಮ ಕೊನೆಯಲ್ಲಿ ಅವರನ್ನು ಹರಸಿದ ಹಾಡು ಹಾಡಿದಳು.
‘ದಂಪತಿಗಳೆ ಸುಖದಿ ನೀವ್ ಬಾಳಿ | ದಂಪತಿಗಳೆ ಸುಖದಿ | ದಂಪತಿ ಸುಖದಿ | ಅತ್ಯಂತ ಪ್ರೇಮದಲಿ | ಸಂತತ ಸೌಖ್ಯವು ಶಾಶ್ವತವಿರಲಿ |’
ಕೇಳಿದವರೆಲ್ಲ ಭಾವುಕತೆಯಿಂದ ಆ ಆಶೀರ್ವಾದಕ್ಕೆ ವಿನೀತರಾಗುವಂತಹ ಹಾಡು. ಅಮ್ಮಂದು ಇಂಪಾದ ಧ್ವನಿ. ಅವತ್ತು ನನಗೆ ಮತ್ತು ಸುಮಕ್ಕಂಗೆ ನಮ್ಮ ನೆಚ್ಚಿನ ಹಾಡಿನ ಕುರಿತು ಲಕ್ಷವಿರಲಿಲ್ಲ. ನವಜೋಡಿಗಳ ಕಣ್ಣ ಕಣ್ಣ ಸರಸದಾಟ ನಮಗೆ ಬೇರೆಯದೊಂದು ಲೋಕವಿದೆಯೆಂಬ ಸುಳುಹು ಕೊಡುತ್ತಿತ್ತು. ಆ ಸುಳುಹು ಹಿಡಿಯಬೇಕೆಂಬ ಅನೂಹ್ಯ ಅನ್ವೇಷಣೆ ನಮ್ಮಲ್ಲಿ ಪ್ರಾರಂಭವಾದಂತಿತ್ತು. ನಮ್ಮಿಬ್ಬರ ಭಾವನೆ ಹರೆಯದ ತವಕ ಒಂದೇ ರೀತಿಯದ್ದಾದ್ದರಿಂದ ಆಗಾಗ ನಾವಿಬ್ಬರೂ ಪರಸ್ಪರ ಮುಗುಳ್ನಗುತ್ತ ನಿಂತುಬಿಟ್ಟಿದ್ದೆವು. ಅವರು ತೆರಳಿ ಎಷ್ಟೋ ಹೊತ್ತಿನವರೆಗೂ ಆ ನವನವೀನ ನವ್ಯತೆಯ ಭಾವ ನಮ್ಮಲ್ಲಿ ಹರಿದಾಡುತ್ತಲೆ ಇತ್ತು.
ಹೀಗೆ ಬರುವ ನವಜೋಡಿಗಳು ವರ್ಷಕ್ಕೆ ಒಂದೆರಡಾದರೂ ನಮ್ಮಲ್ಲಿ ಇರುತ್ತಿತ್ತು. ಅವರಿಗೆ ಉಡುಗೊರೆ ಕೊಟ್ಟು, ಹಾಡಿನೊಂದಿಗೆ ಆರತಿ ಬೆಳಗಿ, ರಾಮಸೀತೆಯರಂತೆ, ಲಕ್ಷ್ಮಿ ನಾರಾಯಣರಂತೆ ಬಾಳಿ ಬದುಕಿ ಎಂದು ಹಾರೈಸಿ ಕಳಿಸುವದು ವಾಡಿಕೆ. ಆದರೆ, ಅವತ್ತಿನ ಜೋಡಿಯದೇನೊ ವಿಶೇಷವೆನಿಸಿಬಿಟ್ಟಿತು. ಅದಕ್ಕೆ ಕಾರಣ, ಹರೆಯಕ್ಕೆ ಕಾಲಿಟ್ಟ ನಮ್ಮ ಸಮಯವಾ? ಅಥವಾ ನವಜೀವನಕ್ಕೆ ಕಾಲಿಡುವ ಅವರ ತವಕ ತಲ್ಲಣವಾ? ಗೊತ್ತಿಲ್ಲ. ಹಾಗೆ ನೋಡಿದರೆ, ಸುಂದರಾತಿ ಸುಂದರ ಜೋಡಿಗಳು ಅಜ್ಜನ ಆಶೀರ್ವಾದ ಪಡೆಯಲು ಬಂದು ಹೋಗಿದ್ದರು. ಅತಿಹತ್ತಿರದ ಸಂಬಂಧಿಗಳು ಮದುವೆಯಾದೊಡನೆ ಬಂದು ದೇವರೆದುರು ಎರಡು ತೆಂಗಿನಕಾಯಿಯಿಟ್ಟು ನಮಸ್ಕರಿಸಿ, ಮನೆಯವರಿಗೆಲ್ಲ ಸಿಹಿಹಂಚಿ, ಹಿರಿಯರ ಕಾಲಿಗೆ ನಮಸ್ಕರಿಸಿ ಒಂದು ದಿನವಿದ್ದು ಹೋಗುತ್ತಿದ್ದರು.
ಇವರು ಆ ಎರಡು ವಿಭಾಗಕ್ಕೂ ಸೇರಿದವರಾಗಿರಲಿಲ್ಲ. ಅತಿ ಹತ್ತಿರದ ಬಳಗವಲ್ಲ. ಸುಂದರಾತಿ ಸುಂದರ ಜೋಡಿಯಲ್ಲ. ಆದರೂ ಏನೊ ಸೆಳೆತ. ಏನದು? ಆ ಕಣ್ಣಿನಲ್ಲಿದ್ದ ಕನಸಾ? ಇರಬಹುದು ಎಂದು ಈಗನಿಸುತ್ತಿದೆ. ನಾವು ಹೊಂದಬೇಕಾದ್ದನ್ನು ಧ್ಯಾನಿಸಬೇಕಂತೆ. ಹೇಗೆಂದರೆ ಅದು ನಮ್ಮ ಕನಸಲ್ಲಿ ಬರುವಷ್ಟು ಸ್ಮರಿಸಬೇಕಂತೆ. ಅದು ಸಾಕಾರಗೊಳ್ಳುವಂತೆ ಕನವರಿಸಬೇಕಂತೆ. ಆಗ ಸಮಯ ಅದನ್ನು ಎಳೆತಂದು ನಮ್ಮೆದುರು ನಿಲ್ಲಿಸುತ್ತದೆಯಂತೆ. ಇಲ್ಲಿ ಘಟಿಸುವದೂ ಅದೇ ಇರಬಹುದು. ಅವಳಿಗೆ ಅಪಾರ ಕನಸಿತ್ತು. ಅವನ್ನೆಲ್ಲ ಹೊಂದಿ ಸುಖವಾಗಿರಬೇಕೆಂಬ ಆತುರವಿತ್ತು. ಆದರೆ ವಿಧಿ ಅವಳ ಹಣೆಯಲ್ಲಿ ಬರೆದದ್ದೆ ಬೇರೆ.
ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಸುಧಾ ಶರ್ಮಾ ಪುಸ್ತಕ ‘ನಮ್ಮೊಳಗೆ ನಾವು’ ನಾಳೆಯಿಂದ ನಿಮ್ಮ ಓದಿಗೆ
ಅವಳ ಹೆಸರು ಕೋಮಲಾ. ಹೆಸರಿಗೆ ತಕ್ಕಂತೆ ಸುಕೋಮಲೆ. ಸಿರಿಯೂರಿನವಳು. ಅವಳ ಚಿಕ್ಕಪ್ಪನ ಹೆಂಡತಿ ನನ್ನಜ್ಜನ ತಂಗಿಯ ಮೊಮ್ಮಗಳು. ಅವಿಭಕ್ತ ಕುಟುಂಬದ ರೀತಿಯೆ ಹಾಗೆ. ಅಲ್ಲಿ ಸಂಬಂಧಗಳು ಒಂದು ಕುಟುಂಬದಿಂದ ಇನ್ನೊಂದು ಕುಟುಂಬದೊಡನೆ ಇರುತ್ತದೆ. ಅಲ್ಲಿ ಒಂಟಿ ಮನುಷ್ಯ ನಗಣ್ಯ. ಆ ಕುಟುಂಬದ ಭಾವನೆಯೊಡನೆ, ಅಥವಾ ಅಭಿಪ್ರಾಯ, ನಿರ್ಣಯದೊಡನೆ ಆ ಮನೆಯ ಸದಸ್ಯರ ವೈಯಕ್ತಿಕ ಭಾವನೆ ಸಮ್ಮಿಳಿತವಾಗಿರುತ್ತದೆ. ಅದರಿಂದಾಗಿ ಪ್ರತಿಯೊಬ್ಬರೂ ಸುರಕ್ಷಿತವಾಗಿದ್ದೇವೆಂಬ ಭದ್ರತೆಯಲ್ಲಿರುತ್ತಾರೆ. ಅದರ ಒಂದು ಲಾಭ ಮನಸ್ಸಿನ ಹಿಗ್ಗುವಿಕೆ. ಬಾಲ್ಯದಿಂದಲೆ ಮಕ್ಕಳು ಹಂಚಿಕೊಂಡು ಬದುಕುವುದನ್ನು ಅನಾಯಾಸವಾಗಿ ಕಲಿತುಬಿಡುತ್ತಾರೆ. ಅದು ಆಹಾರವಿರಲಿ, ಭಾವನೆಯಿರಲಿ, ಸಮಸ್ಯೆಯಿರಲಿ, ಗೊಂದಲ ಗಲಿಬಿಲಿಯಿರಲಿ, ಒಬ್ಬರಿಂದ ಹಲವರದ್ದಾಗಿ ಅವು ಹಗುರಾಗಿಬಿಡುತ್ತವೆ. ಬಿಸಿಲಿರಲಿ ಮಳೆಯಿರಲಿ ಛತ್ರಿ ಬಿಚ್ಚಿಕೊಂಡರಷ್ಟೆ ಲಾಭ. ಹಾಗೆಯೆ ಮನಸ್ಸು. ತನ್ನ ತಾನು ತೆರೆದುಕೊಂಡಷ್ಟು ಕಲಿಕೆ ಸುಲಭ. ಇರುವಿಕೆ ಸ್ವಾಭಾವಿಕ.
ಹಾಗೆ ಕೋಮಲಾ ಸಂಬಂಧದಿಂದ ನಮಗೆ ದೂರದವಳಾದರೂ ಬಳಕೆಯಿಂದ ಮತ್ತು ಆ ಕುಟುಂಬಕ್ಕೆ ಸೇರಿದವಳಾಗಿ ನಮಗೆ ಆಪ್ತಳಾಗಿದ್ದಳು. ಬೆಣ್ಣೆಯಷ್ಟು ಮೃದುವಾದ ಮನಸ್ಸು. ಜಗತ್ತೆಲ್ಲ ತನ್ನಂತೆ ಎಂದು ನಂಬಿ ಬಿಡುವ ಮುಗ್ಧತೆ. ಇದ್ದದ್ದನ್ನು ಇದ್ದಂತೆ ಇಟ್ಟುಬಿಡುವ, ಕೈಲ್ಲಿದ್ದದ್ದನ್ನು ಅನಾಮತ್ತು ಕೊಟ್ಟುಬಿಡುವ ಸಾಚಾತನ. ಹತ್ತಿರದ ಶಾಲೆಯಲ್ಲಿ ಓದಿ ಏಳನೇಯ ತರಗತಿಯನ್ನು ತಾಲೂಕಾ ಕೇಂದ್ರ ಸಿರ್ಸಿಗೆ ಹೋಗಿ ಬರೆದು ಜಿಲ್ಲೆಗೆ ಮೊದಲನೇಯವಳಾಗಿ ತೇರ್ಗಡೆಯಾದಳು. ಅವಳನ್ನು ತನ್ನ ಪ್ರಾಣದಂತೆ ಪ್ರೀತಿಸುವ ಅವಳ ಚಿಕ್ಕಪ್ಪನ ಒತ್ತಾಸೆಯಿಂದಾಗಿ ಹತ್ತನೇಯ ತರಗತಿಯನ್ನು ಮೊದಲ ಶ್ರೇಣಿಯಲ್ಲಿ ಮುಗಿಸಿದಳು. ಆಗ ಅವಳ ಶಾಲೆಯಲ್ಲಿ ಅವಳನ್ನು ಸನ್ಮಾನಿಸಿ ಇದ್ದರೆ ಇಂತಹ ಮಕ್ಕಳಿರಬೇಕು ಎಂದು ಪಾಲಕರೆಲ್ಲ ಕೊಂಡಾಡಿದರು. ಆಗಲೂ ಅವಳ ತಲೆ ವಿದೇಯತೆಯಿಂದ ತಗ್ಗಿತ್ತು. ಕಣ್ಣಲ್ಲಿ ಮುಗ್ಧತೆಯ ಪರೆಯಿತ್ತು. ಅವಳೆಲ್ಲ ಆಸೆ ಪೂರೈಸುವದರಲ್ಲಿ ಸುಖ ಕಾಣುತ್ತಿದ್ದ ಚಿಕ್ಕಪ್ಪ ಅವಳಾಸೆಯಂತೆ ಅವಳನ್ನು ಸಿನೇಮಾ ತೋರಿಸಲು ಕರೆದೊಯ್ದ. ಆಗೆಲ್ಲ ಸಿರ್ಸಿ ಪೇಟೆಗೆ ಹೋಗಿ ಒಂದು ಸಿನೇಮಾ ನೋಡಿಕೊಂಡು ಬಸ್ ಸ್ಟ್ಯಾಂಡ್ ಕ್ಯಾಂಟೀನ್ ನಲ್ಲಿ ಮಸಾಲೆದೋಸೆ ತಿಂದು ಬಂದರೆ ಅದೇ ಪರಮ ಸೌಭಾಗ್ಯವೆಂಬ ಕಾಲ.
ಮನೆಯಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಭಾನುವಾರ ಮತ್ತು ಬುಧವಾರ ಮಾತ್ರ ಬಳಸಬೇಕಿತ್ತು. ಉಳಿದ ದಿನ ಅವುಗಳನ್ನು ಅಟ್ಟದ ಮೇಲಿನಿಂದ ಇಳಿಸುವಂತಿರಲಿಲ್ಲ. ಅದರಿಂದಾಗಿ, ಕಡಲೇಕಾಯಿ ಎಣ್ಣೆ ಸುರಿದು ಸಾಕಷ್ಟು ಈರುಳ್ಳಿ ಬಳಸಿದ ಆಲೂಗೆಡ್ಡೆ ಪಲ್ಯವನ್ನು ಒಳಗೆ ಅಡಗಿಸಿಟ್ಟುಕೊಂಡು ಸುರುಳಿಯಾಗಿ ಬರುವ ದೋಸೆಯೆಂದರೆ ನಮಗೆ ಬಲು ಇಷ್ಟವಾಗಿತ್ತು. ಸಂಜೆವರೆಗೂ ಆಗಾಗ ಕೈಯ್ಯಲ್ಲಿದ್ದ ಘಮ ಹೋಗಿಲ್ಲವೆಂದು ಮೂಸಿ ನೋಡುತ್ತ ತಿಂದ ಸ್ವಾದವನ್ನು ಮರೆಯದಂತೆ ಮತ್ತೆಮತ್ತೆ ಆಸ್ವಾದಿಸುವುದೇ ಆನಂದವಾಗಿತ್ತು. ಕೋಮಲಾ ಕೂಡ ಹಾಗೆಯೇ ಮಾಡುವವಳಿದ್ದಳು, ಆದರೆ ಅಂದು ನೋಡಿದ ಸಿನೇಮಾ ಅವಳನ್ನು ಹೇಗೆ ಆವರಿಸಿಬಿಟ್ಟಿತೆಂದರೆ ಇನ್ಯಾವ ಚಪ್ಪರಿಸುವಿಕೆಗೂ ಅವಳಲ್ಲಿ ಅವಕಾಶವೇ ಇಲ್ಲದಂತಾಗಿಬಿಟ್ಟಿತು. ಕೂತರೆ, ನಿಂತರೆ ನಾಯಕನ ಹಾವಭಾವ, ಪ್ರೇಮಾಧರದ ನೋಟ ನೆನಪಾಗತೊಡಗಿತ್ತು. ನಾಲಿಗೆಯ ರುಚಿ ಅರುಚಿಯ ವ್ಯತ್ಯಾಸ ಅಂದು ಕಡಿಮೆಯಾಗಿತ್ತು.
ನಂತರದ ದಿನಗಳಲ್ಲಿ ಮನೆಯ ಕೆಲಸದಲ್ಲಿ ಸಹಾಯ ಮಾಡುವಾಗಲೂ, ಯಾವುದೇ ಪುಸ್ತಕ ಓದುವಾಗಲೂ ಮರೆಯಾಗುವ ಆ ಮಧುರ ನೆನಪು ಯಾರೇ ಮದುವೆಯ ಕರೆಯೋಲೆ ಹಿಡಿದು ಬಂದರೂ ಅದರೊಳಗೆ ಅಡಗಿ ಬರತೊಡಗಿತು. ದಿನಗಳು ಕಳೆದ ಮೇಲೆ ಮರೆಯಾಗಬಹುದೆಂದುಕೊಂಡಿದ್ದು ಸುಳ್ಳಾಯಿತು. ನೆನಪುಗಳೆ ಹಾಗಲ್ಲವೆ. ಮೊದಲು ಮಧುರ. ನಂತರ ಅಮರ. ಮುಂದೆ ಸಂಸ್ಕಾರ. ಹಾಗೆ ಗಟ್ಟಿಯಾದರೆ ಸಾಕಾರ. ಅವಳಿಗಾದದ್ದೂ ಅದೇ. ಸಿನೇಮಾವನ್ನೆ ನಿಜವೆಂದು ಭಾವಿಸಿ, ಬಯಸಿಬಿಟ್ಟಳು. ನಾಯಕಿಯ ದಾಂಪತ್ಯದಂತೆ ತನ್ನದಿರಬೇಕು ಎಂಬ ಅವಳ ಹೆಬ್ಬಯಕೆ ಮೈಮನದಲ್ಲಿ ಬೇರೂರಿಬಿಟ್ಟಿತ್ತು. ಸದವಕಾಶಕ್ಕಾಗಿ ಕಾಯುತ್ತಿದ್ದವಳು ಮದುವೆಯ ಪ್ರಯತ್ನ ಪ್ರಾರಂಭವಾಗುತ್ತಿದ್ದಂತೆ ತನ್ನ ಇಂಗಿತವನ್ನು ಚಿಕ್ಕಪ್ಪನಲ್ಲಿ ಅರುಹಿದಳು.
“ಚಿಕ್ಕಪ್ಪ, ನನಗೆ ಪೇಟೆಯಲ್ಲಿದ್ದ ಹುಡುಗ ಬೇಕು. ನೌಕರಿ ಮಾಡುವವ ಬೇಕು.’’
ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಮಾಲತಿ ಭಟ್ ಪುಸ್ತಕ ‘ದೀಪದ ಮಲ್ಲಿಯರು’ ನಾಳೆ ಬಿಡುಗಡೆ
“ಆಗಲಿ ಮಗಳೆ’’ ಎಂದ ಚಿಕ್ಕಪ್ಪ. ನಾಜೂಕಾಗಿ ವಿಷಯವನ್ನು ನಿಭಾಯಿಸಿದ. ಶಹರದಲ್ಲಿದ್ದ ಹುಡುಗರನ್ನೆ ಆರಿಸಿ ಆರಿಸಿ ಜಾತಕ ಹೊಂದಿಸಿ ನೋಡಿದ. ಯಾಕೊ ಯಾರೊಡನೇಯೂ ಹೊಂದಾಣಿಕೆ ಆಗಿ ಬರಲಿಲ್ಲ. ಅವಳಪ್ಪ ಜಾತಕ ಹೊಂದಿಸದೆ ಮುಂದುವರಿಯಲಾರದವ ಮತ್ತು ಯಾವುದನ್ನೂ ಒಪ್ಪದವ. ಅಂತೂ ಒಂದೆರಡು ವರ್ಷಗಳು ಕಳೆದ ಮೇಲೆ ‘ಸಸಿಗದ್ದೆ’ ಊರಿನ ತ್ರಿಯಂಬಕನೆಂಬ ಹುಡುಗನೊಂದಿಗೆ ಜಾತಕ ಕೂಡಿ ಬಂತು. ಯಾವುದೋ ಉದ್ಯೋಗ ಮಾಡಿಕೊಂಡು ಆತ ದೂರದ ಬಾಂಬೆಯಲ್ಲಿದ್ದವ. ಮೂರು ಮಂದಿ ಗಂಡುಮಕ್ಕಳಲ್ಲಿ ಈತ ಎರಡನೇಯವ. ಸ್ಫುರದ್ರೂಪಿ. ನಾಲ್ಕುಮಂದಿಯಲ್ಲಿ ಎದ್ದು ಕಾಣುವ ಆಳ್ತನ. ಬಾಂಬೆಯ ಗಾಳಿಗೆ ಮೈಯ್ಯೊಡ್ಡಿ ನಾಲ್ಕು ವರ್ಷಗಳಾಗಿತ್ತು. ಆತನನ್ನು ಭೇಟಿ ಮಾಡಿದವರಿಗೆ ಆತ ಬಾಂಬೆಯಲ್ಲೆ ಹುಟ್ಟಿಬೆಳೆದಿದ್ದಾನೇನೊ ಅನಿಸುತ್ತಿತ್ತು. ತನಗೆ ಪೇಟೆಹುಡುಗ ಸಿಗಲಾರನೇನೊ ಎಂದುಕೊಂಡಿದ್ದ ಕೋಮಲ ತ್ರಿಯಂಬಕನನ್ನು ನೋಡಿ ಸಂತೋಷದಿಂದ ಉಬ್ಬಿ ಹೋದಳು. ಅಡಗಿಹೋಗಲು ತಯಾರಾಗಿದ್ದ ಕನಸುಗಳು ಮತ್ತೆ ಚಿಗಿತವು. ನಿರೀಕ್ಷೆಗಳು ಗರಿಕೆದರಿದವು. ಅವಳ ಮುಖ ನೋಡಿಯೆ ಎಲ್ಲ ಅರಿತ ಚಿಕ್ಕಪ್ಪ ವಾಲಗ ಊದಿಸಿಯೇ ಬಿಟ್ಟ.
ಈ ಮದುವೆಯಲ್ಲಿ ಚಡಪಡಿಸಿದವ ತ್ರಿಯಂಬಕನ ತಮ್ಮ ವಿಶ್ವನಾಥ. ಮದುವೆಗಿಂತ ಮೊದಲು ಯಾವಯಾವುದೊ ನೆಪವೊಡ್ಡಿಕೊಂಡು ಒಂದೆರಡು ಸಾರಿ ಸಿರಿಯೂರಿಗೆ ಬಂದನಾದರೂ ಕೋಮಲಳ ಉತ್ಸುಕತೆಯೆದುರು ಮೂಕನಾಗಿ ಹಿಂದಿರುಗಿದ್ದ. ಮದುವೆ ಅದ್ದೂರಿಯಾಗಿ ನಡೆಯಿತು. ಎರಡೂ ಊರಿನವರು ಸಂಭ್ರಮಿಸಿದರು. ಅಡಿಕೆ ತೋಟದಲ್ಲಿ ಹೊಸ ಸಸಿನೆಡುವ ಕೆಲಸ ಜೋರಾಗಿ ನಡೆದಿದ್ದರಿಂದ ಅಜ್ಜ ಮದುವೆಗೆ ಹೋಗಿರಲಿಲ್ಲ. ಅದಕ್ಕೆ ಕನಸಿನ ಊರಿಗೆ ಪಯಣ ಹೋಗುವ ಮೊದಲು ಕೋಮಲ ತನ್ನ ರಾಜಕುಮಾರನೊಡನೆ ನಮಸ್ಕರಿಸಲು ಬಂದಿದ್ದಳು.
ಅವಳ ಮದುವೆಯಾಗಿ ಕೆಲ ವರ್ಷಗಳು ಕಳೆದವು. ನಮ್ಮ ತೋಟದಲ್ಲಿ ನೆಟ್ಟ ಸಸಿ ಆಳೆತ್ತರಕ್ಕೆ ಬೆಳೆಯತೊಡಗಿತು. ನಮ್ಮೂರ ಹತ್ತಿರದಲ್ಲೇ ಹೊಸ ಕಾಲೇಜಿನ ಪ್ರಾರಂಭೋತ್ಸವ ಆಯಿತು. ನಾವು ಕಾಲೇಜು ಮೆಟ್ಟಿಲೇರಿದ್ದೆವು. ಎಪ್ರಿಲ್ ತಿಂಗಳ ಕೊನೆಯಲ್ಲಿ ಎಲ್ಲ ಮಕ್ಕಳು ರಜೆಯ ಮಜದಲ್ಲಿದ್ದ ಸಾಯಂಕಾಲ ಕೋಮಲಳ ಚಿಕ್ಕಪ್ಪ ಬಂದ. ಮುಖ ದುಗುಡದಿಂದ ತುಂಬಿತ್ತು. ಅತ್ತು ಅತ್ತು ಕಣ್ಣು ಕಳೆಗುಂದಿತ್ತು. ದೇಹ ಬಸವಳಿದಿತ್ತು. ದಣಿದು ಬಂದಿರಬಹುದೆಂದು ಮಜ್ಜಿಗೆ ಬೆಲ್ಲ ಕೊಟ್ಟರು. ಬೇಡವೆಂದ. ಸುಮ್ಮನೆ ಕುಳಿತವನನ್ನು ಅಜ್ಜ ಮಾತಿಗೆಳೆದ. ಚಿಕ್ಕಪ್ಪ ಹೋ ಎಂದು ಅಳತೊಡಗಿದ. ಇಡೀ ಮನೆ ಜಗುಲಿಗೆ ಹಾಜರಾಯಿತು. ಕೋಮಲ ಬಾವಿಯಲ್ಲಿ ಶವವಾದ ಸುದ್ದಿ ಕೇಳಿ ಇಡೀ ಮನೆ ಒಮ್ಮೆಲೇ ಸ್ತಬ್ಧವಾಯಿತು. ಕನಸ ತೇರನೇರಿದಂತೆ ಬಾಂಬೆ ಬಸ್ ಏರಿದವಳು ಗಂಡನ ಬುಜಕ್ಕೊರಗಿ ನಿದ್ದೆ ಮಾಡಿದಳು.
ಬಾಂಬೆಯಲ್ಲಿಯ ಮನೆ ಸಂಸಾರ ನಡೆಸಲು ಸಕಲ ರೀತಿಯಿಂದ ಸಜ್ಜಾಗಿತ್ತು. ಅಡಿಗೆಗೆ, ಮತ್ತು ಮನೆಕೆಲಸ ನೋಡಿಕೊಳ್ಳಲು ‘ಸಿರಿಯಾ’ ಎಂಬ ಅಸ್ಸಾಮಿ ಸುಂದರ ಯುವತಿಯಿದ್ದಳು. ಅವಳನ್ನು ನೋಡಿ ಇವಳ ಸಂತೋಷ ದುಪ್ಪಟ್ಟಾಯಿತು. ತಾನು ನೋಡಿದ ಸಿನೆಮಾದಲ್ಲಿ ನಾಯಕಿಗೆ ಹೀಗೆ ಆಳುಕಾಳುಗಳಿರಲಿಲ್ಲ. ತಾನು ನಾಯಕಿಗಿಂತ ಒಂದು ಹೆಜ್ಜೆ ಮುಂದಿದ್ದೇನೆ ಎಂದು ಬೀಗಿದಳು. ಆದರೆ ಸಿರಿಯಾ, ತ್ರಿಯಂಬಕನ ಜೀವನ ಸಿನೆಮಾದ ಬಣ್ಣ ಹಚ್ಚದ ಮೊದಲ ನಾಯಕಿ, ತಾನು ಸಮಾಜದೆದುರು ಅವನದೆ ಸಮುದಾಯದವಳಾಗಿ ಸಂಪ್ರದಾಯದ ಬಣ್ಣ ಹಚ್ಚಿದ ತೋರಿಕೆಯ ಉಪನಾಯಕಿ. ಪಟ್ಟುಹಿಡಿದು ನನಸಾಗಿಸಿಕೊಂಡ ಕನಸು ಮಕ್ಕಳು ಗಾಳಿಯಲ್ಲಿ ಊದುವ ಬಣ್ಣದ ಗುಳ್ಳೆಯಾಗಿತ್ತು. ತನ್ನ ಭ್ರಮೆ ಕಳಚಿ ಬಿದ್ದ ಆಘಾತ ತಾಳಲಾರದೆ ಎದೆ ಒಡೆದು ಹೋದ ಕೋಮಲ ಬಾವಿಗೆ ಹಾರಿ ಕೊಳ್ಳುವ ಮೊದಲೆ ಹೃದಯಾಘಾತದಿಂದ ಮರಣ ಹೊಂದಿದ್ದಳಂತೆ. ಅವಳ ಮೈದುನ ಹೇಳಬೇಕೆಂದು ಚಡಪಡಿಸಿದ ಸತ್ಯ ಬಾಂಬೆಯಲ್ಲಿ ಅವಳೆದುರಿಗೆ ಸ್ತ್ರೀ ಯಾಗಿ ಅನಾವರಣಗೊಂಡಿತ್ತು. ಆ ಆಘಾತಕ್ಕೆ ಈ ಕೋಮಲ ದೇಹ ಶವವಾಗಿತ್ತು.
ಕೆಲವರ್ಷಗಳ ಹಿಂದೆ ಕನಸು ತುಂಬಿಕೊಂಡಿದ್ದ ಆ ಕಣ್ಣಿನ ಕಾಂತಿಯಿನ್ನೂ ನಮ್ಮನೆಯವರಲ್ಲಿ ನೆನಪಾಗಿ ಉಳಿದಿತ್ತು. ಆ ನೆನಪು ಅಂದು ಎಲ್ಲರ ಕಣ್ಣಿಂದ ನೀರಾಗಿ ಹರಿಯಿತು. ಕನಸು ತುಂಬಿದ್ದ ಅವಳ ಕಣ್ಣು ಶಾಶ್ವತವಾಗಿ ಮುಚ್ಚಿತ್ತು.
ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ಬೆನಕ ಬುಕ್ಸ್ ಬ್ಯಾಂಕ್
ಇದನ್ನೂ ಓದಿ : New Books: ಶೆಲ್ಫಿಗೇರುವ ಮುನ್ನ; ‘ಅನಾಮಿಕಳ ಅಂತರಂಗ’ ಚಿತ್ರಾ ಸಿ. ಪುಸ್ತಕ ನಾಳೆ ನಿಮ್ಮ ಕೈಗೆ