ಮಂಗಳೂರು: ಇನ್ನೇನು ಕೆಲವೇ ಕ್ಷಣಗಳಲ್ಲಿ ಫ್ರಾನ್ಸ್‌ನಿಂದ ಭಾರತಕ್ಕೆ ಬರಲಿರುವ ರಫೇಲ್ ಯುದ್ದ ವಿಮಾನಗಳ ಸಾರಥಿಗಳಲ್ಲಿ ಒಬ್ಬರಾಗಿರುವ ವಿಂಗ್ ಕಮಾಂಡರ್ ಅರುಣ್ ಕುಮಾರ್ ಅವರ ಗುರು ಮಂಗಳೂರಿನ ದಾಮೋದರ್ ಈಗ ಭಾರೀ ಖುಷಿಯಲ್ಲಿದ್ದಾರೆ. ತಮ್ಮ ಶಿಷ್ಯನ ಈ ಸಾಧನೆಗೆ ಗುರು ದಾಮೋದರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿರುವ ಗುರು ದಾಮೋದರ್, ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ವಿಂಗ್ ಕಮಾಂಡರ್ ಅರುಣ್ ಕುಮಾರ್ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ದಾಮೋದರ್ ಅರುಣ್ ಕುಮಾರ್ ಅವರಿಗೆ ಭೌತಶಾಸ್ತ್ರ ವಿಷಯದಲ್ಲಿ ಪಾಠ ಮಾಡಿದ್ದರು.
ಅಷ್ಟೇ ಅಲ್ಲ ಅರುಣ್ ಕುಮಾರ್ ಸೈನಿಕ ಶಾಲೆಯಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದರು. ಶಾಲೆಯಲ್ಲಿನ ಎಲ್ಲಾ ಸೌಲಭ್ಯಗಳನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದರು. ಪಠ್ಯೇತರ ಚಟುವಟಿಕೆಯಲ್ಲಿಯೂ ತುಂಬಾ ಆ್ಯಕ್ಟೀವ್ ಆಗಿರುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಸ್ಮರಿಸಿದ್ದಾರೆ.
ಸದ್ಯ ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ ನೆಲೆಸಿರುವ ದಾಮೋದರ್, ಶಿಷ್ಯ ಮುಂದೆ ಇನ್ನಷ್ಟು ದೇಶ ಸೇವೆಯನ್ನು ಮಾಡಲಿ. ಅವನಿಗೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್ ಎಂದು ಶುಭ ಹಾರೈಸಿದ್ದಾರೆ.