ಬ್ಯಾಂಕಾಕ್‌ನಲ್ಲಿ ವಿಶಿಷ್ಟ ಗಣೇಶ ಪೂಜೆ: ಮೋದಕದ ಬದಲಿಗೆ ಗಣಪನಿಗೆ ‘ಬಬಲ್ ಟೀ’ ನೈವೇದ್ಯ!
ಈ ವರ್ಷದ ಗಣೇಶ ಉತ್ಸವದಲ್ಲಿ, ಬ್ಯಾಂಕಾಕ್‌ನ ಗಣೇಶ ದೇವಸ್ಥಾನದಲ್ಲಿ ಬಬಲ್ ಟೀ (ಬೋಬಾ ಮಿಲ್ಕ್ ಟೀ) ಅನ್ನು ನೈವೇದ್ಯವಾಗಿ ಅರ್ಪಿಸುವ ವಿಶಿಷ್ಟ ಸಂಪ್ರದಾಯ ವೈರಲ್ ಆಗಿದೆ. ಭಕ್ತರು ತಮ್ಮ ಆಸೆ ಈಡೇರಲು ಟೀ ಅರ್ಪಿಸುತ್ತಾರೆ ಮತ್ತು ಆಸೆ ಫಲಿಸಿದ ನಂತರ ಹೆಚ್ಚು ಕಪ್‌ಗಳನ್ನು ಧನ್ಯವಾದವಾಗಿ ನೀಡುತ್ತಾರೆ. ಈ ಥೈಲ್ಯಾಂಡ್‌ನ ವಿಶಿಷ್ಟ ಪೂಜಾ ವಿಧಾನ ಭಾರತೀಯ ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ ಸೃಷ್ಟಿಸಿದೆ.

ಈ ವರ್ಷದ ಗಣೇಶ ಉತ್ಸವವು ಅತ್ಯಂತ ವೈಭವದಿಂದ ಪ್ರಾರಂಭವಾಗಿದ್ದು, ಅನಂತ ಚತುರ್ದಶಿಯಂದು ಗಣಪತಿ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳಲಿದೆ. ವಿಘ್ನನಿವಾರಕನಾದ ಗಣೇಶನನ್ನು ಮೆಚ್ಚಿಸಲು ಭಕ್ತರು ಮೋದಕ, ಲಡ್ಡು ಹಾಗೂ ಗರಿಕೆ ಅರ್ಪಿಸುವುದು ಸಾಮಾನ್ಯ. ಭಾರತದಲ್ಲಿ ಸಾಂಪ್ರದಾಯಿಕ ನೈವೇದ್ಯಗಳಿಗೆ ಆದ್ಯತೆ ನೀಡಿದರೆ, ವಿಶ್ವದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ತಕ್ಕಂತೆ ವಿಭಿನ್ನ ಆಚರಣೆಗಳಿವೆ. ಅದಕ್ಕೊಂದು ಉತ್ತಮ ಉದಾಹರಣೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಕಂಡುಬಂದಿದೆ.
ಬ್ಯಾಂಕಾಕ್ ದೇವಸ್ಥಾನದಲ್ಲಿ ‘ಬೋಬಾ ಮಿಲ್ಕ್ ಟೀ’ ನೈವೇದ್ಯ:
ಬ್ಯಾಂಕಾಕ್‌ನ ಯೂನಿಯನ್ ಮಾಲ್ ಹೊರಗಿರುವ ಗಣೇಶ ದೇವಸ್ಥಾನದಲ್ಲಿ, ಭಕ್ತರು ಸಿಹಿತಿಂಡಿಗಳ ಬದಲಿಗೆ ಗಣೇಶನಿಗೆ ‘ಬಬಲ್ ಟೀ’ (ಬೋಬಾ ಮಿಲ್ಕ್ ಟೀ) ಕಪ್‌ಗಳನ್ನು ನೈವೇದ್ಯವಾಗಿ ಅರ್ಪಿಸುತ್ತಿದ್ದಾರೆ. ಬ್ಯಾಂಕಾಕ್ ಮೂಲದ ಕಂಟೆಂಟ್ ಕ್ರಿಯೇಟರ್ ಪಿಯಾ ಪಿಂಗ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ವಿಶಿಷ್ಟ ಆಚರಣೆ ಬೆಳಕಿಗೆ ಬಂದಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಆಸೆ ಈಡೇರಿದಷ್ಟು ಹೆಚ್ಚಾಗಲಿದೆ ಟೀ ಕಪ್‌ಗಳ ಸಂಖ್ಯೆ:
ಸ್ಥಳೀಯ ನಂಬಿಕೆಯ ಪ್ರಕಾರ, ಭಕ್ತರು ತಮ್ಮ ಮನದಾಸೆ ಈಡೇರಲಿ ಎಂದು ಗಣೇಶನಿಗೆ ಬಬಲ್ ಟೀ ಅರ್ಪಿಸುತ್ತಾರೆ. ಪ್ರಾರ್ಥನೆ ಫಲಿಸಿದ ನಂತರ, ಧನ್ಯವಾದ ಅರ್ಪಿಸಲು ಹೆಚ್ಚು ಕಪ್ ಬಬಲ್ ಟೀ ತಂದು ನೀಡುತ್ತಾರೆ. ಉದಾಹರಣೆಗೆ, ಆರಂಭದಲ್ಲಿ 3 ಕಪ್ ಅರ್ಪಿಸಿದವರು, ಆಸೆ ಈಡೇರಿದ ಮೇಲೆ 6, 12 ಅಥವಾ ಕೆಲವೊಮ್ಮೆ ಬಾರಿಗೆ 200 ಕಪ್‌ಗಳವರೆಗೆ ಬಬಲ್ ಟೀ ಅರ್ಪಿಸುವುದು ಇಲ್ಲಿನ ವಿಶೇಷ.
ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ
ಮಾಲ್‌ನಲ್ಲಿ ಬಬಲ್ ಟೀ ಬ್ರ್ಯಾಂಡ್ ಮಾರ್ಗದರ್ಶಿ:
ದೇವಸ್ಥಾನದ ಬಳಿ ಇರುವ ಮಾಲ್‌ನಲ್ಲಿ ಲಭ್ಯವಿರುವ ವಿವಿಧ ಬಬಲ್ ಟೀ ಬ್ರ್ಯಾಂಡ್‌ಗಳ ಅಂಗಡಿಗಳನ್ನು ತೋರಿಸುವ ವಿಶೇಷ ಮಾರ್ಗದರ್ಶಿಯನ್ನೂ ಇರಿಸಲಾಗಿದೆ. ಇದರಿಂದ ಭಕ್ತರು ತಮಗೆ ಬೇಕಾದ ಅಥವಾ ನೆಚ್ಚಿನ ಬ್ರ್ಯಾಂಡ್‌ನ ಬಬಲ್ ಟೀಯನ್ನು ಸುಲಭವಾಗಿ ಖರೀದಿಸಿ ಗಣೇಶನಿಗೆ ಅರ್ಪಿಸಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ:
ಗಣೇಶನಿಗೆ ಬಬಲ್ ಟೀ ಅರ್ಪಿಸುವ ವೀಡಿಯೊ ನೋಡಿ ಭಾರತೀಯ ನೆಟ್ಟಿಗರಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಭಾರತದಲ್ಲಿ ಮೋದಕ-ಲಡ್ಡು ನೀಡಿ ಅಭ್ಯಾಸವಿರುವವರಿಗೆ ಈ ದೃಶ್ಯ ವಿಚಿತ್ರ ಹಾಗೂ ಅಸಾಮಾನ್ಯವೆನಿಸಿದರೆ, ಇನ್ನು ಕೆಲವರು ಇದನ್ನು ಥೈಲ್ಯಾಂಡ್‌ನ ಆಸಕ್ತಿಕರ ಸ್ಥಳೀಯ ಸಂಪ್ರದಾಯವೆಂದು ಸ್ವಾಗತಿಸಿದ್ದಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




