Pitru Paksha 2021: ಪಿತೃಪಕ್ಷದ ಮಹತ್ವವೇನು? ಅದನ್ನು ಅರ್ಥಪೂರ್ಣವಾಗಿ ಆಚರಿಸೋದು ಹೇಗೆ?
ಪಿತೃ ಪಕ್ಷ 2021: ತಮ್ಮ ಇಡೀ ಬದುಕನ್ನು ಮಕ್ಕಳಿಗಾಗಿಯೇ ಸವೆಸಿ, ವಯೋವೃದ್ಧರಾದಾಗ ಅವರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. ಇದು ಧರ್ಮ ಸಮ್ಮತವೂ ಹೌದು. ಈ ಸಾರ್ಥಕತೆ ಪರಿಪೂರ್ಣವಾಗಲು ಮಕ್ಕಳು, ಹೆತ್ತವರು ಸತ್ತ ಮೇಲೂ ಅವರ ಸ್ಮರಣೆಯಲ್ಲಿ ಇರಬೇಕು. ಪರಲೋಕದಲ್ಲೂ ಅವರ ಆತ್ಮಕ್ಕೆ ಶಾಂತಿ ನೀಡಲು ಪ್ರಯತ್ನಕ್ಕೊಂದು ದಾರಿಯೇ ಪಿತೃಪಕ್ಷ.
ಈ ಶರೀರದ ಹುಟ್ಟಿಗೆ ಪಿತೃಗಳು ಕಾರಣ. ಅವರಿಂದಾಗಿಯೇ ಪಡೆದ ಶರೀರವಿರುವ ತನಕ ನಾವು ಋಣಿಯಾಗಿರಬೇಕು. ಅದುವೇ ಪಿತೃ ತರ್ಪಣದ ಹಿಂದಿನ ಭಾವ. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯದ 15 ದಿನಗಳು ಪಿತೃಪಕ್ಷವೆನಿಸಿ ಶ್ರಾದ್ಧಾವಿಧಿಗಳಿಗೆ ಪ್ರಶಸ್ತವಾಗಿದೆ.
ಮಕ್ಕಳಿಗಾಗಿ ಮಾತಾ-ಪಿತೃಗಳು ಮಾಡಿದ ತ್ಯಾಗ, ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡುಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೆ ತಪ್ಪಲ್ಲ. ತಾಯಿ, ತಂದೆಯ ಋಣ ಎಂದಿಗೂ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ಮನುಷ್ಯ ತನ್ನ ಜೀವಿತ ಕಾಲದಲ್ಲಿ ಪ್ರತಿವರ್ಷ ಒಂದು ದಿನವಾದರೂ ತಮ್ಮ ಹೆತ್ತವರ ಸ್ಮರಣೆಯಲ್ಲಿ ಉಳಿಯಲಿ ಎಂದೇ ನಮ್ಮ ಪೂರ್ವಜರು ಈ ವಿಧಿಯನ್ನು ಆಚರಣೆಗೆ ತಂದಿದ್ದು, ಸರ್ವ ರೀತಿಯಿಂದಲೂ ಇದು ಪವಿತ್ರ ಕರ್ತವ್ಯವಾಗಿದೆ. ಪಿತೃಪಕ್ಷ ಹಾಗೂ ಪಿತೃಕಾರ್ಯಗಳನ್ನು ಕುರಿತು ವೇದಗಳು, ಮನ್ವಾದಿ ಸ್ಮತಿಗಳು, ರಾಮಾಯಣ, ಮಹಾಭಾರತ ಹಾಗೂ ಎಲ್ಲಾ ಪುರಾಣಗಳಲ್ಲೂ ಪಿತೃಕಾರ್ಯ ನಿಯಮಗಳ ಬಗೆಗೆ ತುಂಬ ವಿಸ್ತಾರವಾಗಿ ಹೇಳಲಾಗಿದೆ.
ಸಾಮಾನ್ಯವಾಗಿ ಮಾತಾಪಿತರನ್ನು ಕುರಿತು ಎಲ್ಲ ವೇದಾದಿ ಗ್ರಂಥಗಳು ಹಿರಿಮೆಯ ನುಡಿಗಳನ್ನಾಡಿದ್ದು, ಅವರನ್ನು ದೇವರ ಸಮಾನರೆಂದು ವರ್ಣಿಸಿವೆ. ನಮ್ಮ ಹುಟ್ಟಿಗೆ, ಬದುಕಿಗೆ ಕಾರಣರಾದ ಈ ಜೀವಂತ ದೇವರುಗಳ ಸೇವೆಯೇ ನಿಜವಾದ ದೇವರ ಸೇವೆ ಎಂದು ಹೇಳಿವೆ.
ತಮ್ಮ ಇಡೀ ಬದುಕನ್ನು ಮಕ್ಕಳಿಗಾಗಿಯೇ ಸವೆಸಿ, ವಯೋವೃದ್ಧರಾದಾಗ ಅವರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು. ಇದು ಧರ್ಮ ಸಮ್ಮತವೂ ಹೌದು. ಈ ಸಾರ್ಥಕತೆ ಪರಿಪೂರ್ಣವಾಗಲು ಮಕ್ಕಳು, ಹೆತ್ತವರು ಸತ್ತ ಮೇಲೂ ಅವರ ಸ್ಮರಣೆಯಲ್ಲಿ ಇರಬೇಕು. ಪರಲೋಕದಲ್ಲೂ ಅವರ ಆತ್ಮಕ್ಕೆ ಶಾಂತಿ ನೀಡಲು ಪ್ರಯತ್ನಕ್ಕೊಂದು ದಾರಿಯೇ ಪಿತೃಪಕ್ಷ. ಶ್ರಾದ್ಧಕ್ರಿಯೆಯು ವರ್ಷದಲ್ಲಿ ಒಂದು ದಿನ ಮಾತ್ರವಾದರೂ ಪಿತೃಗಳಿಗೆ ಅನುದಿನವೂ ಅದರ ಫಲ ಲಭಿಸುತ್ತದೆ. ಪಿತೃಕಾರ್ಯದ ನಿಮಿತ್ತ ಹೇಳುವ ಮಂತ್ರ ಸ್ವರಗಳ ಸ್ಪಂದನಗಳು ಪಿತೃದೇವತೆಗಳಿಗೆ ತಲುಪಿ ಪ್ರಭಾವ ಬೀರುತ್ತವೆ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣನು ಸವಿಸ್ತಾರವಾಗಿ ಹೇಳಿದ್ದು, ಪುತ್ರರು ನೀಡುವ ಪಿಂಡತಿಲ ತರ್ಪಣಗಳು ಪಿತೃಗಳಿಗೆ ನೇರವಾಗಿ ತಲುಪುತ್ತವೆ ಎಂದು ಹೇಳಲಾಗಿದೆ.
ಜನ್ಮಾಂತರ ಶರೀರ ನಿರ್ಮಾಣಕ್ಕೆ ಸಹಕಾರಿಯಾಗಿವೆ. ಅದಕ್ಕಾಗಿಯೇ ಪಿತೃಕಾರ್ಯಗಳನ್ನು ಶ್ರದ್ಧೆ ಯಿಂದ ನಿಯ ಮಾನುಸಾರ ಶಾಸ್ತ್ರಬದ್ಧವಾಗಿ ಮಾಡಬೇಕು ಎನ್ನಲಾಗಿದೆ. ಶ್ರದ್ಧಾಪೂರ್ವಕ, ವಿಧಿಪೂರ್ವಕ ಮಾಡಲ್ಪಟ್ಟ ಶ್ರಾದ್ಧದಲ್ಲಿ ಕ್ರಿಯಾಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಳಿತಗಳಾಗಿ ಲೋಕಾಂತರಗಳಲ್ಲಿರತಕ್ಕ ಪಿತೃಗಳಿಗೆ ಪಿಂಡ ತಿಲತರ್ಪಣಗಳು ರೂಪಾಂತರವನ್ನು ಹೊಂದಿ ಅವರವರ ಆಹಾರವಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ. ನಿಜ ಹೇಳಬೇಕೆಂದರೆ ಸಾಮಾನ್ಯ ಮಾನವರಿಗೆ, ಇದು ಅಗೋಚರವಾಗಿದ್ದು, ಋಷಿವರ್ಯರು ಈ ತತ್ತ್ವವನ್ನು ಬಲ್ಲವರಾಗಿರುತ್ತಾರೆ.
ಎಲ್ಲಾ ಜೀವಗಳು ತೃಪ್ತರಾಗಲಿ: ಮಹಾಭಾರತದ ಭೀಷ್ಮಾಚಾರ್ಯರು ತಮ್ಮ ಇಚ್ಛಾಮರಣೀಯ ವರವನ್ನು ಪಡೆದದ್ದೇ ಈ ಶ್ರಾದ್ಧವನ್ನು ಮಾಡಿ ಎಂದು ಹೇಳಲಾಗಿದೆ. ಧರ್ಮರಾಜನು ಭೀಷ್ಮಾಚಾರ್ಯರಲ್ಲಿ ಪಿತೃಕಾರ್ಯದ ಬಗೆಗೆ ಕೇಳಿದಾಗ ಭೀಷ್ಮರು ತಮ್ಮದೇ ಪ್ರಸಂಗವನ್ನು ಹೇಳುತ್ತ ಪಿತೃಕಾರ್ಯದ ಶ್ರೇಷ್ಠತೆಯನ್ನು ತಿಳಿಸುತ್ತಾರೆ. ತಂದೆಯ ಶ್ರಾದ್ಧವನ್ನು ವಿದ್ಯುಕ್ತ ರೀತಿಯಲ್ಲಿ ಮಾಡಿ, ತಂದೆಯಿಂದ ಇಚ್ಛಾಮರಣಿ ಅನುಗ್ರಹ ಪಡೆದ ತಮ್ಮ ಪ್ರಸಂಗವನ್ನು ವಿವರಿಸುತ್ತ ಪಿತೃಕಾರ್ಯದ ಮಹಿಮೆ ಮೆರೆದಿದ್ದಾರೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೆತ್ತವರಿಗೆ ದೇವರ ಸ್ಥಾನಮಾನ ನೀಡಿ, ಅವರು ಸತ್ತ ಮೇಲೂ ಅವರ ಸ್ಮರಣೆ ಇರುವುದು ಧರ್ಮ ಎಂದು ಹೇಳಿದ್ದಾನೆ. ಪಿಂಡ ತಿಲ ತರ್ಪಣವನ್ನು ಗತಿಸಿದ ಹೆತ್ತವರಿಗೆ ನೀಡುವ ಈ ಪಿತೃಕಾರ್ಯವನ್ನು ಮಕ್ಕಳು ಮರೆತು ಬಿಟ್ಟರೆ, ಅದು ಸಾಮಾಜಿಕ ಹಾಗೂ ಧಾರ್ಮಿಕ ಅವನತಿಯ ಕೊನೆಯ ಹಂತವೆನ್ನುತ್ತದೆ ಭಗವದ್ಗೀತೆ.
ಮಂತ್ರದ ಅಂತರಾರ್ಥ: ತ್ಯಾಗ ಮನೋಭಾವನೆಯಿಂದ ಮಾಡುವ ಪ್ರತಿಯೊಂದು ಕಾರ್ಯವೂ ಯಜ್ಞವೇ. ಅದು ದೇವಯಜ್ಞ, ಋಷಿಯಜ್ಞ ಅಥವಾ ಪಿತೃಯಜ್ಞವಾಗಿರಬಹುದು. ದೇವಯಜ್ಞದಲ್ಲಿ ದೈವವನ್ನು ತೃಪ್ತಿಗೊಳಿಸಲು ಆಘ್ರ್ಯದ ಮೂಲಕ ಹವಿಸ್ಸನ್ನು ನೀಡುತ್ತೇವೆ. ಮಾಡುವ ಕೆಲಸದಲ್ಲಿ ಭಿನ್ನತೆ ಇರುವಂತೆ ತರ್ಪಣ ವಿಧಾನದಲ್ಲಿ ಪ್ರತ್ಯೇಕತೆಯಿದೆ. ಆ ಕಾರಣಕ್ಕೆ ಅಂಗ ವಿನ್ಯಾಸ, ಉಪವೀತದಲ್ಲಿ ಬದಲಾವಣೆ ನೋಡಬಹುದು. ಅಂಗೈಯಲ್ಲಿ ಹಿಡಿದುಕೊಂಡ (ಬ್ರಹ್ಮತೀರ್ಥ) ಜಲವನ್ನು ನೇರವಾಗಿ ನೀಡಿದಾಗ ಅದು ದೇವ ತರ್ಪಣವಾಗುತ್ತದೆ. ಅದೇ ಬ್ರಹ್ಮತೀರ್ಥವನ್ನು ಅಂಗುಷ್ಟದಿಂದ ಕೊಟ್ಟಾಗ ಪಿತೃ ತರ್ಪಣವಾಗುತ್ತದೆ. ಕಿರುಬೆರಳಿನ ಭಾಗದಿಂದ ಕೊಟ್ಟಾಗ ಋಷಿ ತರ್ಪಣವಾಗುತ್ತದೆ.
ಹಿಂದೆ ನಮ್ಮ ಪೂರ್ವಜರು ಪಿತೃಕಾರ್ಯವನ್ನು ಭಯ-ಭಕ್ತಿ ಯಿಂದ ಆಚರಿಸಿಕೊಂಡು ಬರುತ್ತಿದ್ದರು. ಹೆತ್ತವರೂ ಕೂಡ ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸದಾ ಹಾರೈಸುತ್ತಿದ್ದಾರೆ. ಮಕ್ಕಳೂ ಕೂಡ ಹೆತ್ತವರನ್ನೂ ಪ್ರೀತಿ-ವಿಶ್ವಾಸಗಳಿಂದ ನೋಡಿಕೊಳ್ಳುತ್ತಿ ದ್ದರು. ಆದರೆ, ಇಂದು ಮಕ್ಕಳಲ್ಲಿ ಆಚಾರ-ವಿಚಾರ, ನಯ-ವಿನಯ, ನಡತೆಗಳು, ಹೆತ್ತವರಲ್ಲಿ ಪ್ರೀತಿ-ವಿಶ್ವಾಸಗಳು ಕಡಿಮೆಯಾಗುತ್ತಿವೆ. ಕಾರಣ ಗತಿಸಿದ ಹೆತ್ತವರ, ಹಿರಿಯರ ನೆನಪಿಗಾಗಿ ಮಾಡುವ ಶ್ರಾದ್ಧ ಕರ್ಮವು ಕುಂಠಿತವಾಗುತ್ತಿದೆ.
ದರ್ಭೆಯ ಹಿಂದಿನ ಮಹತ್ವ ಶ್ರಾದ್ಧ ಕಾರ್ಯಗಳಲ್ಲಿ ದರ್ಭೆಯ ಪಾತ್ರ ಪ್ರಮುಖವಾಗಿದೆ. ಶುಭ್ರವಾದ ನೆಲದಲ್ಲಿ ಬೆಳೆದಿರುವ ಹಸಿರು ವರ್ಣದ ದರ್ಭೆಯನ್ನು ಬೇರು ಸಮೇತ ಕಿತ್ತು ಬಳಸುವುದೇ ಶ್ರೇಷ್ಠ. ದರ್ಭೆಯಲ್ಲಿ ತೇಜಸ್ಸು ಮತ್ತು ಜಲಾಂಶ ಮುಖ್ಯವಾಗಿರುತ್ತದೆ. ಶ್ರಾದ್ಧ ಕಾರ್ಯದಲ್ಲಿ ಬಳಕೆಯಾಗುವ ದರ್ಭೆಯಿಂದಾಗಿ ಸಾತ್ವಿಕ ಗುಣ ವರ್ಧಿಸುತ್ತದೆ. ಭೌತಶಾಸ್ತ್ರದ ಆಬ್ಸಲ್ಯೂಟ್ ಏರ್ ಪ್ರಿನ್ಸಿಪಾಲ್ ಸಿದ್ಧಾಂತದ ಅನ್ವಯ ದರ್ಭೆಯಿಂದ ಹೊರಸೂಸಲ್ಪಟ್ಟ ಚೈತನ್ಯವು ಊಧ್ರ್ವಮುಖವಾಗಿ ಸಾಗುತ್ತದೆ. ಅದರ ನೇರ ಪ್ರಭಾವ ಶ್ರಾದ್ಧ ನಡೆಯುತ್ತಿರುವ ಸ್ಥಳದ ಮೇಲಾಗುತ್ತದೆ.
ಹೆತ್ತವರ ಸ್ಥಾನಕ್ಕೆ ಸರಿಸಮಾನ ಇಲ್ಲ. ಪ್ರತಿ ವೈದಿಕ ಕ್ರಿಯೆಗಳಲ್ಲೂ ಗತಿಸಿದ ಪಿತೃಗಳನ್ನು ನೆನೆಸಿ, ಮುಂದಿನ ಕ್ರಿಯೆಗಳಲ್ಲಿ ತೊಡಗುವ ಶಿಷ್ಟಾಚಾರವಿದೆ. ಪ್ರತ್ಯಕ್ಷ ದೇವತೆಗಳಾದ ತಂದೆ-ತಾಯಿಗಳ ಅನುಗ್ರಹ ದೊರೆಯದಿದ್ದರೆ, ಪರೋಕ್ಷ ಪಿತೃದೇವತೆಗಳ ಅನುಗ್ರಹವೆಲ್ಲಿ? ಎನ್ನುತ್ತಾರೆ ಬಲ್ಲವರು. ಕಾರಣ ಪಿತೃದೇವತೆಗಳು ಇತರ ದೇವತೆಗಳಿಗಿಂತ ದೊಡ್ಡವರು. ಎಲ್ಲ ಕಾರ್ಯಗಳಿಗೆ ಅವರದೇ ಅಗ್ರಸ್ಥಾನ. ಗತಿಸಿದ ಹೆತ್ತವರನ್ನು ಸ್ಮರಿಸುವ ಪಕ್ಷವೇ ಪಿತೃಪಕ್ಷ. ಮಹಾಲಯ ಅಮಾವಾಸ್ಯೆ.
ಜನಪದ ಸಂಸ್ಕೃತಿಯಲ್ಲಿ ವಿಶಿಷ್ಟ ಆಚರಣೆ ಸತ್ತವರ ನೆನಪಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಪದ್ಧತಿಗೆ ಶಿಷ್ಟ ಪರಂಪರೆಗೆ ಪಿತೃಪಕ್ಷ, ಶ್ರಾದ್ಧ ಎಂಬ ಹೆಸರುಗಳಲ್ಲಿ ಕರೆದರೆ ಜನಪದ ಪರಂಪರೆಯಲ್ಲಿ ಹಿರಿಯರ ಹಬ್ಬ, ಮಾಳ ಪಕ್ಷ ಎಂದು ಹೇಳುವುದಿದೆ. ಮಹಾಲಯ ಅಮಾವಾಸ್ಯೆ ಎಂಬ ಪದವೇ ಮಾಳ ಪಕ್ಷ ಎಂತಲೂ ಆಗಿರಬಹುದು.
ಈ ಪರ್ವ ಬೆಳೆ ನೆಟ್ಟ ನಂತರ ಮತ್ತು ಸಮೃದ್ಧಿಯ ನಡುವೆ ಬರುತ್ತದೆ. ಮಣ್ಣು ಮತ್ತು ನೀರಿನ ಆರಾಧನೆಯ ಹಿನ್ನೆಲೆಯಲ್ಲಿ ಗೌರಿ-ಗಣೇಶ ಬೆಳೆಯ ಸಮೃದ್ಧಿಯ ನಡುವೆ ದೀಪಾವಳಿ, ಈ ಹಬ್ಬಗಳು ಪ್ರಾಕೃತಿಕ ಹಿನ್ನೆಲೆಯಲ್ಲಿ ಸಾರ್ವಜನಿಕ ಹಬ್ಬಗಳಾದರೆ ವ್ಯಕ್ತಿ ಮತ್ತು ಕುಟುಂಬದ ಕಾರಣಕ್ಕಾಗಿ ಬರುವ ಹಬ್ಬ ಹಿರಿಯರ ನೆನಪಿನ ಹಬ್ಬ.
ನಮ್ಮ ರಾಜ್ಯದಲ್ಲಿ ಈ ಆಚರಣೆಯಲ್ಲಿ ವೈವಿಧ್ಯವಿದೆ. ಉತ್ತರ ಕರ್ನಾಟಕದಲ್ಲಿ ಮಾಸ್ತಿಗಲ್ಲು, ವೀರಗಲ್ಲುಗಳಿಗೆ ಪೂಜೆ ನಡೆದರೆ, ದಕ್ಷಿಣ ಭಾಗದ ರಾಜ್ಯಗಳಲ್ಲಿ ಅದರ ಆಚರಣೆಯ ಸ್ವರೂಪವೇ ಬೇರೆ ರೀತಿಯಾಗಿರುತ್ತದೆ. ಈ ಹಿರಿಯರು ಬದುಕಿದ್ದ ಕಾಲ ಅವರಿಗೆ ಸಹಕಾರ ನೀಡಿದ ಪ್ರಕೃತಿಯನ್ನು ನೆನೆಯುವ ಆಚರಣೆ ಈ ವರ್ಗಗಳಲ್ಲಿ ಇರುವುದು ಬಹುಮುಖ್ಯ ಅಂಶ. ಹಿರಿಯರನ್ನು ನೆನೆಯುವಿಕೆಯಲ್ಲಿ ಮುಖ್ಯಪಾತ್ರ ವಹಿಸುವ ವಸ್ತುಗಳು ತೀರಿಕೊಂಡವರಿಗೆ ಬೇಕಾಗಿರುವುದೇ ಆಗಿರುತ್ತದೆ. ಹಿರಿಯರು ಯಾವ ಆಹಾರವನ್ನು ಹೆಚ್ಚು ಇಷ್ಟ ಪಡುತ್ತಿದ್ದರೋ ಅದನ್ನೇ ಆ ಹೊತ್ತಿನ ನೈವೇದ್ಯಕ್ಕಾಗಿ ಇಡುವ ಪದ್ಧತಿ ಇದೆ.
ಇದರ ಅಲ್ಪಭಾಗವನ್ನು ಪೂಜೆ ಮಾಡಿಕೊಡಲು ಬಂದ ಪೂಜಾರಿ ಸೇವಿಸಬೇಕು. ಆಗಲೇ ಅದು ಸತ್ತು ಸ್ವರ್ಗದಲ್ಲಿರುವ ಹಿರಿಯರಿಗೆ ಸಂದಾಯವಾಗುತ್ತೆಂದು ಆಯಾ ಕುಟುಂಬದವರು ನಂಬಿರುತ್ತಾರೆ. ಇದೆಲ್ಲ ಏನೇ ಆಗಲಿ ನಮಗೆ ಜನ್ಮ ನೀಡಿದ ತಂದೆ-ತಾಯಿ ದೇವರ ಸಮಾನ ವರ್ಷಕ್ಕೊಮ್ಮೆಯಾದರೂ ಪಕ್ಷ ಮಾಸದಲ್ಲಿ ನೆನೆದು ತರ್ಪಣ ಕೊಡುವುದು ಎಲ್ಲರ ಕರ್ತವ್ಯ.
ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ಹೇಗೆ ಮಾಡಬೇಕು?
Published On - 6:44 am, Mon, 20 September 21