ದೇವನೆಲ್ಲಿರುವ? ಈ ಬಗ್ಗೆ ಒಂದು ಬಾರಿಯಾದರೂ ಯೋಚನೆ ಮಾಡಿದ್ದೀರಾ? ದೇವರ ಶಕ್ತಿಯ ಅನುಭವ ಹೇಗೆ?
ಸಮಸ್ತ ಜೀವಿಗಳಲ್ಲಿ ಹೆಚ್ಚಿನ ಜೀವಿಗಳು ಪಾಂಚಭೌತಿಕವಾದ ದೇಹದ ಸುಖವನ್ನೇ ನಿಜವಾದ ಆನಂದ ಎಂದು ಭಾವಿರುವರು. ಅದರಲ್ಲಿ ಪ್ರಾಣಿಗಳನ್ನು ಬಿಡಿ. ಬೌದ್ಧಿಕವಾಗಿ ಚಿಂತನೆ ನಡೆಸುವ ಸಾಮರ್ಥ್ಯವುಳ್ಳ ನಮ್ಮ ಬಗ್ಗೆ ನಾವು ಯೋಚಿಸೋಣ.
ಸಮಸ್ತ ಜೀವಿಗಳಲ್ಲಿ ಹೆಚ್ಚಿನ ಜೀವಿಗಳು ಪಾಂಚಭೌತಿಕವಾದ ದೇಹದ ಸುಖವನ್ನೇ ನಿಜವಾದ ಆನಂದ ಎಂದು ಭಾವಿರುವರು. ಅದರಲ್ಲಿ ಪ್ರಾಣಿಗಳನ್ನು ಬಿಡಿ. ಬೌದ್ಧಿಕವಾಗಿ ಚಿಂತನೆ ನಡೆಸುವ ಸಾಮರ್ಥ್ಯವುಳ್ಳ ನಮ್ಮ ಬಗ್ಗೆ ನಾವು ಯೋಚಿಸೋಣ. ಹಲವಾರು ಬಾರಿ ನಮ್ಮ ಜೀವನದಲ್ಲಿ ನಾವು ಸ್ವಾರ್ಥ ಅಲ್ಪ ಸುಖಕ್ಕಾಗಿ ಜಗಳವನ್ನೋ, ಸುಳ್ಳನ್ನೋ, ಹಿಂಸೆಯನ್ನೋ ಮಾಡಿಯೇ ಇರುತ್ತೇವೆ ಅಲ್ಲವೇ? ಇದೆಲ್ಲಾ ಯಾಕೆ ಮಾಡಿದೆ ಎಂದು ಕೇಳಿದರೆ ಅಥವಾ ಸ್ವತಃ ತಾವೇ ಯೋಚಿಸಿದಾಗ ಬರುವ ಉತ್ತರ ಕಷ್ಟ ಇತ್ತು ಅಥವಾ ಅರ್ಜೆಂಟಿತ್ತು ಅಥವಾ ತಾಳ್ಮೆ ತಪ್ಪಿತು ಇತ್ಯಾದಿ.
ಒಂದು ಸಲ ಸಹನೆಯಿಟ್ಟು ಯೋಚಿಸಿ ನಾವು ಯಾಕೆ ಹೀಗಾಡುತ್ತಿದ್ದೇವೆ ಎಂದು. ಆಗ ಅಂತರಂಗದಿಂದ ನಮಗೆ ನಮ್ಮ ನಡೆಯ ಬಗ್ಗೆ ತುಂಬಾ ಮುಜುಗರ ಉಂಟಾಗುತ್ತದೆ. ಇಷ್ಟು ಸಂಕುಚಿತವಾದ ಮನಸ್ಸುಳ್ಳವರಾದೆವೇ ನಾವು ಎಂದು. ಒಂದು ಬಾರಿ ಇತಿಹಾಸವನ್ನು ನೋಡಿ ಕುಚೇಲ (ಸುಧಾಮ) ತನ್ನಲ್ಲಿ ಏನಿಲ್ಲದಿದ್ದರೂ ಇದ್ದ ಮುಗ್ಗು ಅವಲಕ್ಕಿ ನೀಡಿದ ಭಗವಂತ ಶಾಶ್ವತ ಗೆಳೆತನ ಅವನಿಗೆ ನೀಡಿದ. ಆದಿ ಶಂಕರರಿಗೆ ಕೊಲ್ಲೂರು ಬೆಟ್ಟದ ಕೆಳಗೆ ಬಡ ಮನೆಯೊಡತಿ ಅತ್ಯಂತ ನಮ್ರಳಾಗಿ ನೆಲ್ಲಿಕಾಯಿ ನೀಡಿದಳು. ಅವಳ ಮುಂದೆಯೇ ಕನಕಾಧಾರ ಸ್ತೋತ್ರ ರಚಿಸಿ ಪ್ರಭೂತವಾದ ಸಂಪತ್ತನ್ನು ಲಕ್ಷ್ಮೀದೇವಿಯ ಸ್ತುತಿ ಮಾಡಿ ಕರುಣಿಸಿದರು. ಹೀಗೆ ಹಲವಾರು ಘಟಗಳನ್ನು ಹೇಳಬಹುದು. ಆದರೆ ಇಲ್ಲಿ ನಾವು ಕಾಣಬೇಕಾದ್ದು ಅಂತರಂಗ ಸಂಕುಚಿತದ ತ್ಯಾಗ. ಎಲ್ಲಿ ಸಂಕುಚಿತ ಮನಸ್ಸಿರುತ್ತದೋ ಅಲ್ಲಿ ಉನ್ನತಿ ಸಾಧ್ಯವಿಲ್ಲ.
ತುಂಬಾ ಖರ್ಚು ಮಾಡಿ ಕಷ್ಟಪಟ್ಟು ತಿರುಪತಿಯ ಬೆಟ್ಟವೇರಿ ಕಾದು ವೆಂಕಟರಮಣನ ದರುಶನಕ್ಕೆ ಹೋಗುತ್ತೇವೆ. ಅಲ್ಲಿ ನಮಗೆ ದರುಶನಕ್ಕೆ ಸಿಗುವ ಸಮಯ ಕೇವಲ ಹತ್ತರಿಂದ ಇಪ್ಪತ್ತು ಸೆಕೆಂಡುಗಳಷ್ಟು. ಆದರೆ ಆ ಸಣ್ಣ ಸಮಯದಲ್ಲೂ ನಾವು ಅವನನ್ನು ಕಣ್ಣುಮುಚ್ಚಿ ಪಾರ್ಥಿಸುತ್ತೇವೆ. ಅರ್ಥಾತ್ ಅಂತರಂಗದಿಂದ ಪಾರ್ಥಿಸುತ್ತೇವೆ ಅಲ್ಲವೇ? ಈಗ ಯೋಚಿಸಿ ನಿಜವಾಗಿಯೂ ದೇವನೆಲ್ಲಿರುವ ಎಂದು. ಪ್ರಹ್ಲಾದನ ಕಥೆ ಬಲ್ಲವರು ಭಗವಂತ ಎಲ್ಲೆಲ್ಲಿಯೂ ಇರುವ ಎನ್ನಬಹುದು. ಆದರೆ ಪ್ರಹ್ಲಾದ ವಿಷ ಕುಡಿದಂತೆ ಭಗವಂತನ ಮೇಲಿನ ಭಕ್ತಿಯಿಂದ ಯಾರೂ ವಿಷ ಕುಡಿಯಲಾರರು ಅಲ್ಲವೇ? ಹಾಗದರೇ ಈ ಕಥೆ ಸುಳ್ಳು ಎನ್ನಬಹುದು ಕೆಲವರು. ನಿಶ್ಚಯವಾಗಿ ಕಥೆ ಸುಳ್ಳಲ್ಲ. ಅದನ್ನು ಅನುಸರಿಸುವ ನಮ್ಮ ಮನಸ್ಸು ಸುಳ್ಳಾಗಿದೆ ಇಂದು.
ಇದನ್ನೂ ಓದಿ: Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..!
ಹಾಗಂದರೇ ಅನ್ನಬಹುದು. ಜೀವನದಲ್ಲಿ ಅಂತರಂಗ ಶುದ್ಧಿಯಿಲ್ಲದಿದ್ದರೆ ಯಾವುದೂ ಫಲಿಸದು. ಇನ್ನೂ ಬುದ್ಧಿ ಬೆಳೆಯದ ಮಗುವಿಗೆ ದೇವನನ್ನು ಪ್ರಾರ್ಥಿಸು ಎಂದಾಗ ಕಣ್ಣುಮುಚ್ಚುತ್ತದೆ ಗಮನಿಸಿರುವಿರಾ? ತಾತ್ಪರ್ಯ ಇಷ್ಟೇ ನಾವು ಹುಟ್ಟುವಾಗಲೇ ನಮ್ಮೊಳಗೆ ಒಂದು ಚೈತನ್ಯ ತುಂಬಿರುತ್ತದೆ. ಅದೇ ಭಗವಂತ. ಗಾಳಿ ಎಲ್ಲಾ ಕಡೆ ಇದ್ದರೂ ವಾಹನದ ಚಕ್ರದಲ್ಲಿ ಗಾಳಿ ಇಲ್ಲದಿದ್ದರೆ ವಾಹನ ಸಾಗುವುದು ಕಷ್ಟ ಸಾಧ್ಯ. ಹಾಗೇ ದೇವಾಲಯಗಳೂ ಸಹ.
ಮತ್ತೆ ಕೇಳಬಹುದು ಪ್ರಶ್ನೆ ದೇವನೆಲ್ಲಿರುವ ಎಂದು. ಭಗವಂತ ಪ್ರತೀ ಜೀವಿಯ ಅಂತರಂಗದಲ್ಲೂ ಇರುವ. ಆದರೆ ಅದು ಅನುಭವಕ್ಕೆ ಬರಬೇಕಾದರೆ ಅಂತರಂಗ ಶುದ್ಧವಾಗಬೇಕು. ಅದಕ್ಕೆ ಆಹಾರ – ವಿಹಾರಗಳಲ್ಲಿ ನಿಯಮ , ಸತ್ಸಂಗ ಧ್ಯಾನ ಇತ್ಯಾದಿಗಳು ಅತೀ ಅವಶ್ಯ. ಯಾವಾಗ ನಾವು ಅಹಂಕಾರವನ್ನು ಬಿಟ್ಟು ತ್ಯಾಗದ ಭಾವವನ್ನು ಹೊಂದುತ್ತೇವೋ ಅಂದೇ ಅಂತರಂಗ ಶುದ್ಧಿ. ಆಗಲೇ ಅಂತರಂಗದ ಭಗವತ್ ಶಕ್ತಿ ಅನುಭವಕ್ಕೆ ಬರುವುದು.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು