Navratri: ನವರಾತ್ರಿಯ 6 ಮತ್ತು 7ನೇಯ ದಿನ ಯಾವ ರೂಪದಲ್ಲಿ ದೇವಿಯನ್ನು ಪೂಜಿಸಬೇಕು? ಈ ದಿನ ಮಾಡಬೇಕಾದ ಭಕ್ಷ್ಯವೇನು?
ದುರ್ಗಾಮಾತೆಯನ್ನು “ಚಂಡ – ಮುಂಡಹಾ” ಅಥವಾ “ಕಾತ್ಯಾಯನೀ” ಎಂಬ ಹೆಸರಿನಿಂದ ಪೂಜಿಸುತ್ತಾರೆ. ಚಂಡ ಮುಂಡಹಾ ಅಂದರೆ ಚಂಡ ಮತ್ತು ಮುಂಡ ಎಂಬ ಹೆಸರಿನ ರಾಕ್ಷಸರನ್ನು ಹನನ (ಸಂಹರಿಸಿದವಳು) ಮಾಡಿದವಳು ಎಂದರ್ಥ.
ಜಗಜ್ಜನನಿಯ ಸೇವೆ ಮಾಡಿದವರಿಗೆ ಜೀವನದಲ್ಲಿ ಸಾರ್ಥಕ್ಯವೆನ್ನುವುದು ನಿಶ್ಚಿತ. ದೇವಾನುದೇವತೆಗಳಿಂದ ಆರಂಭಿಸಿ ಹೆಚ್ಚಿನವರೂ ತಾಯಿಯ ಆರಾಧನೆಯನ್ನು ಮಾಡಿದವರೆ. ಅದರಿಂದ ಪರಿಪೂರ್ಣಫಲವನ್ನೂ ಹೊಂದಿದ್ದಾರೆ. ಅಂತಹ ಅನುಗ್ರಹಪ್ರದಳಾದ ಶ್ರೀದೇವಿಯನ್ನು ನವರಾತ್ರಿಯ ಆರು ಮತ್ತು ಏಳನೇಯ ದಿನದಂದು ಯಾವ ಸ್ವರೂಪದಲ್ಲಿ ಪೂಜಿಸಬೇಕು ಎಂದು ತಿಳಿಯೋಣ.
ಆರನೇಯದಿನ – ದುರ್ಗಾಮಾತೆಯನ್ನು “ಚಂಡ – ಮುಂಡಹಾ” ಅಥವಾ “ಕಾತ್ಯಾಯನೀ” ಎಂಬ ಹೆಸರಿನಿಂದ ಪೂಜಿಸುತ್ತಾರೆ. ಚಂಡ ಮುಂಡಹಾ ಅಂದರೆ ಚಂಡ ಮತ್ತು ಮುಂಡ ಎಂಬ ಹೆಸರಿನ ರಾಕ್ಷಸರನ್ನು ಹನನ (ಸಂಹರಿಸಿದವಳು) ಮಾಡಿದವಳು ಎಂದರ್ಥ. ಕಾತ್ಯಾಯನೀ ಅಂದರೆ ಕಲ್ಪಾಂತರದಲ್ಲಿ “ಕತ” ಎಂಬ ವಂಶದಲ್ಲಿ ಜಗತ್ತಿನ ಕ್ಷೇಮಕ್ಕಾಗಿ ತಾಯಿ ಪಾರ್ವತಿಯು ಜನಿಸುತ್ತಾಳೆ. ಆ ಕಾರಣದಿಂದ ಅವಳನ್ನು ಕಾತ್ಯಾಯಯನೀ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದಿನ – ಸ್ವರ್ಣ ವಸ್ತ್ರಾದ್ಯಲಂಕಾರೈಃ ಸ್ಫಟಿಕೈರುಪಶೋಭಿತಾಂ |
ಬಾಣಕೋದಂಡ ಖೇಟಂ ಚ ಶಕ್ತಿಂ ಚೈವ ಧೃತಾಂ ಕರೈಃ |
ಮಯೂರವಾಹಿನೀಂ ದೇವೀಂ ಷಷ್ಠ್ಯಾಂ ಸಂಪೂಜಯೇನ್ನೃಪ ||
ಎಂಬ ಮಂತ್ರದಿಂದ ತಾಯಿಯನ್ನು ಶ್ರದ್ಧೆಯಿಂದ ಧ್ಯಾನಿಸಿ… ಅಂಜಲಿಯಲ್ಲಿ ಪುಷ್ಪವನ್ನು ತೆಗೆದು ದೇವರಿಗೆ ಅರ್ಪಿಸಬೇಕು. ಈ ದಿನದಂದು ದೇವಿಯು ಮಯೂರ (ನವಿಲಿನ ಮೇಲೆ ಕುಳಿತು) ವಾಹಿನಿಯಾಗಿರುತ್ತಾಳೆ. ಅವಳ ಆ ರೂಪವನ್ನು ಧ್ಯಾನಿಸುತ್ತಾ ತಾಯಿಗೆ ನವಿಲಿನ ಬಣ್ಣದ ವಸ್ತ್ರವನ್ನು ಅರ್ಪಿಸಿ ಮತ್ತು ಸಾಧ್ಯವಿದ್ದಲ್ಲಿ ನಾವೂ ಉಟ್ಟು ಅವಳಿಗೆ ಈ ದಿನ ಮುದ್ಗೌದನಾಸಕ್ತಚಿತ್ತ” ಎನ್ನುವರು. ಅಂದರೆ ಹೆಸ್ರುಕಾಳಿನಿಂದ (ಪಚ್ಚೆ ಹಸರಿನ ಕಾಳು) ಮಾಡಿದ ಪಾಯಸದಲ್ಲಿ ಆಸಕ್ತಳಾದವಳು ಎಂದರ್ಥ. ತಾತ್ಪರ್ಯವೇನೆಂದರೆ ಈ ದಿನ ದುರ್ಗೆಗೆ ಹಸರಿನಪಾಯಸ ನೈವೇದ್ಯ ಮಾಡಿದರೆ ಅವಳಿಗೆ ಅತ್ಯಂತ ಪ್ರಿಯವಾಗುವುದು ಎಂದು. ಈ ರೀತಿಯಾಗಿ ಅವಳ ಇಷ್ಟ ಭಕ್ಷ್ಯ ನೈವೇದ್ಯ ಮಾಡಿ ಪೂಜಿಸಿಬೇಕು.
ಏಳನೇಯದಿನ -–ಶ್ರೀದೇವಿಯನ್ನು “ರಕ್ತಬೀಜಹಾ” ಅಥವಾ “ಕಾಲರಾತ್ರೀ” ಎಂಬ ರೂಪದಲ್ಲಿ ಪೂಜಿಸಬೇಕು. ರಕ್ತಬೀಜಹಾ ಎಂದರೆ ರಕ್ತಬೀಜನೆಂಬ ರಾಕ್ಷಸನನ್ನು ಹನನ ಮಾಡಿದವಳು ಎಂದರ್ಥ. ಕಾಲರಾತ್ರೀ ಎಂದರೆ ಕಪ್ಪಗಿನ ಬಣ್ಣದಲ್ಲಿ ಕಾಣುವ ದೇವಿ ಮಹಾಕಾಳಿ ಎಂದು ಅರ್ಥ. ರಕ್ತಬೀಜನೆಂದರೆ ಅವನ ದೇಹದಿಂದ ಒಂದು ಹನಿ ರಕ್ತ ಭೂಮಿಗೆ ಬಿದ್ದರೂ ಅವನಂತಹ ಶಕ್ತಿಯುಳ್ಳ ಮತ್ತೊಬ್ಬ ರಾಕ್ಷಸ ಹುಟ್ಟಿಬರುತ್ತಿದ್ದ. ಅಂತಹವನನ್ನು ನಾಶ ಮಾಡಲು ತಾಯಿಯು ಕಾಳಿಯಾಗಿ ಅವತಾರ ಮಾಡಿ ಆ ರಕ್ತಬೀಜನನ್ನು ಸಂಹರಿಸುತ್ತಾಳೆ. ಅಂತಹ ಕಾಲರಾತ್ರಿಗೆ ಕಡು ಬಣ್ಣದ ಬಟ್ಟೆಯನ್ನು ಅರ್ಪಿಸಿ ಅವಳಿಗೆ ಪ್ರಿಯವಾದ “ಹರಿದ್ರಾನ್ನವನ್ನು” ಅಂದರೆ ಚಿತ್ರಾನ್ನ ಅಥವಾ ಕೇಸರೀ ಯುಕ್ತವಾದ ಅನ್ನವನ್ನು ಮಾಡಿ ಅವಳಿಗೆ ನೈವೇದ್ಯ ಮಾಡಬೇಕು. ಅವಳನ್ನು –
ರಕ್ತವರ್ಣಾದ್ಯಲಂಕಾರಾಂ ದ್ವಿಭುಜಾಂಬುಜಧಾರಿಣೀಂ |
ಸಪ್ತಮ್ಯಾಂ ಪೂಜಯೇದ್ದೇವೀಂ ರಥಾರೂಢಾಂ ಪ್ರಯತ್ನತಃ ||
ಎಂದು ಧ್ಯಾನಿಸಿ ಅಷ್ಟೋತ್ತರ ಶತ ನಾಮಗಳಿಂದ ಅರ್ಚಿಸಿ. ಅಗೋಚರ ಶಕ್ತಿಗಳಿಂದ ಆಗುವ (ಮಾಟ , ಬಾಧೆ ಇತ್ಯಾದಿಗಳು) ತೊಂದರೆಗಳು ಶಮನವಾಗುವುದು. ತಾಯಿಯು ಅನುಗ್ರಹಿಸುವಳು.
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
kkmanasvi@gamail.com