Maha Shivratri 2024: ಮಹಾ ಶಿವರಾತ್ರಿ ಯಾವಾಗ? ಈ ದಿನದ ಮಹತ್ವ ಏನು?
ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಹಿಂದೂ ಹಬ್ಬವಾದ ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವರ್ಷ, ಶಿವರಾತ್ರಿಯನ್ನು ಮಾರ್ಚ್ 8 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಭಕ್ತರು ರಾತ್ರಿಯಿಡೀ ಎಚ್ಚರವಾಗಿದ್ದು ಭಾಗವನ್ ಶಿವನ ಆರಾಧನೆ ಮಾಡುವ ಮೂಲಕ ಮಂತ್ರ ಪಠಿಸುತ್ತಾರೆ. ಆ ಮೂಲಕ ಪುಣ್ಯ ಫಲಗಳನ್ನು ಸಂಪಾದಿಸಿಕೊಳ್ಳುತ್ತಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.
ಮಹಾಶಿವರಾತ್ರಿ (Maha Shivratri) ಹಬ್ಬವು ಹಿಂದೂಗಳಲ್ಲಿ ಅಪಾರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ದಿನವಾಗಿದ್ದು, ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ದೇಶಾದ್ಯಂತ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಯಾವಾಗಲೂ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ವರ್ಷ, ಮಹಾಶಿವರಾತ್ರಿ ಹಬ್ಬವನ್ನು ಮಾರ್ಚ್ 8 ರಂದು ಆಚರಿಸಲಾಗುವುದು. ಈ ದಿನದ ಮಹತ್ವ, ಪೂಜಾ ಆಚರಣೆಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಾ ಶಿವರಾತ್ರಿ ಹಬ್ಬದ ಮಹತ್ವ ಮತ್ತು ಆಚರಣೆ;
ಮಹಾಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನವನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನಿಗೆ ಅರ್ಪಿಸಲಾಗಿದೆ. ಅಲ್ಲದೆ ಮಹಾಶಿವರಾತ್ರಿಯನ್ನು ಶಿವ ಮತ್ತು ಪಾರ್ವತಿ ಮದುವೆಯಾದ ಶುಭ ದಿನ ಎನ್ನಲಾಗುತ್ತದೆ. ಏಕೆಂದರೆ ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡುವ ಮೂಲಕ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವ ಪಾರ್ವತಿ ಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಈ ದಿನ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ಇವೆಲ್ಲಾ ಕಾರಣದಿಂದಾಗಿ ಮಹಾ ಶಿವರಾತ್ರಿಯ ಆಚರಣೆ ತುಂಬಾ ವಿಶೇಷವಾಗಿದ್ದು ಶಿವ ಭಕ್ತರು ಶಿವನನ್ನು ಪೂಜಿಸಲು, ಅಬಿಷೇಕ, ರುದ್ರಾಭಿಷೇಕ ಮಾಡಲು ಮತ್ತು ಭಗವಂತನ ಆಶೀರ್ವಾದ ಪಡೆಯಲು ವಿವಿಧ ಶಿವ ಮಂತ್ರಗಳನ್ನು ಪಠಿಸಲು ರಾತ್ರಿಯಿಡೀ ಎಚ್ಚರವಾಗಿರುತ್ತಾರೆ. ಭಕ್ತರಿಗೆ ಆಧ್ಯಾತ್ಮಿಕ ಜಾಗೃತಿ ಮತ್ತು ಮುಕ್ತಿಯನ್ನು ಪಡೆಯಲು ಇದು ಪರಿಪೂರ್ಣ ದಿನವಾಗಿದೆ.
ಶಿವ ಪುರಾಣದ ಪ್ರಕಾರ ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ. ಹಾಗಾಗಿ ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯವಾಗಿದೆ. ಅಲ್ಲದೆ ಆ ದಿನ ಈಶ್ವರನ ಆರಾಧನೆ ಮಾಡಿದರೆ ಎಂದೂ ಲಭಿಸದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.
ಮಹಾ ಶಿವರಾತ್ರಿಯ ಪೂಜಾ ಆಚರಣೆಗಳು;
ಈ ಶುಭ ದಿನದಂದು, ಭಕ್ತರು ಬೆಳಿಗ್ಗೆ ಎದ್ದು ಸ್ನಾನ ಮಾಡಿ ತಮ್ಮನ್ನು ತಾವು ಶುದ್ಧೀ ಮಾಡಿಕೊಳ್ಳುತ್ತಾರೆ. ಬಳಿಕ ಮನೆಯನ್ನು ಅದರಲ್ಲಿಯೂ ವಿಶೇಷವಾಗಿ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ. ದೀಪ ಬೆಳಗಿಸುತ್ತಾರೆ. ಆ ಬಳಿಕ ಶಿವನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇನ್ನು ಕೆಲವರು ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಿ ಜಲಾಭಿಷೇಕ, ರುದ್ರಾಭಿಷೇಕವನ್ನು ಮಾಡಿಸುತ್ತಾರೆ. ನಂತರ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿಸುತ್ತಾರೆ. ಈ ದಿನ ಶಿವನಿಗೆ ಬಿಲ್ವಪತ್ರೆಯನ್ನಿಟ್ಟು ಪೂಜೆ ಮಾಡುವುದು ವಿಶೇಷ ಫಲಗಳನ್ನು ನೀಡುತ್ತದೆ.
ಇದನ್ನೂ ಓದಿ: ಮೌನಿ ಅಮಾವಾಸ್ಯೆಯಂದು ಏನು ಮಾಡಬೇಕು, ಏನು ಮಾಡಬಾರದು?
ಈ ದಿನ ಯಾವ ಮಂತ್ರವನ್ನು ಪಠಣ ಮಾಡಬೇಕು?
-ಓಂ ನಮಃ ಶಿವಾಯ
-ಓಂ ತ್ರಯಂಭಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ, ಉರ್ವರುಕ್ಮಿವ್ ಬಂಧನನ್ ಮೃತ್ಯೋರ್ ಮುಕ್ಷೀಯ ಮಾ ಮರಿತತ್ ಓಂ
-ಓಂ ಶಿವಾಯ ನಮಃ, ಓಂ ಸರ್ವಾತ್ಮನೇ ನಮಃ, ಓಂ ತ್ರಿನೇತ್ರಾಯ ನಮಃ, ಓಂ ಹರಾಯ ನಮಃ
-ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್
-ಓಂ ಅನಂತವೈರಾಗ್ಯಸಿಂಹಾಯ ನಮಃ
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:49 am, Fri, 9 February 24