ನವರಾತ್ರಿಯ ಮೊದಲ ದಿನದ ಪೂಜೆ ಹೇಗೆ ಮತ್ತು ಯಾರಿಗೆ ಯಾವ ರೂಪದಲ್ಲಿ?
ನವರಾತ್ರಿಯ ಒಂಭತ್ತೂ ದಿನವು ತಾಯಿಗೆ ಒಂದೊಂದು ರೀತಿಯ ವಿಶೇಷ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ತಾಯಿಯ ರೂಪಕ್ಕನುಗುಣವಾಗಿ ಭಕ್ಷ್ಯ ಸಮರ್ಪಣೆ ಮಾಡಿದರೆ ಉತ್ತಮ ಫಲ ಸಿಗುತ್ತದೆ.
ನವರಾತ್ರಿಯಲ್ಲಿ ತಾಯಿ ದುರ್ಗೆಯ ಆರಾಧನೆ ಮಾಡಬೇಕೆಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅದು ಹೇಗೆ ಮತ್ತು ಯಾವ ದಿನ ಯಾವ ಸ್ವರೂಪದಲ್ಲಿ, ಯಾವ ಮಂತ್ರದಿಂದ / ಸ್ತೋತ್ರದಿಂದ ಧ್ಯಾನಿಸಬೇಕು ಎಂಬುದು ಹೆಚ್ಚಿನವರಿಗೆ ಗೊಂದಲವಿರುವುದು ಸಹಜ.
ನವರಾತ್ರಿಯ ಮೊದಲನೇಯ ದಿನ ಯೋಗನಿದ್ರಾ ಎನ್ನುವ ದೇವಿಯ ಸ್ವರೂಪವನ್ನು ಪೂಜಿಸುತ್ತಾರೆ. ಯೋಗನಿದ್ರಾ ಎಂದರೆ ಎಚ್ಚರ ಮತ್ತು ನಿದ್ರೆ ಇವುಗಳ ಮಧ್ಯಸ್ಥಿತಿ. ಜಾಗ್ರದವಸ್ಥೆ ಮತ್ತು ಸುಷುಪ್ತ್ಯವಸ್ಥೆ ಇವುಗಳ ಮಧ್ಯ ಸ್ಥಿತಿ ಎಂದರೆ ಸಮಾಧಿ ಸ್ಥಿತಿ. ಧ್ಯಾನದ ಪರಾಕಾಷ್ಠೆ ಎನ್ನುತ್ತಾರೆ. ಆ ಸ್ಥಿತಿಯಲ್ಲಿ ಉಂಟಾಗುವ ಆನಂದವೇನಿದೆ ಆ ರೂಪದಲ್ಲಿ ತಾಯಿ ದುರ್ಗೆಯನ್ನು ಪೂಜಿಸುವುದು.
ಕೆಲವರು ಶೈಲಪುತ್ರಿ ಎಂಬ ರೂಪದಲ್ಲೂ ಪೂಜಿಸುವರು. ಶೈಲಪುತ್ರಿ ಅಂದರೆ ಪರ್ವರಾಜನ ಪುತ್ರಿ ಪಾರ್ವತಿಯ ರೂಪ. ಮನಸ್ಸಿನ ನೆಮ್ಮದಿ ಅಥವಾ ಶಾಂತತೆಗೋಸ್ಕರ ಈ ರೂಪದಲ್ಲಿ ಯೋಗನಿದ್ರಾ ರೂಪದಲ್ಲಿ ತಾಯಿಯನ್ನು ವಿಶೇಷವಾಗಿ ಪೂಜಿಸಿದರೆ ಉತ್ತಮ. ಮನುಷ್ಯನಿಗೆ ಇಂದಿನ ವರ್ತಮಾನ ಸ್ಥಿತಿಯಲ್ಲಿ ಮಾನಸಿಕ ನೆಮ್ಮದಿ ಅತ್ಯವಶ್ಯ. ಅದಕ್ಕಾಗಿ ನವರಾತ್ರಿಯ ಪ್ರಥಮದಿನದಂದು ಪ್ರಾರ್ಥಿಸಿ ಮತ್ತು ಪೂಜಿಸಿ. ಇಂದು ತಾಯಿಗೆ ಸೌಮ್ಯ ವರ್ಣದ ಸೀರೆಯುಡಿಸಿದರೆ ಮತ್ತು ನಾವು ಆ ಬಣ್ಣದ ವಸ್ತ್ರವನ್ನುಟ್ಟು ತಾಯಿಯ ಸೇವೆ ಮಾಡಿದರೆ ಒಳ್ಳೆಯದು.
ಈ ಮೊದಲ ನವರಾತ್ರಿ ದಿನದಂದು ತಾಯಿಗೆ ನೈವೇದ್ಯ ಮಾಡಲೇ ಬೇಕಾದ ವಿಶೇಷ ಭಕ್ಷ್ಯವಿದೆ. ನವರಾತ್ರಿಯ ಒಂಭತ್ತೂ ದಿನವು ತಾಯಿಗೆ ಒಂದೊಂದು ರೀತಿಯ ವಿಶೇಷ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ತಾಯಿಯ ರೂಪಕ್ಕನುಗುಣವಾಗಿ ಭಕ್ಷ್ಯ ಸಮರ್ಪಣೆ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಮೊದಲದಿನದಂದು ಯೋಗನಿದ್ರಾ ರೂಪಳಾದ ದುರ್ಗೆಗೆ ಪಾಯಸಾನ್ನಪ್ರಿಯಾ” ಎಂದಿದ್ದಾರೆ. ಅಂದರೆ ಕೇವಲ ಹಾಲಿನಲ್ಲೇ ಅಕ್ಕಿಯನ್ನು ಬೇಯಿಸಿ ಅದಕ್ಕೆ ಪರಿಮಳ ದ್ರವ್ಯಗಳನ್ನು (ಏಲಕ್ಕಿ ಇತ್ಯಾದಿ) ಹಾಕಿ. ಸಕ್ಕರೆಯನ್ನು ಹಾಕಿ ಕುದಿಸಿದಾಗ ಆಗುವ ಪಾಯಸವೇನಿದೆ ಅದು ಮೊದಲ ದಿನದ ನೈವೇದ್ಯ ಭಕ್ಷ್ಯ. ಇದನ್ನು ಸ್ನಾನ ಮಾಡಿಯೇ ಸಿದ್ಧಪಡಿಸಬೇಕು. ಆಮೇಲೆ ಕಲಶ ಅಥವಾ ಬಿಂಬಕ್ಕೆ ಅಕ್ಷತೆಯನ್ನು ಹಾಕಿ ಶ್ರೀಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತೀ ಪೀತ್ಯರ್ಥಂ ಪ್ರಥಮ ದಿವಸೇ ಯೋಗನಿದ್ರಾದುರ್ಗಾಪೂಜಾಂ ಕರಿಷ್ಯೇ ಎಂದು ಸಂಕಲ್ಪಿಸಿ. ಈ ರೀತಿಯಾಗಿ ಧ್ಯಾನಿಸಿ – ವಿದ್ಯುದ್ದಾಮಸಮಪ್ರಭಾಂ ಮ್ರಗಪತಿಃ ಸ್ಕಂದಸ್ಥಿತಾಂ ಭೀಷಣಾಂ | ಕನ್ಯಾಭಿಃ ಕರವಾಲಖೇಟವಿಲಸದ್ಧಸ್ತಾಭಿರಾಸೇವಿತಾಂ || ಹಸ್ತೈಶ್ಚಕ್ರಗದಾಸಿಖೇಟವಿಶಿಖಾಂಶ್ಚಾಪಂ ಗುಣಂ ತರ್ಜನೀಂ | ಬಿಭ್ರಾಣಾಂ ಅನಲಾತ್ಮಿಕಾಂ ಶಶಿಧರಾಂ ದುರ್ಗಾಂ ತ್ರಿಣೇತ್ರಾಂ ಭಜೇ ||
ಈ ಶ್ಲೋಕವನ್ನು ಹೇಳಿ ತಾಯಿ ದುರ್ಗೆಗೆ ಷೋಡಶೋಪಚಾರ ಪೂಜೆಯನ್ನು ಮಾಡಿ ಪ್ರಸಾದ ಭಕ್ಷ್ಯ ನೈವೇದ್ಯ ಮಾಡಿ ಆರತಿಯನ್ನು ಮಂತ್ರ ಪುಷ್ಪವನ್ನು ಸಮರ್ಪಿಸಿ ಕ್ಷೇಮಕ್ಕೋಸ್ಕರ ಪ್ರಾರ್ಥಿಸಿ ಸನ್ಮಂಗಲವಾಗುವುದು.
ಡಾ.ಕೇಶವಕಿರಣ.ಬಿ ಧಾರ್ಮಿಕಚಿಂತಕರು ಮತ್ತು ಸಲಹೆಗಾರರು.