Karna life lessons: ಒಂದು ಸಲ ಕರ್ಣನ ಜೀವನ ನೋಡಿ ನಿಮ್ಮ ಹತಾಶೆಗೆ ಉತ್ತರ ಸಿಗುವುದು!
ಹಲವಾರು ಜನರು ಹೇಳಿಕೊಳ್ಳುತ್ತಾರೆ ನಮಗೆ ಯಾವ ಕ್ಷೇತ್ರದಲ್ಲೂ ಗಾಡ್ ಫಾದರ್ ಇಲ್ಲ. ಸಾಧಿಸಬೇಕಿಂದಿದೆ ಆದರೆ ಸೂಕ್ತ ವೇದಿಕೆಯಿಲ್ಲ. ಎಲ್ಲರೂ ತುಳಿಯುತ್ತಾರೆ. ಏನು ಮಾಡಿದರೂ ಸೂಕ್ತ ಸ್ಪಂದನವಿಲ್ಲ ಎಂದು. ಇನ್ನು ಕೆಲವರು ಇದನ್ನು ಹೇಳದೇ ಅಂತರಂಗದಲ್ಲಿ ಕೊರಗುತ್ತಿರುತ್ತಾರೆ.
ಹಲವಾರು ಜನರು ಹೇಳಿಕೊಳ್ಳುತ್ತಾರೆ ನಮಗೆ ಯಾವ ಕ್ಷೇತ್ರದಲ್ಲೂ ಗಾಡ್ ಫಾದರ್ ಇಲ್ಲ. ಸಾಧಿಸಬೇಕಿಂದಿದೆ ಆದರೆ ಸೂಕ್ತ ವೇದಿಕೆಯಿಲ್ಲ. ಎಲ್ಲರೂ ತುಳಿಯುತ್ತಾರೆ. ಏನು ಮಾಡಿದರೂ ಸೂಕ್ತ ಸ್ಪಂದನವಿಲ್ಲ ಎಂದು. ಇನ್ನು ಕೆಲವರು ಇದನ್ನು ಹೇಳದೇ ಅಂತರಂಗದಲ್ಲಿ ಕೊರಗುತ್ತಿರುತ್ತಾರೆ. ಈ ಕೊರಗುವಿಕೆಯಲ್ಲೇ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರು ಜೀವನ ಬದಲಾವಣೆಯ ನಕಲಿ ಕೋರ್ಸ್ ಗಳಿಗೆ ಮಾರುಹೋಗಿ ಮೋಸಗೊಂಡು ಮತ್ತೂ ಹತಾಶರಾಗುತ್ತಾರೆ. ಇಂತಹ ಘಟನೆಗಳಿಗೆ ಪರಿಹಾರವೇ ಇಲ್ಲವೇ ? ಎಂಬ ಪ್ರಶ್ನೆಗುತ್ತರ ಇದೆ ಎಂದು. ಅದು ಹೇಗೆ ನೋಡೋಣ ನಮ್ಮ ಪ್ರಾಚೀನ ಪರಂಪರೆಯ ಇತಿಹಾಸವನ್ನು ಸಾರುವ ಪುರಾಣ, ಕಾವ್ಯಗಳೇನಿವೆ ಇವುಗಳು ಜೀವನ ಶೈಲಿಯ ಉತ್ಕೃಷ್ಟತೆಯನ್ನು ಹೆಚ್ಚಿಸಲು ಮತ್ತು ಉತ್ತಮ ಸಾಧನೆಗೆ ದಾರಿಯನ್ನು ತೋರಿಸುತ್ತದೆ. ಮಹಾಭಾರತದ ಪ್ರಧಾನ ವ್ಯಕ್ತಿಗಳಲ್ಲಿ ಒಬ್ಬ ಕರ್ಣ. ಅವನಿಗೋಸ್ಕರ ಒಂದು ಪರ್ವವನ್ನೇ ವ್ಯಾಸರು ಮೀಸಲಿಟ್ಟಿದ್ದಾರೆ. ಅದೇ ಕರ್ಣಪರ್ವ. ಆದರೆ ಆ ಕರ್ಣನ ಜೀವನ ಅಷ್ಟು ಸುಲಭದ್ದೇನೂ ಆಗಿರಲಿಲ್ಲ. ದುರ್ವಾಸರಿಂದ ಉಪದೇಶ ಮಾಡಲ್ಪಟ್ಟ ಮಂತ್ರವನ್ನು ಕುಂತಿಯು ಪರೀಕ್ಷೆಗಾಗಿ ವಿವಾಹ ಪೂರ್ವದಲ್ಲಿ ಜಪಿಸುತ್ತಾಳೆ. ಸೂರ್ಯ ಸಂಬಂಧಿತವಾದ ಈ ಮಂತ್ರದಿಂದ ಸಂಪ್ರೀತನಾದ ಸೂರ್ಯನು ಅವಳಿಗೆ ಮುದ್ದಾದ ಮಗುವನ್ನು ಕರುಣಿಸುತ್ತಾನೆ.
ಸೂರ್ಯನು ಅನುಗ್ರಹಿಸುವ ಕಾಲದಲ್ಲೇ ಅವನು ಕವಚ ಮತ್ತು ಕುಂಡಲ ಧಾರಿಯಾಗಿಯೇ ಜನಿಸಿದ್ದ. ಆದರೆ ಅವನ ವಿಧಿ ಬೇರೆಯೇ ಆಯಿತು. ರಾಜನಾಗಬೇಕಾದವನು ಸಾರಥಿಯ ಮನೆಯಲ್ಲಿ ಬೆಳೆಯಬೇಕಾಯಿತು. ಕ್ಷಾತ್ರ ವಿದ್ಯಾಭ್ಯಾಸ ಅಪೇಕ್ಷಿತನಾಗಿ ತೆರಳಿದರೆ ಕ್ಷತ್ರಿಯನಲ್ಲ ಎಂಬ ಕಾರಣಕ್ಕೆ ಪ್ರತಿಭೆಯಿದ್ದರೂ ತಿರಸ್ಕರಿಸಲ್ಪಟ್ಟ. ವಿದ್ಯೆ ಕಲಿಸಿದ ಗುರುಗಳಾದ ಪರಶುರಾಮರಿಂದ ಅಸತ್ಯ ನುಡಿದ ಎಂಬ ಕಾರಣಕ್ಕೆ ಕಲಿತ ವಿದ್ಯೆ ಆಪತ್ಕಾಲದಲ್ಲಿ ಉಪಯೋಗಕ್ಕೆ ಬಾರದಿರಲಿ ಎಂಬ ಶಾಪಕ್ಕೊಳಗಾದ. ಧುರ್ಯೋಧನನ ಸ್ವಾರ್ಥ ಸಹಕಾರವನ್ನು ಶುದ್ಧಮಿತ್ರತ್ವ ಎಂದು ಭ್ರಮಿಸಿದ. (ಇದು ಮೇಲ್ನೋಟಕ್ಕೆ ಶುದ್ಧ ಮಿತ್ರತ್ವದಂತಿದ್ದರೂ ಧುರ್ಯೋಧನ ಅವನ ಹತಾಶೆಯ ಪರಾಕ್ರಮವನ್ನು ದುರುಪಯೋಗ ಮಾಡಿಕೊಂಡ). ಅದರಿಂದ ಅಧರ್ಮದ ಪಾಲಾದ. ಧುರ್ಯೋಧನನ ಗೆಳತನದ ಕಾರಣದಿಂದ ದ್ರೌಪದಿಯ ಸ್ವಯಂವರದಲ್ಲಿ ದ್ರೌಪದಿಯಿಂದಲೇ ಅವಮಾನಿತನಾದ.
ಜಗತ್ತನ್ನೇ ಗೆಲ್ಲುವ ಪರಾಕ್ರಮವಿದ್ದರೂ ದುಶ್ಶಾನ, ಅಶ್ವಾತ್ಥಾಮರ ಕುತಂತ್ರದ ಎದುರು ಮಂಡಿಯೂರಬೇಕಾಯಿತು. ಶಕುನಿ ತನ್ನ ಕುಟಿಲತೆಯಿಂದ ಧುರ್ಯೋಧನನ ಯೋಜನೆ ತಪ್ಪಿಸುತ್ತಿರುವಾಗ ಕರ್ಣ ಎಚ್ಚರಿಸಿದರೂ ಉಪಯೋಗವಾಗಲಿಲ್ಲ. ಕಣ್ಣೆದುರು ನಿಜವಾದ ತಾಯಿಯಿದ್ದರೂ ಅವಳನ್ನು ತಾಯಿ ಎನ್ನುವ ಸ್ಥಿತಿಯಲ್ಲಿ ಅವನಿರಲಿಲ್ಲ.
ಇದನ್ನೂ ಓದಿ: Spiritual: ಪ್ರಾರ್ಥನೆ ಎಂದರೇನು? ಅಷ್ಟಕ್ಕೂ ಪ್ರಾರ್ಥನೆ ಹೇಗಿರಬೇಕು ಗೊತ್ತಾ..!
ನಿಸ್ವಾರ್ಥವಾಗಿ ಬೆಳಕು ಕೊಡುವ ಸೂರ್ಯನ ವರಪ್ರಸಾದದಿಂದ ಜಗವ ಕಂಡವ ಕರ್ಣ. ಅಂತಹ ಕರ್ಣ ದೇವದುರ್ಲಭವಾದ ದಾನ ಮಾಡುವ ಗುಣವೇನಿದೆ ಅರ್ಥಾತ್ ತನ್ನ ಕೇಳಿದವರಿಗೆ ತನ್ನಲ್ಲಿರುವ ಯಾವುದೇ ವಸ್ತುವನ್ನಾದರೂ ಕೊಡುವ ಸಂಕಲ್ಪವೇನಿದೆ ಅದೇ ಅವನ ಕವಚ ಕುಂಡಲವನ್ನು ನೀಡುವಂತೆ ಮಾಡಿತು. ರಥವು ರಥದೊಡೆಯನ ಆಜ್ಞೆಯಂತೆ ನಡೆಯುವುದು ನಿಯಮ. ಆದರೆ ಶಲ್ಯನ ಸಾರಥ್ಯದಲ್ಲಿ ಅದು ವಿರುದ್ಧವಾಗಿ ಪರಿಣಮಿಸಿತು ಕರ್ಣನಿಗೆ. ಇಷ್ಟೇ ಸಾಲದೆಂಬಂತೆ ತನ್ನ ತಮ್ಮನ ಮಗನಾದ ವೀರ ಅಭಿಮನ್ಯುವನ್ನು ರಣದಲ್ಲಿ ಮೋಸದಲ್ಲಿ ಕೊಲ್ಲುವ ಪ್ರಕ್ರಿಯೆಗೆ ಮನವಿಲ್ಲದಿದ್ದರೂ ಅನಿವಾರ್ಯವಾಗಿ ಕೈ ಜೋಡಿಸಬೇಕಾಯಿತು.
ಇದೆಲ್ಲಕ್ಕೂ ಕಾರಣ ಅವನ ಪಾಲಿಗೊದಗಿದ ವಿಧಿ ನಿಯಮ. ಆದರೂ ಈ ಎಲ್ಲಾ ಹತಾಶೆ, ಮಿತ್ರ ಪಾಶಕ್ಕೆ ಬಿದ್ದು ದುಷ್ಟಕಾರ್ಯಗಳು ಮಾಡಿದ್ದು, ಅವಮಾನಗಳು ಇವೆಲ್ಲದರ ನಡುವೆ ತನ್ನ ನಿಸ್ವಾರ್ಥ ಮನೋಭಾವದಿಂದ ಸಾಧನೆ ಮಾಡುತ್ತಲೇ ಇದ್ದ.
ಎಲ್ಲೂ ನನಗೆ ಅನ್ಯಾಯವಾಯಿತು ಎಂದು ಕೊರಗಲಿಲ್ಲ. ಇದ್ದದ್ದರಲ್ಲೇ ಮಹತ್ತರವಾದದ್ದನ್ನು ಸಾಧಿಸಿದ. ಕರ್ಮಫಲವೆಂಬುದನ್ನು ಮೌನವಾಗಿಯೇ ಅನುಭವಿಸಿದ. ತನ್ನ ಜೀವನದ ಕೊನೆಯ ಘಳಿಗೆಯಲ್ಲಿ ಹರಿ (ಶ್ರೀಕೃಷ್ಣ) ಹರ (ಆಂಜನೇಯ) ಇವರುಗಳು ಮೆಚ್ಚುವಂತೆ ಹೋರಾಡಿದ. ತನ್ನ ಆಜನ್ಮ ಶತ್ರುವಾದರೂ ಅರ್ಜುನನ ಮಡಿಲಲ್ಲಿ ಮಲಗಿ ಹೆಮ್ಮೆಯ ಗೌರವ ಪಡೆದ. ವೀರಮರಣನ್ನಪ್ಪಿದ. ಇಂದಿಗೂ ಅವನ ಹೆಸರು ದಾನಶೂರ ಕರ್ಣನೆಂದೇ ಪ್ರಸಿದ್ಧ.
ಈಗ ಯೋಚಿಸಿ ನಾವು ಹತಾಶರಾಗುವ ಅವಶ್ಯಕತೆ ಇದೆಯೇ? ಯಾರ್ಯಾರನ್ನೋ ನಂಬಿ ನಮ್ಮ ಬಲವನ್ನು ಭಾವಿಸಿ ಕೇವಲವೆಂದು ಸುಮ್ಮನಿರಬೇಕೇ? ಇಷ್ಟೊಂದು ಸೋಲುಗಳು ಧರ್ಮಸಂಕಟಗಳು ನಮಗೆ ಬಂದಿದೆಯೇ?
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು