Subrahmanya Sashti 2023: ಸ್ಕಂದ ಷಷ್ಠಿ ಬಗ್ಗೆ ತಿಳಿದಿದೆಯಾ? ಕಾರ್ತಿಕೇಯನ ಆರಾಧನೆಯಿಂದ ಏನೆಲ್ಲಾ ಪ್ರಾಪ್ತಿಯಾಗುತ್ತದೆ?
Skanda Sashti: ಹಿಂದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ವಿಶೇಷ ಮಹತ್ವವಿದ್ದು, ಈ ದಿನ ಶಿವ ಮತ್ತು ಪಾರ್ವತಿಯನ್ನು ಪೂಜಿಸುವುದರಿಂದ ದೇವಿಯ ಕೃಪೆಯು ಪ್ರಾಪ್ತವಾಗುತ್ತದೆ. ಮತ್ತು ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.

ಈ ವ್ರತವನ್ನು ಪ್ರತಿ ತಿಂಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಆಚರಿಸಲಾಗುತ್ತದೆ ಹಾಗಾಗಿ ಈ ದಿನವನ್ನು ಸ್ಕಂದ ಷಷ್ಠಿ ಎಂದು ಕರೆಯಲಾಗುತ್ತದೆ. ಈ ಬಾರಿ ಅಧಿಕ ಶ್ರಾವಣ ಬಂದಿದ್ದು ಈ ದಿನವನ್ನು ಶುಕ್ಲ ಪಕ್ಷದ ಷಷ್ಠಿಯಂದು ಅಂದರೆ ಜುಲೈ 23 ರಂದು ಆಚರಿಸಲಾಗುತ್ತದೆ. ಈ ದಿನದಂದು ಕಾರ್ತಿಕೇಯನನ್ನು ಅಂದರೆ ಸುಬ್ರಹ್ಮಣ್ಯನನ್ನು ಪೂಜಿಸುವ ಸಂಪ್ರದಾಯವನ್ನು ಒಳಗೊಂಡಿದೆ. ಹಿಂದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ವಿಶೇಷ ಮಹತ್ವವಿದ್ದು, ಈ ದಿನ ಕಾರ್ತಿಕೇಯನ ಜೊತೆಗೆ ಶಿವ ಮತ್ತು ಪಾರ್ವತಿಯನ್ನು ಪೂಜಿಸುವುದರಿಂದ ದೇವಿಯ ಕೃಪೆಯು ಪ್ರಾಪ್ತವಾಗಬಹುದು ಮತ್ತು ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.
ಸ್ಕಂದ ಷಷ್ಠಿ ಶುಭ ಮುಹೂರ್ತ:
ಈ ತಿಥಿಯು ಜುಲೈ 23 ರಂದು ಬೆಳಿಗ್ಗೆ 11:45 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಜುಲೈ 24 ರಂದು ಮಧ್ಯಾಹ್ನ 01:43 ಕ್ಕೆ ಕೊನೆಗೊಳ್ಳುತ್ತದೆ.
ಪೂಜೆಯನ್ನು 23 ರಂದು ಮಧ್ಯಾಹ್ನ 12:15 ರಿಂದ ನಡು ಮಧ್ಯಾಹ್ನ 01:50 ನವರೆಗೆ ಹೊರತು ಪಡಿಸಿ ಯಾವ ಸಮಯದಲ್ಲಿಯಾದರೂ ಮಾಡಬಹುದು.
ಈ ದಿನದ ಮಹತ್ವವೇನು?
ಸ್ಕಂದ ಷಷ್ಠಿಯ ವ್ರತವನ್ನು ಆಚರಿಸುವುದರಿಂದ ಕಾಮ, ಕ್ರೋಧ, ಮೋಹ, ಅಹಂಕಾರಗಳಿಂದ ಮುಕ್ತಿ ಪಡೆದು ಸನ್ಮಾರ್ಗ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅದಲ್ಲದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರ್ತಿಕೇಯನು ಷಷ್ಠಿ ತಿಥಿಯ ಮತ್ತು ಮಂಗಳದ ಅಧಿಪತಿ. ಹಾಗಾಗಿ ಯಾರ ಜಾತಕದಲ್ಲಿ ಮಂಗಳ ದೋಷವಿದ್ದವರು ಈ ದಿನದಂದು ಉಪವಾಸ ಮಾಡುವುದರಿಂದ ಒಳ್ಳೆಯ ದಿನಗಳನ್ನು ಕಾಣುವುದರ ಜೊತೆಗೆ ಮಾಡಿದ ಕೆಲಸಗಳಲ್ಲಿ ಜಯ ದೊರೆಯುವುದು ಎನ್ನಲಾಗಿದೆ.
ಇದನ್ನೂ ಓದಿ: ಇಂದು ಷಷ್ಠಿ ಪೂಜೆ ; ಭಗವಾನ್ ಕಾರ್ತಿಕೇಯನ ಆರಾಧನೆ, ಮಹತ್ವ ತಿಳಿಯಿರಿ
ಶಿವನ ಮಗ ಕಾರ್ತಿಕೇಯನು ಚಂಪಾ ಪುಷ್ಪಗಳನ್ನು ಇಷ್ಟಪಡುವ ಕಾರಣ ಈ ದಿನವನ್ನು ಸ್ಕಂದ ಷಷ್ಠಿಯಲ್ಲದೆ ಚಂಪಾ ಷಷ್ಠಿ ಎಂದೂ ಕರೆಯುತ್ತಾರೆ. ಸ್ಕಂದ ಪುರಾಣ ಕಾರ್ತಿಕೇಯನಿಗೆ ಸಮರ್ಪಿತವಾಗಿದ್ದು ಇದರಲ್ಲಿ ಋಷಿ ವಿಶ್ವಾಮಿತ್ರನಿಂದ ರಚಿಸಲ್ಪಟ್ಟ ಕಾರ್ತಿಕೇಯನ 108 ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಷಷ್ಠಿ ತಿಥಿಯಂದು ಭಗವಾನ್ ಕಾರ್ತಿಕೇಯನ ದರ್ಶನ ಪಡೆದು ಬಳಿಕ ಸ್ಕಂದ ಪುರಾಣ ಓದುವುದರಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ ಪಾಪಗಳಿಂದ ಮುಕ್ತಿ ದೊರೆತು ಸಂತೋಷದ ದಿನಗಳು ಆರಂಭವಾಗುತ್ತದೆ ಎನ್ನಲಾಗಿದೆ.




