Spiritual: ಶನೈಶ್ಚರನ ಆರಾಧನೆ ಹೇಗೆ ? ಶನಿಯ ಸಾಡೇಸಾತ್ ನಿಂದ ತೊಂದರೆ ಏನು?
ಶನೈಃ ಚರತೀತಿ ಶನೈಶ್ಚರಃ ( ನಿಧಾನವಾಗಿ ಚಲಿಸುವವನು ಶನಿಯು) .ಆದ್ದರಿಂದಲೇ ಅವನಿಗೆ ಶನೈಶ್ಚರ ಎಂಬ ಹೆಸರಿದೆ. ಶನಿಯ ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದೇ ಇದೆ. ಆದರೂ ಕೆಲವು ವಿಚಾರಗಳನ್ನು ಇಲ್ಲಿ ಹೇಳುತ್ತೇನೆ. ಎಲ್ಲರಿಗೂ ತಿಳಿದಿರುವಂತೆ ಶನಿಯು ಕರ್ಮಫಲದಾತ. ಅವನ ದಶೆಯು ನಮ್ಮ ಕುಂಡಲಿಯ ಪ್ರಕಾರ ಜಾತಕದಲ್ಲಿ ಬಂತೆಂದರೆ ನಾವು ಮಾಡಿದ ಸತ್ಕರ್ಮ/ದುಷ್ಕರ್ಮಕ್ಕನುಸಾರವಾಗಿ ಫಲ ಪ್ರಾಪ್ತಿ ಆಗುತ್ತದೆ.
ಶನೈಃ ಚರತೀತಿ ಶನೈಶ್ಚರಃ ( ನಿಧಾನವಾಗಿ ಚಲಿಸುವವನು ಶನಿಯು) .ಆದ್ದರಿಂದಲೇ ಅವನಿಗೆ ಶನೈಶ್ಚರ ಎಂಬ ಹೆಸರಿದೆ. ಶನಿಯ ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದೇ ಇದೆ. ಆದರೂ ಕೆಲವು ವಿಚಾರಗಳನ್ನು ಇಲ್ಲಿ ಹೇಳುತ್ತೇನೆ. ಎಲ್ಲರಿಗೂ ತಿಳಿದಿರುವಂತೆ ಶನಿಯು ಕರ್ಮಫಲದಾತ. ಅವನ ದಶೆಯು ನಮ್ಮ ಕುಂಡಲಿಯ ಪ್ರಕಾರ ಜಾತಕದಲ್ಲಿ ಬಂತೆಂದರೆ ನಾವು ಮಾಡಿದ ಸತ್ಕರ್ಮ/ದುಷ್ಕರ್ಮಕ್ಕನುಸಾರವಾಗಿ ಫಲ ಪ್ರಾಪ್ತಿ ಆಗುತ್ತದೆ. ನಮ್ಮ ಜೀವನದಲ್ಲಿ ಬರುವ ಸಾಡೇಸಾತ್ (ಏಳೂವರೆ ವರ್ಷದ ಶನಿಯ ನಮ್ಮ ಮೇಲಿನ ಗಮನ) ಬೇರೆ. ಶನಿದಶೆ ಬೇರೆ. ಸಾಡೇಸಾತ್ ಅಂದರೆ ನಮ್ಮ ರಾಶಿಯ ಅನುಗುಣವಾಗಿ ಬರುವಂತಹದ್ದು. ಶನಿಯು ಇರುವ ರಾಶಿಗೆ ,ಮುಂದಿನ ರಾಶಿಗೆ ಮತ್ತು ಹಿಂದಿನ ರಾಶಿಗೆ ಅವನ ಪ್ರಭಾವವಿರುತ್ತದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷ ಬೇಕಾಗುತ್ತದೆ. ಆದಕಾರಣವೇ ಒಂದು ರಾಶಿಯಲ್ಲಿ ಎರಡೂವರೆ ವರ್ಷದಂತೆ ಮೂರು ರಾಶಿಗಳ ಪ್ರಭಾವ ಸೇರಿ ಒಟ್ಟೂ ಏಳೂವರೆ ವರ್ಷ (2.5 × 3 = 7.5). ಇದಕ್ಕೆ ಶನಿಯ ಸಾಡೇಸಾತ್ ಅಥವಾ ಏಳೂವರೆ ಶನಿ ಎನ್ನುವುದು. ಈ ಸಮಯದಲ್ಲಿ ಶನಿಯ ವಿಶೇಷವೆಂದರೆ ಈ ಅವಸ್ಥೆಯಲ್ಲಿರುವ ಜನರ ಪ್ರಾಣಹಾನಿಯನ್ನು ಶನಿಯು ಮಾಡುವುದಿಲ್ಲ.
ನಮ್ಮ ರಾಶಿಗೆ ಅವನು ಅನುಕೂಲನಾಗಿದ್ದರೆ ಅಷ್ಟೊಂದು ತೊಂದರೆಯನ್ನು ನೀಡುವುದಿಲ್ಲ. ಈ ಸಂದರ್ಭವನ್ನು ಆದಿ ಮಧ್ಯ ಅಂತ್ಯ ಎಂದು ಹೇಳುತ್ತಾರೆ. ಶನಿಯು ನಮ್ಮ ರಾಶಿಯ ಹಿಂದಿನ ರಾಶಿಯಲ್ಲಿದ್ದರೆ ಆದಿ . ಈ ಸಮಯದಲ್ಲಿ ಕಬ್ಬಿಣ ವಸ್ತುಗಳಿಂದ ವಿಪತ್ತು ಹೆಚ್ಚು ಅಂದರೆ ವಾಹನಾಪಘಾತಗಳು ಇತ್ಯಾದಿ. ಹೆಚ್ಚಾಗಿ ನಾಭಿಯಿಂದ ಕೆಳಗೆ ಪಾದದವರೆಗೆ ತೊಂದರೆಗಳು ಸಂಭವಿಸುವುದು ಹೆಚ್ಚು. ನಮ್ಮ ರಾಶಿಗೆ ಸನಿ ಬಂದಾಗ ಮಧ್ಯ ಎನ್ನುವರು. ಈಗ ಮೇಲೆ ಹೇಳಿದ ಅಂಶಗಳೊಂದಿಗೆ ಮಾನಸಿಕ ಕ್ಲೇಶ ಆರಂಭವಾಗುವ ಸಾಧ್ಯತೆ ಇದೆ. ಕೋರ್ಟು-ಕಛೇರಿ ಅಲೆದಾಟ. ಕೆಲಸಗಾರರಿಂದ ಕಿರಿ ಕಿರಿ. ಹಿತಶತ್ರುಗಳು ಹೆಚ್ಚುವರು. ಒಟ್ಟಾರೆ ಈ ಸಮಯದಲ್ಲಿ ನಾವು ಒಂಟಿ ಅನಿಸಿಬಿಡುತ್ತೇವೆ. ಇದರಿಂದ ನಾವೇನು ನಮ್ಮ ವಾಸ್ತವ ಶಕ್ತಿ ಏನೆಂಬುದರ ಅರಿವು ಮೂಡಿಸುತ್ತಾನೆ ಶನಿ. ಅದಕ್ಕೆ ಶನಿಯನ್ನು “ಸೌರಿಃ ಶೌರ್ಯಕರಃ” ಎಂದಿದ್ದಾರೆ. ಸೌರಿಃ ಅಂದರೆ ಸೂರ್ಯಪುತ್ರ ಶನಿ ಎಂದರ್ಥ. ಶೌರ್ಯಕರಃ ಅಂದರೆ ಎಂತಹಾ ಸಂದರ್ಭ ಬಂದೊದಗಿದರೂ ಅದನ್ನು ಎದುರಿಸುವ ಶಕ್ತಿಯನ್ನು ನೀಡುವವನು ಎಂದರ್ಥೈಸಿಕೊಳ್ಳಬೇಕು.
ಹಾಗೇ ನಮ್ಮ ರಾಶಿಯಿಂದ ಮುಂದಿನ ರಾಶಿಗೆ ಸಂಚರಿಸಿದಾಗ ಅಂತ್ಯದ ಶನಿ ಎನ್ನುವರು. ಈ ಸಂದರ್ಭದಲ್ಲಿ ನಿಧಾನವಾಗಿ ನಾವು ಕಳೆದುಕೊಂಡ ಅಂಶಗಳನ್ನು ಅನುಗ್ರಹಿಸುತ್ತಾ ಬರುತ್ತಾನೆ. ಆದರೂ ನಾವು ಜಾಗರೂಕರಾಗಿರುವುದು ಉತ್ತಮ. ಏಳೂವರೆ ಶನಿಯ ಕಾಲದಲ್ಲಿ ಆದಷ್ಟು ಚಿನ್ನದ ಖರೀದಿಯನ್ನು ಸ್ವತಃ ನೀವಾಗಿ ಮಾಡಬೇಡಿ. ಆದಿ ಮತ್ತು ಮಧ್ಯದಲ್ಲಿ ವಾಹನ ಖರೀದಿಯೂ ಉತ್ತಮವಲ್ಲ. ಆದರೆ ಭೂಮಿ ಖರೀದಿ,ನಿವೇಶನ ಖರೀದಿಯಿಂದ ಸಂಪತ್ತು ಪೋಲಾಗುವುದನ್ನು ತಡೆಯುವುದು ಉತ್ತಮ. ಭೂಮಿ,ನಿವೇಶನದ ಖರೀದಿಯ ಸಂದರ್ಭದಲ್ಲಿ ಕಿರಿಕಿರಿ ಅನಿಸಿದರೂ ಕ್ರಮೇಣ ಶನಿಯು ಉತ್ತಮ ಲಾಭವನ್ನು ನೀಡುತ್ತಾನೆ.
ಇನ್ನು ದಶಾ ಕಾಲದ ಬಗ್ಗೆ ಹೇಳುವುದಾದರೆ – ಅವನ ದಶಾ ಅವಧಿಯು 19 ವರ್ಷ. ಮಕರ ಮತ್ತು ಕುಂಭರಾಶಿಗಳು ಇವನ ಸ್ವಕ್ಷೇತ್ರ. ತುಲಾರಾಶಿ ಇವನಿಗೆ ಉಚ್ಚಸ್ಥಾನ. ಮೇಷರಾಶಿಯು ನೀಚಸ್ಥಾನ. ದಶಾಕಾಲದಲ್ಲಿ ಅವನ ಸ್ಥಾನಕ್ಕನುಗುಣವಾದ ಫಲವನ್ನು ನೀಡುತ್ತಾನೆ.ಇವನಿಗೆ ನೀಲ ಬಣ್ಣ ತುಂಬಾಪ್ರೀತಿ. ಕರಿಎಳ್ಳು ಇವನ ಪ್ರೀತಿಯ ಧಾನ್ಯ.
ಮೊದಲೇ ಹೇಳಿದಂತೆ ಶನಿಯು ಕರ್ಮಕ್ಕೆ ತಕ್ಕಂತೆ ಫಲ ನೀಡುವವನಾದ್ದರಿಂದ ಅವನಿಗೆ ಅಸತ್ಯ,ಅಧರ್ಮಗಳು ಹಿಡಿಸುವುದಿಲ್ಲ. ಇದರೊಂದಿಗೆ ಅಹಂಕಾರವೂ ಸಲ್ಲ. ಸಾಡೇಸಾತ್ ಸಮಯದಲ್ಲಿ ವಿಷ್ಣುಸಹಸ್ರನಾಮ ಪಠಣ/ಶ್ರವಣ, ಹನೂಮಾನ್ ಚಾಲೀಸ್ ಪಠಣ, ಶಿವನಿಗೆ ಎಳ್ಳೆಣ್ಣೆ ಸಮರ್ಪಣೆ, ತ್ರಿಮೂರ್ತಿಗಳ ಸ್ಥಾನವಾದ ಅಶ್ವತ್ಥ ಪ್ರದಕ್ಷಿಣೆ , ಶನಿವಾರ ಒಪ್ಪೊತ್ತು, ದಶರಥನಿಂದ ರಚಿಸಲ್ಪಟ್ಟ ಶನಿಸ್ತೋತ್ರ ಪಠಣ / ಶ್ರವಣ, ಶನಿಮಂತ್ರ ಜಪ ಅಲ್ಲದೇ ಶನಿಯ ಪ್ರೀತಿಗಾಗಿ ಶಮೀ ಸಮಿಧೆಯಿಂದ ಅವನನ್ನು ಕುರಿತು ಯಾಗವನ್ನು ಮಾಡುವುದರಿಂದ ಕ್ಷೇಮ.
ಇದರಲ್ಲೂ ಅಶ್ವತ್ಥ ಪ್ರದಕ್ಷಿಣೆಯೇನಿದೆ ಅದು ಮಾನಸಿಕ ನೆಮ್ಮದಿಯ ಜೊತೆಗೆ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸಾಧ್ಯವಿದ್ದಲ್ಲಿ ದಿನಾ ಮಾಡಿ. ಇಲ್ಲದಿದ್ದಲ್ಲಿ ಶನಿವಾರ ಏಳು ಬಾರಿ ಅಶ್ವತ್ಥ ಪ್ರದಕ್ಷಿಣೆ ಮಾಡಿ ಶನಿಯಕುರಿತಾದ ಎಲ್ಲಾ ಕಷ್ಟಗಳೂ ದೂರವಾಗುವುದು ನಿಶ್ಚಿತ (ಇಲ್ಲಿ ಗಂಡು ಹೆಣ್ಣು ಬೇಧವಿಲ್ಲ ಯಾರೂ ಮಾಡಬಹುದು) . ಇದರೊಂದಿಗೆ ದಶರಥನಿಂದ ರಚಿಸಲ್ಪಟ್ಟ ಶನಿಸ್ತೋತ್ರ ಹೇಳಿದರೆ ಯಾ ಕೇಳಿದರೆ ಅತ್ಯುತ್ತಮ. ನಿಶ್ಚಯವಾಗಿ ಹೇಳುತ್ತೇನೆ ಶನಿಯು ಕ್ರೂರಿಯಲ್ಲ. ಅವನಿಗೆ ಭಯಪಡಬೇಕಾದ್ದಿಲ್ಲ. ಅವನು ಕೇವಲ ನಾವು ಮಾಡಿದ ಕರ್ಮ(ಕಾರ್ಯ)ಕ್ಕನುಗುಣವಾಗಿ ಫಲವನ್ನು ನೀಡುತ್ತಾನಷ್ಟೇ.
ಎಲ್ಲರೂ ಭಕ್ತಿಯಿಂದ ಶನಿಯ ಈ ಮಂತ್ರವನ್ನು ಜಪಿಸಿ
ನೀಲಾಂಜನಚಯಾಕಾರಂ ರವಿಸೂನುಂ ನಪುಂಸಕಂ |
ಛಾಯಾಗರ್ಭಸಮುದ್ಭೂತಂ ವಂದೇ ಭಕ್ತ್ಯಾ ಶನೈಶ್ಚರಂ ||
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು, S.R.B.S.S College, ಹೊನ್ನಾವರ
kkmanasvi@gamail.com