Spiritual: ಬೃಹಸ್ಪತಿಗ್ರಹವೆಂದರೆ ಯಾರು? ಬೃಹಸ್ಪತಿಯ ಆರಾಧನೆ ಹೇಗೆ?
ಗುರುವಿಗೆ ಧನುಸ್ಸು ಮತ್ತು ಮೀನರಾಶಿಗಳು ಸ್ವಂತ ಕ್ಷೇತ್ರ. ಕರ್ಕಾಟಕರಾಶಿ ಗುರುವಿಗೆ ಉಚ್ಚಸ್ಥಾನ. ಮಕರವು ನೀಚಸ್ಥಾನವಾಗಿದೆ. ರವಿ,ಚಂದ್ರ ಮತ್ತು ಕುಜರು ಗುರುವಿಗೆ ಮಿತ್ರಗ್ರಹರು. ಶನಿಯೊಂದಿಗೆ ಅಥವಾ ಶನಿಯ ಮನೆಯಲ್ಲಿದ್ದರೆ ಗುರುವು ಮಿಶ್ರಫಲವನ್ನು ನೀಡುತ್ತಾನೆ.
ಬೃಹಸ್ಪತಿಗ್ರಹವೆಂದರೆ ಗುರುಗ್ರಹ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಗುರುವೆಂದರೆ ಪ್ರಾಚೀನಪರಂಪರೆಯ ಪ್ರಕಾರ “ಗಿರತ್ಯಜ್ಞಾನಂ ಧರ್ಮುಪದಿಶತಿ” (ಅಜ್ಞಾನವನ್ನು ದೂರೀಕರಿಸಿ ಧರ್ಮಮಾರ್ಗವನ್ನು ಹೇಳುವವನು) ಎಂದು ಅರ್ಥ. ಇವನು ದೇವತೆಗಳಿಗೇ ಗುರುವಾಗಿರುವವನು. ಗುರುವಿಗೆ ಧನುಸ್ಸು ಮತ್ತು ಮೀನರಾಶಿಗಳು ಸ್ವಂತ ಕ್ಷೇತ್ರ. ಕರ್ಕಾಟಕರಾಶಿ ಗುರುವಿಗೆ ಉಚ್ಚಸ್ಥಾನ. ಮಕರವು ನೀಚಸ್ಥಾನವಾಗಿದೆ. ರವಿ,ಚಂದ್ರ ಮತ್ತು ಕುಜರು ಗುರುವಿಗೆ ಮಿತ್ರಗ್ರಹರು. ಶನಿಯೊಂದಿಗೆ ಅಥವಾ ಶನಿಯ ಮನೆಯಲ್ಲಿದ್ದರೆ ಗುರುವು ಮಿಶ್ರಫಲವನ್ನು ನೀಡುತ್ತಾನೆ. ಬುಧ ಮತ್ತು ಶುಕ್ರರು ಗುರುವಿಗೆ ಮಿತ್ರಗ್ರಹರಲ್ಲದೇ ಇರುವುದರಿಂದ ಇವರೊಂದಿಗೆ ಅಥವಾ ಇವರ ಕ್ಷೇತ್ರವು ಗುರುವಿಗೆ ಹಿತವಲ್ಲದಿರುವುದರಿಂದ ಆ ಸ್ಥಾನದಲ್ಲಿ ಗುರುವಿನ ಫಲವು ಅಷ್ಟು ಉತ್ತಮವಲ್ಲ. ಸಮಸ್ಯೆಗಳೇ ಹೆಚ್ಚು. ಗುರು ದಶಾಕಾಲ ಹದಿನಾರು ವರ್ಷ. ಇವನು ಸಾತ್ವಿಕವಾದ ಗ್ರಹ. ಹಳದೀಬಣ್ಣ ಇವನಿಗೆ ಅತ್ಯಂತ ಪ್ರಿಯ. ಕಡೆಲೇ ಕಾಳು ಇವನ ಧಾನ್ಯ. ನವಗ್ರಹರ ಮಂಡಲದಲ್ಲಿ ಸೂರ್ಯನಿಂದ ಉತ್ತರ ಭಾಗದಲ್ಲಿ ದೀರ್ಘಚತುರಸ್ರಕಾರ (ಆಯತಾಕಾರ) ದಲ್ಲಿ ಇವನ ಸಾನ್ನಿಧ್ಯವಿರುತ್ತದೆ.
ಮಾನವನು ಸತ್ಕರ್ಮ ಮಾಡಲು ಬೇಕಾದ ಪ್ರಜ್ಞಾ ಶಕ್ತಿಯನ್ನು ಕೊಡುವವನು ಮತ್ತು ಕಲಿತ ಮತ್ತು ಕಲಿಯುವ ವಿದ್ಯೆಯನ್ನು ಬಳಸುವ ವಿವೇಕವು ಇವನಿಂದಲೇ ಲಭ್ಯವಾಗುವುದರಿಂದ ನಮಗೆ ನಮ್ಮ ಜೀವನದಲ್ಲಿ ಗುರುವಿನ ಅನುಗ್ರಹ ತುಂಬಾ ಅನಿವಾರ್ಯವಿದೆ. ಜಗತ್ತಿನಲ್ಲಿ ಎಷ್ಟೋ ಜನ ವಿದ್ಯಾವಂತರಿದ್ದಾರೆ ಆದರೆ ಅವರು ತಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಳ್ಳುವ ವಿವೇಕಪ್ರಜ್ಞೆಯಿಲ್ಲದವರಾಗಿ ಕೆಲವರು ಮೂಲೆಗುಂಪಾದರು ಹಾಗೇ ಇನ್ನು ಕೆಲವರು ಮನೆಗೆ,ಊರಿಗೆ,ನಾಡಿಗೆ, ದೇಶಕ್ಕೇ ಮಾರಕವಾಗುವ ಕೆಲಸ ಮಾಡುತ್ತಾ ಹೇಗೇಗೋ ಬಾಳುತ್ತಾ ಒಳ್ಳೆಯದನ್ನೆಲ್ಲಾ ತಿರಸ್ಕರಿಸುತ್ತಾ ಏನು ಮಾಡಬೇಕೆಂದು ತಿಳಿಯದೇ ಅಸಂತುಷ್ಟರಾಗಿಯೇ ಬಾಳುತ್ತಾರೆ. ಇದಕ್ಕೆ ಕಾರಣ ಇಷ್ಟೇ ವಿವೇಕದ ಕೊರತೆ. ಅದಕ್ಕೆ ಉತ್ತಮ ಕಾರ್ಯಗಳಿಗೆ ಪ್ರೇರೇಪಣೆಕೊಡುವ ಗುರುವಿನ ಅನುಗ್ರಹಕ್ಕೋಸ್ಕರ ನಾವು ಅವನಿಗೆ ಶರಣಾಗಲೇಬೇಕು.
ಇದನ್ನು ಓದಿ: ಬುಧನ ಆರಾಧನೆ ಹೇಗೆ ? ಯಾವಾಗ ಬುಧನ ಪೂಜೆ ಮಾಡಬೇಕು?
ಹಿಂದೆ ಹೇಳಿದಂತೆ ಗುರುವು ಸಾತ್ವಿಕಗ್ರಹವಾದ್ದರಿಂದ ಗುರುವು ನಮ್ಮ ಕುಂಡಲಿಯಲ್ಲಿ ಎಲ್ಲೇ ಇದ್ದರೂ ಅವನಿಗೆ ಭಕ್ತಿಭಾವದಿಂದ ಶರಣಾದರೆ ಅವನು ಅನುಗ್ರಹಿಸುವುದು ನಿಶ್ಚಯ. ದಾಸರು ಹೇಳಿದಂತೆ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”. ನಮ್ಮ ಜ್ಞಾನವು ಸತ್ಕಾಲದಲ್ಲಿ , ತತ್ಕಾಲದಲ್ಲಿ, ವಿಪತ್ಕಾಲದಲ್ಲಿ ಅನುಕೂಲಕರವಾಗಬೇಕೆಂದರೆ ಆ ಗುರುವಿಗೆ/ ಗುರುಗ್ರಹಕ್ಕೆ ಶರಣಾಗಲೇ ಬೇಕು. ನಾವು ನಿತ್ಯ ಜೀವದಲ್ಲಾದರು ಅಷ್ಟೇ ಸದ್ಗುರುವಿನ ಮಾತನ್ನು ಶ್ರದ್ಧೆಯಿಂದ ಪಾಲಿಸಿದರೆ ನಮಗೇ ಸತ್ವಯುತವಾದ ಫಲ ಒದಗುವುದು. ಕುಲಗುರುಗಳಾದ ವಸಿಷ್ಠ ಮಹರ್ಷಿಗಳ ಮಾತಿಗೆ ಬದ್ಧನಾಗಿ ಚಕ್ರವರ್ತಿ ದಿಲೀಪನು ಸಂತಾನಕ್ಕೋಸ್ಕರ ಅಹೋರಾತ್ರಿ ಕಾಮಧೇನುವಿನ ಮಗಳಾದ ನಂದಿನಿಯ ಸೇವೆ ಮಾಡಿ ಸತ್ಸಂತಾನವನ್ನು ಪಡೆದನು. ಒಳ್ಳೆಯ ಗುರುವಿರಲಿ ಅಥವಾ ಗುರುಗ್ರಹವಿರಲಿ ಇವರ ಕುರಿತಾಗಿ ಪ್ರಾಮಾಣಿಕ ಸೇವೆ ಮಾಡಿದರೆ ಶುಭಾನುಗ್ರಹ ನಿಶ್ಚಿತ.
ಗುರುಸ್ಥಾನ ಮಹತ್ವವಾದದ್ದು. ಗುರುವಿನ ಪ್ರತ್ಯಧಿದೇವತೆ ಬ್ರಹ್ಮನಾಗಿದ್ದರೂ, ಗುರುವಿನ ಕುರಿತಾಗಿ ಬ್ರಹ್ಮನ ಜೊತೆಗೆ ವಿಷ್ಣುವಿನ ಆರಾಧನೆ ಮಾಡುವ ರೂಢಿ ಹೆಚ್ಚು. ಇವನ ಹೆಸರೇ ಹೇಳುವಂತೆ ಗುರುವಾರ ಇವರ ಆರಾಧನೆಗೆ ವಿಶೇಷ. ಈ ಕಾರಣದಿಂದಲೇ ನಮ್ಮಲ್ಲಿ ವಿಷ್ಣುವಿನ ಆರಾಧನೆ ಕೆಲವರು ಗುರುವಾರ ಎಂದು ಭಾವಿಸಿರುವರು. ಆದರೆ ಇದು ತಪ್ಪು ಕಲ್ಪನೆ ಅಲ್ಲ. ಕೆಲವು ಕಡೆ ವಿಷ್ಣುವನ್ನೇ ಗುರುವಾಗಿ ಸ್ವೀಕರಿಸಿ ಪೂಜಿಸುವವರೂ ಇದ್ದಾರೆ. “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬಂತೆ ಎಲ್ಲಾ ಸೇವೆಯು ಭಗವಾನ್ ವಿಷ್ಣುವಿಗೇ ಸಲ್ಲುವುದರಿಂದ ಈ ಮೇಲಿನ ಯೋಚನಾ ಲಹರಿ ತಪ್ಪಲ್ಲ. ಲೌಕಿಕವಾಗಿ ಹೇಳುವುದ್ದಾದರೆ ಕಿವಿ,ಕಣ್ಣು,ಮೂಗು,ಗಂಟಲಿಗೊಬ್ಬರು ವೈದ್ಯರಿರುವಂತೆ ನಮ್ಮ ಜೀವನವ್ಯಾಪ್ತಿಯಲ್ಲಿ ಧರ್ಮಕಾರ್ಯಕ್ಕನುಗುಣವಾಗಿ ಸುಖವಾಗಿ ಬಾಳಲು ಒಂದೊಂದು ಗ್ರಹರು , ಅವರಿಗೊಂದು ಕಾರಕತ್ವ (ಆ ವಿಷಯಕವಾಗಿ ಅನುಗ್ರಹಿಸುವ ವ್ಯವಸ್ಥೆ) ವನ್ನು ಹೇಳಿದ್ದಾರೆ. ಹಾಗೆಯೇ ನಮ್ಮ ಅನುಕೂಲಕ್ಕಾಗಿ ಯಾವುದರ ಅಪೇಕ್ಷೆ ಅನಿವಾರ್ಯವಿದೆಯೋ ಅದನ್ನು ಆರಾಧಿಸಿ ಪಡೆಯಬೇಕು. ಅದಕ್ಕೊಂದು ವ್ಯವಸ್ಥೆಯೇ ಇದು.
ಈ ಗ್ರಹದ ಅನುಗ್ರಹಕ್ಕಾಗಿ ಸದ್ಗುರುವಿನ ಸೇವೆ, ಬ್ರಹ್ಮನ ಮಂತ್ರ ಜಪ , ವಿಷ್ಣುವಿನ ಸೇವೆ ಮತ್ತು ಅಶ್ವತ್ಥ ಸಮಿಧೆಯಿಂದ ಗುರುವಿನ ಕುರಿತಾದ ಹವನ ಮಾಡುವುದು. ಅಲ್ಲದೇ ಶ್ರದ್ಧೆಯಿಂದ ಈ ಮಂತ್ರದ ಪಠಣವನ್ನು ಮಾಡಿದರೂ ಅನುಕೂಲ ಸಿದ್ಧಿ.
ದೇವತಾನಾಂ ಋಷೀಣಾಂ ಚ ಗುರುಂ ಕಾಂಚನ ಸನ್ನಿಭಂ |
ವದ್ಯಂ ಚ ತ್ರಿಷು ಲೋಕೇಷು ಪ್ರಣಮಾಮಿ ಬ್ರಹಸ್ಪತಿಂ ||
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು, S.R.B.S.S College, ಹೊನ್ನಾವರ
kkmanasvi@gamail.com