ಜನಿವಾರವನ್ನು ಯಾಕೆ ಮತ್ತು ಹೇಗೆ ಧರಿಸಬೇಕು? ಇದರ ಪ್ರಯೋಜನವಾದರೂ ಏನು?
ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನನದಿಂದ ಹಿಡಿದು ಮರಣದವರೆಗೆ 16 ವಿಧಿಗಳನ್ನು ಅಳವಡಿಸಲಾಗಿದೆ. ಈ ವಿಧಿಗಳು ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಈ 16 ವಿಧಿಗಳಲ್ಲಿ ಒಂದು ಜನಿವಾರ ಧಾರಣ ಸಂಸ್ಕಾರ ಅಥವಾ ಉಪನಯನ ಸಂಸ್ಕಾರ.
ಹಿಂದೂ ಧರ್ಮದಲ್ಲಿನ ಪವಿತ್ರ ಆಚರಣೆಗಳಲ್ಲಿ ಜನಿವಾರ(Janivara) ಧಾರಣೆ ಕೂಡ ಒಂದು. ಜನಿವಾರಕ್ಕೆ ಕೇವಲ ಧಾರ್ಮಿಕ ಮಹತ್ವ ಮಾತ್ರವಲ್ಲ, ವೈಜ್ಞಾನಿಕ ಮಹತ್ವ ಕೂಡ ಇದೆ. ಜನಿವಾರವನ್ನು ಧರಿಸಲು ಅದರದ್ದೇ ಆದ ವಿಧಿ-ವಿಧಾನಗಳಿವೆ. ಹಾಗಾದರೆ ಜನಿವಾರವನ್ನು ಹೇಗೆ ಧರಿಸಬೇಕು? ಇದರ ಮಹತ್ವವೇನು? ಧರಿಸುವುದರಿಂದಾಗುವ ಪ್ರಯೋಜನವೇನು ಎಂಬುವುದನ್ನು ಇಲ್ಲಿ ತಿಳಿಯಿರಿ.
ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನನದಿಂದ ಹಿಡಿದು ಮರಣದವರೆಗೆ 16 ವಿಧಿಗಳನ್ನು ಅಳವಡಿಸಲಾಗಿದೆ. ಈ ವಿಧಿಗಳು ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಈ 16 ವಿಧಿಗಳಲ್ಲಿ ಒಂದು ಜನಿವಾರ ಧಾರಣ ಸಂಸ್ಕಾರ ಅಥವಾ ಉಪನಯನ ಸಂಸ್ಕಾರ. ಇದನ್ನು ಯಜ್ಞೋಪವೀತ ಎಂದೂ ಕೂಡ ಕರೆಯಲಾಗುತ್ತದೆ. ಅಂದರೆ ಯಜ್ಞವನ್ನು ನಡೆಸಬಲ್ಲ ಸಂಪೂರ್ಣ ಹಕ್ಕನ್ನು ಹೊಂದಿದವನು ಎಂದರ್ಥ. ಜನಿವಾರ ಧಾರಣೆಯನ್ನೇ ಸಂಸ್ಕೃತದಲ್ಲಿ ಯಜ್ಞೋಪವೀತವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಜ್ಞೋಪವೀತ ಧರಿಸದೇ ಯಾರಿಗೂ ಕೂಡ ವೇದಗಳನ್ನು ಪಠಿಸುವ ಅಥವಾ ಗಾಯತ್ರಿ ಮಂತ್ರವನ್ನು ಜಪಿಸುವ ಹಕ್ಕಿರುವುದಿಲ್ಲ.
ಜನಿವಾರವು ಹತ್ತಿಯಿಂದ ತಯಾರಿಸಿದ ಪವಿತ್ರ ದಾರವಾಗಿದ್ದು, ಇದನ್ನು ಮೊದಲ ಬಾರಿಗೆ ಧರಿಸಲು ಹಮ್ಮಿಕೊಳ್ಳುವ ಆಚರಣೆಯನ್ನೇ ಯಜ್ಞೋಪವೀತ ಸಂಸ್ಕಾರ ಅಥವಾ ಯಜ್ಞೋಪವೀತ ಆಚರಣೆ ಎನ್ನಲಾಗಿತ್ತದೆ. ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಸಮಾಜವು ಯಜ್ಞೋಪವೀತ ಸಂಸ್ಕಾರವನ್ನು ಆಚರಿಸುತ್ತಾರೆ. ಮಗುವಿಗೆ 10 – 12 ವರ್ಷ ವಯಸ್ಸಾದಾಗ ಯಜ್ಞೋಪವೀತ ಸಂಸ್ಕಾರವನ್ನು ಮಾಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಮಗುವಿಗೆ ಶಿಕ್ಷಣವನ್ನು ಆರಂಭಿಸಬೇಕೆಂದರೆ ಮೊದಲು ಆ ಮಗುವಿಗೆ ಯಜ್ಞೋಪವೀತ ಸಂಸ್ಕಾರ ಮಾಡಬೇಕಾಗಿತ್ತು.
ಬ್ರಹ್ಮಸೂತ್ರ ಎಂದರೇನು? ಯಜ್ಞೋಪವೀತವನ್ನು ಬ್ರಹ್ಮಸೂತ್ರ, ವ್ರತಬಂಧ, ಬಲಬಂಧ ಮತ್ತು ಯಜ್ಞಸೂತ್ರವೆಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಯಜ್ಞೋಪವೀತವನ್ನು ಜನಿವಾರವೆನ್ನುತ್ತಾರೆ. ಉಪನಯನದ ನಂತರ ಜನಿವಾರವನ್ನು ಧರಿಸಲಾಗುತ್ತದೆ. ಉಪನಯನ ಎಂದರೆ ಹತ್ತಿರಕ್ಕೆ ತರುವುದು ಎಂದರ್ಥ. ಅಂದರೆ ಜನಿವಾರವನ್ನು ಧರಿಸಿದ ವ್ಯಕ್ತಿಯು ಬ್ರಹ್ಮಜ್ಞಾನವನ್ನು ಪಡೆಯುತ್ತಾನೆ ಎಂಬರ್ಥವನ್ನು ಸೂಚಿಸುತ್ತದೆ. ಜನಿವಾರ ಜನಿಸಿದವರು ಬ್ರಹ್ಮನಿಗೆ ಹತ್ತಿರವಾಗುತ್ತಾರೆಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
ಜನಿವಾರವನ್ನು ಹೇಗೆ ಧರಿಸುತ್ತಾರೆ? ಹತ್ತಿಯಿಂದ ಮೂರು ದಾರವನ್ನು ಮಾಡಿ, ಆ ಮೂರು ಪವಿತ್ರ ದಾರವನ್ನು ಜೊತೆಯಾಗಿ ಜೋಡಿಸಿದರೆ ಅದು ಜನಿವಾರವಾಗುತ್ತದೆ. ಜನಿವಾರವನ್ನು ವ್ಯಕ್ತಿಯ ಎಡ ಭುಜದಿಂದ ತೆಗೆದುಕೊಂಡು ಬಲಗೈ ಕೆಳಗೆ ಧರಿಸಲಾಗುತ್ತದೆ.
ಯಜ್ಞೋಪವೀತ ಧಾರಣೆಯಲ್ಲಿ ಪಠಿಸುವ ಪ್ರಮುಖ ಮಂತ್ರಗಳು: 1) ಗಾಯತ್ರಿ ಮಂತ್ರ: ಓಂ ಭೂರ್ಭುವಸ್ಸುವಃ || ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
2) ಯಜ್ಞೋಪವೀತ ಧಾರಣ ಮಂತ್ರ: ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ | ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||
ಯಾರು ಜನಿವಾರವನ್ನು ಧರಿಸಬೇಕು? ಹಿಂದೂ ಧರ್ಮದ ಪ್ರಕಾರ, ಪ್ರತಿಯೊಬ್ಬ ಹಿಂದುಗಳು ಕೂಡ ಜನಿವಾರವನ್ನು ಧರಿಸಬಹುದು ಆದರೆ ಜನಿವಾರವನ್ನು ಧರಿಸಿದ ನಂತರ ಆ ವ್ಯಕ್ತಿಯು ಕಡ್ಡಾಯವಾಗಿ ಅದರ ನಿಯಮಗಳನ್ನು ಪಾಲಿಸಬೇಕು. ಒಂದು ಸಲ ಜನಿವಾರವನ್ನು ಧರಿಸದ ನಂತರ ಅದು ಹಳೆಯದಾದ ಮೇಲೆ ಆ ಜನಿವಾರವನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸಲೇಬೇಕು. ಜನಿವಾರದಲ್ಲಿ ಎರಡು ರೀತಿಯ ವಿಧಗಳಿವೆ. ಮೊದಲನೇಯದಾಗಿ ಮೂರು ಎಳೆಗಳುಳ್ಳ ದಾರ ಮತ್ತು 6 ಎಳೆಗಳುಳ್ಳ ದಾರ.
ಒಬ್ಬ ವ್ಯಕ್ತಿಯು ಎಷ್ಟು ಎಳೆಗಳುಳ್ಳ ಜನಿವಾರವನ್ನು ಧರಿಸಬೇಕು? ಬ್ರಹ್ಮಚಾರಿಗಳು ಮೂರು ಎಳೆಗಳುಳ್ಳ ದಾರವನ್ನು, ವಿವಾಹಿತ ಪುರುಷರು 6 ಎಳೆಗಳುಳ್ಳ ದಾರವನ್ನು ಧರಿಸಬೇಕು. ಜನಿವಾರದಲ್ಲಿನ 6 ಎಳೆಗಳಲ್ಲಿ ಮೂರು ಎಳೆಗಳು ವಿವಾಹಿತ ವ್ಯಕ್ತಿಗೆ ಸಂಬಂಧಿಸಿದರೆ ಇನ್ನುಳಿದ ಮೂರು ಎಳೆಗಳು ಆತನ ಪತ್ನಿಗೆ ಸಂಬಂಧಿಸಿದೆ. ಬ್ರಹ್ಮಚರ್ಯವನ್ನು ಸ್ವೀಕರಿಸಿದ ಕನ್ಯೆ ಕೂಡ ಜನಿವಾರವನ್ನು ಧರಿಸಬಹುದು ಆದರೆ ವಿವಾಹಿತ ಮಹಿಳೆ ಧರಿಸುವಂತಿಲ್ಲ.
ಜನಿವಾರದ ನಿಯಮಗಳು: 1) ಮಲ, ಮೂತ್ರ ವಿಸರ್ಜಿಸುವಾಗ ಜನಿವಾರವನ್ನು ಎತ್ತಿ ಬಲಕಿವಿಯ ಮೇಲಿಟ್ಟುಕೊಳ್ಳಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ನಂತರ ಪುನಃ ಜನಿವಾರವನ್ನು ಸರಿ ಮಾಡಿಕೊಳ್ಳಬೇಕು. ಯಾಕೆಂದರೆ ಜನಿವಾರವು ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅದು ಅಶುಚಿಯಾಗುವುದಿಲ್ಲ. 2) ಜನಿವಾರದಲ್ಲಿನ ಒಂದು ಎಳೆ ತುಂಡಾದರೂ ಕೂಡ ಅದನ್ನು ಬದಲಾಯಿಸಬೇಕು. 3) ಜನಿವಾರ ಹಳೆಯದಾದರೆ ಅಥವಾ ಕೊಳೆಯಾದರೆ ಜನಿವಾರವನ್ನು ತೆಗೆದು ಹೊಸ ಜನಿವಾರವನ್ನು ಧರಿಸಬೇಕು. 4) ಜನನ ಮತ್ತು ಮರಣದ ಸೂತಕದ ನಂತರ ಜನಿವಾರವನ್ನು ಬದಲಿಸಬೇಕು. 5) ಜನಿವಾರವನ್ನು ಒಮ್ಮೆ ಧರಿಸಿದ ನಂತರ ಮನಬಂದಂತೆ ತೆಗೆದು ಹಾಕುತ್ತಿರಬಾರದು. ಕುತ್ತಿಗೆಯಲ್ಲೇ ಅದನ್ನು ಶುಚಿಗೊಳಿಸಬೇಕು.
ಯಜ್ಞೋಪವೀತದ ವೈಜ್ಞಾನಿಕ ಮಹತ್ವ: 1) ಜನಿವಾರವನ್ನು ಧರಿಸಿದ ವ್ಯಕ್ತಿ ಎಲ್ಲಾ ನಿಯಮಗಳಿಂದ ಬಂಧಿತನಾಗುತ್ತಾನೆ. ಜನಿವಾರವು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಇದರಿಂದ ಆತನ ಆರೋಗ್ಯವು ಉತ್ತಮವಾಗಿರುತ್ತದೆ. 2) ಬಲಗಿವಿಯ ಭಾಗದಲ್ಲಿನ ಒಂದು ವಿಶೇಷ ನರ ಉದರದೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ. ಮಲ, ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಜನಿವಾರವನ್ನು ಕಿವಿಯ ಮೇಲಿಟ್ಟುಕೊಳ್ಳುವುದರಿಂದ ಉದರ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ. 3) ಜನಿವಾರ ಧರಿಸಿದ ವ್ಯಕ್ತಿಗೆ ಭಯ ಇರುವುದಿಲ್ಲ ಮತ್ತು ಕೆಟ್ಟ ಕನಸು ಬೀಳುವುದಿಲ್ಲ. 4) ಜನಿವಾರ ಧರಿಸುವುದರಿಂದ ದೇಹದಲ್ಲಿನ ಸೂರ್ಯನಾಡಿ ಜಾಗೃತವಾಗುತ್ತದೆ. 5) ಜನಿವಾರವು ವ್ಯಕ್ತಿಯ ಕಾಮ, ಕ್ರೋಧ, ಮದ, ಲೋಭ, ಮಾತ್ಸರ್ಯ ಸೇರಿದಂತೆ ಅರಿಷಡ್ವರ್ಗಗಳನ್ನು ನಿಯಂತ್ರಣದಲ್ಲಿಡುತ್ತದೆ. 6) ಜನಿವಾರವು ವ್ಯಕ್ತಿಯನ್ನು ಸನ್ಮಾರ್ಗದಲ್ಲಿ ನಡೆಯಲು ಅನುವು ಮಾಡಿಕೊಡುತ್ತದೆ. ಆ ವ್ಯಕ್ತಿಯನ್ನು ಅನ್ಯಾಯ, ಅಧರ್ಮ, ಭ್ರಷ್ಟಾಚಾರಗಳಿಂದ ದೂರಿರಿಸುತ್ತದೆ. 7) ಜನಿವಾರವನ್ನು ಕಿವಿಯ ಮೇಲೆ ಹಾಕಿಕೊಂಡಾಗ ನಮ್ಮಲ್ಲಿರುವ ಆಲಸ್ಯತನವು ದೂರಾಗುತ್ತದೆ. ಯಜ್ಞೋಪವೀತ ಎನ್ನುವುದು ಪವಿತ್ರ ಧಾರ್ಮಿಕ ಸಂಸ್ಕಾರವಾಗಿದ್ದು. ಈ ಸಂಸ್ಕಾರವನ್ನು ಅನುಸರಿಸುವುದರಿಂದ ಆ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಜೊತೆಗೆ ಉತ್ತಮ ಜೀವನವನ್ನು ಹೊಂದುವನು.(ಸಂಗ್ರಹ -ನಿತ್ಯಸತ್ಯ)
ಇದನ್ನೂ ಓದಿ: ಜಪಮಾಲೆಯಿಂದ ಮಾಡುವ ಜಪಗಳ ಪ್ರಯೋಜನವೇನು?