Varamahalakshmi festival 2024: ಸಂತಾನ ಭಾಗ್ಯ ಪಡೆಯಲು ವರಮಹಾಲಕ್ಷ್ಮೀ ವ್ರತವನ್ನು ಈ ರೀತಿ ಆಚರಿಸಿ
Varamahalakshmi festival 2024: ಪಾರ್ವತಿ ದೇವಿ ತನ್ನ ಪ್ರೀತಿಯ ಸಂಗಾತಿ ಮತ್ತು ಆಕೆಯ ಕುಟುಂಬದ ಏಳಿಗೆ ಮತ್ತು ಸಂತೋಷಕ್ಕಾಗಿ ವರಮಹಾಲಕ್ಷ್ಮೀ ವ್ರತ ಆಚರಿಸಿದಳು ಎಂದು ನಂಬಲಾಗಿದೆ, ಅಂದಿನಿಂದ ದಕ್ಷಿಣ ಭಾರತದ ಉದ್ದಗಲದಲ್ಲೂ ಮಹಿಳೆಯರು ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರವನ್ನು ವರಲಕ್ಷ್ಮೀ ವ್ರತ ಅಥವಾ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುತ್ತಾ ಬಂದಿದ್ದಾರೆ. ಈ ಬಾರಿ ಆಗಸ್ಟ್ 16 ರಂದು ವರಮಹಾಲಕ್ಷ್ಮೀ ವ್ರತವನ್ನು ಆಚರಣೆ ಮಾಡಲಾಗುತ್ತದೆ.
ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ. ಅಂದರೆ ಶ್ರಾವಣ ಮಾಸದ ಪೂರ್ಣಿಮೆಯ ಹಿಂದಿನ ಶುಕ್ರವಾರ ಈ ವ್ರತವನ್ನು ಆಚರಣೆ ಮಾಡುವುದು ರೂಢಿ. ಒಂದೊಮ್ಮೆ ಶುಕ್ರವಾರ ಹುಣ್ಣಿಮೆ ಬಂದರೆ ಅದೇ ದಿನ ವರಮಹಾಲಕ್ಷ್ಮೀ ವ್ರತವನ್ನು ಮಾಡಲಾಗುತ್ತದೆ. ಇದನ್ನು ‘ಸಂಪತ್ ಶುಕ್ರವಾರ’ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ ಸಂಪತ್ತಿನ ಅಧಿ ದೇವತೆ ಲಕ್ಷ್ಮೀಯನ್ನು ಪೂಜಿಸುವುದರಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಬಾರಿ ಆಗಸ್ಟ್ 16 ರಂದು ವರಮಹಾಲಕ್ಷ್ಮೀ ವ್ರತವನ್ನು ಆಚರಣೆ ಮಾಡಲಾಗುತ್ತದೆ.
ಕುಟುಂಬದ ಏಳಿಗೆಗೆ ಪಾರ್ವತಿ ದೇವಿ ಮಾಡಿದ ವ್ರತ
ವರಮಹಾಲಕ್ಷ್ಮೀ ವ್ರತವನ್ನು ಆಚರಣೆ ಮಾಡಲು ಶಿವನು ತನ್ನ ಪತ್ನಿ ಪಾರ್ವತಿಗೆ ಹೇಳಿದ್ದನೆಂದು ನಂಬಲಾಗಿದೆ. ಬಳಿಕ ಆತನೇ ಮುಂದೆ ನಿಂತು ಈ ವ್ರತವನ್ನು ಮಾಡಿಸಿದ್ದನ್ನು ಎಂಬ ಪ್ರತೀತಿ ಇದೆ. ಹಾಗಾಗಿ ಪಾರ್ವತಿ ದೇವಿ ತನ್ನ ಪ್ರೀತಿಯ ಸಂಗಾತಿ ಮತ್ತು ಆಕೆಯ ಕುಟುಂಬದ ಏಳಿಗೆ ಹಾಗೂ ಸಂತೋಷಕ್ಕಾಗಿ ಉಪವಾಸ ಆಚರಿಸಿದಳು ಎಂದು ನಂಬಲಾಗಿದೆ. ಅಂದಿನಿಂದ ದಕ್ಷಿಣ ಭಾರತದ ಉದ್ದಗಲದಲ್ಲೂ ಮಹಿಳೆಯರು ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರವನ್ನು ವರಲಕ್ಷ್ಮೀ ವ್ರತ ಅಥವಾ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುತ್ತಾ ಬಂದಿದ್ದಾರೆ. ಅಷ್ಟು ಮಾತ್ರವಲ್ಲ, ಈ ವ್ರತವನ್ನು ಸಂತಾನ ಭಾಗ್ಯವನ್ನು ಪಡೆಯಲು ಕೂಡ ಆಚರಿಸುತ್ತಾರೆ.
ವ್ರತ ಆಚರಣೆ ಮಾಡುವುದರಿಂದ ಸಿಗುವ ಫಲಗಳು;
ವರಮಹಾಲಲಕ್ಷ್ಮೀ ವ್ರತವನ್ನು ಭಕ್ತಿಯಿಂದ ಮಾಡುವುದರಿಂದ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಈ ವ್ರತ ಮಾಡುವವರು ನೋವು ಮತ್ತು ದುಃಖಗಳಿಂದ ಮುಕ್ತರಾಗುತ್ತಾರೆ ಜೊತೆಗೆ ಅವರ ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸುತ್ತದೆ. ಲಕ್ಷ್ಮೀ ದೇವಿಯು ವರಗಳನ್ನು ದಯಪಾಲಿಸುವುದರಿಂದ ಮತ್ತು ಎಲ್ಲಾ ದೇವಾನು ದೇವತೆಗಳಿಗಿಂತ ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ ಎನ್ನಲಾಗುತ್ತದೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಬೇಡಿದ ವರಗಳ ಜೊತೆಗೆ ಸಂಪತ್ತು ಪ್ರಾಪ್ತಿಯಾಗುತ್ತದೆ.
ಹಬ್ಬದ ಆಚರಣೆಯನ್ನು ಹೇಗೆ ಮಾಡಬೇಕು?
- ವ್ರತ ಮಾಡುವ ಮಹಿಳೆಯರು ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಮಂಗಳಸ್ನಾನ ಮಾಡಿ, ಮನೆಯ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಬೇಕು.
- ಬಾಳೆ ಎಲೆ, ಮಾವಿನ ಎಲೆಗಳನ್ನು ಜೋಡಿಸಬೇಕು. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು.
- ತಾಮ್ರದ ತಂಬಿಗೆಯಲ್ಲಿ ಸ್ವಲ್ಪ ನೀರು, ಅಕ್ಕಿ ಜೊತೆಗೆ ಅರಿಶಿನದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಹಾಕಿ ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಅಥವಾ ಲಕ್ಷ್ಮೀ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ತೆಂಗಿನಕಾಯಿಗೆ ಜೋಡಿಸಬೇಕು.
- ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು.
- ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡಬೇಕು. ದೇವಿಗೆ ಇಷ್ಟವಾಗುವ ನೈವೇದ್ಯ ಮಾಡಿ ಅರ್ಪಿಸಬೇಕು.
- ಮುತ್ತೈದೆಯರನ್ನು ಪೂಜೆಗೆ ಕರೆದು, ಪೂಜೆಯ ನಂತರ ಅವರಿಗೆ ತಾಂಬೂಲ ನೀಡಬೇಕು. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವನೆ ಮಾಡಬೇಕು.
- ಕೆಲವು ಕಡೆಗಳಲ್ಲಿ ಲಕ್ಷ್ಮೀಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ. ಬಳಿಕ ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮೀ ದೇವಿಯನ್ನು ಆವಾಹನೆ ಮಾಡಿ 12ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. (ಈ ಆಚರಣೆ ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು.
ಇದನ್ನೂ ಓದಿ: ಸೂರ್ಯ ಗೋಚಾರ: ಶೀಘ್ರದಲ್ಲೇ ಸೂರ್ಯ ತನ್ನದೇ ರಾಶಿಯನ್ನು ಪ್ರವೇಶಿಸುತ್ತಾನೆ.. ಇದರಿಂದ ಐದು ರಾಶಿಯವರಿಗೆ ವರದಾನ
ಲಕ್ಷ್ಮೀ ದೇವಿಯನ್ನು ಪೂಜಿಸುವಾಗ ಈ ಮಂತ್ರ ಪಠಿಸಿ;
-ಓಂ ಹ್ರೀ ಶ್ರೀಂ ಲಕ್ಷ್ಮಿಭ್ಯೋ ನಮಃ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ