ಅಸೂಯೆಯ ಫಲ ಹೇಗಿರುತ್ತದೆ ? ಇದಕ್ಕೊಂದು ಇತಿಹಾಸದ ಕಥೆ ಇಲ್ಲಿದೆ
ಜೀವಿಯು ತಾನು ಬದುಕುವುದಕ್ಕಾಗಿ ನಿರಂತರ ಶ್ರಮಪಡಲೇಬೇಕು. ಪ್ರತೀ ಹೆಜ್ಜೆಯಲ್ಲೂ ಸೋಲು ಗೆಲುವು ಸಾಮಾನ್ಯ. ಆದರೆ ನಾವುಗಳು ಕೆಲವು ಬಾರಿ ಈ ವಿಚಾರ ತಿಳಿದಿದ್ದರೂ ಹತಾಶರಾಗಿ ಬಿಡುತ್ತೇವೆ. ದಾರಿ ಕಾಣದಂತಾಗಿ ಅಸ್ತವ್ಯಸ್ತವಾಗಿ ಚಿಂತಿಸತೊಡಗುತ್ತೇವೆ. ಅಂತಹ ಸಂದರ್ಭದಲ್ಲಿ ಕೆಲವರ ಮನೋಭೂಮಿಕೆಯಲ್ಲಿ ಉದ್ಭವವಾಗುವ ಭಾವ ಅಸೂಯೆ.
ಜೀವಿಯು ತಾನು ಬದುಕುವುದಕ್ಕಾಗಿ ನಿರಂತರ ಶ್ರಮಪಡಲೇಬೇಕು. ಪ್ರತೀ ಹೆಜ್ಜೆಯಲ್ಲೂ ಸೋಲು ಗೆಲುವು ಸಾಮಾನ್ಯ. ಆದರೆ ನಾವುಗಳು ಕೆಲವು ಬಾರಿ ಈ ವಿಚಾರ ತಿಳಿದಿದ್ದರೂ ಹತಾಶರಾಗಿ ಬಿಡುತ್ತೇವೆ. ದಾರಿ ಕಾಣದಂತಾಗಿ ಅಸ್ತವ್ಯಸ್ತವಾಗಿ ಚಿಂತಿಸತೊಡಗುತ್ತೇವೆ. ಅಂತಹ ಸಂದರ್ಭದಲ್ಲಿ ಕೆಲವರ ಮನೋಭೂಮಿಕೆಯಲ್ಲಿ ಉದ್ಭವವಾಗುವ ಭಾವ ಅಸೂಯೆ. ಇದು ಅತ್ಯಂತ ಅಪಾಯಕಾರಿ. ಚಿಂತೆ ತನ್ನನ್ನು ಮಾತ್ರ ನಾಶ ಮಾಡುತ್ತದೆ. ಆದರೆ ಈ ಅಸೂಯೆ ತನ್ನ ಆನಂದದ ನಾಶ ಮಾಡುವುದರೊಂದಿಗೆ ತನ್ನವರ ಸಂತೋಷಮಯ ಜೀವನವನ್ನು ಹಾಳು ಮಾಡುತ್ತದೆ. ಅಸೂಯೆ (jealousy) ಮೂಡಿದ ಮನವುಳ್ಳ ವ್ಯಕ್ತಿಯಿಂದ ಅತ್ಯಂತ ಅಪಾಯಕಾರಿ ಪರಿಣಾಮವುಂಟಾಗುತ್ತದೆ.
ಇದಕ್ಕೊಂದು ಇತಿಹಾಸದ ಕಥೆಯನ್ನು ನೋಡೋಣ
ಧೃತರಾಷ್ಟ್ರ ಮತ್ತು ಪಾಂಡು ಅಣ್ಣತಮ್ಮಂದಿರು. ಧೃತರಾಷ್ಟ್ರನ ಪತ್ನಿ ಗಾಂಧಾರಿ. ಪಾಂಡುರಾಜನ ಪತ್ನಿ ಕುಂತಿ ಮತ್ತು ಮಾದ್ರಿ. ತನ್ನ ತಪ್ಪಿಗಾಗಿ ಋಷಿ ನೀಡಿದ ಶಾಪವನ್ನು ಸ್ವೀಕರಿಸಿದ ಪಾಂಡುರಾಜನು ತನ್ನ ಪದವಿಯನ್ನು ತ್ಯಜಿಸಿ ವನವಾಸ ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಕುಂತಿ ಮಾದ್ರಿಯರೂ ಅವನ ಜೊತೆಗೇ ಇರುತ್ತಾರೆ. ದುರ್ವಾಸ ಮುನಿಗಳ ಸೇವೆ ಮಾಡಿದ ಕಾರಣಕ್ಕಾಗಿ ಅವರು ಕುಂತಿಗೆ ಐದು ಮಂತ್ರಗಳನ್ನು ಉಪದೇಶಿಸಿದ್ದರು. ಅದನ್ನು ಜಪಿಸಿ ತತ್ಸಂಬಂಧಿತ ದೇವತೆಯನ್ನು ಧ್ಯಾನಿಸಿದರೆ ಅವರು ಸಂತಾನವನ್ನು ಕರುಣಿಸುವುದು ಆ ಮಂತ್ರದ ಫಲವಾಗಿತ್ತು. ಹಾಗೇ ಕುಂತಿ ಪಾಂಡುವಿನ ಜೊತೆ ಕುಳಿತು ಶ್ರದ್ಧೆಯಿಂದ ಯಮನ ಕುರಿತಾದ ಮಂತ್ರವನ್ನು ಜಪಿಸುತ್ತಾಳೆ. ಯಮ ಪ್ರತ್ಯಕ್ಷನಾಗಿ ಧರ್ಮದ ಮೂರ್ತಿಯೋ ಎಂಬಂತಿರುವ ಪುತ್ರನನ್ನು ದಯಪಾಲಿಸುತ್ತಾನೆ. ಅವನೇ ಧರ್ಮರಾಯ. ಈ ವಿಚಾರವನ್ನು ರಾಜಧಾನಿಗೆ ತಿಳಿಸಲು ಪಾಂಡು ಸೇವಕರಿಗೆ ಹೇಳುತ್ತಾನೆ. ಈ ವಿಷಯ ಅರಿತಾಗ ಧೃತರಾಷ್ಟ್ರನ ಮನಸ್ಸಲ್ಲಿ ಅಸಾಧ್ಯವಾದ ಅಸೂಯೆಯ ಉದಯವಾಗುತ್ತದೆ. ಕಾರಣ ಇಷ್ಟೇ ಪಾಂಡುವಿನ ಪುತ್ರ ಜ್ಯೇಷ್ಠನಾಗುತ್ತಾನೆ ಇದರಿಂದಾಗಿ ಮುಂದೆ ತನ್ನ ಪತ್ನಿಯಲ್ಲಿ ಮಕ್ಕಳಾದರೆ ಅವರು ಕಿರಿಯರಾಗುತ್ತಾರೆ. ಸಂಪೂರ್ಣ ರಾಜ್ಯಕ್ಕೆ ಕುರುವಂಶಕ್ಕೆ ಅವನ ಮಗನೇ ರಾಜನಾಗುವನು ಎಂಬ ಹತಾಶೆಯ ಭಾವೋದಯವಾಗಿ ಅದು ಅಸೂಯೆಯಾಗಿ ಪರಿಣಾಮ ಬೀರುತ್ತದೆ.
ಅಷ್ಟೇ ಸಾಲದೆಂಬಂತೆ ಗಾಂಧಾರಿಗೂ ಈ ಭಾವ ಉದಯವಾಗುತ್ತದೆ. ಮುಂದಿನ ದಿನಗಳಲ್ಲಿ ಗರ್ಭವತಿಯಾದರೂ ಈ ಅಸೂಯೆ ತಣಿಯಲಿಲ್ಲ. ನವಮಾಸ ತುಂಬಿದರೂ ಪುತ್ರೋತ್ಸವ ಕಾಣಲಾಗಲಿಲ್ಲ ಎಂಬ ಹತಾಶೆಯ ಸಂದರ್ಭ ಮತ್ತೊದಗಿಬಂತು. ಅದೂ ಇವರ ಮನಸ್ಸಿನ ಮೇಲೆ ಅತ್ಯಂತ ಕಠಿಣ ಪರಿಣಾಮ ಬೀರಿ ಗಾಂಧಾರಿಯು ತನ್ನ ಗರ್ಭವನ್ನು ಬಲವಾಗಿ ಒತ್ತುತ್ತಾಳೆ. ಅದರಿಂದ ಗರ್ಭ ನೂರು ಹೋಳಾಗಿ ಸ್ರಾವವಾಗುತ್ತದೆ. ಅದನ್ನು ಮಡಕೆಯಲ್ಲಿಟ್ಟು ಸಂಸ್ಕರಿಸಿ ವೇದವ್ಯಾಸರ ತಪೋಬಲದಿಂದ ಧೃತರಾಷ್ಟ್ರ ಗಾಂಧಾರಿ ದಂಪತಿಗಳು ಮಕ್ಕಳ ಮುಖವನ್ನು ನೋಡುವಂತಾಗುತ್ತದೆ. ಈ ಅಸೂಯೆಯ ಫಲ ಇಲ್ಲಿಗೇ ನಿಲ್ಲದೆ ಇಡಿಯ ಕುರುವಂಶದ ಅವನತಿಯ ತನಕ ಬರುವುದಲ್ಲದೇ ಭೀಷ್ಮ, ದ್ರೋಣರಂತಹ ಮಹಾತ್ಮರ ನಾಶಕ್ಕೂ ಕಾರಣವಾಗಿ ಬಿಡುತ್ತದೆ.
ಇದನ್ನೂ ಓದಿ:Spiritual: ಅನಂತನ ಚತುರ್ದಶೀ ಉಪಾಸನೆ/ಅನಂತವ್ರತ ಎಂದರೇನು? ಏನಿದರ ಮಹತ್ವ? ಹೇಗೆ ಆಚರಣೆ? ಯಾವಾಗ ಆಚರಣೆ? ಇದರ ಫಲವೇನು?
ಈ ಕಡೆ ಕುಂತಿಯು ತಾನು ಮೂರು ಸಂತಾನವನ್ನು ಪಡೆದು ತನ್ನ ತಂಗಿಯಾದ ಮಾದ್ರಿಗೂ ಸಂತಾನವಿರಲಿ ಎಂಬ ಭಾವದಿಂದ ಅವಳಿಗೂ ಒಂದು ಮಂತ್ರವನ್ನು ಉಪದೇಶಿಸಿ ನಕುಲ – ಸಹದೇವರನ್ನು ಪಡೆಯಲು ಕಾರಣಳಾಗುತ್ತಾಳೆ. ಈ ಸೌಹಾರ್ದಮಯವಾದ ತ್ಯಾಗದ ಭಾವದಿಂದಾಗಿ ಈ ಐವರೂ ಅತ್ಯಂತ ಉತ್ತಮ ಹೆಸರಿನಿಂದ ಸಂತೋಷವಾಗಿ ಬಾಳುತ್ತಾರೆ. ಈಗ ಯೋಚಿಸಿ ಅಸೂಯೆಯ ಫಲ ಎಂತಹದು ಎಂದು. ತಪ್ಪಿಯೂ ಪರರ ಬಗ್ಗೆ ಮತ್ತು ತಮ್ಮವರ ಬಗ್ಗೆ ಅಸೂಯೆ ಪಡಬೇಡಿ. ಅಸೂಯೆಯ ಪರಿಣಾಮ ಅತ್ಯಂತ ಕೆಟ್ಟದಿರುತ್ತದೆ.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
Published On - 3:31 pm, Sat, 18 February 23