AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃತ್ತಿಪರ ಕ್ರಿಕೆಟ್​ಗೆ ವಿದಾಯ ಹೇಳಿದ ಜೋ ರೂಟ್ ತಮ್ಮ ಬಿಲ್ಲಿ ರೂಟ್

ಇಂಗ್ಲೆಂಡ್‌ ಕ್ರಿಕೆಟಿಗ ಜೋ ರೂಟ್ ಸಹೋದರ ಬಿಲ್ಲಿ ರೂಟ್ 14 ವರ್ಷಗಳ ತಮ್ಮ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 34 ವರ್ಷದ ಬಿಲ್ಲಿ ರೂಟ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ನಿವೃತ್ತಿ ಘೋಷಿಸಿದ್ದಾರೆ. ಕೌಂಟಿ ಸರ್ಕ್ಯೂಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಮತ್ತು ಗ್ಲಾಮೋರ್ಗನ್ ತಂಡಗಳನ್ನು ಪ್ರತಿನಿಧಿಸಿದ್ದ ಬಿಲ್ಲಿ, 6406 ರನ್ ಗಳಿಸಿದ್ದಾರೆ. ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ, ಆದರೆ ತಮ್ಮ ವೃತ್ತಿಜೀವನದಲ್ಲಿ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ವೃತ್ತಿಪರ ಕ್ರಿಕೆಟ್​ಗೆ ವಿದಾಯ ಹೇಳಿದ ಜೋ ರೂಟ್ ತಮ್ಮ ಬಿಲ್ಲಿ ರೂಟ್
ಬಿಲ್ಲಿ ರೂಟ್
ಪೃಥ್ವಿಶಂಕರ
|

Updated on: Sep 23, 2026 | 9:49 PM

Share

ಒಂದೆಡೆ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಜೋ ರೂಟ್ ತಮ್ಮ ಅಮೋಘ ಪ್ರದರ್ಶನದ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಬೆನ್ನಟ್ಟುತ್ತಾ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದರೆ, ಮತ್ತೊಂದೆಡೆ ಅವರ ಸಹೋದರ ಬಿಲ್ಲಿ ರೂಟ್ ತಮ್ಮ 14 ವರ್ಷಗಳ ವೃತ್ತಿಪರ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಬಿಲ್ಲಿ ರೂಟ್ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 34 ವರ್ಷದ ಬಿಲ್ಲಿ ರೂಟ್, ಪ್ರಸ್ತುತ ದೇಶೀಯ ಸೀಸನ್ ತಮ್ಮ ವೃತ್ತಿಪರ ಕ್ರಿಕೆಟ್ ವೃತ್ತಿಜೀವನದ ಕೊನೆಯ ಸೀಸನ್ ಎಂಬುದನ್ನು ಖಚಿತಪಡಿಸಿದ್ದಾರೆ.

ಕೌಂಟಿ ಸರ್ಕ್ಯೂಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಬಿಲ್ಲಿ ರೂಟ್, 2019 ರಲ್ಲಿ ಗ್ಲಾಮೋರ್ಗನ್ ಕೌಂಟಿ ಕ್ಲಬ್‌ಗೆ ಸೇರಿದರು. ಕಳೆದ ಏಳು ಸೀಸನ್‌ಗಳಲ್ಲಿ ಈ ವೇಲ್ಸ್ ತಂಡದ ಬೆನ್ನೆಲುಬಾಗಿದ್ದ ಬಿಲ್ಲಿ ರೂಟ್ ಕಳೆದ ಎರಡು ಸೀಸನ್‌ಗಳಲ್ಲಿ ಕಳಪೆ ಪ್ರದರ್ಶನದಿಂದ ಬಳಲಿದ್ದರು. ಅಂತಿಮವಾಗಿ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

10 ಶತಕಗಳು ಮತ್ತು 26 ಅರ್ಧಶತಕಗಳು

ಬಿಲ್ಲಿ ರೂಟ್ ಒಟ್ಟು 83 ಪ್ರಥಮ ದರ್ಜೆ ಪಂದ್ಯಗಳು, 60 ಲಿಸ್ಟ್ ಎ ಪಂದ್ಯಗಳು ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೂರು ಸ್ವರೂಪಗಳಲ್ಲಿ ರೂಟ್, 10 ಶತಕಗಳು ಮತ್ತು 26 ಅರ್ಧಶತಕಗಳು ಸೇರಿದಂತೆ ಒಟ್ಟು 6406 ರನ್ ಕಲೆಹಾಕಿದ್ದಾರೆ. ಪ್ರಸ್ತುತ ಕೌಂಟಿ ಚಾಂಪಿಯನ್‌ಶಿಪ್​ನಲ್ಲಿ ಆಡಿರುವ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 28 ರನ್‌ ಕಲೆಹಾಕಿದ್ದಾರೆ. ಹಿಂದಿನ ಆವೃತ್ತಿಯಲ್ಲೂ ಅವರು ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 56 ರನ್‌ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಆದಾಗ್ಯೂ, ಈ ಸುದೀರ್ಘ ವೃತ್ತಿಜೀವನದಲ್ಲಿ, ಅವರು ಎಂದಿಗೂ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

View this post on Instagram

A post shared by Bill Root (@billyroot07)

ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ

ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಬಿಲ್ಲಿ ರೂಟ್, ‘ನನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಕೌಂಟಿ ಕ್ರಿಕೆಟ್‌ನಲ್ಲಿ 14 ಅದ್ಭುತ ವರ್ಷಗಳ ನಂತರ, ನಾನು ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಎರಡು ಶ್ರೇಷ್ಠ ಕ್ಲಬ್‌ಗಳನ್ನು ಪ್ರತಿನಿಧಿಸಲು ಮತ್ತು ನಾಲ್ಕು ಟ್ರೋಫಿಗಳನ್ನು ಗೆದ್ದಿದ್ದಕ್ಕೆ ನನಗೆ ಹೆಮ್ಮೆಯಿದೆ. ನನ್ನ ವೃತ್ತಿಜೀವನದ ಏರಿಳಿತಗಳಲ್ಲಿ ನನ್ನನ್ನು ಬೆಂಬಲಿಸಿದ ನನ್ನ ಎಲ್ಲಾ ತಂಡದ ಸದಸ್ಯರು, ತರಬೇತುದಾರರು, ಸಿಬ್ಬಂದಿ ಮತ್ತು ಬೆಂಬಲಿಗರಿಗೆ ನಾನು ಧನ್ಯವಾದ ಹೇಳುತ್ತೇನೆ.

ಹಾಗೆಯೇ ನನ್ನ ಹೆಂಡತಿ ಮತ್ತು ಕುಟುಂಬದ ಎಲ್ಲಾ ತ್ಯಾಗಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರು ನನ್ನ ವೃತ್ತಿಜೀವನದುದ್ದಕ್ಕೂ ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ. ಅವರಿಲ್ಲದೆ ನಾನು ಎಂದಿಗೂ ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ 14 ವರ್ಷಗಳು ಅನೇಕ ಏರಿಳಿತಗಳನ್ನು ಕಂಡಿವೆ, ಆದರೆ ಏನೂ ಬದಲಾಗಿಲ್ಲ. ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು. ಈಗ ಮುಂದಿನ ಹೆಜ್ಜೆ ಇಡುವ ಸಮಯ ಬಂದಿದೆ’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More