IPL 2022: ಪ್ಲೇಆಫ್ನ 3 ಸ್ಥಾನಗಳಿಗೆ 7 ತಂಡಗಳ ನಡುವೆ ಪೈಪೋಟಿ..!
IPL 2022 Playoffs: ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ಹೀನಾಯವಾಗಿ ಸೋತರೂ ಕೂಡ ಪಾಯಿಂಟ್ಸ್ ಟೇಬಲ್ನಲ್ಲಿ ಮಹತ್ವದ ಬದಲಾವಣೆ ಆಗಲಿದೆ.
IPL 2022: ಐಪಿಎಲ್ ಸೀಸನ್ 15 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದತ್ತ ತಲುಪಿದರೂ ಪ್ಲೇಆಫ್ ಆಡುವ ತಂಡಗಳು ಯಾವುವು ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಆಡಿರುವ 13 ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ (GT) ತಂಡವು 10 ಗೆಲುವು ದಾಖಲಿಸಿ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಇದಾಗ್ಯೂ ಉಳಿದ ಮೂರು ಸ್ಥಾನಗಳಲ್ಲಿ ಯಾವ ತಂಡಗಳು ಆಡಲಿದೆ ಎಂಬುದಕ್ಕೆ ಇನ್ನೂ ಕೂಡ ಸ್ಪಷ್ಟತೆ ಸಿಕ್ಕಿಲ್ಲ. ಏಕೆಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್ನ ಅಂಕಿ ಅಂಶಗಳನ್ನು ಗಮನಿಸಿದರೆ 7 ತಂಡಗಳಿಗೂ ಪ್ಲೇಆಫ್ಗೇರುವ ಅವಕಾಶವಿದೆ. ಅಂದರೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಹೊರತುಪಡಿಸಿ ಉಳಿದ 7 ತಂಡಗಳೂ ಕೂಡ ಪ್ಲೇಆಫ್ಗೇರುವ ಅವಕಾಶವನ್ನು ಹೊಂದಿದೆ. ಏಕೆಂದರೆ ಗುಜರಾತ್ ಟೈಟನ್ಸ್ ಹೊರತುಪಡಿಸಿ, ಯಾವುದೇ ತಂಡ ಇನ್ನೂ ಕೂಡ 16 ಪಾಯಿಂಟ್ಸ್ ಗಡಿದಾಟಿಲ್ಲ.
ಇತ್ತ ಪ್ಲೇಆಫ್ ರೇಸ್ನಲ್ಲಿರುವ ಕೆಲ ತಂಡಗಳಿಗೆ 2 ಪಂದ್ಯಗಳು ಬಾಕಿಯಿವೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ 16 ಪಾಯಿಂಟ್ಸ್ಗಳಿಸಿ ಪ್ಲೇಆಫ್ಗೇರಬಹುದು. ಇದಕ್ಕೆ ಉತ್ತಮ ಉದಾಹರಣೆ ಅಗ್ರಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳೆದ 2 ಪಂದ್ಯಗಳಲ್ಲಿ ಸೋತು 16 ಪಾಯಿಂಟ್ಸ್ನೊಂದಿಗೆ ಇದೀಗ 3ನೇ ಸ್ಥಾನಕ್ಕೆ ಕುಸಿದಿರುವುದು. ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ 16 ಪಾಯಿಂಟ್ಸ್ಗಳಿಸುವ ಅವಕಾಶವಿದೆ. ಮತ್ತೊಂದೆಡೆ ನಾಲ್ಕನೇ ಸ್ಥಾನದಲ್ಲಿರುವ ಆರ್ಸಿಬಿ ಹೊಂದಿರುವುದು 14 ಪಾಯಿಂಟ್ಸ್ ಮಾತ್ರ. ಹೀಗಾಗಿ ಮುಂದಿನ ಪಂದ್ಯಗಳ ಫಲಿತಾಂಶದಿಂದ ಮಾತ್ರ ಪ್ಲೇಆಫ್ ಆಡುವ ಇತರೆ ಮೂರು ತಂಡಗಳು ಯಾವುವು ಎಂಬುದು ನಿರ್ಧಾರವಾಗಲಿದೆ. ಹಾಗಿದ್ರೆ ಯಾವ ತಂಡಕ್ಕೆ ಹೇಗೆ ಪ್ಲೇಆಫ್ಗೇರುವ ಅವಕಾಶವಿದೆ ನೋಡೋಣ…
ರಾಜಸ್ಥಾನ್ ರಾಯಲ್ಸ್ (13 ಪಂದ್ಯಗಳಲ್ಲಿ 16 ಅಂಕಗಳು, NRR: 0.304): ಪ್ಲೇಆಫ್ ರೇಸ್ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಇದೀಗ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಇದಾಗ್ಯೂ ಪ್ಲೇಆಫ್ ಖಚಿತವಾಗಿಲ್ಲ. ಹೀಗಾಗಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಅನ್ನು ಕನ್ಫರ್ಮ್ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಸಿಎಸ್ಕೆ ವಿರುದ್ದ ಸೋತರೆ 16 ಪಾಯಿಂಟ್ಸ್ಗಳಿಸುವ ಉಳಿದ ತಂಡಗಳು ನೆಟ್ ರನ್ ರೇಟ್ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು.
ಲಕ್ನೋ ಸೂಪರ್ ಜೈಂಟ್ಸ್ (13 ಪಂದ್ಯಗಳಲ್ಲಿ 16 ಅಂಕಗಳು, NRR: 0.262): ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರಿಸ್ಥಿತಿ ಕೂಡ ರಾಜಸ್ಥಾನ್ ರಾಯಲ್ಸ್ಗಿಂತ ಭಿನ್ನವಾಗಿಲ್ಲ. ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಒಂದು ವೇಳೆ ಸೋತರೆ ನೆಟ್ ರನ್ ರೇಟ್ ಕಡಿಮೆಯಾಗಲಿದೆ. ಹೀಗಾಗಿ 16 ಪಾಯಿಂಟ್ಸ್ಗಳಿಸಿ ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಲಕ್ನೋ ತಂಡವನ್ನು ಹಿಂದಿಕ್ಕಿ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (13 ಪಂದ್ಯಗಳಲ್ಲಿ 14 ಅಂಕಗಳು, NRR: -0.323): RCB ತಂಡವು ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ರೆ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು. ಏಕೆಂದರೆ ಗುಜರಾತ್ ಟೈಟನ್ಸ್ ವಿರುದ್ದ ಆರ್ಸಿಬಿ ಗೆದ್ದರೆ ಮಾತ್ರ 16 ಪಾಯಿಂಟ್ಸ್ ಆಗಲಿದೆ. ಒಂದು ವೇಳೆ ಸೋತರೆ 16 ಪಾಯಿಂಟ್ಸ್ ಗಳಿಸುವ ನಾಲ್ಕನೇ ತಂಡಕ್ಕೆ ಅವಕಾಶ ದೊರೆಯಲಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಆರ್ಸಿಬಿ ತಂಡದ ನೆಟ್ ರನ್ ರೇಟ್ ಮೈನಸ್ನಲ್ಲಿದೆ. ಹೀಗಾಗಿ ಯಾವುದೇ ತಂಡ ಉತ್ತಮ ನೆಟ್ ರನ್ ರೇಟ್ನೊಂದಿಗೆ 14 ಪಾಯಿಂಟ್ಸ್ ಗಳಿಸಿದರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಹೀಗಾಗಿ ಆರ್ಸಿಬಿ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ರೆ ಗುಜರಾತ್ ಟೈಟನ್ಸ್ ವಿರುದ್ದ ಅತ್ಯುತ್ತಮ ನೆಟ್ ರನ್ ರೇಟ್ನೊಂದಿಗೆ ಗೆದ್ದು 16 ಪಾಯಿಂಟ್ಸ್ ಗಳಿಸಬೇಕು. ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ 16 ಪಾಯಿಂಟ್ಸ್ ಗಳಿಸುವ ಅವಕಾಶ ಇರುವ ಕಾರಣ ಉತ್ತಮ ನೆಟ್ ರನ್ ರೇಟ್ ಹೊಂದುವ ಮೂಲಕ ಮಾತ್ರ ಆರ್ಸಿಬಿ ಪ್ಲೇಆಫ್ಗೇರಬಹುದು.
ಡೆಲ್ಲಿ ಕ್ಯಾಪಿಟಲ್ಸ್ (12 ಪಂದ್ಯಗಳಲ್ಲಿ 12 ಅಂಕಗಳು, NRR: 0.210): ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇನ್ನೂ ಎರಡು ಪಂದ್ಯಗಳು ಉಳಿದಿವೆ. ಇದರಲ್ಲಿ ಒಂದನ್ನು ಉತ್ತಮ ನೆಟ್ ರನ್ ರೇಟ್ನೊಂದಿಗೆ ಗೆದ್ದರೆ 14 ಪಾಯಿಂಟ್ಸ್ನೊಂದಿಗೆ ಆರ್ಸಿಬಿ ತಂಡವನ್ನು ಹಿಂದಿಕ್ಕಿ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಅಲ್ಲದೆ ಎರಡು ಪಂದ್ಯಗಳನ್ನು ಗೆದ್ದರೆ, ಒಟ್ಟು 16 ಅಂಕಗಳನ್ನು ತಲುಪಲಿದ್ದಾರೆ. ಇಲ್ಲಿ ಆರ್ಸಿಬಿ ತಂಡಕ್ಕೂ ಕೂಡ 16 ಪಾಯಿಂಟ್ಸ್ ಗಳಿಸುವ ಅವಕಾಶವಿದ್ದು, ಹೀಗಾಗಿ ನೆಟ್ ರನ್ ರೇಟ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್ಸಿಬಿಯನ್ನು ಹಿಂದಿಕ್ಕಿ 4ನೇ ಸ್ಥಾನ ಅಲಂಕರಿಸಬಹುದು. ಅಂದರೆ ಇಲ್ಲಿ ಆರ್ಸಿಬಿ ಪ್ಲೇಆಫ್ನಲ್ಲಿ ಉಳಿಯಬೇಕಿದ್ರೆ ಮುಂದಿನ ಪಂದ್ಯ ಗೆಲ್ಲಬೇಕು, ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 2 ಪಂದ್ಯಗಳಲ್ಲಿ 1 ಸೋಲಬೇಕಾಗುತ್ತದೆ. ಹೀಗಾಗದಿದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚು.
ಪಂಜಾಬ್ ಕಿಂಗ್ಸ್ (12 ಪಂದ್ಯಗಳಲ್ಲಿ 12 ಅಂಕಗಳು, NRR: 0.023): ಪಂಜಾಬ್ ಕಿಂಗ್ಸ್ ತಂಡಕ್ಕೂ ಕೂಡ 2 ಪಂದ್ಯಗಳಿವೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ 16 ಪಾಯಿಂಟ್ಸ್ ಆಗಲಿದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಜಯ ಸಾಧಿಸಿದ್ರೆ ಆರ್ಸಿಬಿ ತಂಡವನ್ನು ಹಿಂದಿಕ್ಕಿ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಅಲ್ಲದೆ ಮುಂದಿನ ಪಂದ್ಯವನ್ನು ಗೆದ್ದರೆ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸಬಹುದು. ಅಂದರೆ ಇಲ್ಲಿ ಆರ್ಸಿಬಿ ಪ್ಲೇಆಫ್ನಲ್ಲಿ ಉಳಿಯಬೇಕಿದ್ರೆ ಮುಂದಿನ ಪಂದ್ಯ ಗೆಲ್ಲಬೇಕು, ಜೊತೆಗೆ ಪಂಜಾಬ್ ಕಿಂಗ್ಸ್ ತಂಡ ಕೂಡ ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಸೋಲಬೇಕಾಗುತ್ತದೆ. ಇದಾಗ್ಯೂ ಎರಡೂ ಮ್ಯಾಚ್ನಲ್ಲಿ ಗೆದ್ದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ. ಜೊತೆಗೆ ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಉತ್ತಮ ನೆಟ್ ರನ್ ರೇಟ್ನಿಂದ ಗೆಲ್ಲದಿದ್ರೆ ಪಂಜಾಬ್ ಕಿಂಗ್ಸ್ಗೆ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ ಅವಕಾಶ ದೊರೆಯಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (13 ಪಂದ್ಯಗಳಲ್ಲಿ 12 ಅಂಕಗಳು, ಎನ್‌ಆರ್‌ಆರ್: 0.160): ಅದೃಷ್ಟ ಕೈ ಹಿಡಿದರೆ ಕೆಕೆಆರ್ ತಂಡವು ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಏಕೆಂದರೆ ಕೆಕೆಆರ್ಗೆ ಉಳಿದಿರುವುದು ಕೇವಲ 1 ಪಂದ್ಯ ಮಾತ್ರ. ಈ ಪಂದ್ಯದಲ್ಲಿ ಗೆದ್ದರೂ 14 ಪಾಯಿಂಟ್ಸ್ ಮಾತ್ರ ಆಗಲಿದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆರ್ಸಿಬಿ ಮುಂದಿನ ಪಂದ್ಯ ಸೋತರೆ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಕೂಡ 14 ಪಾಯಿಂಟ್ಸ್ ಗಳಿಸಿದರೆ ಮಾತ್ರ ಕೆಕೆಆರ್ಗೆ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಕೆಕೆಆರ್ ತಂಡವು ಮುಂದಿನ ಪಂದ್ಯವನ್ನು ಗೆಲ್ಲುವ ಮೂಲಕ, ಇತರೆ ತಂಡಗಳ ಫಲಿತಾಂಶವನ್ನೂ ಕೂಡ ಎದುರು ನೋಡಬೇಕಿದೆ.
ಸನ್‌ರೈಸರ್ಸ್ ಹೈದರಾಬಾದ್ (12 ಪಂದ್ಯಗಳಲ್ಲಿ 10 ಅಂಕಗಳು, NRR: -0.270): ಅದೃಷ್ಟವಿದ್ದರೆ SRH ತಂಡ ಕೂಡ ಪ್ಲೇಆಫ್ ಪ್ರವೇಶಿಸಬಹುದು. ಏಕೆಂದರೆ ಎಸ್ಆರ್ಹೆಚ್ ತಂಡಕ್ಕೆ ಇನ್ನೂ ಕೂಡ 2 ಮ್ಯಾಚ್ಗಳಿವೆ. ಈ ಎರಡು ಮ್ಯಾಚ್ಗಳನ್ನು ಗೆದ್ದರೆ ಅತ್ತ 14 ಪಾಯಿಂಟ್ಸ್ ಆಗಲಿದೆ. ಇನ್ನೊಂದೆಡೆ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆರ್ಸಿಬಿ ಮುಂದಿನ ಮ್ಯಾಚ್ ಸೋತರೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಂದಿನ 2 ಮ್ಯಾಚ್ಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದರೆ ಈ ಮೂರು ತಂಡಗಳ ಪಾಯಿಂಟ್ಸ್ 14 ಆಗಲಿದೆ. ಈ ವೇಳೆ ಪಾಯಿಂಟ್ಸ್ ಟೇಬಲ್ನ ನಾಲ್ಕನೇ ಸ್ಥಾನಕ್ಕಾಗಿ ನೆಟ್ ರನ್ ರೇಟ್ ಮೊರೆ ಹೋಗಬೇಕಾಗುತ್ತದೆ. ಈ ಮೂಲಕ 14 ಪಾಯಿಂಟ್ಸ್ ಗಳಿಸಿ ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು.
ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಗುಜರಾತ್ ಟೈಟನ್ಸ್ ವಿರುದ್ದ ಆರ್ಸಿಬಿ ಅತ್ಯುತ್ತಮ ಜಯ ಸಾಧಿಸಿದ್ರೆ 16 ಆಗಲಿದೆ. ಈ ಮೂಲಕ ಉತ್ತಮ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಅದೇ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತನ್ನ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಸೋತರೆ 16 ಪಾಯಿಂಟ್ಸ್ನಲ್ಲೇ ಉಳಿಯಲಿದೆ. ಒಂದು ವೇಳೆ ಲಕ್ನೋ ನೆಟ್ ರನ್ ರೇಟ್ ಕಡಿಮೆ ಇದ್ದರೆ, ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೇರಬಹುದು. ಇತ್ತ ಕೊನೆಯ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಪಂಜಾಬ್ ಕಿಂಗ್ಸ್ ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹಿಂದಿಕ್ಕಿ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು.
ಹಾಗೆಯೇ ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ಹೀನಾಯವಾಗಿ ಸೋತರೂ ಕೂಡ ಪಾಯಿಂಟ್ಸ್ ಟೇಬಲ್ನಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಒಂದು ವೇಳೆ ಆರ್ಆರ್ ಸೋತು ಕಡಿಮೆ ನೆಟ್ ರನ್ ರೇಟ್ ಪಡೆದು ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಪಡೆದರೆ, ಕೊನೆಯ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಪಂಜಾಬ್ ಕಿಂಗ್ಸ್ ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿ ಪ್ಲೇಆಫ್ ಆಡಬಹುದು. ಹೀಗಾಗಿಯೇ ಎಲ್ಲಾ ತಂಡಗಳ ಕೊನೆಯ ಪಂದ್ಯ ಮುಗಿಯುವ ತನಕ ಈ ಸಲ ಪ್ಲೇಆಫ್ ಆಡುವ 4 ತಂಡಗಳು ಯಾವುವು ಎಂಬುದು ನಿರ್ಧಾರವಾಗುವುದಿಲ್ಲ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.