ಗುಟ್ಟು ರಟ್ಟಾಗುವ ಭೀತಿ: ಐಪಿಎಲ್‌ನಲ್ಲಿ ‘ಗರ್ಲ್‌ಫ್ರೆಂಡ್ ಕಲ್ಚರ್’ಗೆ ಬ್ರೇಕ್!
IPL 2026: ಐಪಿಎಲ್ ಅಂಗಳದಲ್ಲಿ ಈಗ ಕೇವಲ ಬೌಂಡರಿ-ಸಿಕ್ಸರ್‌ಗಳ ಅಬ್ಬರವಷ್ಟೇ ಅಲ್ಲ, ಶಿಸ್ತಿನ ಕಟ್ಟುಪಾಡುಗಳ ಸದ್ದೂ ಜೋರಾಗಿದೆ. ಮೈದಾನದ ಒಳಗಿನ ಆಟಕ್ಕಿಂತ ಹೊರಗಿನ 'ಗರ್ಲ್‌ಫ್ರೆಂಡ್ ಕಲ್ಚರ್' ತಂಡಗಳ ಆಂತರಿಕ ರಹಸ್ಯಗಳಿಗೆ ಕುತ್ತು ತರುತ್ತಿದೆ ಎಂಬ ಆತಂಕ ಬಿಸಿಸಿಐ ವಲಯದಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ, ಐಪಿಎಲ್‌ನ ವೃತ್ತಿಪರತೆ ಮತ್ತು ಗೌಪ್ಯತೆಯನ್ನು ಕಾಪಾಡಲು ಕ್ರಿಕೆಟ್ ಮಂಡಳಿ ಕಠಿಣ 'ನಿಯಮ ಜಾರಿಗೊಳಿಸಲು ಮುಂದಾಗಿದೆ.

Ipl Players With Gf
ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಟಗಾರರ ವೈಯಕ್ತಿಕ ಜೀವನ ಮತ್ತು ತಂಡದ ಶಿಸ್ತಿನ ನಡುವಿನ ಗೆರೆ ಅಸ್ಪಷ್ಟವಾಗುತ್ತಿರುವುದು ಬಿಸಿಸಿಐ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಐಪಿಎಲ್‌ನಲ್ಲಿ ಹೆಚ್ಚುತ್ತಿರುವ ‘ಗರ್ಲ್‌ಫ್ರೆಂಡ್ ಕಲ್ಚರ್’ (Girlfriend Culture) ಗೆ ಕಡಿವಾಣ ಹಾಕಲು ಕ್ರಿಕೆಟ್ ಮಂಡಳಿ ಈಗ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.
ಕಠಿಣ ಕ್ರಮಕ್ಕೆ ಮುಖ್ಯ ಕಾರಣಗಳೇನು?
ಐಪಿಎಲ್ ತಂಡದ ಆಂತರಿಕ ವಿಷಯಗಳು ಮತ್ತು ರಹಸ್ಯ ತಂತ್ರಗಳು ಹೊರಗಡೆ ಸೋರಿಕೆಯಾಗುತ್ತಿರುವುದು ಬಿಸಿಸಿಐನ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ.
- ಆಂತರಿಕ ಮಾಹಿತಿ ಸೋರಿಕೆ: ಅನೇಕ ಆಟಗಾರರ ಗೆಳತಿಯರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದಾರೆ. ಅವರು ಹಂಚಿಕೊಳ್ಳುವ ಫೋಟೋ ಅಥವಾ ವಿಡಿಯೋಗಳ ಮೂಲಕ ತಂಡದ ಆಂತರಿಕ ಚರ್ಚೆಗಳು ಅಥವಾ ಸೌಲಭ್ಯಗಳ ಮಾಹಿತಿ ಸಾರ್ವಜನಿಕವಾಗುವ ಅಪಾಯವಿದೆ.
- ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರ: ಕೆಲವು ಆಟಗಾರರ ಆಪ್ತರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ. ಇದು ಐಪಿಎಲ್‌ನ ಘನತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಮಂಡಳಿ ಭಾವಿಸಿದೆ.
- ಶಿಸ್ತಿನ ಕೊರತೆ: ತಂಡದ ಬಸ್‌ಗಳಲ್ಲಿ ಗೆಳತಿಯರಿಗೆ ಅವಕಾಶ ನೀಡುವುದು, ಹೋಟೆಲ್‌ಗಳಲ್ಲಿ ದೀರ್ಘಕಾಲ ವಾಸ್ತವ್ಯ ಹೂಡುವುದು ತಂಡದ ವೃತ್ತಿಪರತೆಗೆ ಅಡ್ಡಿಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಇತ್ತೀಚೆಗೆ ಕೆಲವು ತಂಡಗಳ ಬಸ್‌ಗಳು ಆಟಗಾರರ ಗೆಳತಿಯರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿತ್ತು ಎಂಬ ಮಾಹಿತಿ ಲೀಕ್ ಆಗಿದೆ.
- ಇತ್ತೀಚಿನ ವಿವಾದಗಳು: ರಾಜಸ್ಥಾನ್ ರಾಯಲ್ಸ್‌ನ ರಿಯಾನ್ ಪರಾಗ್ ಡಗೌಟ್‌ನಲ್ಲಿ ವೇಪಿಂಗ್ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮತ್ತು ಮೊಬೈಲ್ ಬಳಕೆಯಂತಹ ಘಟನೆಗಳು ಶಿಸ್ತಿನ ಕ್ರಮ ಅನಿವಾರ್ಯ ಎಂಬುದನ್ನು ಒತ್ತಿಹೇಳಿವೆ.
ಬರಲಿರುವ ಹೊಸ ನಿಯಮಗಳೇನು?
ಬಿಸಿಸಿಐ ಮೂಲಗಳ ಪ್ರಕಾರ, ಮುಂದಿನ ಸೀಸನ್‌ನಿಂದ ಈ ಕೆಳಗಿನ ಬದಲಾವಣೆಗಳನ್ನು ನಿರೀಕ್ಷಿಸಬಹುದು:
- ಪ್ರತ್ಯೇಕ ವಾಸ್ತವ್ಯ: ಆಟಗಾರರ ಗೆಳತಿಯರಿಗೆ ತಂಡದ ಬಸ್‌ನಲ್ಲಿ ಪ್ರಯಾಣಿಸಲು ಅಥವಾ ತಂಡದ ಹೋಟೆಲ್‌ನಲ್ಲಿ ಉಳಿಯಲು ಅನುಮತಿ ಇರುವುದಿಲ್ಲ.
- ಸೀಮಿತ ಭೇಟಿ: ಭಾರತೀಯ ರಾಷ್ಟ್ರೀಯ ತಂಡದಲ್ಲಿರುವಂತೆ, ಕುಟುಂಬದ ಸದಸ್ಯರಿಗೆ ಅಥವಾ ಆಪ್ತರಿಗೆ ಕೇವಲ 7 ರಿಂದ 14 ದಿನಗಳ ಕಾಲ ಮಾತ್ರ ವಾಸ್ತವ್ಯಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
- ನಿರ್ಬಂಧಿತ ಪ್ರದೇಶಗಳು: ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದ ಪ್ರಮುಖ ಭಾಗಗಳಿಗೆ ಅಧಿಕೃತ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಪ್ರವೇಶ ಇರುವುದಿಲ್ಲ.
- ಅನುಷ್ಠಾನದ ಸಮಯ: ಈ ಹೊಸ ನಿಯಮಗಳು ಬಹುಶಃ ಐಪಿಎಲ್ 2027 ರಿಂದ ಜಾರಿಗೆ ಬರಬಹುದು.
- ಭವಿಷ್ಯದ ಹಿತದೃಷ್ಟಿ: ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ದೊಡ್ಡ ವಿವಾದಗಳು ಸೃಷ್ಟಿಯಾಗಬಹುದು ಎಂಬ ಆತಂಕ ಬಿಸಿಸಿಐ ಎದುರಿಗಿದೆ. ಹೀಗಾಗಿ ಐಪಿಎಲ್ 2027ರ ವೇಳೆ ಈ ನಿಯಮಗಳು ಜಾರಿಗೆ ಬರುವುದು ಬಹುತೇಕ ಖಚಿತ.
Follow Us




