ಜಗತ್ತಿನಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು; ಪ್ಯಾರಿಸ್‌ನ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆ ಮತ್ತು ನೈಸ್ ನಗರದ ದ್ವಿಪಕ್ಷೀಯ ಮಾತುಕತೆಗಳನ್ನು ಯಶಸ್ವಿಯಾಗಿ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ತಲುಪಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸದ ಕೊನೆಯ ಭಾಗವಾಗಿ ಪ್ಯಾರಿಸ್‌ನಲ್ಲಿ ಇಂದು ರಾತ್ರಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ಯಾರಿಸ್‌ನಲ್ಲಿನ ಭಾರತೀಯ ಸಮುದಾಯ ಪ್ರಧಾನಿ ಮೋದಿಗಾಗಿ "ಬೊಂಜೊರ್ ಮೋದಿ" ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಸಹಸ್ರಾರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಪ್ಯಾರಿಸ್, ಜೂನ್ 18: ಪ್ರಧಾನಿ ನರೇಂದ್ರ ಮೋದಿ (PM Modi in France) ಫ್ರಾನ್ಸ್ ಪ್ರವಾಸದ ಕೊನೆಯ ಹಂತವಾಗಿ ಪ್ಯಾರಿಸ್‌ಗೆ ಭೇಟಿ ನೀಡಿದ್ದಾರೆ. ಇಲ್ಲಿ ಮೋದಿಗಾಗಿ “ಬೊಂಜೊರ್ ಮೋದಿ” ಎಂಬ ವಿಶೇಷ ಕಾರ್ಯಕ್ರಮವನ್ನು ಭಾರತೀಯ ವಲಸಿಗರು ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಂಡ ಮೋದಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಸ್ತುತ ಭಾರತವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಮೋದಿ ವಿವರಿಸಿದರು. ಭಾರತ ಭವಿಷ್ಯದ ಸಿದ್ಧತೆಯನ್ನು ಮಾತ್ರ ಮಾಡುತ್ತಿಲ್ಲ, ಅದು ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದರು. ಕಳೆದ ಒಂದು ದಶಕದಲ್ಲಿ ಭಾರತವು ತಂತ್ರಜ್ಞಾನದ ಸಹಾಯದಿಂದ ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದರು.
“ಜಗತ್ತಿನ ಒಟ್ಟು ಡಿಜಿಟಲ್ ವಹಿವಾಟುಗಳಲ್ಲಿ ಶೇ. 50ರಷ್ಟು ಭಾರತದಲ್ಲೇ ನಡೆಯುತ್ತಿವೆ. ಭಾರತದ ಹೆಮ್ಮೆಯ ‘ಯುಪಿಐ’ ತಂತ್ರಜ್ಞಾನ ಈಗ ಫ್ರಾನ್ಸ್‌ನಲ್ಲೂ ಲಭ್ಯವಿರುವುದನ್ನು ನೋಡಿ ಖುಷಿಯಾಗುತ್ತಿದೆ. ತಂತ್ರಜ್ಞಾನದ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗಲೇ ನಿಜವಾದ ಪ್ರಗತಿ ಸಾಧ್ಯ. ಫ್ರಾನ್ಸ್‌ನಲ್ಲಿ ನೆಲೆಸಿರುವ ಭಾರತೀಯರು ಎರಡು ದೇಶಗಳ ನಡುವಿನ ಬಾಂಧವ್ಯದ ಜೀವಂತ ಸೇತುವೆಯಾಗಿದ್ದಾರೆ. ಅವರು ತಮ್ಮ ಕಠಿಣ ಪರಿಶ್ರಮದಿಂದ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ವಿದೇಶಿ ಮಣ್ಣಿನಲ್ಲಿ ಎತ್ತಿಹಿಡಿಯುತ್ತಿದ್ದಾರೆ” ಎಂದು ಮೋದಿ ಶ್ಲಾಘಿಸಿದರು.
#WATCH | Paris: Addressing the Indian community, PM Modi says, “Serving the country as an elected PM for 12 consecutive years has been a great privilege of my life. It is the power of India’s democracy that has brought a tea seller to this position. The last 12 years have been a… pic.twitter.com/xfamaIWFTp
— ANI (@ANI) June 18, 2026
ಭಾರತ-ಫ್ರಾನ್ಸ್ ಸಂಬಂಧಗಳನ್ನು ಬಲಪಡಿಸುವಲ್ಲಿ ಅನಿವಾಸಿ ಭಾರತೀಯರ ಕೊಡುಗೆಯನ್ನು ಶ್ಲಾಘಿಸಿದ ಅವರು, ವಿದೇಶದಲ್ಲಿ ವಾಸಿಸುತ್ತಿರುವ ಸಮುದಾಯದಲ್ಲಿ ಪ್ರತಿಫಲಿಸುತ್ತಿರುವ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಕೊಂಡಾಡಿದರು. “ಪ್ಯಾರಿಸ್ ಬೆಳಕಿನ ನಗರಿ. ಇದು ಬಣ್ಣಗಳ ನಗರ. ಇಲ್ಲಿ ಆಲೋಚನೆಗಳಿವೆ ಮತ್ತು ನಾವೀನ್ಯತೆಗೆ ಸ್ಫೂರ್ತಿಯಿದೆ. ಭಾರತದ ವಿವಿಧ ರಾಜ್ಯಗಳಿಂದ ಬಂದಿರುವ ನೀವೆಲ್ಲರೂ ಈ ನಗರವನ್ನು ಇನ್ನಷ್ಟು ಸುಂದರಗೊಳಿಸಿದ್ದೀರಿ. ನೀವು ಇದಕ್ಕೆ ಹೊಸ ಬಣ್ಣಗಳನ್ನು ತುಂಬಿದ್ದೀರಿ. ಇಲ್ಲಿ ಕೆಲವರು ತಮಿಳರು, ಕೆಲವರು ಪಂಜಾಬಿಗಳು, ಕೆಲವರು ಗುಜರಾತಿಗಳು, ಕೆಲವರು ಮರಾಠಿಗರು ಮತ್ತು ಕೆಲವರು ಬೆಂಗಾಲಿಗಳಿದ್ದಾರೆ. ಭಾರತದ ಪ್ರತಿಯೊಂದು ಮೂಲೆಯೂ ಇಲ್ಲಿ ಪ್ರತಿನಿಧಿಸಲ್ಪಟ್ಟಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಪ್ಯಾರಿಸ್‌ಗೆ ಪ್ರಧಾನಿ ಮೋದಿ ಆಗಮನ: ಜಾಗತಿಕ ಪ್ರಗತಿಗೆ ಭಾರತ-ಫ್ರಾನ್ಸ್ ಸಹಭಾಗಿತ್ವ ಅತ್ಯಗತ್ಯ
ದ್ವಿಪಕ್ಷೀಯ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಭಾರತೀಯ ಸಮುದಾಯದ ಪಾತ್ರವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, “ಅನಿವಾಸಿ ಭಾರತೀಯರು ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಪಿಲ್ಲರ್ ಆಗಿ ಹೊರಹೊಮ್ಮಿದ್ದಾರೆ” ಎಂದರು.
ಕಳೆದ ದಶಕದಲ್ಲಿ ಭಾರತ ಸಾಧಿಸಿದ ಪ್ರಗತಿಯನ್ನು ಎತ್ತಿಹಿಡಿದ ಅವರು, ಕಳೆದ 12 ವರ್ಷಗಳು ದೇಶದ 140 ಕೋಟಿ ಜನರ ಅಪಾರ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿವೆ ಎಂದರು. “ಈ ಅವಧಿಯಲ್ಲಿ ಭಾರತದ ಜಿಡಿಪಿ (GDP) ದ್ವಿಗುಣಗೊಂಡಿದೆ. ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಗಿದೆ. ವಿಶ್ವವಿದ್ಯಾಲಯಗಳ ಸಂಖ್ಯೆಯೂ ದ್ವಿಗುಣಗೊಂಡಿದೆ. ಹೆದ್ದಾರಿ ನಿರ್ಮಾಣದ ವೇಗ ದುಪ್ಪಟ್ಟಾಗಿದೆ” ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮೋದಿ ಬಹಳ ಸುಂದರ ವ್ಯಕ್ತಿ, ಕೆಲಸದ ವಿಷಯದಲ್ಲಿ ಮಾತ್ರ ಕಿಲ್ಲರ್; ಗೆಳೆಯನನ್ನು ಹೊಗಳಿದ ಟ್ರಂಪ್
“ಕಳೆದ 12 ವರ್ಷಗಳಲ್ಲಿ ಭಾರತದ ರಫ್ತು 35 ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ನೂರು ಪಟ್ಟು ಹೆಚ್ಚಾಗಿವೆ. ಭಾರತವು ಇಂದು ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ದೇಶವಾಗಿದೆ. ಈ ತೀವ್ರ ವೇಗ ಮತ್ತು ಪ್ರಗತಿಯ ಫಲವಾಗಿ, ಭಾರತವು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




